ಲೋಕೋಪಯೋಗಿ ಬಹುಕೋಟಿ ಹಗರಣ ಸ್ವಯಂ ದೂರು ದಾಖಲು ಒಂದು ಹುನ್ನಾರ
ಕ.ಪ್ರ.ವಾರ್ತೆ, ರಾಮನಗರ, ಜು.26
ಜಿಲ್ಲೆಯ ಮಾಗಡಿ, ಚನ್ನಪಟ್ಟಣ ಸಹಿತ ವಿವಿಧೆಡೆ ನಡೆದಿರುವ ಲೋಕೋಪಯೋಗಿ ಇಲಾಖೆಯ ಬಹುಕೋಟಿ ಹಗರಣ ಸಂಬಂಧ ರಾಮನಗರ ಲೋಕಾಯುಕ್ತ ನ್ಯಾಯಾಲಯಕ್ಕೆ ಸ್ವಯಂ ಪ್ರೇರಣೆಯಿಂದ ದೂರು ದಾಖಲಾಗುವಂತೆ ಮಾಡಿರುವ ಹಿಂದೆ ಹುನ್ನಾರ ಅಡಗಿದೆ ಎಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಮುಖಂಡ ಸಿ.ಪುಟ್ಟಸ್ವಾಮಿ ಆರೋಪಿಸಿದ್ದಾರೆ.
ನೂರಾರು ಕೋಟಿ ರು. ಹಗರಣದ ಬಗ್ಗೆ ಸದನ ಸಮಿತಿ ರಚಿಸಿ ತನಿಖೆಗೆ ತೀರ್ಮಾನಿಸಿದ್ದು, ಬೆಂಗಳೂರಿನ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಮಾರ್ಚ್ 21ರಂದು ಖಾಸಗಿ ದೂರು ದಾಖಲಿಸಲಾಗಿದ್ದರೂ ರಾಮನಗರದಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸುವ ಔಚಿತ್ಯ ಏನಿತ್ತು ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.
ಲೋಕೋಪಯೋಗಿಯ ಭ್ರಷ್ಟ ಅಧಿಕಾರಿಗಳು, ಅವ್ಯವಹಾರದ ಆರೋಪಿಗಳು ಮತ್ತು ಪ್ರಭಾವಿಗಳ ಒತ್ತಡಕ್ಕೆ ಮಣಿದೇ ಈ ಷಡ್ಯಂತ್ರ ನಡೆಸಲಾಗಿದೆ. ಇದರಲ್ಲಿ ಪ್ರಕರಣದ ತನಿಖೆಯ ಹಾದಿ ತಪ್ಪಿಸುವ ವ್ಯವಸ್ಥಿತಿ ಪಿತೂರಿ ಅಡಗಿದೆ. ಇದರ ಹಿಂದೆ ಲೋಕಾಯುಕ್ತ ಐಜಿ ಸತ್ಯನಾರಾಯಣರಾವ್ ಅವರ ಕೈವಾಡವಿದೆ ಎಂದು ಅವರು ದೂರಿದ್ದಾರೆ.
ಅವ್ಯವಹಾರದಲ್ಲಿ ಭಾಗಿಯಾದದವರನ್ನು ಸದೆಬಡಿಯಬೇಕಾದ ಅಧಿಕಾರಿಯೇ ಸುಳ್ಳು ಮತ್ತು ಅಸತ್ಯಗಳನ್ನು ಪ್ರಮಾಣೀಕರಿಸಿ, ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಉಡುಪಿ ಜಿಲ್ಲೆಯ ಸ್ವಂತ ಊರಿನಲ್ಲಿ ಅವರ ಮನೆ ನಿರ್ಮಾಣವೇ ವಿವಾದಕ್ಕೀಡಾಗಿದೆ. ಈಗ ಆ ಮನೆಯನ್ನು ಪರಭಾರೆ ಮಾಡಿದ್ದಾಗಿದೆ ಎಂದು ಹೇಳಿಕೊಳ್ಳುತ್ತಿರುವುದು ಆತ್ಮವಂಚನೆಯ ಕೆಲಸ ಎಂದು ಟೀಕಿಸಿದ್ದಾರೆ.
ಕೋಟ್ಯಂತರ ರು.ನಲ್ಲಿ ಮನೆಯನ್ನು ಸರ್ಕಾರಿ ನಿಯಮ ಉಲ್ಲಂಘಿಸಿ ಕಟ್ಟಿಸಿದ್ದಾರೆ. ಹೀಗಾಗಿ ಅವರ ವಿರುದ್ಧವೇ ತನಿಖೆ ನಡೆಸಬೇಕಿದೆ. ಇಂತಹವರು ಗೌರವಯುತವಾದ ಲೋಕಾಯುಕ್ತದಂತಹ ವ್ಯವಸ್ಥೆಯಲ್ಲಿ ಉನ್ನತ ಹುದ್ದೆ ಅಲಂಕರಿಸಲು ಸೂಕ್ತವಾದವರಲ್ಲ ಎಂದು ಪುಟ್ಟಸ್ವಾಮಿ ಆರೋಪ ಎಸಗಿದ್ದಾರೆ.
ಸಿಬಿಐಗೆ ಒಪ್ಪಿಸಲಿ: ರಾಮನಗರ ಜಿಲ್ಲೆಯಲ್ಲಿ ನಡೆದಿರುವ ಲೋಕೋಪಯೋಗಿ ಇಲಾಖೆಯ ಬಹುಕೋಟಿ ಹಗರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕಾದರೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವುದೇ ಸೂಕ್ತ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಲಕ್ಷ್ಮಣಸ್ವಾಮಿ, ಪದಾಧಿಕಾರಿಗಳಾದ ಹೊಂಬಾಳೇಗೌಡ, ಚಲುವಯ್ಯ, ಸುರೇಶ್, ಸಂಪತ್ಕುಮಾರ್, ಬೈರೇಗೌಡ, ಕುಮಾರ್, ನಾಗರಾಜು, ಕೃಷ್ಣಪ್ಪ, ಎಂ.ಪುಟ್ಟಸ್ವಾಮಿ, ಜಯ ಕರ್ನಾಟಕ ಸಂಘಟನೆ ಮಾಜಿ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹಾಜರಿದ್ದರು.