ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಎಟಿಎಂ ಕದೀಮರ ಬಂಧನ, 14.53 ಲಕ್ಷ ವಶ

Srinivasa Murthy VN
Updated On : 27 Jul 2013, 1:10 am

ಬೆಂಗಳೂರು: ಬೆಂಗಳೂರು ಪೊಲೀಸರಿಗೆ ಸವಾಲಾಗಿದ್ದ ಎಟಿಎಂ ಯಂತ್ರ ದೋಚುವ ಕಳ್ಳರು ಸಿಕ್ಕಿ ಬಿದ್ದಿದ್ದಾರೆ. ಬಾಗಲೂರು ಹಾಗೂ ಹೆಬ್ಬಗೋಡಿಯಲ್ಲಿ ಎಟಿಎಂ ಕೇಂದ್ರಕ್ಕೆ ನುಗ್ಗಿ ಹಣದ ಯಂತ್ರಗಳನ್ನು ದೋಚಿದ್ದ 7 ಮಂದಿಯನ್ನು ಬೆಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ವಿಭಾಗದ ಎಸ್ಪಿ ಅಮರ್‌ಕುಮಾರ್ ಪಾಂಡೆ ಸುದ್ದಿಗಾರರೊಂದಿಗೆ ಮಾತನಾಡಿ ಬಂಧಿತರಿಂದ 14.53 ಲಕ್ಷ ನಗದು ವಶಪಡಿಸಿಕೊಂಡಿದ್ದು, ಇಂತಹ 5 ಪ್ರಕರಣ ಪತ್ತೆಯಾಗಿವೆ ಎಂದಿದ್ದಾರೆ. ಆರೋಪಿಗಳು ಸಿಸಿಟಿವಿ ಸಂಪರ್ಕ ಕಡಿತಗೊಳಿಸಿ, ಸಾಕ್ಷಿ ನಾಶಗೊಳಿಸಿದ್ದ ಕಾರಣ ಸ್ಥಳೀಯ ಪೊಲೀಸರಿಗೆ ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ವಿಶೇಷ ತಂಡ ರಚಿಸಲಾಗಿತ್ತು ಎಂದರು.
ಎಟಿಎಂ ಯಂತ್ರ ಕೆರೆಗೆ: ಹುಸ್ಕೂರು ಗೇಟ್ ಬಳಿಯ ಕೆನರಾ ಬ್ಯಾಂಕ್‌ನ ಎಟಿಎಂ ಯಂತ್ರ ಹಾಗೂ ಇಗ್ಗಲೂರು ಗ್ರಾಮದ ಬ್ಯಾಂಕ್ ಆಫ್ ಮಹಾರಾಷ್ಟ್ರದ ಎಟಿಎಂ ಯಂತ್ರವನ್ನು ಆರೋಪಿಗಳು ದೋಚಿಕೊಂಡು ಹೋಗಿದ್ದರು. ಹಣ ದೋಚಿದ ನಂತರ ಯಂತ್ರಗಳನ್ನು ಕೆರೆಗಳಲ್ಲಿ ಎಸೆದು ಹೋಗುತ್ತಿದ್ದರು. ಅದೇ ರೀತಿ ಇಗ್ಗಲೂರು ಗ್ರಾಮದ ಬಳಿ ದೋಚಿದ ಎಟಿಎಂ ಯಂತ್ರವನ್ನು ಒಡೆದು ಅದರಲ್ಲಿದ್ದ 10.35 ಲಕ್ಷ ಹಣ ದೋಚಿ, ಯಂತ್ರವನ್ನು ಮತ್ತಿಕೆರೆ ಬಳಿ ಇರುವ ನಾಗೊಂಡ ಪಲ್ಲಿ ಕೆರೆಯಲ್ಲಿ ಎಸೆದಿದ್ದರು. ಬಾಗಲೂರಿನ ಎಸ್‌ಬಿಐ ಎಟಿಎಂನ ಯಂತ್ರ ಒಡೆದು ಅದರಲ್ಲಿದ್ದ 24.35 ಲಕ್ಷ ದೋಚಿ, ಆ ಯಂತ್ರವನ್ನು ಹಾರೋಹಳ್ಳಿ ತಟ್ಟೆಕೆರೆ ಗ್ರಾಮದ ಕೆರೆಯಲ್ಲಿ ಎಸೆದಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಯಂತ್ರದ ಬಿಡಿಭಾಗಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಅಲ್ಲದೆ, ಬಂಧಿತರು ಹೊಸೂರು ತಾಲೂಕು ಸಿಪ್‌ಕಾಟ್ ಠಾಣೆ ವ್ಯಾಪ್ತಿಯ ಸೌತ್ ಇಂಡಿಯಾ ಮತ್ತು ವೈಶ್ಯಾ ಬ್ಯಾಂಕ್‌ನ ಎಟಿಎಂ ಯಂತ್ರಗಳನ್ನು ದೋಚುವ ವಿಫಲ ಯತ್ನ ನಡೆಸಿದ್ದಾರೆ ಎಂದರು. ಆನೇಕಲ್ ಪಟ್ಟಣದ ಸೋಮು, ಹೊಸಕೋಟೆಯ ರಾಮಸ್ವಾಮಿ, ಪ್ರವೀಣ್‌ರಾವ್, ನವೀನ್‌ಕುಮಾರ್, ನಿಶಾಂತ್, ರಮೇಶ್ ಅಲಿಯಾಸ್ ಪೀರಾ ಹಾಗೂ ರಮೇಶ್ ಬಂಧಿತರು.

ಇಂದು ಎನ್ನೆಸ್ಸೆಸ್ ಕಾರ್ಯಯೋಜನೆ
ದೊಡ್ಡಬಳ್ಳಾಪುರ: ದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ನೇತೃತ್ವದಲ್ಲಿ 2013-14ನೇ ಸಾಲಿನ ಕಾರ್ಯಯೋಜನೆಗಳ ಉದ್ಘಾಟನಾ ಸಮಾರಂಭ ಎಸ್‌ಡಿಯುಐಎಂ ಸಭಾಂಗಣದಲ್ಲಿ ಜು.27ರ ಶನಿವಾರ ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ನಿವೃತ್ತ ಉಪನ್ಯಾಸಕಿ ಕೆ.ಎಸ್.ಪ್ರಭಾ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕೊಂಗಾಡಿಯಪ್ಪ ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿ ಪ್ರೊ.ಚಂದ್ರಪ್ಪ, ಎಸ್‌ಡಿಯುಐಟಿ ಟ್ರಸ್ಟಿ ಜೆ.ರಾಜೇಂದ್ರ, ಶೈಕ್ಷಣಿಕ ಸಲಹೆಗಾರ ಪ್ರೊ.ಕೆ.ಎನ್.ಶ್ರೀನಿವಾಸ್, ಪ್ರಭಾರಿ ಪ್ರಾಂಶುಪಾಲ ಜೆ.ವಿ.ಚಂದ್ರಶೇಖರ್ ಮತ್ತಿತರರಲಿದ್ದಾರೆ.

ಆಟೋ- ಕಾರು ಡಿಕ್ಕಿ: ಚಾಲಕ ಸಾವು
ಬೆಂಗಳೂರು: ಟೈರ್ ಪಂಕ್ಚರ್ ಆಗಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಸರಕು ಸಾಗಣೆ ಆಟೋಗೆ ಹಿಂಬದಿಯಿಂದ ಬಂದ ಕಾರೊಂದು ಡಿಕ್ಕಿಯೊಡೆದ ಪರಿಣಾಮ, ಚಾಲಕ ಮೃತಪಟ್ಟಿರುವ ಘಟನೆ ಮಡಿವಾಳ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ. ಚಾಮರಾಜಪೇಟೆ ನಿವಾಸಿ, ಮೂಲತಃ ಚನ್ನಪಟ್ಟಣದ ಕಾರು ಚಾಲಕ ಪುಟ್ಟಸ್ವಾಮಿ (40) ಮೃತರು. ಹೊಸೂರು ಮುಖ್ಯರಸ್ತೆ ಗಾರ್ವೆಬಾವಿ ಪಾಳ್ಯದಲ್ಲಿ ಮುಂಜಾನೆ ಅಪಘಾತ ಸಂಭವಿಸಿದೆ. ಅಪಘಾತದ ವೇಳೆ ಆಟೋ ಚಾಲಕ ಇರಲಿಲ್ಲ. ಅಪಘಾತ ಸಂಭವಿಸಿದ ಕೆಲಹೊತ್ತಿನ ನಂತರ ದಾರಿ ಹೋಕರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಗಾಯಾಳನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಚಿಕಿತ್ಸೆ ಫಲಿಸದೆ ಪುಟ್ಟಸ್ವಾಮಿ ಅವರು ಮುಂಜಾನೆ ಮೃತಪಟ್ಟಿದ್ದಾರೆ.

ನಾಳೆ ನೇತ್ರ ಚಿಕಿತ್ಸೆ ಶಿಬಿರ
ನೆಲಮಂಗಲ: ರಮೇಶ್ ಸೇವಾ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ ಸೋಂಪುರ ಹೋಬಳಿ ಘಟಕ ಇವರ ಸಹಯೋಗದೊಂದಿಗೆ ಜುಲೈ 28 ರಂದು ದಾಬಸ್‌ಪೇಟೆಯ ಸಿವಿಜಿ ಪ್ರೌಢಶಾಲಾ ಆವರಣದಲ್ಲಿ ಹುತಾತ್ಮ ವೀರ ಯೋಧರ ಮತ್ತು ಇತ್ತೀಚೆಗೆ ಉತ್ತರಾಖಂಡದಲ್ಲಿ ಮಡಿದವರ ಸ್ಮರಣಾರ್ಥಕವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ, ಉಚಿತ ನೇತ್ರ ಚಿಕಿತ್ಸೆ ಹಾಗೂ ದಂತ ತಪಾಸಣೆ ಶಿಬಿರವನ್ನು ಏರ್ಪಡಿಸಲಾಗಿದೆ ಹಾಗೂ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆಯನ್ನು ಭಾನುವಾರ ಬೆಳಿಗ್ಗೆ ವಿತರಿಸಲಾಗುವುದು.

ಛತ್ರಪತಿ ಶಾಹು ಮಹರಾಜ್ ಜನ್ಮದಿನಾಚರಣೆ
ದೊಡ್ಡಬಳ್ಳಾಪುರ: ಭಾರತದ ಭಿನ್ನ ಸಾಂಸ್ಕೃತಿಕ ಪರಿಸರದಲ್ಲಿ ಮಹತ್ವದ ಪಾತ್ರ ನಿರ್ವಹಿಸುವ ಮೀಸಲಾತಿ ಪದ್ಧತಿಯ ಕುರಿತು ಮೊದಲು ಪ್ರಸ್ತಾಪಿಸುವ ಮೂಲಕ ದೇಶದ ಶೂದ್ರ ಪರಂಪರೆಗೆ ಹೊಸ ಮಾರ್ಗವನ್ನು ಹಾಕಿಕೊಟ್ಟವರು ಛತ್ರಪತಿ ಶಾಹು ಮಹರಾಜ್ ಎಂದು ಪ್ರಜಾ ವಿಮೋಚನಾ ಚಳವಳಿ(ಸಮತಾವಾದ)ಯ ರಾಜ್ಯಾಧ್ಯಕ್ಷ ಆನೇಕಲ್ ಕೃಷ್ಣಪ್ಪ ಹೇಳಿದರು. ತಾಲೂಕು ಪ್ರಜಾ ವಿಮೋಚನಾ ಚಳವಳಿ(ಎಸ್) ನೇತೃತ್ವದಲ್ಲಿ ಪುರಭವನದಲ್ಲಿ ಶುಕ್ರವಾರ ನಡೆದ ಶಾಹು ಮಹರಾಜ್ ಅವರ 139ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಪಿವಿಸಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮುನಿಆಂಜನಪ್ಪ, ರಾಜ್ಯಉಪಾಧ್ಯಕ್ಷ ಜಿ.ವೆಂಕಟೇಶ್, ಬೆಂಗಳೂರು ವಿಭಾಗೀಯ ಕಾನೂನು ಘಟಕದ ಅಧ್ಯಕ್ಷ ಬಸವರಾಜು, ಅಧ್ಯಕ್ಷ ಚಿಕ್ಕರಸಯ್ಯ, ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಮುನಿಕೃಷ್ಣ, ಉಪಾಧ್ಯಕ್ಷ ಹಣಬೆ ಮೂರ್ತಿ, ಕಾರ್ಯದರ್ಶಿ ಸುತ್ತಳ್ಳಿ ಚಂದ್ರು, ಮಹಿಳಾ ಘಟಕದ ಅನಿತಾ, ಗೌರಮ್ಮ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement