ಪಡಿತರ ಚೀಟಿ ರದ್ದು, ಸೊಸೈಟಿಗೆ ಬಿತ್ತು ಬೀಗ
ಕ.ಪ್ರ.ವಾರ್ತೆ ಸೂಲಿಬೆಲೆ ಜು. 25
ಎಲ್ಲ ದಾಖಲೆಗಳನ್ನು ನೀಡಿದರೂ ಪಡಿತರ ಕಾರ್ಡುಗಳನ್ನು ರದ್ದು ಮಾಡಿದ್ದಾರೆ ಎಂದು ಆರೋಪಿಸಿ ದೊಡ್ಡ ಅರಳಿಗೆರೆ ಶಾಖೆ ವ್ಯಾಪ್ತಿಯ ಸುತ್ತಮುತ್ತಲಿನ ಗ್ರಾಮಗಳ ಪಡಿತರ ಫಲಾನುಭವಿಗಳು ಪಡಿತರ ವಿತರಣೆ ಕೇಂದ್ರಕ್ಕೆ ಬೀಗ ಜಡಿದು ಪ್ರತಿಭಟಿಸಿದ ಘಟನೆ ಗುರುವಾರ ನಡೆದಿದೆ.
ಸೂಲಿಬೆಲೆ ಹೋಬಳಿಯ ದೊಡ್ಡ ಅರಳಿಗೆರೆ ಶಾಖೆ ವ್ಯಾಪ್ತಿಗೆ ತಮ್ಮರಸನಹಳ್ಳಿ, ಟಿ.ಅಗ್ರಹಾರ, ಸಿದ್ದೇನಹಳ್ಳಿ,ದೊಡ್ಡಅರಳಿಗೆರೆ, ಭುವನಹಳ್ಳಿ, ಬಾವಾಪುರ ಸೇರಿದಂತೆ 9 ಗ್ರಾಮಗಳ ಪಡಿತರ ಫಲಾನುಭವಿಗಳು ಈ ಶಾಖೆಯಿಂದಲೇ ಪಡಿತರ ಧಾನ್ಯಗಳನ್ನು ಪಡೆಯುತ್ತಿದ್ದಾರೆ. 2010 ರ ಹಿಂದೆ ವಿತರಣೆ ಮಾಡಿರುವ ಪಡಿತರ ಕಾರ್ಡುಗಳಿಗೆ ದೊಡ್ಡಅರಳಿಗೆರೆ ಗ್ರಾ.ಪಂದಲ್ಲಿ ಗಂಟೆ ಗಟ್ಟಲೆ ಕ್ಯೂ ನಿಂತು ಬಯೋವುಟ್ರಿಕ್ ಹಾಗೂ ಪೋಟೋ ತೆಗೆಸಿದ್ದರೂ 250ಕ್ಕೂ ಹೆಚ್ಚು ಕಾರ್ಡುಗಳನ್ನು ರದ್ದು ಮಾಡಲಾಗಿದೆ. 2013ರಲ್ಲಿ ವಿತರಿಸಿರುವ ಕಾರ್ಡುಗಳಿಗೆ ಸಹ ಪಡಿತರ ನೀಡಿಲ್ಲ. ಕೂಲಿ ಮಾಡುವ ಕುಟುಂಬಗಳಿಗೆ ಎಪಿಎಲ್,ಅನುಕೂಲಸ್ಥರಿಗೆ ಬಿಪಿಎಲ್ ನೀಡಿ ತಾರತಮ್ಯ ಮಾಡಲಾಗಿದೆ. ಪಡಿತರ ನಂಬಿ ಜೀವನ ನಡೆಸುವ ಆನೇಕ ಕುಟುಂಬಗಳು ಅಧಿಕಾರಗಳ ನಿರ್ಲಕ್ಷ್ಯಕ್ಕೆ ಒಳಗಾಗಿ ಪಡಿತರದಿಂದ ವಂಚಿತರನ್ನಾಗಿ ಮಾಡಿದ್ದಾರೆ. ಕಳೆದ ತಿಂಗಳು ಆಹಾರ ಧಾನ್ಯಗಳನ್ನು ಪಡೆಯಲಾಗಿದೆ. ಈ ತಿಂಗಳು ನಿಮಗೆ ರೇಷನ್ ಬಂದಿಲ್ಲ ಎಂದು ಅಧಿಕಾರಿಗಳು ಹೇಳ್ತಾರೆ ಎಂದು ಪ್ರತಿಭಟನೆಕಾರರು ಆರೋಪಿಸಿದರು.
ಅಧಿಕಾರಿಗಳು ಸ್ಥಳಕ್ಕೆ ಬಂದು ರದ್ದಾಗಿರುವ ಕಾರ್ಡುಗಳು ಬಗ್ಗೆ ಮಾಹಿತಿ ನೀಡುವವರಿಗೂ ಯಾರಿಗೂ ರೇಷನ್ ನೀಡಬಾರದು ಎಂದು ಪ್ರತಿಭಟನಾಕಾರರು ಸೊಸೈಟಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಕ್ಯಾರೇ ಅನ್ನದ ಅಧಿಕಾರಿಗಳು: ರದ್ದಾಗಿರುವ ಕಾರ್ಡುಗಳ ಬಗ್ಗೆ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಆಹಾರ ಇಲಾಖೆಯ ಅಧಿಕಾರಿಗಳು ಬರಬೇಕು ಎಂದು ಪಟ್ಟು ಹಿಡಿದರೂ ಕ್ಯಾರೇ ಅನ್ನದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕುಪಿತಗೊಂಡ ಫಲಾನುಭವಿಗಳು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಹಳೇ ಕಾರ್ಡುಗಳಿಗೆ ಬಯೋವುಟ್ರಿಕ್ ನೀಡಿಲ್ಲ ಎಂದು ರದ್ದು ಮಾಡಿದ್ರೂ, ಹೊಸದಾಗಿ ಬಯೋವುಟ್ರಿಕ್ ನೀಡಿ ಪೋಟೋ ತೆಗೆಸಿರುವ ಕಾರ್ಡುಗಳಿಗೆ ರೇಷನ್ ನೀಡಿಲ್ಲ. ಈಗಾದರೇ ಅನ್ನಭಾಗ್ಯ ಯಾರಿಗೆ ಸಿಗುತ್ತೆ? ಸರ್ಕಾರದ ಅವೈಜ್ಞಾನಿಕ ನಿಯಮಗಳು ಕೂಲಿ ಮಾಡಿ ಜೀವನ ಸಾಗಿಸುವ ಬಡವರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆಯನ್ನು ಹಾಕಿವೆ ಎಂದು ದೂರಿದರು.
ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕಾರ್ಡು ಹೊಂದಿದ್ದ ಪ್ರತಿ ಕುಟುಂಬಕ್ಕೆ ಪಡಿತರ ಸಿಗುತ್ತಿತ್ತು. ಈಗ ಎಲ್ಲ ದಾಖಲೆಗಳು ಸರಿಯಾಗಿ ಸಲ್ಲಿಕೆ ಮಾಡಿದ್ದರೂ ಕಾರ್ಡುಗಳನ್ನು ಉದ್ದೇಶಪೂರ್ವಕವಾಗಿ ರದ್ದು ಮಾಡಲಾಗಿದೆ. ಈ ಮೂಲಕ ಬಡವರ ಹೊಟ್ಟೆ ಮೇಲೆ ಬರೆ ಹಾಕಿರುವ ಸರ್ಕಾರ ಬಡವರ ವಿರೋಧಿಯಾಗಿದೆ.
- ಡಿ.ಟಿ ವೆಂಕಟೇಶ್