ಸಮಸ್ಯೆಗಳ ಗೂಡಾಗಿರುವ ರೇಷ್ಮೆ ಗೂಡಿನ ಮಾರುಕಟ್ಟೆ
ವಿಜಯಪುರ: ಪಟ್ಟಣದ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ರೈತರಿಗೆ ಅನುಕೂಲವಾದ ವ್ಯವಸ್ಥೆಗಳಿಲ್ಲದೆ ಮಧ್ಯವರ್ತಿಗಳ ಹಾವಳಿಯಿಂದ ತೊಂದರೆ ಉಂಟಾಗುತ್ತಿದೆ ಮತ್ತು ಮಾರುಕಟ್ಟೆಯಲ್ಲಿ ಕಸದ ರಾಶಿ ಬಿದ್ದಿದ್ದು ಸ್ವಚ್ಛತೆ ಇಲ್ಲದಂತಾಗಿದೆ ಎಂದು ರೈತರು ದೂರಿದ್ದಾರೆ.
ಸುಮಾರು ವರ್ಷಗಳಿಂದ ಸರ್ಕಾರ ನೀಡಿದ್ದ ಫ್ಯಾನ್‌ಗಳು ಮತ್ತು ವಿದ್ಯುತ್ ದೀಪಗಳು ಹಾಳಾಗಿದ್ದು ದೂರದಿಂದ ಬರುವ ರೈತರಿಗೆ ರಾತ್ರಿ ಸಮಯದಲ್ಲಿ ತೊಂದರೆಯಾಗುತ್ತಿದೆ ಮತ್ತು ಕುಡಿಯುವ ನೀರಿನ ವ್ಯವಸ್ಥೆಯು ಇಲ್ಲದಂತಾಗಿದೆ.
ಮಾರುಕಟ್ಟೆಯಲ್ಲಿ ಎರಡು ತೂಕದ ಯಂತ್ರಗಳಿದ್ದು ಒಂದು ಯಂತ್ರ ಹಾಳಾಗಿದೆ. ಇದರಿಂದ ರೇಷ್ಮೆ ಗೂಡನ್ನು ತೂಕ ಮಾಡಲು ರೈತರಿಗೆ ತೊಂದರೆಯಾಗುತ್ತಿದೆ. ಬೀಟ್ ಕೂಗುವ ಮೊದಲು ರೀಲರ್‌ಗಳು ಮತ್ತು ಅನಾಮಿಕ ವ್ಯಕ್ತಿಗಳು ಗೂಡನ್ನು ಸ್ಯಾಂಪಲ್ ಗೂಡೆಂದು ಎರಡು ಕೈಗಳಲ್ಲಿ ತೆಗೆದುಕೊಂಡು ಹೋಗುತ್ತಾರೆ. ಇದರಿಂದ ರೈತರಿಗೆ ನಷ್ಟವಾಗುತ್ತಿದೆ. ಮಾರುಕಟ್ಟೆಯಲ್ಲಿ ವಾಹನ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆಯಿಲ್ಲದ ಕಾರಣ ಎಲ್ಲೆಂದರಲ್ಲಿ ವಾಹನ ನಿಲ್ಲಿಸುವುದರಿಂದ ಸಂಚಾರ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಮಾರುಕಟ್ಟೆಗೆ ನೂತನವಾಗಿ ವರ್ಗಾವಣೆಯಾಗಿ ಬಂದಿರುವ ಉಪನಿರ್ದೇಶಕ ದಾದಾನೂರ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಈ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸುವುದಾಗಿ ತಿಳಿಸಿದರು.