ರೈತ ಕೃಷಿ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
ಮಾಗಡಿ: ರೈತ ಕೃಷಿ ಪ್ರಶಸ್ತಿಗಾಗಿ ರೈತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದು ಚಂದೂರಾಯನಹಳ್ಳಿ ಕೆವಿಕೆ ಯೋಜನಾ ಸಂಯೋಜಕ ಸುಂದರ್ ತಿಳಿಸಿದ್ದಾರೆ. ಪ್ರತಿವರ್ಷದಂತೆ ಈ ವರ್ಷವೂ ನವೆಂಬರ್ ತಿಂಗಳಲ್ಲಿ ಬೆಂಗಳೂರು ಜಿ.ಕೆ.ವಿ.ಕೆ. ಕೃಷಿ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ಕೃಷಿಮೇಳ ಆಯೋಜಿಸಲಾಗಿದೆ. ಜಿಲ್ಲಾ ಮಟ್ಟದ ಅತ್ಯುತ್ತಮ ರೈತ ಹಾಗೂ ರೈತ ಮಹಿಳಾ ಪ್ರಶಸ್ತಿ, ತಾಲೂಕು ಮಟ್ಟದ ಅತ್ಯುತ್ತಮ ಯುವ ರೈತ ಹಾಗು ರೈತ ಮಹಿಳಾ ಪ್ರಶಸ್ತಿ, ಕಾರ್ಪೋರೇಷನ್ ಬ್ಯಾಂಕ್ ಪ್ರಾಯೋಜಿತ ಕಾರ್ಪ್ ರೈತ ಪ್ರಶಸ್ತಿ ಹಾಗೂ ಡಾ. ಎಂ.ಎಚ್. ಮರಿಗೌಡ ರಾಜ್ಯ ಮಟ್ಟದ ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸ್ತಿಯನ್ನು ನೀಡಲಾಗುವುದು. ಜಿಲ್ಲೆ ಹಾಗೂ ತಾಲೂಕಿನ ಅರ್ಹ ರೈತ, ರೈತ ಮಹಿಳೆಯರು ತೋಟಗಾರಿಕೆ, ಪಶು ಸಂಗೋಪನೆ, ಮೀನುಗಾರಿಕೆ, ರೇಷ್ಮೆ, ಕೃಷಿ ಇಲಾಖೆಯ ಜಂಟೀ ನಿರ್ದೇಶಕರು ಅಥವಾ ಉಪನಿರ್ದೇಶಕರು ಅಥವಾ ಕೃಷಿ ವಿಜ್ಞಾನ ಕೇಂದ್ರ ಇವರಿಂದ ಖಾಲಿ ಅರ್ಜಿಗಳನ್ನು ಪಡೆದು ಆ.30 ರೊಳಗೆ ಪೂರ್ಣ ವಿವರಗಳೊಂದಿಗೆ ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಜಿಲ್ಲಾ ಜಂಟಿ ನಿರ್ದೇಶಕರ ಕಚೇರಿಗೆ ತಲುಪಿಸುವಂತೆ ಕೋರಲಾಗಿದೆ.
ನೇಣಿಗೆ ಶರಣಾದ ಬಾಣಸಿಗ
ಬೆಂಗಳೂರು: ಹೊಟೇಲ್ ಬಾಣಸಿಗ ನೇಣಿಗೆ ಶರಣಾಗಿರುವ ಘಟನೆ ಹಲಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ದೊಮ್ಮಲೂರು ಆಂಜನೇಯ ಸ್ವಾಮಿ ಟೆಂಪಲ್ ನಿವಾಸಿ ದಿಲ್ದಾರ್ ಹುಸೇನ್ (35) ಮೃತರು. ಕೌಟುಂಬಿಕ ಕಲಹವೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ಕೊಲ್ಕತ್ತಾ ಮೂಲದ ಹುಸೇನ್ ಮೂರು ವಾರಗಳ ಹಿಂದೆ ಬೆಂಗಳೂರಿಗೆ ಬಂದು ತನ್ನ ಸಹೋದರನ ಜತೆ ವಾಸಿಸುತ್ತಿದ್ದರು. ಇಬ್ಬರೂ ಹೊಟೇಲ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು.