ಮೆಟ್ರೋ ಕ್ರೇನ್ ಪಲ್ಟಿ; ಕಾರ್ಮಿಕ ಸಾವು
ಬೆಂಗಳೂರು: ಮೆಟ್ರೊ ಕಾಮಗಾರಿ ವೇಳೆ ಕ್ರೇನ್ ಪಲ್ಟಿ ಹೊಡೆದು, ಕಬ್ಬಿಣದ ಕಂಬ ಬಿದ್ದು ವ್ಯಕ್ತಿ ಮೃತಪಟ್ಟಿರುವ ಘಟನೆ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.
ಜಾಲಹಳ್ಳಿ ಕ್ರಾಸ್ ನಿವಾಸಿ ಗೋವಿಂದರಾಜು(45) ಮೃತರು. ತಮಿಳುನಾಡು ವಾನಿಯಂಬಾಡಿ ಮೂಲದ ಇವರು, ಕಳೆದ ಆರು ತಿಂಗಳಿಂದ ಪೀಣ್ಯಾದಲ್ಲಿ ಮೆಟ್ರೊ ಕೆಲಸ ನಿರ್ವಹಿಸುತ್ತಿದ್ದರು.
ಭಾನುವಾರ ಮಧ್ಯಾಹ್ನ ಮೆಟ್ಟಿಲುಗಳಿಗೆ ಕಂಬಗಳನ್ನು ಅಳವಡಿಸುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.
ಈ ಸಂಬಂಧ ಅಲ್ಲಿನ ಉಸ್ತುವಾರಿ ವೆಂಕಟಸ್ವಾಮಿ ಹಾಗೂ ಕ್ರೇನ್ ಚಾಲಕನ ವಿರುದ್ಧ ವಿರುದ್ಧ ಪೀಣ್ಯ ಠಾಣೆಯಲ್ಲಿ ದೂರು ದಾಖಲಾಗಿದೆ.
ಘಟನೆ: ಭಾನುವಾರ ಬೆಳಗ್ಗೆ ಎಂದಿನಂತೆ ಮೆಟ್ರೊ ಕೆಲಸ ನಡೆಯುತ್ತಿತ್ತು. ಪೀಣ್ಯದಿಂದ ಮೆಜೆಸ್ಟಿಕ್ ಹಾಗೂ ಬೈಯಪ್ಪನಹಳ್ಳಿ ಕಡೆಗೆ ಸಂಪರ್ಕ ಕಲ್ಪಿಸುವ ಎರಡು ಮಾರ್ಗಗಳಿವೆ. ಅಲ್ಲಿ ಎರಡು ಹಳಿಗಳು ಕೂಡುವ ಸ್ಥಳ 'ವೈ' ಆಕಾರದಲ್ಲಿದ್ದು, ಆ ಜಾಗಕ್ಕೆ ಮೆಟ್ಟಿಲುಗಳು, ಕಂಬಗಳನ್ನು ಹಾಕುವ ಕೆಲಸ ನಡೆಯುತ್ತಿತ್ತು. ಈ ವೇಳೆ ಎರಡು ಕಂಬಗಳನ್ನು ಮೇಲಕ್ಕೆ ಸಾಗಿಸಲಾಗಿತ್ತು.
ಮೂರನೇ ಕಂಬ ಮೇಲೆ ಸಾಗಿಸುತ್ತಿದ್ದ ವೇಳೆ ಕ್ರೇನ್ ಮಗುಚಿ ಈ ದುರಂತ ಸಂಭವಿಸಿದ್ದು, ಕಬ್ಬಿಣದ ಕಂಬದ ಕೆಳಗೆ ಗೋವಿಂದರಾಜು ಸಿಲುಕಿದ ಪರಿಣಾಮ ಅವರ ದೇಹ ಎರಡು ತುಂಡಾಗಿ, ದೇಹ ಛಿದ್ರವಾಗಿತ್ತು. ಇದರಿಂದ ಸುಮಾರು ಎರಡು ಗಂಟೆಗಳ ಕಾಲ ಸಂಚಾರಕ್ಕೆ ತೊಂದರೆಯಾಗಿತ್ತು. ನಂತರ ಮೃತದೇಹವನ್ನು ಸಪ್ತಗಿರಿ ಆಸ್ಪತ್ರೆಗೆ ಸಾಗಿಸಿ, ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಯಿತು.
ಇತ್ತೀಚೆಗೆ ಬೆಂಗಳೂರಿಗೆ: ಗೋವಿಂದರಾಜು ಅವರ ಪತ್ನಿ ರಾಣಿ ಹಾಗೂ ಪೋಷಕರು ತಮಿಳುನಾಡಿನಲ್ಲಿ ವಾಸಿಸುತ್ತಿದ್ದರು.
ಸಹೋದರ ನಾಗರಾಜು ಅವರ ಜತೆ ಮಕ್ಕಳನ್ನು ಕರೆದುಕೊಂದು ಬೆಂಗಳೂರಿಗೆ ಬಂದಿದ್ದ ಗೋವಿಂದರಾಜು ಅವರು ಪೀಣ್ಯದಲ್ಲಿ ಮೆಟ್ರೊ ಕೆಲಸ ನಿರ್ವಹಿಸುತ್ತಿದ್ದರು.
ಅವರ ಹಿರಿಯ ಪುತ್ರ ಬೆಂಗಳೂರಿನಲ್ಲಿಯೇ ಗ್ಯಾರೇಜ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದು, 2ನೇ ಮಗ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ಈ ಸಂಬಂಧ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದು, ಅವರು ಬಂದ ನಂತ ಮರಣೋತ್ತರ ಪರೀಕ್ಷೆ ನಡೆಸಿ ಮುಂದಿನ ಕ್ರಮಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕುಟುಂಬಕ್ಕೆ ಪರಿಹಾರ: ಗೋವಿಂದರಾಜು ಅವರ ಸಾವು ಆಕಸ್ಮಿಕವಾಗಿ ಸಂಭವಿಸಿದ್ದು, ಅವರ ಕುಟುಂಬ ಸದಸ್ಯರಿಗೆ ಪರಿಹಾರ ನೀಡಲಾಗುವುದು. ಮೆಟ್ಟಿಲುಗಳನ್ನು ಅಳವಡಿಸಲು ಅದಕ್ಕೆ ಆಧಾರವಾಗಿ ಅಳವಡಿಸುವ ಕಬ್ಬಿಣದ ಕಂಬಿಗಳನ್ನು ಬೇರೆ ಕಡೆ ಸಾಗಿಸುತ್ತಿದ್ದ ವೇಳೆ ಈ ದುರಂತ ಸಂಭವಿಸಿದ್ದು, ಮೇಲ್ವಿಚಾರಕರ ಮೇಲೆ ಬೀಳಬೇಕಿತ್ತು. ಆಕಸ್ಮಿಕವಾಗಿ ಅವರ ಮೇಲೆ ಬಿದ್ದಿದೆ. ಹಾಗಾಗಿ ಅವರ ಕುಟುಂಬ ಸದಸ್ಯರಿಗೆ ಸೂಕ್ತ ಪರಿಹಾರ ತಲುಪಿಸಲಾಗುವುದು ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.