ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ನ್ಯಾಯಸಮ್ಮತ ಚುನಾವಣೆಗೆ ಸರ್ವ ತಯಾರಿ: ಡಿಸಿ

Srinivasa Murthy VN
Updated On : 28 Jul 2013, 1:05 am

ಕ.ಪ್ರ.ವಾರ್ತೆ ರಾಮನಗರ ಜು.27
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮರು ಚುನಾವಣೆಗೆ ಚುನಾವಣಾಧಿಕಾರಿಯೂ ಆದ ರಾಮನಗರ ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ಶನಿವಾರ ಅಧಿಸೂಚನೆ ಹೊರಡಿಸಿದ್ದು, ಮೊದಲ ದಿನವೇ ತಮಿಳುನಾಡಿನ ವ್ಯಕ್ತಿಯೊಬ್ಬರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.  
ತಮಿಳುನಾಡಿನ ಸೇಲಂ ಜಿಲ್ಲೆ ಮೆಟ್ಟೂರಿನ ಕೆ.ಪದ್ಮರಾಜನ್ ಮೊದಲಿಗರಾಗಿ ನಾಮಪತ್ರ ಸಲ್ಲಿಸಿರುವ ಪಕ್ಷೇತರ ಅಭ್ಯರ್ಥಿ. ಅವರಿಗೆ ಈ ಚುನಾವಣೆ ಹೊಸದೇನಲ್ಲ. ರಾಜ್ಯವೂ ಸಹಿತ ನಾನಾ ಕಡೆ ಚುನಾವಣೆಗೆ ನಾಮಪತ್ರ ಸಲ್ಲಿಸುವುದೇ ಅವರ ಖಯಾಲಿ.
ಚುನಾವಣೆಗೆ ಸಜ್ಜು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮರು ಚುನಾವಣೆಗೆ ರಾಮನಗರ ಜಿಲ್ಲಾಡಳಿತವು ಸಜ್ಜಾಗಿದೆ. ಮುಕ್ತ ಮತ್ತು ನಾಯಸಮ್ಮತವಾಗಿ ಚುನಾವಣೆ ನಡೆಸಲು ಎಲ್ಲ ತಯಾರಿ ನಡೆದಿದೆ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ವಿ.ಶ್ರೀರಾಮರೆಡ್ಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
4 ಜಿಲ್ಲೆಗಳ 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಈ ಕ್ಷೇತ್ರದ ಚುನಾವಣೆಯಲ್ಲಿ 2385 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಈ ಪೈಕಿ 401 ಮತಗಟ್ಟೆಗಳು ಅತಿಸೂಕ್ಷ್ಮ, 600 ಸೂಕ್ಷ್ಮ ಮತ್ತು 1384 ಸಾಮಾನ್ಯ ಮತಗಟ್ಟೆಗಳಾಗಿವೆ ಎಂದರು.
ಪ್ರಸಕ್ತ ಚುನಾವಣೆಯಲ್ಲಿ 986387 ಪುರುಷರು ಮತ್ತು 916976 ಮಹಿಳೆಯರು ಸೇರಿದಂತೆ 19,03,363 ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ ಎಂದು ಅವರು ವಿವರಿಸಿದರು.
ವೀಕ್ಷಕರ ನೇಮಕ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿರುವ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ತುಮಕೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನೂ ಚುನಾವಣಾ ಕರ್ತವ್ಯಕ್ಕೆ ಬಳಸಿಕೊಳ್ಳಲಾಗುವುದು ಎಂದು ಶ್ರೀರಾಮರೆಡ್ಡಿ ಹೇಳಿದರು.
ಈಗಾಗಲೇ ಮಾದರಿ ನೀತಿ ಸಂಹಿತೆಯನ್ನು ಜಾರಿಗೊಳಿಸಲಾಗಿದೆ. ಶೇಕಡ 97.23ರಷ್ಟು ಮತದಾರರಿಗೆ ಭಾವಚಿತ್ರ ಸಹಿತ ಗುರುತಿನ ಚೀಟಿ ವಿತರಿಸಲಾಗಿದೆ ಎಂದರು.
ನೇಮಕ ಪ್ರಕ್ರಿಯೆ: ಮತದಾರರ ಸಂಖ್ಯೆಯನ್ನು ಆಧರಿಸಿ ಚುನಾವಣಾ ಕರ್ತವ್ಯಕ್ಕೆ ಸಿಬ್ಬಂದಿ ನೇಮಿಸಿಕೊಳ್ಳಲಾಗುವುದು. ಈ ಪ್ರಕ್ರಿಯೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ನೇಮಕಗೊಂಡವರಿಗೆ ಹಂತ ಹಂತವಾಗಿ ತರಬೇತಿ ನೀಡಲಾಗುವುದು ಎಂದು ಅವರು ತಿಳಿಸಿದರು.
ನಾಮಪತ್ರ ಸಲ್ಲಿಸಲು ಕಚೇರಿ ಒಳಗೆ ಅಭ್ಯರ್ಥಿ ಸಹಿತ 5 ಮಂದಿಗಷ್ಟೇ ಪ್ರವೇಶಾವಕಾಶವಿದೆ. ಕಚೇರಿಯ ನೂರು ಮೀಟರ್ ಆವರಣಕ್ಕೆ 3ಕ್ಕಿಂತ ಹೆಚ್ಚು ವಾಹನಗಳಿಗೆ ಪ್ರವೇಶ ನಿಷಿದ್ಧವಾಗಿರುತ್ತದೆ ಎಂದು ಅವರು ವಿವರಿಸಿದರು.
ಅಪರ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಚುನಾವಣಾ ತಹಸೀಲ್ದಾರ್ ಹೊನ್ನಶಾಮೇಗೌಡ ಹಾಜರಿದ್ದರು.

ಜೆಡಿಎಸ್‌ಗೆ ಪ್ರತಿಷ್ಠೆ , ಕಾಂಗ್ರೆಸ್‌ಗೆ ಅಗ್ನಿ ಪರೀಕ್ಷೆ
-ಮತ್ತೀಕೆರೆ ಜಯರಾಮ್
ರಾಮನಗರ: ಲೋಕಸಭೆ ಮರು ಚುನಾವಣೆ ಬಗ್ಗೆ ಒಲವಿಲ್ಲದಿದ್ದರೂ ಅನಿವಾರ್ಯವಾಗಿ ಸಜ್ಜಾಗಲೇಬೇಕಾದ ಸ್ಥಿತಿ ರಾಜಕೀಯ ಪಕ್ಷಗಳಿಗೆ ಎದುರಾಗಿದೆ. ಈ ಚುನಾವಣೆ ಜೆಡಿಎಸ್‌ಗೆ ಪ್ರತಿಷ್ಠೆ ಪ್ರಶ್ನೆಯಾದರೆ, ಕಾಂಗ್ರೆಸ್ ಪಾಲಿಗೆ ಅಗ್ನಿ ಪರೀಕ್ಷೆಯೇ ಸರಿ. ಉಭಯ ಪಕ್ಷಗಳು ರಣತಂತ್ರ ರೂಪಿಸಲಾರಂಭಿಸಿವೆ.  
ಲೋಕಸಭೆಯ ಸಾರ್ವತ್ರಿಕ ಚುನಾವಣೆ ಹೊಸ್ತಿಲಲ್ಲಿ ಆಸುಪಾಸಿನ ಕ್ಷೇತ್ರಗಳಾದ ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯಕ್ಕೆ ಎದುರಾಗಿರುವ ಈ ಮರು ಚುನಾವಣೆ, ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವಣ ಜಂಗೀಕುಸ್ತಿಗೆ ವೇದಿಕೆಯಾಗುವ ಎಲ್ಲ ಲಕ್ಷಣಗಳು ಗೋಚರಿಸಲಾರಂಭಿಸಿವೆ.
ದಳಪತಿಗೆ ಪ್ರತಿಷ್ಠೆ ಪ್ರಶ್ನೆ: ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಾಬಲ್ಯ ಪ್ರದರ್ಶಿಸಿ, ಉದ್ದೇಶಿತ ತೃತೀಯ ರಂಗದಲ್ಲಿ ನಿರ್ಣಾಯಕ ಪಾತ್ರ ವಹಿಸಲು ಹವಣಿಸುತ್ತಿರುವ ಜೆಡಿಎಸ್‌ಗೆ ತನ್ನದೇ ತೆಕ್ಕೆಯಲ್ಲಿದ್ದ ಉಭಯ ಕ್ಷೇತ್ರಗಳನ್ನು ಮರು ಚುನಾವಣೆಯಲ್ಲೂ ಉಳಿಸಿಕೊಳ್ಳಲೇಬೇಕಿದೆ.  ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಒಕ್ಕಲಿಗರ ಶಕ್ತಿ ಕೇಂದ್ರ. ಇವೆರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಾಗಲಿಲ್ಲ ಎಂದಾದರೆ ಸಾರ್ವತ್ರಿಕ ಚುನಾವಣೆಯಲ್ಲಿ ಕನಿಷ್ಠ 10 ಸ್ಥಾನ ಗೆಲ್ಲಬೇಕೆನ್ನುವ ಕುಮಾರಸ್ವಾಮಿ ಕನಸು ನನಸಾಗುವ ಮಾತು ಅಸಾಧ್ಯವೇ ಸರಿ.
ಕಾಂಗ್ರೆಸ್‌ಗೆ ಅಗ್ನಿ ಪರೀಕ್ಷೆ: ವಿಧಾನಸಭೆ ಚುನಾವಣೆಯಲ್ಲಿ ಗೆದ್ದು, ರಾಜ್ಯದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಾಲಿಗೆ ಈ ಮರು ಚುನಾವಣೆ ಅಗ್ನಿ ಪರೀಕ್ಷೆಯಾಗಿದೆ. ಈ ಕಾರಣದಿಂದಲೇ ಸ್ವತಃ ಸಿದ್ದರಾಮಯ್ಯ ಚುನಾವಣೆ ಬಗ್ಗೆ ಗಮನ ಕೇಂದ್ರೀಕರಿಸಿದ್ದಾರೆ.
ಕಾಂಗ್ರೆಸ್ ನಾಯಕರು ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಹೋಬಳಿಗೆ ಒಬ್ಬ ಸಚಿವರನ್ನು ನೇಮಿಸಿ, ಮತಬೇಟೆಗೆ ಇಳಿಯುವ ಪ್ರಯತ್ನವೇನೋ ನಡೆದಿದೆ. ಆದರೆ, ಆ ಪಕ್ಷಕ್ಕೆ ಸಚಿವ ಸ್ಥಾನ ವಂಚಿತ ಡಿ.ಕೆ.ಶಿವಕುಮಾರ್ ಅಸಮಾಧಾನದ ಕುದಿ ಅಡ್ಡಗಾಲಾಗುವುನ್ನು ಅಲ್ಲಗಳೆಯುವಂತಿಲ್ಲ.
ಬಿಜೆಪಿ ಹವಣಿಕೆ: ಉದ್ಯಮಿ ತುಳಸಿ ಮುನಿರಾಜು ಅವರನ್ನು ಅಭ್ಯರ್ಥಿಯನ್ನಾಗಿಸುವ ನಿರ್ಧಾರ ತಳೆದಿರುವ ಬಿಜೆಪಿಯು ಜೆಡಿಎಸ್ ಮತ್ತು ಕಾಂಗ್ರೆಸ್ ಜಗಳದ ಲಾಭ ಸಿಗುವುದೇನೋ ಎನ್ನುವ ಹವಣಿಕೆಯಿಂದ ಹೋರಾಟಕ್ಕೆ ಅಣಿಯಾಗಿದೆ.  ಸದ್ಯದ ಮಟ್ಟಿಗೆ ಉಭಯ ಕ್ಷೇತ್ರಗಳಲ್ಲಿ ಬಿಜೆಪಿಗೆ ಪರಿಸ್ಥಿತಿ ಅಕೂಲಕರವಾಗೇನೂ ಇಲ್ಲ. ಇಷ್ಟಾಗಿಯೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಿರುವುದು ಸ್ವಲ್ಪ ಮಟ್ಟಿಗೆ ಅನುಕೂಲ ತಂದುಕೊಡಲಿದೆ.

ಅನಿತಾಗೆ ಹೆಚ್ಚಿದ ಒತ್ತಡ
ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ಎದುರಾದ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರಕ್ಕೆ ಅನಿತಾ ಕುಮಾರಸ್ವಾಮಿ ಅವರೇ ಅಭ್ಯರ್ಥಿಯಾಗುತ್ತಾರೆ ಎಂದು ರಾಜಕೀಯ ವಲಯದಲ್ಲಿ ಕೇಳಿ ಬಂದಿತ್ತು. ಆದರೆ, ಅವರು ಅನಿರೀಕ್ಷಿತವಾಗಿ ಎದುರಾದ ಮರು ಚುನಾವಣೆಗೆ ಕಣಕ್ಕಿಳಿಯಲು ಒಲವು ತೋರಿಲ್ಲ.  ಜೆಡಿಎಸ್ ಮುಖಂಡರ ಸಭೆಯಲ್ಲಿ ಅನಿತಾ ಕುಮಾರಸ್ವಾಮಿ ಅವರೇ ಸೂಕ್ತ ಅಭ್ಯರ್ಥಿ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಕ್ಷೇತ್ರವನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಹಿನ್ನೆಲೆಯಲ್ಲಿ ಕುಮಾರಸ್ವಾಮಿ, ದೇವೇಗೌಡ ಕೂಡ ಅನಿತಾ ಮೇಲೆ ಒತ್ತಡ ಹೇರಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈಚೆಗಷ್ಟೇ ಚನ್ನಪಟ್ಟಣ ಕ್ಷೇತ್ರದಲ್ಲಿ ಸ್ವಪಕ್ಷೀಯ ನಾಯಕರ ವೈಫಲ್ಯ ಮತ್ತು ಅತಿಯಾದ ಆತ್ಮವಿಶ್ವಾಸದಿಂದ ಸೋಲು ಕಂಡಿರುವ ಅನಿತಾ ಕುಮಾರಸ್ವಾಮಿ ಲೋಕಸಭಾ ಕ್ಷೇತ್ರಕ್ಕೆ ಚಿರಪರಿಚಿತರು. ಅವರು ಅಭ್ಯರ್ಥಿಯಾದರೆ ಜೆಡಿಎಸ್‌ಗೆ ನಾಮಬಲ ಕೆಲಸ ಮಾಡಲಿದೆ.  ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಬಿಜೆಪಿಗೆ ನಿಕಟ ಸ್ಪರ್ಧೆ ಒಡ್ಡಿದ್ದ ಪ್ರಭಾಕರರೆಡ್ಡಿ ಹೆಸರು ಕೂಡ ಈಗ ಚಾಲ್ತಿಗೆ ಬಂದಿದೆ. ಆದರೆ, ಅವರು ಗ್ರಾಮೀಣ ಭಾಗದಲ್ಲಿ ಪರಿಚಿತರಲ್ಲದಿದ್ದರೂ ಆರ್ಥಿಕವಾಗಿ ಬಲಾಢ್ಯರಾಗಿದ್ದಾರೆ.

ಡಿಕೆಶಿಗೆ ಕಾಂಗ್ರೆಸ್ ದುಂಬಾಲು
ಕಾಂಗ್ರೆಸ್ ಟಿಕೆಟ್ ಗಿಟ್ಟಿಸಲು ಮಾಜಿ ಸಂಸದೆ ತೇಜಸ್ವಿನಿಗೌಡ ಮತ್ತು ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ನಡುವೆ ಪೈಪೋಟಿ ಇದೆ. ಈ ಮಧ್ಯೆ, ಸಹೋದರ ಡಿ.ಕೆ.ಸುರೇಶ್ ಅವರನ್ನೇ ಕಣಕ್ಕಿಳಿಸುವಂತೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಕಾಂಗ್ರೆಸ್ ಮುಖಂಡರು ದುಂಬಾಲು ಬಿದ್ದಿದ್ದಾರೆ. ಶಿವಕುಮಾರ್ ಅವರಿಗೆ ಸಚಿವ ಸ್ಥಾನ ಕೈತಪ್ಪಿರುವ ಕಾರಣಕ್ಕೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿಯೇ ಸುರೇಶ್ ಅವರನ್ನೇ ಕಣಕ್ಕೆ ಇಳಿಸಿ, ಶಿವಕುಮಾರ್ ಅವರಿಗೆ ಚುನಾವಣಾ ಸಾರಥ್ಯ ವಹಿಸುವ ಚಿಂತನೆಯನ್ನು ಸ್ವತಃ ಸಿಎಂ ಸಿದ್ದರಾಮಯ್ಯ ನಡೆಸಿದ್ದಾರೆನ್ನಲಾಗಿದೆ.  ಮರು ಚುನಾವಣೆಗೆ ಮುನ್ನ ಸಂಪುಟ ವಿಸ್ತರಿಸಿ, ಸಚಿವ ಸ್ಥಾನ ನೀಡದ ಹೊರತು ಶಿವಕುಮಾರ್ ಚುನಾವಣೆಗೆ ಹೆಗಲು ಕೊಡುವುದಿಲ್ಲ ಎನ್ನುವುದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ಮಾತು. ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಕಾಂಗ್ರೆಸ್ ನಡೆ ಕುತೂಹಲ ಕೆರಳಿಸಿದೆ.

ಚುನಾವಣೆ ನಾಮಪತ್ರ ಸಲ್ಲಿಕೆ ಗಿನ್ನಿಸ್ ದಾಖಲೆ ಗುರಿಕಾರ
ರಾಮನಗರ: ಈ ವ್ಯಕ್ತಿಗೆ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿಯೋದು ಒಂಥರಾ ಕಯಾಲಿ. ಪ್ರತಿಷ್ಠರ ಸ್ಪರ್ಧೆಯ ಕ್ಷೇತ್ರಗಳೂ ಸಹಿತ ಬರೋಬ್ಬರಿ 154 ಚುನಾವಣೆಗಳಲ್ಲಿ ನಾಮಪತ್ರ ಸಲ್ಲಿಸಿರುವ ಈ ವ್ಯಕ್ತಿ ಈಗ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲೂ ಅಭ್ಯರ್ಥಿಯಾಗಿದ್ದಾರೆ.
ಅಧಿಸೂಚನೆ ಹೊರಡಿಸಿದ ಮೊದಲ ದಿನವೇ ಉಮೇದುವಾರಿಕೆ ಅರ್ಜಿ ಸಲ್ಲಿಸಿ ಮತ್ತೊಮ್ಮೆ ಗಮನ ಸೆಳೆದಿರುವ ವ್ಯಕ್ತಿ ಬೇರೆ ಯಾರೂ ಅಲ್ಲ. ಈ ಹಿಂದೆ ಮಂಡ್ಯ, ಬೆಂಗಳೂರು ಗ್ರಾಮಾಂತರದಲ್ಲಿ ಕಣಕ್ಕೆ ಇಳಿದು ಗಮನ ಸೆಳೆದಿದ್ದ ತಮಿಳುನಾಡಿನ ಕೆ.ಪದ್ಮರಾಜನ್.
ಹಣೆಯಲ್ಲಿ ಅಗಲವಾಗಿ ಕುಂಕುಮವನ್ನು ಹಚ್ಚಿಕೊಂಡು, ದಪ್ಪನೆಯ ಮೀಸೆ ಬಿಟ್ಟ ಪದ್ಮರಾಜನ್ ಸಹಜವಾಗಿಯೇ ಗಮನ ಸೆಳೆಯುತ್ತಾರೆ. ಇವರಿಗೆ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವುದು, ಸ್ಪರ್ಧಿಸುವುದು ಮಾಮೂಲಾಗಿದೆ.
ಇದೇ ಮೊದಲಲ್ಲ: ಡಾ.ಎ.ಪಿ.ಜೆ.ಅಬ್ದುಲ್ ಕಲಾಂ, ಪ್ರತಿಭಾ ಪಾಟೀಲ್ ವಿರುದ್ಧ ರಾಷ್ಟ್ರಪತಿ ಸ್ಥಾನಕ್ಕೆ ಸಲ್ಲಿಸಿದ್ದ ಇವರ ಉಮೇದುವಾರಿಕೆ ತಿರಸ್ಕೃತವಾಗಿತ್ತು. ರಾಜ್ಯಸಭೆ ಚುನಾವಣೆಗೆ ಎಸ್.ಎಂ.ಕೃಷ್ಣ ವಿರುದ್ಧ ಅರ್ಜಿ ಹಾಕಿದ್ದರು. ತಮಿಳುನಾಡಿನಲ್ಲಷ್ಟೇ ಅಲ್ಲದೆ ಹೊರ ರಾಜ್ಯಗಳಲ್ಲೂ ಸ್ಪರ್ಧೆ ನಡೆಸಿದ್ದಾರೆ.
ಆಂಧ್ರದ ಮಾಜಿ ಸಿಎಂ ವೈ.ಎಸ್.ರಾಜಶೇಖರರೆಡ್ಡಿ, ಕರ್ನಾಟಕದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ತಮಿಳುನಾಡು ಮಾಜಿ ಸಿಎಂ ಕರುಣಾನಿಧಿಯಂತಹವರ ವಿರುದ್ಧವೂ ಸ್ಪರ್ಧೆಗೆ ಇಳಿದ ಇತಿಹಾಸ ಪದ್ಮರಾಜನ್ ಬೆನ್ನಿಗೆ ಇದೆ.
154 ಚುನಾವಣೆಗಳಿಗೆ ನಾಮಪತ್ರವನ್ನೇನೋ ಸಲ್ಲಿಸಿದ್ದಾರೆ. ಆದರೆ, ಆ ಪೈಕಿ ಕೆಲ ಚುನಾವಣೆಗಳಲ್ಲಿ ನಾಮಪತ್ರ ತಿರಸ್ಕೃತವಾಗಿದೆ. ಸ್ಪರ್ಧೆಗೆ ಇಳಿದ ಎಲ್ಲೂ ಗೆದ್ದಿಲ್ಲ. ಠೇವಣಿ ವಾಪಸ್ ಪಡೆದಿರುವ ನಿದರ್ಶನವೂ ಇಲ್ಲ.
ದಾಖಲೆಯೇ ಗುರಿ: ಮೆಟ್ಟೂರಿನಲ್ಲಿ ಟೈರ್ ರೀಟ್ರೇಡಿಂಗ್ ಕಂಪೆನಿಯನ್ನು ನಡೆಸುತ್ತಿರುವ ಪದ್ಮರಾಜನ್ ಅವರು ನಡೆಸುತ್ತಿರುವ ಈ ಹೋರಾಟವು ಜನಪ್ರತಿನಿಧಿ ಆಗಬೇಕೆನ್ನುವ ಹಂಬಲದಿಂದೇನಲ್ಲ. ಬದಲಿಗೆ ಗಿನ್ನಿಸ್ ದಾಖಲೆ ನಿರ್ಮಿಸುವುದಷ್ಟೇ ಅವರ ಗುರಿ.
ಖ್ಯಾತನಾಮ ನಾಯಕರು, ಪ್ರತಿಷ್ಠಿತ ಕ್ಷೇತ್ರಗಳು ಸೇರಿದಂತೆ ಸಾಕಷ್ಟು ಕಡೆ ಸ್ಪರ್ಧೆ ಒಡ್ಡಿ ವಿಶ್ವದಾಖಲೆ ಸ್ಥಾಪಿಸಿಯೇ ತೀರುವ ಆತ್ಮವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಇಲ್ಲೂ ಅವರು ಪಕ್ಷೇತರರಾಗಿ ಸ್ಪರ್ಧಿಸಲು ಅಗತ್ಯವಿರುವ ಸೂಚಕರ ಸಹಿ ಪಡೆದೇ ನಾಮಪತ್ರ ಸಲ್ಲಿಸಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement