ಉಪ ಚುನಾವಣೆ: ನೀತಿ ಸಂಹಿತೆಯಲ್ಲಿ ಅಧಿಕಾರಿಗಳಿಗೆ ರಜೆ ಇಲ್ಲ
ಕ.ಪ್ರ.ವಾರ್ತೆ ರಾಮನಗರ ಜು.25
ಬೆಂಗಳೂರು ಗ್ರಾಮಾಂತರ ಲೋಕಸಭಾ ಉಪಚುನಾವಣೆ ಸಂಬಂಧ ಕೇಂದ್ರ ಚುನಾವಣಾ ಆಯೋಗವು ಚುನಾವಣಾ ದಿನಾಂಕ ನಿಗದಿಪಡಿಸಿದೆ. ಜು.19ರಿಂದ ಆ.27ರವರೆಗೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಕಟ್ಟುನಿಟ್ಟಿನ ಸದಾಚಾರ ಸಂಹಿತೆಯನ್ನು ಪಾಲಿಸುವಂತೆ ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ಆದೇಶಿಸಿದ್ದಾರೆ.
ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ನೀತಿ ಸಂಹಿತೆ ಪ್ರಕಾರ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಅಧಿಕಾರಿಗಳ ಗಮನಕ್ಕೆ ತಂದಿದೆ. ಇದನ್ನು ಉಲ್ಲಂಘಿಸುವ ಅಧಿಕಾರಿ ಮತ್ತು ನೌಕರರ ವಿರುದ್ಧ ಪ್ರಜಾಪ್ರತಿನಿಧಿ ನಿಯಮ 1950 ಪ್ರಕರಣ 134ರಂತೆ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ.
ನೀತಿಸಂಹಿತೆ ಅವಧಿಯಲ್ಲಿ ಅಧಿಕಾರಿಗಳು ಯಾವುದೇ ರಜೆ ಪಡೆಯತಕ್ಕದ್ದಲ್ಲ. ಅನಿವಾರ್ಯ ಪರಿಸ್ಥಿತಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳ ಅನುಮತಿ ಪಡೆದು ಸೂಚನೆಯಂತೆ ನಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡದಿರಲು ಸೂಚಿಸಿದ್ದಾರೆ.
ರಾಜಕೀಯ ವ್ಯಕ್ತಿಗಳೊಂದಿಗೆ ಒಡನಾಟ ಇಟ್ಟುಕೊಳ್ಳಬಾರದು, ರಾಜಕೀಯ ಪಕ್ಷಗಳು ಏರ್ಪಡಿಸುವ ಸಭೆ ಸಮಾರಂಭಗಳಲ್ಲಿ ಭಾಗವಹಿಸಬಾರದು, ಚುನಾವಣಾ ಕೆಲಸಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಚುನಾವಣಾ ಕೆಲಸದಿಂದ ಬಿಡುಗಡೆಗೊಳಿಸುವಂತೆ ಒತ್ತಾಯ ತರುವುದನ್ನು ಗಂಭೀರವಾಗಿ ಪರಿಗಣಿಸುವುದಾಗಿ ಎಚ್ಚರಿಸಿದ್ದಾರೆ.
ಸರ್ಕಾರಿ ವಾಹನಗಳನ್ನು ಹೊಂದಿರುವ ಅಧಿಕಾರಿಗಳು ತಮ್ಮ ಇಲಾಖೆ ವಾಹನಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ಮತದಾನ ಕೇಂದ್ರಗಳನ್ನು ಸ್ಥಾಪಿಸಿರುವ ಕಟ್ಟಡಗಳಲ್ಲಿ ಅನಿವಾರ್ಯವಾದ ರ್ಯಾಂಪ್ ಮತ್ತು ಕಿಟಕಿ, ಬಾಗಿಲು ಚಾವಣಿ ಮುಂತಾದವುಗಳ ದುರಸ್ಥಿ ಕಾರ್ಯಗಳನ್ನು ಕೂಡಲೆ ಇಲಾಖೆಯ ಅನುದಾನದಿಂದ ಭರಿಸಬೇಕು ಎಂದು ಆದೇಶಿಸಿದ್ದಾರೆ.
ನೀತಿ ಸಂಹಿತೆ ವ್ಯಾಪ್ತಿಗೆ ಒಳಪಡುವ ಅಧಿಕಾರೇತರ ಸದಸ್ಯರುಗಳಿಗೆ ನೀಡಿರುವ ಸರ್ಕಾರಿ ವಾಹನಗಳನ್ನು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ವಶಕ್ಕೂ ತಾಲೂಕು ಮಟ್ಟದಲ್ಲಿ ತಹಸೀಲ್ದಾರ್ಗಳ ವಶಕ್ಕೂ ಕೂಡಲೇ ಒಪ್ಪಿಸತಕ್ಕದ್ದು. ಸರ್ಕಾರಿ ವಸತಿ ಗೃಹ, ಪ್ರವಾಸಿ ಮಂದಿರಗಳನ್ನು ತಾಲೂಕು ತಹಸೀಲ್ದಾರ್ಗಳು ವಶಕ್ಕೆ ಪಡೆಯಬೇಕು ಎಂದು ಸೂಚಿಸಿದ್ದಾರೆ.
ಯಾವುದೇ ಸರ್ಕಾರಿ ಸಭೆ ಸಮಾರಂಭಗಳಿಗೆ ರಾಜಕೀಯ ಮುಖಂಡರು, ಪ್ರತಿನಿಧಿಗಳು, ಮಂತ್ರಿಗಳು ಶಾಸಕರನ್ನು ಆಹ್ವಾನಿಸಬಾರದು. ಯಾವುದೇ ಯೋಜನೆಗಳಡಿ ಫಲಾನುಭವಿಗಳ ಆಯ್ಕೆ, ಕಾಮಗಾರಿ ಹಾಗೂ ಟೆಂಡರ್ಗಳನ್ನು ಪ್ರಾರಂಭಿಸದಿರಲು ಅವರು ಆದೇಶದಲ್ಲಿ ತಿಳಿಸಿದ್ದಾರೆ.
ನಗರ ಮತ್ತು ಗ್ರಾಮಾಂತರ ಸಂಸ್ಥೆಗಳ ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ವಿರೂಪಗೊಳಿಸಬಾರದು. ಭಿತ್ತಿಪತ್ರ, ಬ್ಯಾನರ್, ಕಟೌಟ್, ಬಂಟಿಂಗ್ಸ್, ಗೋಡೆಬರಹಗಳನ್ನು ಕೂಡಲೇ ತೆರವುಗೊಳಿಸಬೇಕು. ನೀತಿ ಸಂಹಿತೆಯ ಅವಧಿಯಲ್ಲಿ ಚುನಾವಣಾ ಕೆಲಸ ಕಾರ್ಯಗಳು, ಡಾಟಾ ಎಂಟ್ರಿಗಳು ನಡೆಯುವ ಜಿಲ್ಲಾ ಮತ್ತು ತಾಲೂಕು ಕಚೇರಿಗಳು, ಎನ್ಐಸಿ, ಪೊಲೀಸ್ ಇಲಾಖೆಯಲ್ಲಿನ ಕಚೇರಿಗಳಿಗೆ ನಿರಂತರವಾಗಿ ವಿದ್ಯುತ್ ನೀಡುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಕೆಲಸಕ್ಕೆ ಪ್ರತ್ಯೇಕ ಸಿಬ್ಬಂದಿಯನ್ನು ವಾಕಿಟಾಕಿಯೊಂದಿಗೆ ನಿಯೋಜಿಸಲು ತಿಳಿಸಿದ್ದಾರೆ.
ಇಲ್ಲಿ ಪ್ರಚಾರಕ್ಕೆ ಅವಕಾಶವಿಲ್ಲ: ದೇವಾಲಯಗಳು, ಚರ್ಚ್ಗಳು, ಮಸೀದಿಗಳಲ್ಲಿ ಚುನಾವಣಾ ಸಂಬಂಧಿತ ಪ್ರಚಾರ ಕಾರ್ಯಗಳನ್ನು ನಡೆಸಲು ಅವಕಾಶವಿಲ್ಲ. ಯಾವುದೇ ಅಧಿಕಾರಿ ಸಿಬ್ಬಂದಿಯೂ ಚುನಾವಣಾ ಕೆಲಸ ಸಂಬಂಧ ಕೂಡಲೆ ಸ್ಪಂದಿಸಿ ಮೌಖಿಕ ಲಿಖಿತ ಆದೇಶಗಳನ್ನು ಸ್ವೀಕರಿಸಿ ಅದರಂತೆ ಕಾರ್ಯನಿರ್ವಹಿಸಲು ಆದೇಶಿಸಿದ್ದಾರೆ.
ಹಣಕಾಸು ಸಂಸ್ಥೆ ಶಾಖೆ ಆರಂಭ
ರಾಮನಗರ: ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ರಾಮನಗರ ಶಾಖಾ ಕಚೇರಿಯು ಜಿಲ್ಲಾ ಪಂಚಾಯಿತಿ ಎದುರಿನ ನಂ.642, 1ನೇ ಮಹಡಿ, ವಿದ್ಯಾನಗರ, ಇಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ಕಚೇರಿಯಲ್ಲಿ ಇತ್ತೀಚೆಗೆ ಇ-ಮುದ್ರಾಂಕ(ಛಾಪಾ ಕಾಗದ) ಮಾರಾಟವನ್ನು ಪ್ರಾರಂಭಿಸಿದ್ದು, ಕೆಲಸದ ದಿನಗಳಲ್ಲಿ ಲಭ್ಯವಿರುತ್ತದೆ. ಸಾರ್ವಜನಿಕರು ಈ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಲು ಸಂಸ್ಥೆಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಕೋರಿದ್ದಾರೆ.