ದೇವನಹಳ್ಳಿಯಲ್ಲಿ ಅಣ್ಣಮ್ಮ ಜಾತ್ರಾ ಮಹೋತ್ಸವ
ದೇವನಹಳ್ಳಿ: ದೇಶದಪೇಟೆ ಅಣ್ಣಮ್ಮ ದೇವಿ ಹಾಗೂ ದೊಡ್ಡಮ್ಮ ದೇವಿ ಸೇವಾ ಸಮಿತಿಯವರು ಜುಲೈ 22 ರಿಂದ ಆರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಜಾತ್ರಾ ಮಹೋತ್ಸವ ಆಯೋಜಿಸಿದ್ದಾರೆ. ಈ ಧಾರ್ಮಿಕ ಜಾತ್ರೆಯಲ್ಲಿ ಅಣ್ಣಮ್ಮ ದೇವಿ, ದೊಡ್ಡಮ್ಮ ದೇವಿ, ಗಂಗಾ ಪರಮೇಶ್ವರಿ, ಕಾಳಮ್ಮ ದೇವಿ, ಮದ್ದೂರಮ್ಮ ಹಾಗೂ ಮುನೇಶ್ವರ ಉತ್ಸವ ಮೂರ್ತಿಗಳನ್ನು ಹಳೇ ಪುರಸಭಾ ಆವರಣದಲ್ಲಿ ಪ್ರತಿಷ್ಠಾಪಿಸಿ ಪ್ರತಿ ದಿನ ಪೂಜಾಕಾರ್ಯಗಳನ್ನು ಭಕ್ತ ಮಂಡಳಿಯವರು ನಡೆಸುತ್ತಿದ್ದಾರೆ.
ಶಾಸಕರಾದ ಪಿಳ್ಳಮುನಿಶಾಮಪ್ಪರವರು ಶಕ್ತಿದೇವತೆಗಳ ಸನ್ನಿಧಿಗೆ ಆಗಮಿಸಿ ಎಲ್ಲ ದೇವರುಗಳಿಗೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರುಗಳಾದ ವಿ.ಗೋಪಾಲಕೃಷ್ಣ, ಶಶಿಕುಮಾರ್, ಸೊಸೈಟಿ ಕುಮಾರ್, ತಾಲೂಕು ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಸದಾಖತ್, ಮುಖಂಡರಾದ ಮುನಿನಂಜಪ್ಪ, ಸುರೇಶ್, ಕಾರ್ಪೆಂಟರ್ ನಾರಾಯಣಸ್ವಾಮಿ, ಉಷಾ ಪೂರ್ಣಚಂದ್ರ ಉಪಸ್ಥಿತರಿದ್ದರು.
ಶಕ್ತಿ ದೇವತೆಗಳ ಮೆರವಣಿಗೆ, ಹೂವಿನ ಪಲ್ಲಕ್ಕಿ ಉತ್ಸವ
ದೇವನಹಳ್ಳಿ: ಇಲ್ಲಿನ ದೇಶದಪೇಟೆ ಅಣ್ಣಮ್ಮ ದೇವಿ ಹಾಗೂ ದೊಡ್ಡಮ್ಮ ದೇವಿ ಸೇವಾ ಸಮಿತಿಯವರಿಂದ ಆರು ಶಕ್ತಿದೇವತೆಗಳು ಹಾಗೂ ಮುನೇಶ್ವರ ಸ್ವಾಮಿ ದೇವರುಗಳ ಜಾತ್ರಾ ಮಹೋತ್ಸವ ನಡೆಸುತ್ತಿದ್ದು ನಾಲ್ಕನೆಯ ದಿನವಾದ ಗುರುವಾರ ಎಲ್ಲ ದೇವರುಗಳ ಉತ್ಸವಮೂರ್ತಿಗಳ ಹೂವಿನ ಮತ್ತು ಮುತ್ತಿನ ಪಲ್ಲಕ್ಕಿ ಉತ್ಸವಗಳು ನಡೆಯಿತು. ಈ ಸಂದರ್ಭದಲ್ಲಿ ಸೇವಾ ಸಮಿತಿಯ ಮುಖಂಡರಾದ ಮುನಿನಂಜಪ್ಪ, ಮಾಜಿ ಪುರಸಭಾದ್ಯಕ್ಷ ವಸಂತಬಾಬು, ಪುರಸಭಾ ಸದಸ್ಯರಾದ ಶಶಿಕುಮಾರ್, ಬಾಬು ಉಪಸ್ಥಿತರಿದ್ದರು.