ಅಮ್ಮನ ಮುಂದೆ ಪ್ರತ್ಯಕ್ಷನಾದ ಪೊಲೀಸ್ ಪಾಂಡುರಂಗ
ಕ.ಪ್ರ.ವಾರ್ತೆ ಮಾಗಡಿ ಜು.27
ಮಗನ ಬರುವಿಕೆಗಾಗಿ ಹಂಬಲಿಸುತ್ತಿದ್ದ ಹೆತ್ತ ತಾಯಿಯ ಕಣ್ಣೀರ ಕೂಗಿಗೆ ಕರಗಿದ ಮಗ ಪೊಲೀಸ್ ಪಾಂಡುರಂಗ, ಕೊನೆಗೂ ತಾಯಿಯನ್ನು ನೋಡಲು ಪ್ರತ್ಯಕ್ಷನಾದ. ಕಣ್ಣೀರಿಟ್ಟು ತಾಯಿಯ ಕಾಲಿಗೆ ಬಿದ್ದು ಕ್ಷಮೆಯಾಚಿಸಿದ ಎಂದು ಮಾಡಬಾಳ್ ಗ್ರಾಪಂ ಮಾಜಿ ಅಧ್ಯಕ್ಷ ಶಿವಬೀರಯ್ಯ ತಿಳಿಸಿದರು.
ಕಳೆದ 15 ವರ್ಷಗಳಿಂದ ಹೆತ್ತ ತಾಯಿಯನ್ನು ನೋಡಲು ಬಾರದ ಪೋಲೀಸ್ ಪಾಂಡುರಂಗ, ಮಗನ ಬರುವಿಕೆಗಾಗಿ ನಿತ್ಯ ದಾರಿ ನೋಡುತ್ತಾ ಕಣ್ಣೀರಿಡುತ್ತಿದ್ದ ವಿಚಾರವನ್ನು ಶಿವಬೀರಯ್ಯ ಅವರು ಸುದ್ದಿಗಾರರಿಗೆ ಮುಟ್ಟಿಸಿದ್ದರು. ಜು.26 ರಂದು ಕನ್ನಡಪ್ರಭದಲ್ಲಿ ವರದಿ ಪ್ರಕಟಗೊಂಡಿತು. ವಿಷಯ ತಿಳಿದ ಪೊಲೀಸ್ ಪಾಂಡುರಂಗ ತಾಯಿ ನಿಂಗಮ್ಮನ ಬಳಿ ಬಂದು ಕಣ್ಣೀರಿಡುತ್ತಾ ಕಾಲಿಗೆ ಬಿದ್ದ. ಪತ್ರಿಕೆಯಲ್ಲಿ ಮಾನವೀಯತೆಯ ವರದಿಯನ್ನು ಪ್ರಕಟಿಸಿದ್ದು, ನಿಜಕ್ಕೂ ಫಲಸಿಕ್ಕಿತು ಎಂದು ಶಿವಬೀರಯ್ಯ ಪತ್ರಿಕೆಗೆ ಅಭಿನಂದನೆ ಸಲ್ಲಿಸಿ ಸಂತಸ ಹಂಚಿಕೊಂಡರು. 90 ರ ವಯೋವೃದ್ಧೆ ನಿಂಗಮ್ಮನ ಮೊಗದಲ್ಲಿ ಸಂತಸ ಹೊನಲು ಮೂಡಿದೆ ಎಂದರು.
ತಾಯಿಯನ್ನು ಜತೆಯಲ್ಲಿಟ್ಟುಕೊಳ್ಳಲಾಗುತ್ತಿಲ್ಲ. ಪ್ರತಿ ತಿಂಗಳು ಮಾಡಬಾಳ್ ಗ್ರಾಮಕ್ಕೆ ಬರುತ್ತೇನೆ. ಜೀವನಕ್ಕೆ ಬೇಕಾಗುವಷ್ಟು ಧವಸ ಧಾನ್ಯ ಕೊಡಿಸುತ್ತೇನೆ, ಯೋಗಕ್ಷೇವು ನೋಡುತ್ತೇನೆ ಎಂಬುದಾಗಿ ಪಾಂಡುರಂಗ ತಿಳಿಸಿದ್ದಾರೆ ಎಂದು ಶಿವಬೀರಯ್ಯ ವಿವರಿಸಿದರು.
ಶಿವಬೀರಯ್ಯ ಅವರು ನಿಂಗಮ್ಮಜ್ಜಿಗೆ ಮಾಡಬಾಳ್ನಲ್ಲಿ ಉಚಿತವಾಗಿ ಮನೆಯ ಕೊಠಡಿಯನ್ನು ನೀಡಿದ್ದಾರೆ. ಕಳೆದ 15 ವರ್ಷಗಳಿಂದಲೂ ತನ್ನ ತಾಯಿಯಂತೆ ಪ್ರೀತಿಯಿಂದ ಕಾಣುತ್ತಿದ್ದರು. ನಿಂಗಮ್ಮಜ್ಜಿಯ ಮಗ ತಾಯಿಯ ಹಂಬಲಕ್ಕೆ ಸ್ಪಂದಿಸಿ ಮಾನವೀಯತೆ ಮೆರೆದಿದ್ದಾರೆ.