'ಗಂಗಾಮತಸ್ಥರ ಪ. ಪಂಗಡಕ್ಕೆ ಸೇರಿಸಿ'
ಕನಕಪುರ: ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ತೀರಾ ಹಿಂದುಳಿದಿರುವ ಗಂಗಾಮತಸ್ಥ ಸಮುದಾಯವನ್ನು ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ರಾಜ್ಯ ಉಪಾಧ್ಯಕ್ಷ ಎಚ್.ಟಿ.ಶ್ರೀನಿವಾಸ್ ಒತ್ತಾಯಿಸಿದ್ದಾರೆ.
ಅವರು ಕನಕಪುರದ ಹೌಸಿಂಗ್ಬೋರ್ಡ್ ಕಾಲೊನಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಪೀಠದ ವತಿಯಿಂದ ಏರ್ಪಡಿಸಿದ್ದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಗಂಗಾಮತಸ್ಥರ ಮುಖಂಡ ಚಿನ್ನಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
ಮುಖಂಡ ಚಿನ್ನಸ್ವಾಮಿ ಮಾತನಾಡುತ್ತಾ, ಕೇಂದ್ರಸರ್ಕಾರವು ಗಂಗಾಮತಸ್ಥರ ಆರ್ಥಿಕ, ಸಾಮಾಜಿಕ ಸ್ಥಿತಿಗತಿಯನ್ನು ಅಧ್ಯಯನ ಮಾಡಿ ವರದಿ ಸಲ್ಲಿಸಬೇಕೆಂದು ರಾಜ್ಯಸರ್ಕಾರಕ್ಕೆ ಸೂಚನೆ ನೀಡಿದ್ದರೂ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಒತ್ತಾಯಿಸಿ ಸದ್ಯದಲ್ಲಿಯೇ ರಾಜ್ಯಮಟ್ಟದ ಬೃಹತ್ ರ್ಯಾಲಿ ಹಮ್ಮಿಕೊಳ್ಳುವುದಾಗಿ ತಿಳಿಸಿದರು. ಗಂಗಾಮತಸ್ಥ ಸಮುದಾಯದ ಮುಖಂಡರುಗಳಾದ ಮುನಿರಾಜು, ಮಹದೇವಯ್ಯ,ನಾಗೇಶ್, ಜ್ಞಾನೇಶ್, ತಾ.ಅಧ್ಯಕ್ಷ ಜೋಗಯ್ಯ, ಅಂಗಡಿ ಕೃಷ್ಣಪ್ಪ, ಸಿದ್ಧಮಾದು, ರಾಜಣ್ಣ, ಸೀನಣ್ಣ ಪಾಲ್ಗೊಂಡಿದ್ದರು.
ಅಭ್ಯರ್ಥಿಗಳ ಆಯ್ಕೆಗೆ ಬಿಜೆಪಿ ಚಾಲನೆ
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಲೋಕಸಭೆ ಕ್ಷೇತ್ರಗಳ ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಬಿಜೆಪಿ ಚಾಲನೆ ನೀಡಿದೆ. ಇನ್ನೆರಡು ದಿನಗಳಲ್ಲಿ ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಪಕ್ಷದ ಮುಖಂಡರನ್ನು ಕರೆಸಿ ಅವರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಲು ಬುಧವಾರ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಮಾಜಿ ಸಚಿವ ಎಂ. ಶ್ರೀನಿವಾಸ್, ಡಾ.ಹೇಮಚಂದ್ರ ಸಾಗರ್ ಹೆಸರು ಪ್ರಸ್ತಾಪವಾಗಿದೆ. ಎಂ. ಶ್ರೀನಿವಾಸ್ ಅಂತಿಮಗೊಳ್ಳುವ ಸಾಧ್ಯತೆ ಇದೆ. ಮಂಡ್ಯ ಕ್ಷೇತ್ರದಿಂದ ಮಾಜಿ ಸ್ಪೀಕರ್ ಕೆ.ಆರ್. ಪೇಟೆ ಕೃಷ್ಣ ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.