ಡೆಂಘೀ ನಿಯಂತ್ರಣಕ್ಕೆ ಮುಂದಾದ ಜಿಲ್ಲಾಡಳಿತ
ಕ.ಪ್ರ.ವಾರ್ತೆ ರಾಮನಗರ ಜು. 25
ಕನಕಪುರ ತಾಲೂಕಿನ ಅಣೆದೊಡ್ಡಿ ಗ್ರಾಮದಲ್ಲಿ ದಿನದಿಂದ ದಿನಕ್ಕೆ ಡೆಂಘೀ, ಚಿಕೂನ್ ಗುನ್ಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳು ವ್ಯಾಪಕವಾಗಿ ಹರಡುತ್ತಿವೆ. ಬಾಲಕಿ ಸ್ನೇಹಾ ಸಾವಿನಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿದೆ.
ಬುಧವಾರವಷ್ಟೇ ತಲಾ 8 ಮಂದಿಗೆ ಡೆಂಘೀ ಮತ್ತು ಚಿಕೂನ್ಗುನ್ಯಾ ರೋಗ ಲಕ್ಷಣಗಳಿರುವುದು ದೃಢಪಟ್ಟಿತ್ತು. 150ಕ್ಕೂ ಹೆಚ್ಚು ಮಂದಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿತ್ತು. ಪರೀಕ್ಷೆಯಲ್ಲಿ 35ಕ್ಕೂ ಹೆಚ್ಚು ಮಂದಿಗೆ ಡೆಂಘೀ ಮಹಾಮಾರಿ ಇರುವುದು ದೃಢಪಟ್ಟಿದೆ.
ಗ್ರಾಮದಲ್ಲಿ 15ಕ್ಕೂ ಹೆಚ್ಚು ಮಂದಿಗೆ ರೋಗ ಉಲ್ಬಣಿಸಿದ್ದು, ಇವರನ್ನು ಬೆಂಗಳೂರಿನ ರಾಜರಾಜೇಶ್ವರಿ, ವಾಣಿವಿಲಾಸ, ವಿಕ್ಟೋರಿಯಾ, ಬಿಜಿಎಸ್ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈ ಪೈಕಿ ಕಾವ್ಯ ಮತ್ತು ನಾಗಮ್ಮ ಎಂಬುವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಸುಮಾರು 250 ಮನೆಗಳಿರುವ ಗ್ರಾಮದಲ್ಲಿ ಹೈನುಗಾರಿಕೆ ಮುಖ್ಯ ಕಸುಬಾಗಿದ್ದು, ಪ್ರತಿ ಮನೆ ಮುಂದೆಯೇ ತಿಪ್ಪೆಗುಂಡಿಗಳಿವೆ. ಅಲ್ಲದೆ ಹಸುಗಳಿಗೆ ಕುಡಿಯಲು ಸಂಗ್ರಹಿಸುವ ನೀರಿನ ತೊಟ್ಟಿಗಳೇ ಸೊಳ್ಳೆಗಳ ಸಂತಾನೋತ್ಪತ್ತಿಯ ಕೇಂದ್ರಗಳಾಗಿವೆ. ಅನೈರ್ಮಲ್ಯ ಇಲ್ಲಿ ತಾಂಡವವಾಡುತ್ತಿದೆ. ಜನರಲ್ಲಿ ಅರಿವಿನ ಕೊರತೆ ಮತ್ತು ಸ್ವಚ್ಛತೆಗಾಗಿ ಕೂಲಿಕಾರ್ಮಿಕರು ಸಿಗದಿರುವುದು ಡೆಂಘೀ ಉಲ್ಬಣಿಸಲು ಪ್ರಮುಖ ಕಾರಣಗಳಾಗಿವೆ.
ಸ್ನೇಹಾ ಅಜ್ಜಿ ಆಘಾತದಿಂದ ಮೃತ: ಡೆಂಘೀ ಪೀಡಿತಳಾಗಿದ್ದ ಬಾಲಕಿ ಸ್ನೇಹಾಳನ್ನು ಕಳೆದುಕೊಂಡ ದುಃಖದಲ್ಲಿದ್ದ ಅಜ್ಜಿ ಚಿಕ್ಕರಾಮಮ್ಮ ಆಘಾತದಿಂದ ಮೃತಪಟ್ಟಿದ್ದಾರೆ. ಬಾಲಕಿ ಸಾವಿನ ಸೂತಕ ಕಳೆಯುವುದರೊಳಗೆ ಮತ್ತೊಂದು ಸಾವು ಸಂಭವಿಸಿರುವುದು ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಜ್ವರ ಪೀಡಿತರಿಗೆ ಚಿಕಿತ್ಸೆ ನೀಡುವುದರ ಜತೆಗೆ ಅನೈರ್ಮಲ್ಯ ಹಾಗೂ ಸೊಳ್ಳೆಗಳ ನಿಯಂತ್ರಣಕ್ಕೆ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮುಂದಾಗಿದೆ. ಗ್ರಾಮದಲ್ಲಿ ತಾತ್ಕಾಲಿಕವಾಗಿ ಆಸ್ಪತ್ರೆ ತೆರೆದಿದ್ದು, 6 ಮಂದಿ ಆರೋಗ್ಯ ಕಾರ್ಯಕರ್ತರನ್ನು ಚಿಕಿತ್ಸೆ ನೀಡಲು ನಿಯೋಜಿಸಲಾಗಿದೆ. ತಾಲೂಕು ವೈದ್ಯಾಧಿಕಾರಿ ಡಾ.ಶಿವಕುಮಾರ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಆರೋಗ್ಯ ಕಾರ್ಯಕರ್ತರು ಚಿಕಿತ್ಸೆ ನೀಡುವುದರ ಜತೆಗೆ ಗ್ರಾಮದ ಪ್ರತಿ ಮನೆಗೆ ತೆರಳಿ ಸೊಳ್ಳೆಗಳ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಮಂಗಳವಾರ ಜಿ.ಪಂ. ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಘುಕುಮಾರ್ ಮತ್ತು ಡಿಎಚ್ಒ ರಘುನಾಥ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.