'ಜನಪದ ಸಂವೇದನೆಯಿಂದ ಬದುಕು ಕಟ್ಟಿಕೊಳ್ಳಿ'
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಜು.27
ಪರಿಷತ್ತಿನ ಕಾರ್ಯದರ್ಶಿ ಎಚ್.ಎನ್. ಪ್ರಕಾಶ್ ನಿವಾಸದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಮನೆಯಂಗಳದಲ್ಲಿ ತಿಂಗಳ ಸಾಹಿತ್ಯ ಸಂಜೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ನಿವೃತ್ತ ಉಪನ್ಯಾಸಕಿ ಕೆ.ಎಸ್.ಪ್ರಭಾ ಉದ್ಘಾಟಿಸಿ ಮಾತನಾಡಿ, ಜನಪದ ನಮ್ಮ ಜೀವನಾಡಿ. ಜನಪದದ ಸಂವೇದನೆಗಳ ಮೂಲಕ ಬದುಕು ಕಟ್ಟಿಕೊಳ್ಳುವ ಕೆಲಸವನ್ನು ನಮ್ಮ ಹಿರಿಯರು ಮಾಡಿದ್ದಾರೆ. ಆ ಆಲೋಚನೆಗಳ ಮರು ಅನುಷ್ಠಾನ ಇಂದಿನ ಅನಿವಾರ್ಯ. ಈ ನಿಟ್ಟಿನಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಿಂತನೆಗಳು ರೂಪುಗೊಳ್ಳಬೇಕು. ಗೀತೆ, ಒಡಪು, ಕಥೆ, ಗೀಗೀಪದ, ವಿವಿಧ ಬಗೆಯ ಕುಣಿತಗಳು, ಸಾಂಸ್ಕೃತಿಕ ಜೀವಂತಿಕೆಯ ಪ್ರತಿರೂಪವಾಗಿ ಜನಪದ ಇಂದಿಗೂ ನಮ್ಮ ನಡುವೆ ಉಳಿದಿದೆ ಎಂದರು.
ಜನಪದವನ್ನು ಮರೆತವನು ಬದುಕಿನ ರಸಾನುಭವವನ್ನು ಕಳೆದುಕೊಳ್ಳುತ್ತಾನೆ ಎಂದ ಅವರು ಇಂದು ನಗರ ಪ್ರದೇಶಗಳಲ್ಲಿ ಜಾನಪದ ಫ್ಯಾಷನ್ ಆಗಿ ಬೆಳೆಯುತ್ತಿದ್ದರೆ, ಗ್ರಾಮಾಂತರ ಪ್ರದೇಶದಲ್ಲೂ ನೆಲೆ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದೆ ಎಂಬುದು ಆತಂಕಕಾರಿ ಎಂದರು. ಕಾರ್ಯಕ್ರಮದಲ್ಲಿ ಹಳ್ಳಿ ಜನಪರ ಸಾಂಸ್ಕೃತಿಕ ತಂಡದ ಹಾಡೋನಹಳ್ಳಿ ನಾಗರಾಜ್, ಕಂಟನಕುಂಟೆ ಅಶ್ವತ್ಥ್ ತಂಡದಿಂದ ಜಾನಪದ ಗೀತ ಮಾಧುರ್ಯ ಗಮನಸೆಳೆಯಿತು. ನಂತರ ಪರಿಸರವಾದಿ ಕೆ.ಗುರುದೇವ್ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು. ತಾ.ಕಸಾಪ ಅಧ್ಯಕ್ಷ ಕೆ.ಆರ್.ರವಿಕಿರಣ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಲೇಖಕ ಡಾ.ಎ.ಓ.ಆವಲಮೂರ್ತಿ, ಕಸಾಪ ಮಾಜಿ ಅಧ್ಯಕ್ಷ ಡಾ.ಬಿ.ನರಸಿಂಹಮೂರ್ತಿ, ತಾ.ಕಸಾಪ ಗೌ.ಅಧ್ಯಕ್ಷ ಡಿ.ಶ್ರೀಕಾಂತ್, ಕಾರ್ಯದರ್ಶಿ ಎಚ್.ಎನ್.ಪ್ರಕಾಶ್, ಪ್ರವೀಣ್, ಕೋಶಾಧ್ಯಕ್ಷ ಎಂ.ಚಿಕ್ಕಣ್ಣ ಮತ್ತಿತರರು ಹಾಜರಿದ್ದರು.