ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ತೆಂಗಿನ ಮರಗಳ ವೀಕ್ಷಣೆ ನಡೆಸಿದ ತಜ್ಞರ ತಂಡ

Srinivasa Murthy VN
Updated On : 29 Jul 2013, 12:31 pm

ಕ.ಪ್ರ.ವಾರ್ತೆ ಚನ್ನಪಟ್ಟಣ ಜು.28
ಬರದಿಂದಾಗಿ ಅವಸಾನದ ಅಂಚಿನಲ್ಲಿರುವ ತಾಲೂಕಿನ ತೆಂಗಿನ ಮರಗಳನ್ನು ವೀಕ್ಷಣೆ ನಡೆಸಿ ವಸ್ತು ಸ್ಥಿತಿಯನ್ನು ವರದಿ ಮಾಡುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ತೋಟಗಾರಿಕಾ ಮಿಷನ್‌ನ ಅಧಿಕಾರಿಗಳು ಮತ್ತು ತಜ್ಞರ ತಂಡ ತಾಲೂಕಿನ ಕೆಲ ತೆಂಗಿನ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ತೋಟಗಾರಿಕಾ ಮಿಷನ್‌ನ ನಿರ್ದೇಶಕ ಡಾ. ಮ್ಯಾಥೋಕೋಟಿ ನೇತೃತ್ವದಲ್ಲಿ ಭೇಟಿ ನೀಡಿದ ತಂಡ ತಾಲೂಕಿನ ಕೂಡ್ಲೂರು, ಹೊಟ್ಟಿಗನ ಹೊಸಹಳ್ಳಿ, ಕೋಡಂಬಹಳ್ಳಿ ಸೇರಿದಂತೆ ತೆಂಗಿನ ಮರಗಳು ತೀವ್ರವಾಗಿ ನಷ್ಟ ಹೊಂದಿರುವ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ಸಂದರ್ಭದಲ್ಲಿ ರೈತರು ತಂಡವನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ಅಲವತ್ತು ಗೊಂಡರು, ತಲೆ ತಲಾಂತರದಿಂದ ನಮ್ಮ ಕುಟುಂಬವನ್ನು ಸಲಹುತ್ತಾ ಬಂದಿರುವ ತೆಂಗಿನ ಮರಗಳು ನಷ್ಟಕ್ಕೊಳಗಾಗಿದ್ದು ನಮ್ಮ ಸಮಸ್ಯೆಗೆ ಪರಿಹಾರ ಕಲ್ಪಸಿ ಎಂದು ತಂಡದ ಸದಸ್ಯರಬಳಿ ಮನವಿ ಮಾಡಿದರು.
ಕೇಂದ್ರಕ್ಕೆ ವರದಿ: ರಾಜ್ಯದಲ್ಲಿನ ತೆಂಗು ಬೆಳೆಯ ವಸ್ತು ಸ್ಥಿತಿಯನ್ನು ಅರಿತು ವರದಿ ನೀಡುವಂತೆ ಕೇಂದ್ರ ಕೃಷಿ ಸಚಿವಾಲಯ ನೀಡಿರುವ ನಿರ್ದೇಶನದಂತೆ ನಮ್ಮ ತಂಡ ಅಧ್ಯಯನ ನಡೆಸುತ್ತಿದ್ದು ಇಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ಆದರಿಸಿ ಕೇಂದ್ರ ಸರ್ಕಾರಕ್ಕೆ ವರದಿ ನೀಡುವುದಾಗಿ ರಾಷ್ಟ್ರೀಯ ತೋಟಗಾರಿಕಾ ಮಿಷನ್ ನಿರ್ದೇಶಕ ಡಾ. ಮ್ಯಾಥ್ಯೂಕೋಟಿ ತಿಳಿಸಿದರು.
ಬರ ಪರಿಸ್ಥಿತಿ, ಅಂತರ್ಜಲ ಮಟ್ಟ ಕುಸಿತದಿಂದಾಗಿ ತೆಂಗು ಬೆಳೆ ನಾಶವಾಗುತ್ತಿರುವ ಸಂಗತಿ ಭೇಟಿಯ ಸಂದರ್ಭದಲ್ಲಿ ಅರಿವಿಗೆ ಬಂದಿದ್ದು ಇನ್ನೆರಡು ದಿನಗಳಲ್ಲಿ ಇಲ್ಲಿ ಗಮನಕ್ಕೆ ಬಂದ ಸಂಗತಿಯನ್ನು ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದು ಅವರು ತಿಳಿಸಿದರು.
ಎರಡು ತಂಡದಿಂದ ಪರಿಶೀಲನೆ: ಕರ್ನಾಟಕದ ತೆಂಗು ಬೆಳೆಗಾರರ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸುವ ಉದ್ದೇಶದಿಂದ ಕೃಷಿ ಮಂತ್ರಾಲಯದ ಪ್ರಧಾನ ಕಾರ್ಯದರ್ಶಿ ಗೋರಖ್ ಸಿಂಗ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದು, ಈ ಸಮಿತಿ ಎರಡು ತಂಡಗಳಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಧ್ಯಯನ ನಡೆಸುತ್ತಿದೆ ಎಂದು ತಿಳಿಸಿದರು.
ಅಧ್ಯಯನ ತಂಡದಲ್ಲಿದ್ದ ವಿಜ್ಞಾನಿ ವಿನಾಯಕ್ ಭಟ್ ಮಾತನಾಡಿ, ತೆಂಗನ್ನು ಪ್ರಧಾನ ಬೆಳೆಯಾಗಿ ಬೆಳೆಯುತ್ತಾ ಬಂದಿರುವ ರಾಮನಗರ ಜಿಲ್ಲೆಯ ರೈತರು ಇತ್ತೀಚಿನ ದಿನಗಳಲ್ಲಿ ಸಂಕಷ್ಟಕ್ಕೆ ಸಿಲುಕುತ್ತಿರುವ ಸಂಗತಿ  ಅಧ್ಯಯನದ ವೇಳೆ ನಮ್ಮ ಅರಿವಿಗೆ ಬಂದಿದ್ದು ನುಸಿಪೀಡೆ, ಕ್ಯಾಟರ್‌ಪಿಲ್ಲರ್ ದಾಳಿಯಿಂದ ಕುಂಟಿತಗೊಂಡಿದ್ದ ತೆಂಗಿನ ಇಳುವರಿ ಬರ ಹಾಗೂ ನೀರಿನ ಕೊರತೆಯಿಂದಾಗಿ ಸಂಪೂರ್ಣ ಅವಸಾನವಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯ ರೈತರ ಪರವಾಗಿ ನಿಯೋಗಕ್ಕೆ ತೆಂಗು ಬೆಳೆಗಾರರ ಸಮಸ್ಯೆಯನ್ನು ಮನದಟ್ಟು ಮಾಡಿ ಕೊಟ್ಟ ರೈತಸಂಘದ ಮುಖಂಡ ಸಿ. ಪುಟ್ಟಸ್ವಾಮಿ, ಜಿಲ್ಲೆಯ ಜನರ ಜೀವನಾಧಾರವೆನಿಸಿದ್ದ ತೆಂಗು ಜಿಲ್ಲೆಯ ಜನರ ಆರ್ಥಿಕತೆಯ ಮೂಲಾಧಾರವಾಗಿದ್ದು ಇದೀಗ ತೆಂಗು ಬೆಳೆ ರೈತರ ಕಣ್ಣ ಮುಂದೆಯೇ ಹಾಳಾಗುತ್ತಿರುವುದು ರೈತರು ಕಣ್ಣೀರು ಸುರಿಸುವಂತಾಗಿದೆ ಎಂದು ತಿಳಿಸಿದರು.
ತೆಂಗು ಬೆಳೆಗಾರರು ರೋಗ, ಬೆಲೆ ಕುಸಿತ, ಬರ ದಿಂದಾಗಿ ಸಾಕಷ್ಟು ಸಮಸ್ಯೆಗೆ ಸಿಲುಕಿದ್ದು ತೆಂಗು ಬೆಳೆಗಾರರ ಸಮಸ್ಯೆಯ ಸ್ಥಿತಿಗತಿಯ ಬಗ್ಗೆ ನಿಯೋಗ ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಬರದಿಂದಾಗಿ ಜಿಲ್ಲೆಯಾದ್ಯಂತ  ಸುಮಾರು 4.15 ಲಕ್ಷ ತೆಂಗಿನ ಮರಗಳು ನಾಶವಾಗಿವೆ. ಶೇ.90ರಷ್ಟು ಇಳುವರಿ ಇಳಿಮುಖವಾಗಿದೆ. ನೀರಾವರಿ ಪ್ರದೇಶ ಹೊರತುಪಡಿಸಿದರೆ ತೆಂಗು ಎಲ್ಲೆಡೆ ಸುಳಿ ಒಣಗಿದೆ. ನಾಶವಾದ ತೆಂಗಿಗೆ ಸರ್ಕಾರ ಅವೈಜ್ಞಾನಿಕ ಪರಿಹಾರ ನೀಡುತ್ತಾ ರೈತರನ್ನು ಇನ್ನಷ್ಟು ಕೆರಳಿಸುತ್ತಿದೆ. ಸಾವಿರಾರು ರು. ವರಮಾನ ನೀಡುತ್ತಿದ್ದ ಬೆಳೆ ಇಂದು ರೈತರನ್ನು ಸಾಲ ಮಾಡಿಸುವ ಮಟ್ಟಕ್ಕೆ ತಲುಪಿಸಿದೆ. ಹಾಗಾಗಿ ಕೇಂದ್ರ ಸರ್ಕಾರ ಇನ್ನಾದರೂ ರೈತರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.
ರಾಷ್ಟ್ರೀಯ ಪರಿಹಾರ ವಿಪತ್ತು ನಿಧಿ, ರಾಜ್ಯ ಪರಿಹಾರ ವಿಪತ್ತು ನಿಧಿಗಳು ಸಮಗ್ರ ಮಾರ್ಪಾಡಾಗಬೇಕು, ಐದಾರು ದಶಕಗಳ ಹಿಂದಿನ ಈ ವಿಪತ್ತು ನಿಧಿಯಿಂದ ರೈತರಿಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ನಿಯೋಗ ವಾಸ್ತವ ಸ್ಥಿತಿಯನ್ನು ಅಧ್ಯಯನ ಮಾಡಿ ವೈಜ್ಞಾನಿಕ ಪರಿಹಾರ ಸಿಗುವಂತೆ ವರದಿ ನೀಡಬೇಕೆಂದು ಮನವಿ ಮಾಡಿದರು.
ಸಹಾಯಕ ಪ್ರಾಧ್ಯಾಪಕ (ಸಸ್ಯ ಸಂರಕ್ಷಣೆ) ಕೆ.ಎನ್. ಶ್ರೀನಿವಾಸರೆಡ್ಡಿ, ರೈತ ಮುಖಂಡರಾದ ಚನ್ನೇಗೌಡ, ವಿಶ್ವನಾಥ್, ಕೃಷ್ಣೇಗೌಡ, ಹೊಂಬಾಳೇಗೌಡ, ತಾಲೂಕು ಜೆಡಿಎಸ್ ಅಧ್ಯಕ್ಷ ರಾಜಣ್ಣ, ಮುಖಂಡ ಬೋರ್‌ವೆಲ್ ರಾಮಚಂದ್ರು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement