ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಲೋಕಸಭಾ ಉಪಚುನಾವಣೆಗೆ ಕಣ ಸಜ್ಜು

Srinivasa Murthy VN
Updated On : 29 Jul 2013, 12:31 pm

ಕ.ಪ್ರ.ವಾರ್ತೆ ಮಾಗಡಿ ಜು.28
ಬೆಂಗಳೂರು ಗ್ರಾಮಾಂತರ ಲೋಕಸಭಾ ಉಪ ಚುನಾವಣೆಗೆ ಈಗಾಗಲೇ ತಾಲೂಕು ಆಡಳಿತ ಸಜ್ಜಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿಯೂ ಆಗಿರುವ ತಹಸೀಲ್ದಾರ್  ಡಾ. ಬಿ.ಆರ್. ಹರೀಶ್ ನಾಯಕ್ ತಿಳಿಸಿದ್ದಾರೆ. ಮಾಗಡಿ ತಾಲೂಕಿನಲ್ಲಿ ಒಟ್ಟು 288 ಮತಗಟ್ಟೆ ಕೇಂದ್ರಗಳಿವೆ. ಪುರುಷ ಮತದಾರರ ಸಂಖ್ಯೆ 87,266, ಮಹಿಳೆಯರು 82,352 ಮತದಾರರಿದ್ದು, ಒಟ್ಟು 22960 ಮತದಾರರಿದ್ದಾರೆ. ಈಗಾಗಲೇ ಎಲ್ಲಾ ಮತಗಟ್ಟೆಗಳಲ್ಲಿನ ವಿದ್ಯುತ್ ದೀಪ, ಕುಡಿಯುವ ನೀರು, ಇತರೆ ಸೌಕರ್ಯ ಸೇರಿದಂತೆ ರೂಟ್‌ಗಳ ವರದಿ ತರಿಸಿಕೊಂಡು ಸಕಲ ಸಿದ್ಧತೆಯೊಂದಿಗೆ ಸಜ್ಜಾಗಿದ್ದೇವೆ. ಇತ್ತೀಚಗೆ ವಿಧಾನ ಸಭೆ ಚುನಾವಣೆ ನಡೆದಿರುವುದರಿಂದ, ಎಲ್ಲಾ ಮತಗಟ್ಟೆಗಳು ಮೇಲ್ನೋಟಕ್ಕೆ ಸುಸ್ಥಿತಿಯಲ್ಲಿವೆ. ಉಪಚುನಾವಣೆಗೆ 106 ಬಸ್‌ಗಳ ಅಗತ್ಯವಿದೆ. 6 ರೂಟ್‌ಗೆ 6 ಎಂಸಿಸಿ ತಂಡ ರಚಿಸಲಾಗಿದೆ.
ಎಂಸಿಸಿ ತಂಡಗಳು: ಕಸಬಾ ಹೋಬಳಿಯಿಂದ ಬಿಇಓ ರಂಗಸ್ವಾಮಿ, ಮಾಡಬಾಳ್ ಹೋಬಳಿಯಿಂದ ಮುಸ್ತಾಫ್   ಅಹಮದ್, ಕೂಟಗಲ್ ಹೋಬಳಿಯಿಂದ ಜಿಲ್ಲಾ ಪಂಚಾಯ್ತಿಯ ಎಇಇ ಶ್ರೀನಿವಾಸ್, ಬಿಡದಿ ಹೋಬಳಿಯಿಂದ ಲೋಕೋಪಯೋಗಿ ಇಲಾಖೆಯ ರಾಧಾಕೃಷ್ಣ, ಕುದೂರು ಹೋಬಳಿಯಿಂದ ಜಿಲ್ಲಾ ಪಂಚಾಯ್ತಿಯ ತಾಲೂಕು ಎಇಇ  ರವಿ ಎಸ್. ಸೂರನ್, ತಿಪ್ಪಸಂದ್ರದಿಂದ ರೇಷ್ಮೆ ಇಲಾಖೆಯ ಉಪನಿರ್ದೇಶಕ ರೆಡ್ಡಿ ಇವರುಗಳ ತಂಡ ರಚಿಸಲಾಗಿದೆ. ಈಗಾಗಲೇ  ಚುನಾವಣೆ ಪ್ರಕ್ರಿಯೆ ಆರಂಭಗೊಂಡಿದ್ದು, ನೀತಿ ಸಂಹಿತೆ ಜಾರಿಯಿದೆ. ನೀತಿ ಸಂಹಿತೆ ಉಲ್ಲಂಘನೆ, ಅಕ್ರಮಗಳು  ನಡೆಯದಂತೆ ಈಗಾಗಲೇ  ತಾಲೂಕಿನಲ್ಲಿ ಹದ್ದಿನ ಕಣ್ಣಿಡಲು 6 ಎಂಸಿಸಿ ತಂಡಗಳಿಗೆ ಆದೇಶ ನೀಡಲಾಗಿದೆ. ವಿವಿಧ ಯೋಜನೆಗಳ ಪಲಾನುಭವಿಗಳಿಗೆ ಹಾಗೂ ಸಾಮಾಜಿಕ ಭದ್ರತೆ, ರೇಷನ್  ಕಾರ್ಡ್ ನೋಂದಣಿ, ವಿತರಣೆ ಇತರೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಅಕ್ರಮ ಮದ್ಯ ಮಾರಾಟ, ಸಾಗಾಣಿಕೆ, ಸಂಗ್ರಹ ಮಾಡುವುದು ಅಪರಾಧವಾಗಲಿದೆ. ಅಕ್ರಮಗಳು ನಡೆಯದಂತೆ ಹೆಚ್ಚಿನ ನಿಗಾ ವಹಿಸಲು ಅಬಕಾರಿ ಇಲಾಖೆಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದರು.
ಮತದಾರರ ಪಟ್ಟಿ ನೋಂದಣಿ ಕೆಲಸ ಮುಗಿದಿದ್ದು, ಮತದಾರರ ಪಟ್ಟಿಗೆ ನೋಂದಣಿಗೆ ಬಂದಿದ್ದ ಒಟ್ಟು 65 ಅರ್ಜಿಗಳನ್ನು ಇತ್ಯರ್ಥಗೊಳಿಸಲಾಗಿದೆ. ವಿಧಾನಸಭಾ ಚುನಾವಣೆಗೆ ನೀಡಿದ ಮತದಾರರ ಪಟ್ಟಿಯ ಆಧಾರದ ಮೇಲೆ ಚುನಾವಣೆ ನಡೆಯಲಿದೆ. ತಾಲೂಕಿಗೆ ಚುನಾವಣಾಧಿಕಾರಿಯಾಗಿ ಎಂ.ವಿ. ವೈಶಾಲಿ ನೇಮಕಗೊಂಡಿದ್ದು, ಆರ್.ಓ ಆಗಿ ಜಿಲ್ಲಾಧಿಕಾರಿ ಶ್ರೀರಾಮರೆಡ್ಡಿ ಎಂದು ತಹಸೀಲ್ದಾರ್ ವಿವರಿಸಿದರು.

ಲಿಂಗಪ್ಪಗೆ ಟಿಕೆಟ್ ನೀಡಿದರೆ ಜಯ ಸಾಧ್ಯ
ಕ.ಪ್ರ.ವಾರ್ತೆ ರಾಮನಗರ ಜು.28
ಕಳಂಕ ರಹಿತ, ಶುದ್ಧ ಹಸ್ತ ಹಾಗೂ ಹಿರಿಯ ಮುಖಂಡ ಸಿ.ಎಂ.ಲಿಂಗಪ್ಪ ಅವರಿಗೆ ಟಿಕೆಟ್ ನೀಡಿದರೆ ಮಾತ್ರ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲವು ಸಾಧಿಸಲು ಸಾಧ್ಯ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮರಿದೇವರು ತಿಳಿಸಿದರು.
ಸುಮಾರು 40 ವರ್ಷದಿಂದಲೂ ಕಾಂಗ್ರೆಸ್ ಪಕ್ಷಕ್ಕಾಗಿ ಅವರು ದುಡಿದಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ವಿಶ್ವಾಸ ಗಳಿಸಿರುವ ಸಿ.ಎಂ.ಲಿಂಗಪ್ಪ ಅವರನ್ನೇ ಪಕ್ಷದ ಅಭ್ಯರ್ಥಿಯನ್ನಾಗಿಸುವಂತೆ ನಿಯೋಗ ತೆರಳಿ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಅವರಲ್ಲಿ ಮನವಿ ಮಾಡಲಾಗುವುದು ಎಂದು ಪಕ್ಷದ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.
ಜಿಲ್ಲಾ ಘಟಕದ ಅಧ್ಯಕ್ಷರಾಗಿ, ಶಾಸಕರಾಗಿ ಲಿಂಗಪ್ಪ ಸೇವೆ ಸಲ್ಲಿಸಿದ್ದಾರೆ. ಹಲವಾರು ಚುನಾವಣೆಗಳನ್ನು ಎದುರಿಸಿದ್ದಾರೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರ ಸಂಪರ್ಕದಲ್ಲಿರುವ ಸಿ.ಎಂ.ಲಿಂಗಪ್ಪ ಅವರನ್ನೇ ಅಭ್ಯರ್ಥಿಯನ್ನಾಗಿಸಬೇಕು ಎಂದು ತಿಳಿಸಿದರು.
ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಹೆಸರುಗಳನ್ನು ಕಳೆದ 6 ತಿಂಗಳ ಹಿಂದೆಯೇ ಹೈಕಮಾಂಡ್‌ಗೆ ಕಳುಹಿಸಿಕೊಡಲಾಗಿದೆ. ಇದರಲ್ಲಿ ಪ್ರಥಮ ಆದ್ಯತೆಯನ್ನು ಸಿ.ಎಂ.ಲಿಂಗಪ್ಪ ಅವರಿಗೂ ಹಾಗೂ ಎರಡನೇ ಆದ್ಯತೆಯನ್ನು ಡಿ.ಕೆ.ಸುರೇಶ್ ಅವರಿಗೂ ನೀಡುವಂತೆ ಹೇಳಲಾಗಿದೆ. ಅದರ ಪ್ರಕಾರ ಈಗ ಸಿ.ಎಂ.ಲಿಂಗಪ್ಪ ಅವರಿಗೆ ಟಿಕೆಟ್ ನೀಡಬೇಕು ಎಂದು ಹೈಕಮಾಂಡ್‌ಗೆ ಆಗ್ರಹಿಸಲಾಗುವುದು ಎಂದರು.
ಒಮ್ಮತದ ಅಭಿಪ್ರಾಯ: ಸಿ.ಎಂ.ಲಿಂಗಪ್ಪ ಅವರಿಗೆ ಟಿಕೆಟ್ ನೀಡಬೇಕೆಂಬುದು ಈ ಭಾಗದ ಜನರ ಒಕ್ಕೊರಲ ಅಭಿಪ್ರಾಯವಾಗಿದೆ. ಉಪಚುನಾವಣೆ ಕಾಂಗ್ರೆಸ್‌ಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಶತಾಯ ಗತಾಯ ಗೆಲ್ಲಲೇಬೇಕಿದೆ. ಗೆಲವನ್ನು ಮತ್ತಷ್ಟು ಸುಲಭವನ್ನಾಗಿಸಲು ಸಿ.ಎಂ.ಲಿಂಗಪ್ಪ ಅವರಿಗೆ ಟಿಕೆಟ್ ನೀಡಬೇಕು ಎಂದು ಹೇಳಿದರು.
ರಾಮನಗರದಲ್ಲಿ ಕಾಂಗ್ರೆಸ್‌ನ ಚುನಾಯಿತ ಜನಪ್ರತಿನಿಧಿಗಳು ಇಲ್ಲದಿರುವುದರಿಂದ ಈ ಭಾಗದವರಿಗೇ ಮೊದಲ ಆದ್ಯತೆ ನೀಡಬೇಕು. ಹೈಕಮಾಂಡ್ ಯಾವುದೇ ವ್ಯಕ್ತಿಯನ್ನು ಅಭ್ಯರ್ಥಿಯಾಗಿಸಿದರೂ ಪಕ್ಷದ ಹಿತದೃಷ್ಟಿಯಿಂದ ದುಡಿಯಲು ಸಿದ್ಧರಿದ್ದೇವೆ. ಸಿ.ಎಂ.ಲಿಂಗಪ್ಪ ಅವರಿಗೇ ಟಿಕಟ್ ನೀಡಬೇಕು ಎಂದು ವರಿಷ್ಠರಲ್ಲಿ ಮನವಿ ಮಾಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯರಾದ ಎ.ಮಂಜುನಾಥ್, ಕೆ.ರಮೇಶ್, ಮುಖಂಡರಾದ ಕೆ.ಶೇಷಾದ್ರಿ, ಜಯಣ್ಣ, ಪಿ.ನಾಗರಾಜು, ವಿ.ಎಚ್.ರಾಜು, ಬಿ.ಸಿ. ಪಾರ್ವತಮ್ಮ, ಆರಿಫ್ ಖುರೇಷಿ, ಸೈಯದ್ ಉಮರ್ ಮತ್ತಿತತರರು ಹಾಜರಿದ್ದರು.

ಹೊರಹೋದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪಕ್ಷಕ್ಕೆ ಮರಳಿ ಕರೆತನ್ನಿ
ಚನ್ನಪಟ್ಟಣ: ಕಾಂಗ್ರೆಸ್ ಮನೆಯಿಂದ ಗುಳೆ ಹೊರಟಿರುವ ಮುಖಂಡರು ಕಾರ್ಯಕರ್ತರು ಪಕ್ಷಕ್ಕೆ ಮರಳಿ ಅಭಿವೃದ್ಧಿಗೆ ಸಹಕರಿಸಿ... ಇದು ತಾಲೂಕು ಕಾಂಗ್ರೆಸ್ ಮುಕ್ತ ಆಹ್ವಾನ.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಗರ ಮತ್ತು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎ.ಸಿ.ವೀರೇಗೌಡ ಮತ್ತು ಶಿವಮಾದು ಜಂಟಿ ಸುದ್ದಿಗೋಷ್ಠಿ ನಡೆಸಿ ವಲಸೆ ಹೋಗಿರುವ ಕಾಂಗ್ರೆಸ್ಸಿಗರಿಗೆ ನಮ್ಮ ಪಕ್ಷದ ಬಾಗಿಲು ಮುಕ್ತವಾಗಿ ತೆರೆದಿದೆ ಎಂದರು.
ಕಳೆದ 8 ವರ್ಷಗಳಿಂದ ತಾಲೂಕು ಕಾಂಗ್ರೆಸ್ ಕಾರ್ಯಕರ್ತರು ರಾಜಕೀಯ ಅಸ್ಥಿರತೆಗೆ ಒಳಗಾಗಿದ್ದು ಇದರಿಂದಾಗಿ ಸಮಾಜವಾದಿ, ಬಿಜೆಪಿ, ಜೆಡಿಎಸ್‌ಗಳಿಗೆ ವಲಸೆ ಹೋಗಿದ್ದಾರೆ. ಲೋಕಸಭಾ ಉಪಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬಲಪಡಿಸಬೇಕಾದ್ದರಿಂದ ನಮ್ಮ ಪಕ್ಷಕ್ಕೆ ಯಾರು ಬಂದರೂ ಮುಕ್ತವಾಗಿ ಸ್ವಾಗತ ನೀಡುವುದಾಗಿ ತಿಳಿಸಿದರು.
 ಈಗಾಗಲೇ ಅನ್ಯ ಪಕ್ಷದಿಂದ ಮುಖಂಡರು, ಕಾರ್ಯಕರ್ತರು, ಚುನಾಯಿತ ಪ್ರತಿನಿಧಿಗಳು ನಮ್ಮ ಪಕ್ಷಕ್ಕೆ ಮರಳಿದ್ದು ಇವರ ಜತೆಗೆ ಮತ್ತಷ್ಟು ಮಂದಿ ನಮ್ಮ ಪಕ್ಷಕ್ಕೆ ಬರಲಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲರನ್ನೂ ಪಕ್ಷಕ್ಕೆ ಸೇರ್ಪಡೆಗೊಳಿಸಿ ಕೊಳ್ಳುವುದಾಗಿ ತಿಳಿಸಿದರು.
ಮನೆಬಾಗಿಲಲ್ಲಿ ಸೇರ್ಪಡೆ: ಕಾಂಗ್ರೆಸ್‌ಗೆ ಹಿಂದಿರುಗ ಬಯಸುವ ಮೂಲ ಕಾರ್ಯಕರ್ತರು ಹಾಗೂ ಪಕ್ಷಕ್ಕೆ ಸೇರಲಿಚ್ಛಿಸುವ ಅನ್ಯಪಕ್ಷದ ಮುಖಂಡರುಗಳ ಮನೆಬಾಗಿಲಿಗೆ ತೆರಳಿ ಪಕ್ಷಕ್ಕೆ ಸೇರ್ಪಡೆ ಗೊಳಿಸಲಿರುವುದಾಗಿ ಅವರು ತಿಳಿಸಿದರು.
ಕೆಲವೇ ದಿನಗಳಲ್ಲಿ ಡಿ.ಕೆ.ಶಿವಕುಮಾರ್ ಮತ್ತು ತಾಲೂಕು ಕಾಂಗ್ರೆಸ್ ಮುಖಂಡರಾದ ರಘುನಂದನ್ ರಾಮಣ್ಣ, ಸಾದತ್ ಆಲಿಖಾನ್ ನೇತೃತ್ವದಲ್ಲಿ ತಾಲೂಕಿನಾದ್ಯಂತ ಪ್ರವಾಸ ಕೈಗೊಳ್ಳಲಿದ್ದು ಇದೇ ವೇಳೆ ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವುದಾಗಿ ತಿಳಿಸಿದರು.
ಸುರೇಶ್ ಅಭ್ಯರ್ಥಿ: ಲೋಕಸಭಾ ಉಪಚುನಾವಣೆಯಲ್ಲಿ ಎದುರಾಳಿ ಪಕ್ಷವನ್ನು ಮಣಿಸಬೇಕಾದರೆ ಡಿ.ಕೆ.ಶಿವಕುಮಾರ್ ಸಾರಥ್ಯ ವಹಿಸಿಕೊಳ್ಳ ಬೇಕಿದ್ದು ಅವರ ಸಹೋದರ ಡಿ.ಕೆ.ಸುರೇಶ್‌ರನ್ನು
ಅಭ್ಯರ್ಥಿಯಾಗಿಸುವಂತೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 8 ವಿಧಾನ ಸಭಾ
ಕ್ಷೇತ್ರಗಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಕೆಪಿಸಿಸಿ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಗಳಿಗೆ ಡಿ.ಕೆ. ಸುರೇಶ್‌ರನ್ನೇ ಅಭ್ಯರ್ಥಿ ಮಾಡುವಂತೆ ಮನವಿ ಮಾಡಿದ್ದು ಇದೇ ವಿಷಯವನ್ನು ಹೈಕಮಾಂಡ್ ಗಮನಕ್ಕೆ ಸಹ ತರಲಾಗಿದೆ ನಮ್ಮ ರಾಜ್ಯ ಮತ್ತು ರಾಷ್ಟ್ರ ನಾಯಕರು ಈ ಮನವಿಯನ್ನು ಪುರಸ್ಕರಿಸುತ್ತಾರೆ ಎಂಬ ನಂಬಿಕೆ ನಮಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಸತೀಶ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಲೋಕೇಶ್, ಅಕ್ಕೂರು ಪುಟ್ಟರಾಜು, ಪಿ.ಡಿ.ರಾಜು, ಪಿ.ಹಳ್ಳಿ ದೊಡ್ಡಿ ಮಲ್ಲೇಶ್, ಚಕ್ಕಲೂರು ಶಿವು ಇನ್ನು ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement