ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

21 ಕೋಟಿ ವಸೂಲಿ ಮಾಡೋದ್ಹೆಂಗೆ?

Srinivasa Murthy VN
Updated On : 25 Jul 2013, 12:25 pm

- ಕೆ.ಎನ್. ರವಿ
-ಮತ್ತೀಕೆರೆ ಜಯರಾಮ್
ಮಂಡ್ಯ/ರಾಮನಗರ: 
ಮಂಡ್ಯ ಮತ್ತು ರಾ-ಚ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪಂಗನಾಮ ಹಾಕಲಾದ ಅಂದಾಜು 21 ಕೋಟಿ ಯಾವ ಕ್ರಮದಲ್ಲಿ ವಸೂಲಿ ಮಾಡುವುದು ಎಂಬುದೇ ಈಗ ಅಧಿಕಾರಿಗಳಿಗೆ ದೊಡ್ಡ ತಲೆ ಬಿಸಿಯಾಗಿದೆ.
ಸರ್ಕಾರದಿಂದ ಹೋದ ಹಣ ಅಥವಾ ಆಸ್ತಿ ಹಿಂದಕ್ಕೆ ತರುವುದು ಎಂದರೆ ಸ್ಮಶಾನಕ್ಕೆ ಹೋದ ಶವದಂತೆ ಎನ್ನುತ್ತಾರೆ ಅನುಭವಿಗಳು. ಈ ಮಾತು ನಿಜ ಕೂಡ. ಸರ್ಕಾರಿ ಸಂಸ್ಥೆಯಲ್ಲಿದ್ದ ಸಾರ್ವಜನಿಕರ ದುಡ್ಡನ್ನು ನುಂಗಿದವರು ಅಷ್ಟು ಸುಲಭವಾಗಿ ಹಿಂದಕ್ಕೆ ಕೊಡುತ್ತಾರೆಂದು ಹೇಳುವುದು ಕಷ್ಟ ಸಾಧ್ಯದ ಮಾತು. ಹೇಗೆ ವಸೂಲಿ ಮಾಡುವುದು ಎಂಬುದೇ ಸರ್ಕಾರದ ಮುಂದಿರುವ ಸವಾಲಿನ ಪ್ರಶ್ನೆ.
ಆಯುಕ್ತ ನೇರ ಹೊಣೆಗಾರ:  ಎರಡೂ ಪ್ರಾಧಿಕಾರ ಆಯುಕ್ತರಾದ ಚಿದಾನಂದ ಹಾಗೂ ಎಚ್.ಎಸ್. ಶಿವರಾಂ ಹಾಗೂ ಮುಡಾ ಲೆಕ್ಕಾಧಿಕಾರಿ ನಾಗರಾಜು ಈ ಹಣವನ್ನು ಸಂಪೂರ್ಣವಾಗಿ ಪ್ರಾಧಿಕಾರಗಳಿಗೆ ವಾಪಸ್ ತಂದು ತುಂಬುವ ಜವಾಬ್ದಾರಿ ಹೊರಬೇಕಾಗಿದೆ. ಈ ಎರಡೂ ಪ್ರಾಧಿಕಾರಕ್ಕೆ ವಂಚನೆ ಮಾಡಿರುವುದು ಒಂದೇ ಜಾಲ. ಆರೋಪಿಗಳಾದ ಕೆಬ್ಬಳ್ಳಿ ಆನಂದ್, ನಾಗಲಿಂಗಸ್ವಾಮಿ ಅಥವಾ ಹೆಮ್ಮನಹಳ್ಳಿ ಚಂದ್ರಶೇಖರ್ ಪ್ರಕರಣವು ನ್ಯಾಯಾಲಯದ ಹಂತದಲ್ಲಿ ಇದೆ. ಇದು ಇತ್ಯರ್ಥವಾಗುವ ತನಕ ಯಾವುದೇ ಪ್ರಾಧಿಕಾರಕ್ಕೆ ಹಣವನ್ನು ನಾವು ಎಲ್ಲಿಂದ ತಂದು ಕೊಡಬೇಕು ಎಂದು ಸತಾಯಿಸುವ ತಂತ್ರವನ್ನು ಮಾಡುವ ಸಾಧ್ಯತೆ ಇಲ್ಲ ಎಂದು ಹೇಳುವ ಹಾಗಿಲ್ಲ.
ಸರ್ಕಾರದ ಕಾಯ್ದೆಯಂತೆ ಪ್ರಾಧಿಕಾರಗಳಿಗೆ ಸೇರಿದ 21.50 ಕೋಟಿ (ಮಂಡ್ಯದ್ದು 5 ಕೋಟಿ ಹಾಗೂ ರಾಮನಗರ-  ಚನ್ನಪಟ್ಟಣ ಪ್ರಾಧಿಕಾರಕ್ಕೆ ಸೇರಿದ 16.50 ಕೋಟಿ) ಯನ್ನು ಬಡ್ಡಿ ಸಮೇತ ವಾಪಸ್ಸು ಕಟ್ಟುವ ಜವಾಬ್ದಾರಿ ಜೈಲಿನಲ್ಲಿರುವ ಅಧಿಕಾರಿ ಚಿದಾನಂದ ಹಾಗೂ ಅಮಾನತಿನಲ್ಲಿರುವ ಆಯುಕ್ತ ಶಿವರಾಂ ಹಾಗೂ ಕ್ಯಾಷಿಯರ್ ನಾಗರಾಜು ಮೇಲಿದೆ. ವಿಧಾನಸಭೆ ಅಧಿವೇಶನ ನಡೆಯುತ್ತಿರುವುದರಿಂದ ನಗರಾಭಿವೃದ್ಧಿ ಇಲಾಖೆ ಹಿರಿಯ ಅಧಿಕಾರಿಗಳು ಮಂಡ್ಯ ಹಾಗೂ ರಾಮನಗರಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಅಧಿವೇಶನ ಮುಗಿದ ಕೂಡಲೇ ಎರಡೂ ಪ್ರಾಧಿಕಾರಗಳಿಗೆ ಭೇಟಿ ನೀಡಿ ಕಚೇರಿಯ ಎಲ್ಲಾ ಅವ್ಯವಹಾರಗಳನ್ನು ಸಂಪೂರ್ಣವಾಗಿ ಇಲಾಖಾ ಮಟ್ಟದ ತನಿಖೆ ಮಾಡಿಸುವುದು,ಪಂಗನಾಮ ಹಾಕಲಾದ ಒಟ್ಟು 21.50 ಕೋಟಿಯ ವಸೂಲಾತಿ ಕ್ರಮದ ಬಗ್ಗೆ ಆಲೋಚನೆ ಮಾಡಲಾಗುವುದು ಎಂದು ಸರ್ಕಾರದ ಮೂಲಗಳು ಹೇಳಿವೆ.
ಈ ಹಣ ಯಾವುದು?:  ಮುಡಾಕ್ಕೆ ಪಂಗನಾಮ ಹಾಕಲಾಗಿರುವ 5 ಕೋಟಿ ಯಾವ ಮೂಲಗಳಿಂದ ಮುಡಾಕ್ಕೆ ಬಂದಿದೆ ಎಂಬುದರ ಬಗ್ಗೆ ತನಿಖೆ ಆರಂಭವಾಗಿದೆ. ಪ್ರಾಥಮಿಕ ಹಂತದ ತನಿಖೆಯಿಂದ ಈ ಹಣ ವಿವಾದಾತ್ಮಕ 107 ನಿವೇಶನಗಳನ್ನು ಮಾರಿರುವ ಹಣ ಹಾಗೂ ವಿವೇಕಾನಂದ ನಗರದಲ್ಲಿನ ಮೂಲೆ ನಿವೇಶನಗಳನ್ನು ಹರಾಜಿನಿಂದ ಬಂದಿರುವ ಹಣ ಇದಾಗಿದೆ ಎಂದು ಗೊತ್ತಾಗಿದೆ. ಮುಡಾದಲ್ಲಿ 26 ಸಾವಿರ ಅರ್ಜಿದಾರರು ನಿವೇಶನದ ಬೇಡಿಕೆಗಾಗಿ ಕಟ್ಟಿರುವ ಹಣ ಮಾತ್ರ ಅಲಹಾಬಾದ್ ಬ್ಯಾಂಕ್ ಸೇಫ್ ಆಗಿದೆ ಎಂದು ಮೂಲಗಳು ಹೇಳಿವೆ. ವಿವಾದ ಸೃಷ್ಟಿಸಿರುವ 107 ನಿವೇಶನಗಳ ಪೈಕಿ ಅನೇಕ ಮಾಲೀಕರು ತಮ್ಮ ಪಾಲಿನ ಹಣವನ್ನು ಕಟ್ಟಿ, ನಿವೇಶನಗಳನ್ನು ರಿಜಿಸ್ಟ್ರಾರ್ ಮಾಡಿಸಿಕೊಂಡು, ಕೆಲವರು ಪುನಃ ಬೇರೆಯವರಿಗೆ ಮಾರಿ ಬಿಟ್ಟಿದ್ದಾರೆ ಎಂದು ಹೇಳಲಾಗಿದೆ. ಇದು ಮತ್ತೊಂದು ದೊಡ್ಡ ಕಗ್ಗಂಟು. ಆದರೆ, ಈ ನಿವೇಶನಗಳನ್ನು ಹಿಂದಕ್ಕೆ ನೀಡಿರುವ ಹಾಲಿ, ಮಾಜಿ ಶಾಸಕರಿಗೆ, ಮೂಡಾ ಮಾಜಿ ಅಧ್ಯಕ್ಷರಿಗೆ ಹಣ ವಾಪಸ್ಸು ಕೊಡಬೇಕಾಗಿದೆ ಅಥವಾ ಕೆಲವರಿಗೆ ಕೊಟ್ಟಿರುವ ಸಾಧ್ಯತೆಯೂ ಇದೆ. ಇವೆಲ್ಲವೂ ತನಿಖೆಯಿಂದ ಬಹಿರಂಗಗೊಳ್ಳಬೇಕಿದೆ.ರಾಮನಗರದಲ್ಲೂ ಅದೇ ಗೋಳು:  ಅದೇ ರೀತಿಯಲ್ಲಿ ರಾಮನಗರ -ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಆಗಿರುವ 16.50 ಕೋಟಿ ವಂಚನೆ ಹಣ ಪ್ರಾಧಿಕಾರದ ಯಾವ ಖಾತೆಗೆ ಸೇರಿದ್ದು ಎಂಬುದರ ಬಗ್ಗೆ ಪರಿಶೀಲನೆ ಆರಂಭವಾಗಿದೆ. ಇನ್ನೂ ಎಷ್ಟು ಕೋಟಿ ಹಣ ಯಾವ ಯಾವ ಬ್ಯಾಂಕ್ಗಳಲ್ಲಿ ಇಟ್ಟಿದ್ದಾರೆ. ಪ್ರಾಧಿಕಾರದಲ್ಲಿರುವ ಲೆಕ್ಕಾಧಿಕಾರಿಗಳು ಏಕೆ ಸುಮ್ಮನೆ ಇದ್ದರು? ಎಂಬ ಬಗ್ಗೆ ತನಿಖೆ ಮುಂದುವರಿದಿದೆ. ಪ್ರಾಧಿಕಾರಕ್ಕೆ ಸೇರಿದ ಹಣ ದುರ್ಬಳಿಕೆ ಆಗಿರುವುದು ನಿಶ್ಚಿತ. ಆ ಹಣ ಹೇಗೆ ವಸೂಲಿ ಮಾಡಬೇಕು ಎನ್ನುವುದೇ ಈಗ ಅಧಿಕಾರಿಗಳಿಗೆ ಆಗಿರುವ ತಲೆನೋವಾಗಿದೆ. ಜೈಲು ಸೇರಿರುವ ಆಯುಕ್ತ ಚಿದಾನಂದ ಎಲ್ಲಿ, ಎಷ್ಟು ಆಸ್ತಿ ಮಾಡಿದ್ದಾರೆ. ಅವರ ಎಲ್ಲಾ ಬ್ಯಾಂಕ್ ಖಾತೆಗಳ ಪರಿಶೀಲನೆ ಮಾಡುವ ಹೊಣೆ ಹೊತ್ತಿರುವ ಪೊಲೀಸರು ಸಧ್ಯದಲ್ಲೇ ಎಲ್ಲಾ ಅಂಶಗಳನ್ನು ಬಹಿರಂಗಗೊಳಿಸಲು ಸಿದ್ದತೆ ನಡೆಸಿದ್ದಾರೆ.
ಈ ನಡುವೆ ಮಂಡ್ಯ ಮುಡಾಕ್ಕೆ ಸೇರಿದ 5 ಕೋಟಿ ಪಂಗನಾಮದ ಹಗರಣ ಪೊಲೀಸರ ವಿಚಾರಣೆಗೆ ಒಳಪಡಿಸದ ಸಂದರ್ಭ ಸಾಕಷ್ಟು ಮಾಹಿತಿಗಳು ಲಭ್ಯವಾಗಿವೆಯಂತೆ. ಆದರೂ ನ್ಯಾಯಾಲಯದಲ್ಲಿ ಈ ಪ್ರಕರಣ ಈಗಷ್ಟೇ ವಿಚಾರಣೆಗೆ ಒಳಗಾಗಿದೆ. ಹೀಗಿರುವಾಗ ಅಷ್ಟು ಸರಳವಾಗಿ ಯಾವುದೇ ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕುವುದಾಗಲಿ ಅಥವಾ ಆಸ್ತಿಯನ್ನು ಹರಾಜು ಹಾಕಿ ಮುಡಾ ಹಣ ಹಿಂದಕ್ಕೆ ತೆಗೆದುಕೊಳ್ಳುವುದು ಸುಲಭದ ಮಾತಲ್ಲ. ಏಕೆಂದರೆ, ಪ್ರತಿ ಹಂತದಲ್ಲೂ ನ್ಯಾಯಾಲಯದ ಅನುಮತಿ ಪಡೆದುಕೊಳ್ಳಬೇಕು. ಒಂದು ವೇಳೆ ನ್ಯಾಯಾಲಯ ಅನುಮತಿ ನೀಡಿದರೂ ವಿವಾದಿತ ವ್ಯಕ್ತಿಗಳ ಆಸ್ತಿಯನ್ನು ಯಾರು ತಾನೆ ಖರೀದಿ ಮಾಡಲು ಮುಂದೆ ಬರುತ್ತಾರೆ. ಖರೀದಿ ಮಾಡಿದರೆ ಮುಂದೆ ಆರೋಪಿಗಳಿಂದ ಮತ್ತೆ ಗಂಡಾಂತರ  ಎದುರಾಗುವುದಿಲ್ಲ  ಎಂಬುದಕ್ಕೆ ಏನು ಗ್ಯಾರೆಂಟಿ ಎನ್ನುವ ಪ್ರಶ್ನೆಯೂ ಇಲ್ಲಿ ಅಡಗಿದೆ. ಆಯುಕ್ತ ಶಿವರಾಂ ಹಾಗೂ ಕ್ಯಾಷಿಯರ್ ನಾಗರಾಜ್ ಅವರು ಮಾಡಿರುವ ಆಸ್ತಿ 5 ಕೋಟಿಗೆ ಬೆಲೆ ಬಾಳುತ್ತದೆಯೇ. ಆಯುಕ್ತರಾದ ಚಿದಾನಂದ ಹಾಗೂ ಶಿವರಾಂ ಇವರಿಬ್ಬರ ಮಾಡಿರುವ ಆಸ್ತಿಗಳು ಎಲ್ಲಿ ಇವೆ. ಅದಕ್ಕೆ ವಾರಸುದಾರರು ಯಾರು. ಯಾವ ಮೂಲದಿಂದ ಆಸ್ತಿ ಸಂಪಾದಿಸಿದ್ದಾರೆ ಎಂಬುದನ್ನು ತನಿಖೆಯಿಂದ ದೃಢಪಡಿಸಿಕೊಂಡು ನಂತರ ಪ್ರಾಧಿಕಾರಿಗಳ ಒಟ್ಟು 21.50 ಕೋಟಿ ಹಿಂದಕ್ಕೆ ಪಡೆಯುವುದು ಸರ್ಕಾರಕ್ಕೂ ಕೂಡ ಒಂದು ರೀತಿಯ ಸವಾಲು ಆಗಿದೆ ಎನ್ನುವುದು ಇಲ್ಲಿ ಗಮನಾರ್ಹ.

ವಿದೇಶಿ ಕಂಪನಿಗಳತ್ತ ಹರಿದ ವಂಚನೆ ಹಣ
ಕ.ಪ್ರ.ವಾರ್ತೆ  ಮಂಡ್ಯ  ಜು.24

ಕೆಬ್ಬಳ್ಳಿ ಆನಂದ್ ಹಾಗೂ ಸಹಚರರು ರಾಮನಗರ ಮತ್ತು ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ವಂಚಿಸಿ, ದೋಚಿರುವ ಕೋಟ್ಯಾಂತರ ಹಣದ ವಂಚನೆಯ ಜಾಲ ವಿದೇಶಗಳಲ್ಲಿರುವ ಕೆಲವು ಕಂಪನಿಗಳನ್ನು ಸುತ್ತಿ ಹಾಕಿಕೊಂಡಿದೆ.
ಮಂಡ್ಯ ಮತ್ತು ರಾ-ಚ ನಗರಾಭಿವೃದ್ಧಿ ಪ್ರಾಧಿಕಾರಿಗಳಲ್ಲಿ 30 ಕೋಟಿಗೂ ಅಧಿಕವಾಗಿ ವಂಚನೆ ಮಾಡಿರುವ ಹಣವನ್ನು ಕೆಬ್ಬಳ್ಳಿ ಆನಂದ್ ವಿದೇಶದ ವಿವಿಧ ಕಂಪನಿಗಳಲ್ಲಿ ಬಂಡಾವಳ ರೂಪದಲ್ಲಿ ತೊಡಗಿಸಿದ್ದಾನೆಂಬ ಮಾಹಿತಿ ಪೊಲೀಸರ ತನಿಖೆಯಿಂದ ಬಯಲಾಗಿದೆ.
ತನಿಖಾಧಿಕಾರಿ ಡಿವೈಎಸ್ಪಿ ಡಾ. ಶೋಭಾರಾಣಿ ಈ ಕುರಿತು ಮಾಹಿತಿ ಬಹಿರಂಗಪಡಿಸಿ, ಸಿಂಗಪುರ್. ಮಲೇಷಿಯಾ ಹಾಗೂ ಇಂಡೋನೇಷಿಯಾಗಳಲ್ಲಿರುವ ವಿವಿಧ ಕಂಪನಿಗಳಲ್ಲಿನ ಲಾಭದ ಆಸೆಗಾಗಿ ಇಲ್ಲಿ ವಂಚನೆ ಮಾಡಿರುವ ಹಣ ಬಂಡವಾಳ ರೂಪದಲ್ಲಿ ನೀಡಿರುವುದಾಗಿ ಆರೋಪಿ ಆನಂದ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆಂದು ತಿಳಿಸಿದ್ದಾರೆ. ಕೆಬ್ಬಳ್ಳಿ ಆನಂದ್ ಬಳ್ಳಾರಿಯಲ್ಲಿನ ಕೆಲವು ಗಣಿ ಉದ್ಯಮದಾರರನ್ನು ಪರಿಚಯ ಮಾಡಿಕೊಂಡ ನಂತರ, ಅಲ್ಲಿ ಕೆಲವು ವಿದೇಶಿ ಕಂಪನಿಗಳ ಸಂಪರ್ಕ ಬೆಳೆಸುತ್ತಾನೆ. ಆ ಕಂಪನಿಗಳಲ್ಲಿ ಹಣ ತೊಡಗಿಸುವ ಆಲೋಚನೆ ಮಾಡಿದ ನಂತರ ಮಂಡ್ಯ 5 ಕೋಟಿ ರಾಮನಗರ ಮತ್ತು ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಕೋಟ್ಯಾಂತರ ಹಣ ವಂಚಿಸಿ ವಿದೇಶಿ ಉದ್ಯಮಕ್ಕೆ ಕಾಲಿಟ್ಟಿದ್ದಾನೆಂದು ಗೊತ್ತಾಗಿದೆ. ಸಿಂಗಪುರ್, ಮಲೇಷಿಯಾ ಹಾಗೂ ಇಂಡೋನೇಷಿಯಾಗಳಲ್ಲಿರುವ ಎಲ್ಲಾ ಕಂಪನಿಗಳ ವಿವರ, ಮಾಹಿತಿ ಹಾಗೂ ವಿಳಾಸಗಳನ್ನು ಪತ್ತೆ ಮಾಡಲಾಗಿದೆ. ಆ ಕಂಪನಿಗಳಿಗೆ ಇ- ಮೇಲ್ ಮೂಲಕ ಸಂದೇಶ ರವಾನೆ ಮಾಡಲಾಗಿದೆ. ಆದರೆ, ಅಲ್ಲಿಂದ ಯಾವುದೇ ಉತ್ತರ ಲಭ್ಯವಾಗಿಲ್ಲ. ವಿದೇಶದಲ್ಲಿರುವ ಈ ಕಂಪನಿಗಳಲ್ಲಿ ಯಾವ ರೀತಿ ಹಣ ತೊಡಗಿಸಿದ್ದಾರೆ ಎಂಬುದರ ತನಿಖೆ ಆಗಬೇಕಿದೆ.
ಇದಕ್ಕೆ ಕೇಂದ್ರದ ವಿದೇಶಾಂಗ ಖಾತೆಯ ನೆರವು ಅಗತ್ಯವಾಗಿದೆ. ಅಲ್ಲದೆ ತನಿಖಾ ತಂಡ ವಿದೇಶಕ್ಕೆ ತೆರಳುವ ಸಂದರ್ಭವೂ ಬರಲಿದೆ.ಈ ಬಗ್ಗೆ ಇಲಾಖೆ ಉನ್ನತಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಾಗುವುದು. ನಂತರ ಹಿರಿಯ ಅಧಿಕಾರಿಗಳ ನಿರ್ದೇಶನದ ಮೇರೆಗೆ ಮುಂದಿನ ತನಿಖೆಯನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಡಾ. ಶೋಭಾ ರಾಣಿ ಹೇಳಿದರು.

ಆರೋಪಿಗಳ ವಶಕ್ಕೆ ರಾ.ಪೊಲೀಸರ ಮನವಿ
ರಾಮನಗರ:
ಮುಡಾ ಮತ್ತು ರಾ-ಚ ಪ್ರಾಧಿಕಾರದ ಬಹುಕೋಟಿ ಹಗರಣದಲ್ಲಿ ಸಿಕ್ಕಿಬಿದ್ದಿರುವ ಆರೋಪಿಗಳನ್ನು ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡುವಂತೆ ರಾಮನಗರ ಪೊಲೀಸರು ಸ್ಥಳೀಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.  ಮಂಡ್ಯ ಪೊಲೀಸರಿಂದ ಬಂಧಿಸಲ್ಪಟ್ಟು, ಅಲ್ಲಿನ ಉಪ ಕಾರಾಗೃಹದಲ್ಲಿರುವ ಕೆಬ್ಬಳ್ಳಿ ಆನಂದ್, ನಾಗಲಿಂಗಸ್ವಾಮಿ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ರಾಮನಗರ ಪೊಲೀಸರು ಬುಧವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದ ಮಂಡ್ಯ ಪೊಲೀಸರು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ ತಮ್ಮ ಕಸ್ಟಡಿಗೆ ಪಡೆದು, ವಿಚಾರಣೆ ಮುಗಿಸಿ ಮಂಗಳವಾರವಷ್ಟೇ ನ್ಯಾಯಾಲಯಕ್ಕೆ ಮತ್ತೆ ಹಾಜರುಪಡಿಸಿದರು. ನ್ಯಾಯಾಧೀಶರು ಆರೋಪಿಗಳನ್ನು ನ್ಯಾಯಾಂಗ ಕಸ್ಟಡಿಗೆ ನೀಡಿದ್ದಾರೆ. ರಾಮನಗರ ಪೊಲೀಸರು ಇಲ್ಲಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಜು.25ಕ್ಕೆ ಬರುವ ಸಾಧ್ಯತೆ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement