ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕೊತ್ತೀಪುರ ಶಾಲೆ ಮುಂದೆ ಸ್ಥಳೀಯರ ಪ್ರತಿಭಟನೆ

Srinivasa Murthy VN
Updated On : 25 Jul 2013, 12:26 pm

-ಮತ್ತೀಕೆರೆ ಜಯರಾಮ್
ಕ.ಪ್ರ.ವಾರ್ತೆ ರಾಮನಗರ ಜು.24

ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದ ಪ್ರಕರಣ ಸಂಬಂಧ ನಗರದ ಕೊತ್ತೀಪುರ ಸರ್ಕಾರಿ ಶಾಲೆ ಎದುರು ರೊಚ್ಚಿಗೆದ್ದ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ತನಿಖೆ ಕೈಗೆತ್ತಿಕೊಂಡಿರುವ ಡಿಡಿಪಿಐ ಮಕ್ಕಳ ವಿಚಾರಣೆ ನಡೆಸಿದ್ದು, ಮುಖ್ಯ ಶಿಕ್ಷಕಿ ಸಹಿತ ಇಬ್ಬರು ಶಿಕ್ಷಕರ ಅಮಾನತು ನಿರ್ಧಾರ ಪ್ರಕಟಿಸಿದ್ದಾರೆ.
ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದ ಶಿಕ್ಷಕರು ಶೀರ್ಷಿಕೆಯಡಿ ಕನ್ನಡಪ್ರಭದಲ್ಲಿ ಜು.23ರಂದು ವಿಶೇಷ ವರದಿ ಪ್ರಕಟಿಸಿತ್ತು. ಮಂಗಳವಾರ ಶಾಲೆಗೆ ರಜೆ ನೀಡಿದ್ದ ಹಿನ್ನೆಲೆಯಲ್ಲಿ ಬುಧವಾರ ಜಮಾಯಿಸಿದ ಪೋಷಕರು, ಸ್ಥಳೀಯರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಪ್ರಕರಣದ ತನಿಖೆ ನಡೆಸಲು ಶಿಕ್ಷಣ ಸಂಯೋಜಕಿ ರುಕ್ಮಿಣಮ್ಮ ನೇತೃತ್ವದ ತಂಡ ಆಗಮಿಸಿತು. ಕೆಳ ಹಂತದ ಅಧಿಕಾರಿಗಳಿಂದ ತನಿಖೆಗೆ ವಿರೋಧ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಡಿಡಿಪಿಐ ನೇತೃತ್ವದಲ್ಲೇ ತನಿಖೆ ಆಗಬೇಕು ಎಂದು ಪಟ್ಟು ಹಿಡಿದರು.
ಡಿಡಿಪಿಐ ವಿಚಾರಣೆ: ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಡಿಡಿಪಿಐ ಪ್ರಹ್ಲಾದಗೌಡ ಅವರು ಶೌಚಾಲಯ ಸ್ವಚ್ಛಗೊಳಿಸಿದ ಮಕ್ಕಳು, ಮುಖ್ಯ ಶಿಕ್ಷಕಿ ಚಂದ್ರಾಬಾಯಿ ಸೇರಿದಂತೆ ಶಿಕ್ಷಕರ ವಿಚಾರಣೆ ನಡೆಸಿದರು. ಪ್ರತಿಭಟನಾ ನಿರತರ ಆರೋಪ ಮತ್ತು ಹೇಳಿಕೆಗಳನ್ನೂ ದಾಖಲಿಸಿಕೊಳ್ಳಲಾಯಿತು. ಪ್ರತಿಭಟನಾನಿರತರೊಂದಿಗೆ ಮಾತನಾಡಿದ ಡಿಡಿಪಿಐ ಪ್ರಹ್ಲಾದಗೌಡ, ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಮುಖ್ಯ ಶಿಕ್ಷಕಿ ಚಂದ್ರಾಬಾಯಿ ಮತ್ತು ಮಕ್ಕಳನ್ನು ಸ್ವಚ್ಛತೆಗೆ ಇಳಿಸಿದರೆಂದು ಹೇಳಲಾದ ಶಿಕ್ಷಕರೊಬ್ಬರ ಅಮಾನತಿಗೆ ನಿರ್ಧರಿಸಲಾಗಿದೆ ಎಂದರು.
ಕಲ್ಯಾಣ ಸಮಿತಿ ಭೇಟಿ: ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಥಾಮಸ್ ಎಡ್ವಿನ್ ನೇತೃತ್ವದಲ್ಲಿ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು, ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ರಾಧಾ ಅವರನ್ನೊಳಗೊಂಡ ತಂಡವೂ ಶಾಲೆಗೆ ತೆರಳಿ ಪ್ರಕರಣದ ವಿಚಾರಣೆ ನಡೆಸಿದೆ. ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿರುವುದು ಸಾಬೀತಾಗಿದೆ ಎಂದು ತಂಡದಲ್ಲಿದ್ದವರು ತಿಳಿಸಿದ್ದಾರೆ. ಸಮಗ್ರ ವರದಿಯೊಂದಿಗೆ ಡಿಡಿಪಿಐಗೆ ದೂರು ಸಲ್ಲಿಸಲು ತಂಡವು ತೀರ್ಮಾನಿಸಿದೆ.
ಥಾಮಸ್ ಎಡ್ವಿನ್ ನೇತೃತ್ವದ ತಂಡದಲ್ಲಿ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಪ್ರೊ.ಶಿವಲಿಂಗಯ್ಯ, ಶಿವರಾಜೇಗೌಡ, ಮಕ್ಕಳ ರಕ್ಷಣಾ ಘಟಕದ ತಾಲೂಕು ಅಧಿಕಾರಿ ಅಜೀಜುದ್ದೀನ್ ಖಾನ್, ಶಿಕ್ಷಣ ಅಧಿಕಾರಿಗಳಿದ್ದರು.

ತನಿಖೆ ದಿಕ್ಕುತಪ್ಪಿಸುವ ಯತ್ನ
ಶಾಲೆಯ ಶೌಚಾಲಯವನ್ನು ಮಕ್ಕಳಿಂದ ಸ್ವಚ್ಛಗೊಳಿಸಿರುವುದೇನೋ ನಿಜ. ಆದರೆ, ಇದು ನಡೆದಿದ್ದು 2-3 ತಿಂಗಳ ಹಿಂದೆ ಎಂದು ವಾದಿಸುವ ಮೂಲಕ ಮುಖ್ಯ ಶಿಕ್ಷಕಿ ಮತ್ತು ಶಿಕ್ಷಕರು ತನಿಖೆಯ ದಿಕ್ಕು ತಪ್ಪಿಸುವ ಯತ್ನ ನಡೆಸಿದ್ದಾರೆ.
ಅಧಿಕಾರಿಗಳ ವಿಚಾರಣೆ ವೇಳೆ ತಬ್ಬಿಬ್ಬುಗೊಂಡಿದ್ದ ಮಕ್ಕಳು ಶೌಚಾಲಯವನ್ನು ಸರದಿ ಪ್ರಕಾರ ನಾವೇ ಸ್ವಚ್ಛಗೊಳಿಸುತ್ತಿದ್ದೆವು. 2 ತಿಂಗಳಿಂದ ಈಚೆಗೆ ಶಿಕ್ಷಕರು ತಮ್ಮಿಂದ ಆ ಕೆಲಸ ಮಾಡಿಸುತ್ತಿಲ್ಲ ಎಂದು ಶಿಕ್ಷಕರು ಹೇಳಿಕೊಟ್ಟಂತೆಯೇ ಚಾಚೂತಪ್ಪದೆ ಹೇಳಿಕೆ ನೀಡಿದ್ದಾರೆ.
ಮುಖ್ಯ ಶಿಕ್ಷಕಿ ಮತ್ತು ಶಿಕ್ಷಕರ ವಾದವನ್ನು ಪ್ರತಿಭಟನಾನಿರತರು ಒಪ್ಪಲು ಸಿದ್ಧರಿರಲಿಲ್ಲ. ಶೌಚಾಲಯ ಸ್ವಚ್ಛತೆಗಾಗಿ ಮಕ್ಕಳ ಬಳಕೆ ಇಲ್ಲಿ ನಿರಂತರವಾಗಿ ನಡೆದುಕೊಂಡು ಬಂದಿದೆ. ಶಿಕ್ಷೆ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಿರುವ ಶಿಕ್ಷಕರು ಮಕ್ಕಳಿಂದಲೂ ಸುಳ್ಳು ಹೇಳಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.

1500 ಖರ್ಚಾಗಿದೆ
ಶಾಲೆಯ ಶೌಚಾಲಯ ಸ್ವಚ್ಛತೆ ಮತ್ತು ನಿರ್ವಹಣೆಗಾಗಿ ಶಿಕ್ಷಣ ಇಲಾಖೆಯಿಂದ ರು.3 ಸಾವಿರ ಮಂಜೂರಾಗಿದೆ. ಈ ಪೈಕಿ ರು.1500 ಖರ್ಚು ಮಾಡಿದ್ದೇವೆ ಎಂದು ಮುಖ್ಯ ಶಿಕ್ಷಕರು ತನಿಖಾಧಿಕಾರಿಗಳಿಗೆ ವಿವರಣೆ ನೀಡಿದ್ದಾರೆ. ಶೌಚಾಲಯವನ್ನು ಒಂದು ಬಾರಿ ಸ್ವಚ್ಛಗೊಳಿಸುವುದಕ್ಕೆ ರು.100 ಪಾವತಿಸಿರುವುದಾಗಿ ಲೆಕ್ಕ ನೀಡಲಾಗಿದೆ. ಮಕ್ಕಳಿಂದಲೇ ಶೌಚಾಲಯ ಸ್ವಚ್ಛಗೊಳಿಸಿಕೊಂಡು, ಹಣವನ್ನು ಬೇರೆ ಯಾರಿಗೋ ಪಾವತಿಸಿರುವ ಬಗ್ಗೆ ಸುಳ್ಳು ದಾಖಲೆ ನೀಡಿರುವ ಬಗ್ಗೆಯೂ ತನಿಖಾ ತಂಡ ತರಾಟೆಗೆ ತೆಗೆದುಕೊಂಡಿದೆ.
ಈ ಶಾಲೆಯಲ್ಲಿ ಒಟ್ಟು 6 ಶಿಕ್ಷಕರಿದ್ದಾರೆ. ಒಬ್ಬರು ಇದೊಂದೇ ಶಾಲೆಯಲ್ಲಿ ಬರೋಬ್ಬರಿ 30 ವರ್ಷ ಪೂರೈಸಿದ್ದರೆ, ಮತ್ತೊಬ್ಬರು ರಜತ ವರ್ಷಾಚರಣೆ ಮಾಡಿದ್ದಾರೆ. ಇನ್ನೊಬ್ಬರು 14 ವರ್ಷ ತುಂಬಿಸಿದ್ದಾರೆ. ಹೀಗಾಗಿ ವ್ಯವಸ್ಥೆ ಜಡ್ಡುಗಟ್ಟಿದೆ ಎಂದು ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಟೀಕಿಸಿದ್ದಾರೆ.

ನಿತ್ಯಾ ಆಶ್ರಮಕ್ಕೆ ತಂಡ
ಬಿಡದಿಯಲ್ಲಿರುವ ನಿತ್ಯಾನಂದರ ಧ್ಯಾನಪೀಠದಲ್ಲಿ ಅನುಮತಿ ಹಾಗೂ ಮಾನ್ಯತೆ ಇಲ್ಲದೆ ನಡೆಸುತ್ತಿರುವ ಆಶ್ರಮ ಶಾಲೆಗೂ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಥಾಮಸ್ ಎಡ್ವಿನ್ ಹಾಗೂ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ರಾಧಾ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲಿಸಿದೆ.
ಧ್ಯಾನಪೀಠದಲ್ಲಿ 47ಕ್ಕೂ ಹೆಚ್ಚು ಮಕ್ಕಳಿಗೆ ವಸತಿ ಶಿಕ್ಷಣ ನೀಡಲಾಗಿದೆ. ಅನುಮತಿ ಮತ್ತು ಮಾನ್ಯತೆ ರಹಿತವಾಗಿ ನಡೆಸುತ್ತಿರುವ ಆ ಶಾಲೆ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೂಗು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಭೇಟಿ ನೀಡಿರುವ ತಂಡ, ಜಿಲ್ಲಾಡಳಿತಕ್ಕೆ ವರದಿ ನೀಡಲಿದೆ.
ಈ ವೇಳೆ ನಿತ್ಯಾನಂದ ಅನುಯಾಯಿಗಳು ತನಿಖಾ ತಂಡಕ್ಕೆ ಅಸಹಾಕಾರ ತೋರಿದ್ದಾರೆ. ಇದರಿಂದ ಬೇಸತ್ತ ತನಿಖಾ ತಂಡದ ಸದಸ್ಯರು ಜಿಲ್ಲಾಧಿಕಾರಿ ಅವರನ್ನು ಸಂಪರ್ಕಿಸಿ, ಮಾಹಿತಿ ನೀಡಿದ್ದಾರೆ. ಅಂತೆಯೇ ಧ್ಯಾನಪೀಠ ಶಾಲೆ ಅವ್ಯವಸ್ಥೆ ಕುರಿತಾಗಿ ವರದಿ ಸಿದ್ಧಪಡಿಸಿದ್ದಾರೆ.

ತಪ್ಪೊಪ್ಪಿಗೆ ಆಗಿದೆ
ಶಾಲೆಯ ಶೌಚಾಲಯವನ್ನು 2-3 ತಿಂಗಳ ಹಿಂದಿನವರೆಗೂ ಮಕ್ಕಳಿಂದಲೇ ಸ್ವಚ್ಛಗೊಳಿಸುತ್ತಿದ್ದೆವು. ಈಗ ಮಾಡಿಸುತ್ತಿಲ್ಲ ಎಂದು ಹೇಳುವ ಮೂಲಕ ಮುಖ್ಯ ಶಿಕ್ಷಕಿ ಮತ್ತು ಶಿಕ್ಷಕರು ತಪ್ಪೊಪ್ಪಿಕೊಂಡಿದ್ದಾರೆ. ಯಾವಾಗ ಮಾಡಿದ್ದರೂ ತಪ್ಪು ತಪ್ಪೇ. ಪ್ರಕರಣದ ಸಮಗ್ರ ವಿಚಾರಣೆ ಮುಗಿಸಿದ್ದು, ಕ್ರಮ ಕೈಗೊಳ್ಳುವಂತೆ ಡಿಡಿಪಿಐಗೆ ಶಿಫಾರಸು ಮಾಡಲಾಗುವುದು.
- ಪ್ರೊ.ಶಿವಲಿಂಗಯ್ಯ, ಮಕ್ಕಳ ಕಲ್ಯಾಣ ಸಮಿತಿ, ಸದಸ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement