ಶಾಂತಿಯುತವಾಗಿ ನಡೆದ ಆನೇಕಲ್ ಸರ್ಕಾರಿ ನೌಕರರ ಸಂಘದ ಚುನಾವಣೆ
ಕ.ಪ್ರ.ವಾರ್ತೆ ಆನೇಕಲ್ಲು ಜು. 25
ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿಗೆ ಇತ್ತೀಚೆಗೆ ಚುನಾವಣೆ ಶಾಂತಿಯುತವಾಗಿ ನಡೆಯಿತು. ನೌಕರರ ಸಂಘದ ಆವರಣದಲ್ಲಿ ಬೆಳಗ್ಗೆ 11 ಗಂಟೆಗೆ ಪ್ರಾರಂಭವಾದ ಮತದಾನ ಮಧ್ಯಾಹ್ನದವರೆವಿಗೂ ನಡೆಯಿತು. 5 ಇಲಾಖೆಗಳಿಂದ 9 ಸ್ಥಾನಗಳಿಗೆ 19 ಮಂದಿ ಸ್ಪರ್ಧಿಸಿದ್ದರು. 21 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದರು.
ಕೃಷಿ ಇಲಾಖೆಯ 1 ಸ್ಥಾನಕ್ಕೆ ನೇರ ಸ್ಪರ್ಧೆ ಇದ್ದು 12 ಮತಗಳನ್ನು ಪಡೆಯುವ ಮೂಲಕ ಕುಮಾರ್ ಗೆದ್ದಿದ್ದಾರೆ. ಶಿಕ್ಷಣ ಇಲಾಖೆಯ ಬೋಧಕೇತರ ಸಿಬ್ಬಂದಿ 1 ಸ್ಥಾನಕ್ಕೆ ನೇರ ಸ್ಫರ್ಧೆ ಇದ್ದು ಗವಿರಂಗಯ್ಯ 21 ಮತಗಳನ್ನು ಪಡೆದು ವಿಜಯಶಾಲಿಯಾಗಿದ್ದಾರೆ.
ರೇಷ್ಮೆ ಇಲಾಖೆಯ 1 ಸ್ಥಾನಕ್ಕೆ ತ್ರಿಕೋನ ಸ್ಪರ್ಧೆಯಿದ್ದು ಹೆಚ್. ಸಿ. ರಾಜೇಂದ್ರ ಕುಮಾರ್ 24 ಮತಗಳನ್ನು ಪಡೆದು ವಿಜಯಶಾಲಿಯಾಗಿದ್ದಾರೆ. ಕಂದಾಯ ಇಲಾಖೆ 2 ಸ್ಥಾನಗಳಿಗೆ ನಾಲ್ವರು ಸ್ಪರ್ಧಿಸಿದ್ದು ವೆಂಕಟರಾಜು ಮತ್ತು ಸಂದೀಪ್ ಸಿಂಗ್ ವಿಜಯಶಾಲಿಗಳಾಗಿದ್ದಾರೆ. ಶಿವಣ್ಣ ಹಾಗೂ ಪುಷ್ಪರಾಜು ಪರಾಜಿತರಾಗಿದ್ದಾರೆ.
ಆರೋಗ್ಯ ಇಲಾಖೆಯ 4 ಸ್ಥಾನಗಳಿಗೆ 2 ಸಿಂಡಿಕೇಟ್ (ಕೂಟ) ಗಳನ್ನು ರಚಿಸಿಕೊಂಡಿದ್ದು ತಲಾ ನಾಲ್ಕರಂತೆ 8 ಜನ ಸ್ಪರ್ಧಿಸಿದ್ದರು. 134 ಮತಗಳಿದ್ದು 121 ಮತಗಳು ಚಲಾವಣೆಯಾದವು. ಒಂದು ಕೂಟದ ಸತೀಶ್ ರೆಡ್ಡಿ 77 ಮತಗಳು, ಎಂ. ಶಿವಣ್ಣ 79 ಮತಗಳು, ಹೇಮಂತ ಕುಮಾರ್ 89 ಮತಗಳನ್ನು ಪಡೆದುಕೊಂಡರು. ಎರಡನೆಯ ಕೂಟದ ಮುನಿರೆಡ್ಡಿ 68 ಮತಗಳನ್ನು ಪಡೆದು ವಿಜಯಶಾಲಿಗಳಾದರು.
ಇಬ್ಬರ ಆಯ್ಕೆ ಖಚಿತ: ಆನೇಕಲ್ ತಾಲೂಕು ಘಟಕದಿಂದ ಆಯ್ಕೆಯಾಗಿರುವ 30 ಜನರ ಪೈಕಿ ಒಬ್ಬರು ಅಧ್ಯಕ್ಷ ಸ್ಥಾನಕ್ಕೂ ಮತ್ತೊಬ್ಬರು ರಾಜ್ಯ ಪರಿಷತ್ಗೂ ಆಯ್ಕೆಯಾಗಲಿದ್ದಾರೆ. ಎರಡೂ ಸ್ಥಾನಗಳಿಗೆ ಚುನಾವಣೆ ನಡೆಯುವ ಸಂಭವವಿದೆ.