'ದೊಡ್ಡ' ಜಿಲ್ಲಾ ಕೇಂದ್ರಕ್ಕೆ ತೀವ್ರಗೊಂಡ ಹೋರಾಟ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೇಂದ್ರವಾಗಬೇಕು ಎಂಬ ಕೂಗು ಇದೀಗ ತೀವ್ರಗೊಂಡಿದ್ದು, ಗಂಭೀರ ಹೋರಾಟದ ಎಚ್ಚರಿಕೆ ದೊರೆತಿದೆ. ಸರ್ಕಾರ ಈ ವಿಧಾನಸಭಾ ಅಧಿವೇಶನ ಮುಗಿಯುವುದರೊಳಗೆ ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರ ಘೋಷಿಸಬೇಕು ಎಂದು ವಿವಿಧ ಸಂಘಟನೆಗಳು ಒತ್ತಾಯಿಸಿವೆ.
ಇಲ್ಲಿನ ಕನ್ನಡ ಜಾಗೃತ ಪರಿಷತ್ತಿನ ನೇತೃತ್ವದಲ್ಲಿ ಜಾಗೃತ ಭವನದಲ್ಲಿ ನಡೆದ ಹಲವು ಸಂಘಟನೆಗಳ ಮುಖಂಡರ ಪೂರ್ವಭಾವಿ ಹೋರಾಟದ ಸಭೆಯಲ್ಲಿ ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಪುನರ್ ರಚಿಸಿ ಹೋರಾಟಕ್ಕಿಳಿಯುವ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗಿದೆ.
ಸಭೆಯಲ್ಲಿ ಮಾತನಾಡಿದ ವಕೀಲ ಎಂ. ಕೃಷ್ಣಮೂರ್ತಿ, ಕಜಾಪ ಮುಖಂಡ ತ.ನ. ಪ್ರಭುದೇವ್, ಡಿ.ವಿ. ಅಶ್ವತ್ಥಪ್ಪ, ತೂಬಗೆರೆ ಷರೀಫ್, ರಾಜೇಂದ್ರಕುಮಾರ್, ಎಚ್.ಎಸ್. ವೆಂಕಟೇಶ್, ಬಿ.ಎಸ್. ಚಂದ್ರಶೇಖರ್, ಎಂ.ದೇವರಾಜ್, ರವಿಕಿರಣ್ ಮತ್ತಿತರರು ಜಿಲ್ಲಾ ಕೇಂದ್ರದ ಹೋರಾಟ ದೊಡ್ಡಬಳ್ಳಾಪುರದಲ್ಲಿ 2008ರಲ್ಲಿ ಆರಂಭವಾಗಿದೆ. ರಾಮನಗರ ಜಿಲ್ಲೆ ರಚನೆಯಾದ ವೇಳೆಯೇ ನ್ಯಾಯಯುತವಾಗಿ ದೊಡ್ಡಬಳ್ಳಾಪುರವನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕಿತ್ತು. ಆದರೆ ಆಗಿದ್ದ ಸರ್ಕಾರದ ಮಲತಾಯಿ ಧೋರಣೆಯ ಪರಿಣಾಮ ಈಗ ಹೋರಾಟ ಅನಿವಾರ್ಯವಾಗಿದೆ. ರಾಜ್ಯ ಸರ್ಕಾರ ಕೂಡಲೇ ಬಹುದಿನದ ಬೇಡಿಕೆಗೆ ಸೂಕ್ತವಾಗಿ ಸ್ಪಂದಿಸಿ ಜಿಲ್ಲಾ ಕೇಂದ್ರ ರಚನೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ದೊಡ್ಡಬಳ್ಳಾಪುರ ಉಪವಿಭಾಗ ಕೇಂದ್ರ ಸದ್ಯ ಬೆಂಗಳೂರು ನಗರದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ. ರಾಜ್ಯದಲ್ಲಿರುವ 70ಕ್ಕೂ ಹೆಚ್ಚು ಕಂದಾಯ ಉಪವಿಭಾಗಗಳಲ್ಲಿ ಕೇಂದ್ರದ ವ್ಯಾಪ್ತಿಯ ಹೊರಗೆ ಕಾರ್ಯನಿರ್ವಹಣೆ ಮಾಡುತ್ತಿರುವ ಏಕೈಕ ನತದೃಷ್ಟ ಉಪವಿಭಾಗ ಕೇಂದ್ರ ಎಂದರೆ ಅದು ದೊಡ್ಡಬಳ್ಳಾಪುರ. ಕೂಡಲೇ ಬೆಂಗಳೂರು ನಗರದಲ್ಲಿರುವ ದೊಡ್ಡಬಳ್ಳಾಪುರ ಉಪವಿಭಾಗದ ಕೇಂದ್ರ ಕಚೇರಿಯನ್ನು ದೊಡ್ಡಬಳ್ಳಾಪುರಕ್ಕೆ ವರ್ಗಾಯಿಸಬೇಕು ಎಂದು ಸಭೆ ಆಗ್ರಹ ಪಡಿಸಿತು. ಜಿಲ್ಲಾ ಕೇಂದ್ರ ಹೋರಾಟವನ್ನು ಹಂತ ಹಂತವಾಗಿ ರೂಪಿಸಬೇಕು. ಗಂಭೀರ ಹೋರಾಟದಲ್ಲಿ ಆತುರ ಬೇಡ. ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಹೋರಾಟದ ವಿವಿಧ ಹಂತಗಳಲ್ಲಿ ಈ ಒತ್ತಾಯ ಕೇಳಿಬರಬೇಕು. ಅಧಿಕಾರಿಗಳು ಮತ್ತು ಸರ್ಕಾರದ ಮುಖ್ಯವಾಹಿನಿಯಲ್ಲಿರುವ ಜನರಿಗೆ ಬೇಡಿಕೆಯ ಕುರಿತ ಸ್ಪಷ್ಟ ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ಹೋರಾಟದ ಅನಿವಾರ್ಯತೆ ಹೆಚ್ಚಿದೆ. ಜೊತೆಗೆ ತಾಲೂಕಿನ ಪ್ರತಿಯೊಂದು ಮನೆಗೂ ಚಳವಳಿಯ ಅನಿವಾರ್ಯತೆಯ ಕುರಿತು ವಿಚಾರ ಮುಟ್ಟಿಸುವ ಮತ್ತು ಹೋರಾಟಕ್ಕೆಳೆಯುವ ಪ್ರಯತ್ನಗಳನ್ನು ಮಾಡಬೇಕಿದೆ. ಈ ಹಂತದಲ್ಲಿ ಸೋಮವಾರ ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲು ಎಲ್ಲ ಸಂಘಟನೆಗಳು ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರ ಹೋರಾಟ ಸಮಿತಿ ನೇತೃತ್ವದಲ್ಲಿ ಒಗ್ಗೂಡಬೇಕು ಎಂದರು.
ಸಭೆಯಲ್ಲಿ ತಾಲೂಕಿನ ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು, ಮಹಿಳಾ ಸಂಘಟನೆಗಳು, ವರ್ತಕರು, ಆಟೋ ಚಾಲಕರು, ಕಾರ್ಮಿಕರು ಸೇರಿದಂತೆ ಹತ್ತಾರು ಮಂದಿ ಭಾಗವಹಿಸಿದ್ದರು.