'ಸಂಸ್ಕೃತಿ ಉಳಿಯಲು ಕುಟುಂಬ ವ್ಯವಸ್ಥೆ ಬಲ ಅಗತ್ಯ'
ಬೆಂಗಳೂರು: ದೇಶದ ಸಂಸ್ಕೃತಿ ಉಳಿಯಬೇಕಾದರೆ ಕುಟುಂಬ ವ್ಯವಸ್ಥೆ ಬಲಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಂ.ವಿ. ರಾಜಶೇಖರನ್ ಹೇಳಿದರು. ವಿಶ್ವ ವೀರಶೈವ ಸಂಸ್ಕೃತಿ ಪ್ರತಿಷ್ಠಾನ, ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿಯಿಂದ ಭಾನುವಾರ ನಯನ ಸಭಾಂಗಣದಲ್ಲಿ ನಡೆದ ಕಾಯಕ ಮತ್ತು ದಾಸೋಹ ನಾಡಿನ ಗಣ್ಯರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಅಮೆರಿಕ ಶ್ರೀಮಂತ ರಾಷ್ಟ್ರ ನಿಜ. ಆದರೆ ಅಲ್ಲಿ ಮನೋರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಾನವೀಯ ಮೌಲ್ಯಗಳು ಹಾಳಾದಾಗ ನಾಗರೀಕತೆ ಕೂಡ ಮಾಯವಾಯಿತು. ನಮ್ಮಲ್ಲಿ ಕಲೆ, ಸಂಸ್ಕೃತಿಯ ಬಗ್ಗೆ ನಿರಂತರವಾಗಿ ಆಸಕ್ತಿ ಇರಬೇಕು ಎಂದರು. ಶಂಕರ ಬಿದರಿಯವರು ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪಡೆಯುವ ಶಕ್ತಿ ಹೊಂದಿದ್ದಾರೆ. ಅವರ ರಾಜಕೀಯ ಪ್ರವೇಶ ಬಹಳ ಮುಖ್ಯ. ಮುಂದೆ ಅವರು ಪಕ್ಷದ ಹುರಿಯಾಳಾಗಲಿದ್ದಾರೆ. ಅವರು ಮಾನವೀಯ ಗುಣಗಳನ್ನು ಮೈಗೂಡಿಸಿಕೊಂಡು ದಕ್ಷ ಪೊಲೀಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು ಎಂದು ಹೇಳಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಬಸವ ಜಯ ಮೃತ್ಯುಂಜಯ ಮಹಾಸ್ವಾಮಿ ಮಾತನಾಡಿ, ಇಂದು ಪ್ರಶಸ್ತಿಗಳಿಗೆ ಶಿಫಾರಸ್ಸುಗಳ ಒತ್ತಡ ಹೆಚ್ಚಾಗುತ್ತಿದೆ. ಇದರಿಂದಾಗಿ ನಿಜವಾದ ಪ್ರತಿಭೆಗಳಿಗೆ ಪ್ರಶಸ್ತಿ ಸಿಗುವುದು ಅಸಾಧ್ಯವಾಗಿದೆ. ಸಾಧಕರನ್ನು ಗುರುತಿಸುವ ವೇದಿಕೆಯನ್ನು ಡಾ.ಜಿ.ಬಿ. ರಾಜು ಅವರು ನಿರ್ಮಿಸಿರುವುದು ಪ್ರಶಂಸನೀಯ ಎಂದು ಹೇಳಿದರು.
ರಾಜಕಾರಣ ಕೆಟ್ಟಿಲ್ಲ. ರಾಜಕಾರಣದಲ್ಲಿ ಒಳ್ಳೆಯವರಿಲ್ಲದ ಕಾರಣ ಕೆಟ್ಟಿದೆ. ಇದು ಸಮಾಜಸೇವೆಗೆ ಅದ್ಬುತ ವೇದಿಕೆ. ರಾಜಕಾರಣಿಗಳಿಗೆ ನಿಜವಾದ ಜನಪರ ಕಾಳಜಿ ಬೇಕು. ರಾಜಕಾರಣ ಶುದ್ಧಿಯಾಗಲು ಬಿದರಿಯಂಥವರು ರಾಜಕಾರಣ ಪ್ರವೇಶಿಸಬೇಕು ಎಂದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಶ್ರೀನಿವಾಸ್ ಜಿ. ಕಪ್ಪಣ್ಣ ಮಾತನಾಡಿ, ಇದು ಬಿದರಿಯವರ ವಿಜಯ ಯಾತ್ರೆಯ ಆರಂಭದ ದಿನ. ಪ್ರಶಸ್ತಿ ಪುರಸ್ಕೃತರಿಗೆ ವಿಶೇಷ ದಿನ. ಉತ್ತರ ಕರ್ನಾಟಕದ ಭಾಗಕ್ಕೆ ಸಾಂಸ್ಕೃತಿಕವಾಗಿ ಅನ್ಯಾಯವಾಗುತ್ತಿದೆ. ವೃತ್ತಿ ರಂಗಭೂಮಿ ನಾಶವಾಗುತ್ತಿದೆ. ಬಿದರಿ ಆದ್ಯತೆ ಮೇಲೆಗೆ ಉತ್ತರ ಕರ್ನಾಟಕವನ್ನು ಸಾಂಸ್ಕೃತಿಕವಾಗಿ ಬೆಳೆಸಬೇಕು ಎಂದು ಹೇಳಿದರು. ಸಮಾರಂಭದಲ್ಲಿ ಮಾಜಿ ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಶಂಕರ ಬಿದರಿ ಅವರಿಗೆ ಶ್ರೀ ಬಸವೇಶ್ವರ ಕಾಯಕಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಅನೇಕರಿಗೆ ಕರ್ನಾಟಕ ರತ್ನಶ್ರೀ, ಕರ್ನಾಟಕ ಭೂಷಣ ಪ್ರಶಸ್ತಿ, ಕೃಷಿರತ್ನ, ರಾಷ್ಟ್ರೀಯ ರತ್ನ ಪ್ರಶಸ್ತಿ ವಿತರಿಸಿ ಗೌರವಿಸಲಾಯಿತು. ಕೊಳದಮಠ ಮಹಾ ಸಂಸ್ಥಾನದ ಡಾ. ಶಾಂತವೀರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಚಿತ್ರ ನಟಿ ರೇಖಾ. ವಿ ಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.