ಸರ್ಕಾರಿ ಕಡತದಲ್ಲಿಯೇ ಉಳಿದ ಹಸಿರು ವಲಯ!
ಯಲಹಂಕ: ಇಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಹಸಿರುನಿಂದ ಕಂಗೂಳಿಸುತ್ತಿದ್ದ ಕೃಷಿ ಭೂಮಿಯಲ್ಲಿ ಈಗ ಕಾಂಕ್ರೀಟ್ ಕಾಡು ತೀವ್ರಗತಿಯಲ್ಲಿ ಬೆಳೆಯುತ್ತಿದೆ.
ರಾಗಿ, ಜೋಳ, ದ್ರಾಕ್ಷಿ, ಕಲ್ಲಂಗಡಿ. ಸೀಬೆ, ಸಪೋಟ ಬೆಳೆಯುವ ಕೃಷಿ ಭೂಮಿಯಲ್ಲಿ ಈಗ ರೆಸಾರ್ಟ್ಗಳು ಸೃಷ್ಟಿಯಾಗಿವೆ. ಮಾತ್ರವಲ್ಲ, ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಭಿವೃದ್ಧಿ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯಲ್ಲಿ ವಾಹನ ಸಂಚಾರ ಅಧಿಕಗೊಂಡಿದ್ದು, ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಎಲ್ಲೆಂದರಲ್ಲಿ ಬಡಾವಣೆಗಳು ಸೃಷ್ಟಿಯಾಗಿವೆ.
ಎಲ್ಲವೂ ಭೂ ಭಕ್ಷಕರ ಪಾಲು: ಬೆಂಗಳೂರು ಉತ್ತರ ತಾಲೂಕಿನ ಯಲಹಂಕ, ಹೆಸರಘಟ್ಟ, ಜಾಲ, ಮತ್ತು ದಾಸನಪುರ, ಹೋಬಳಿಯಲ್ಲಿ 838ಕ್ಕೂ ಬಡಾವಣೆಗಳು 329 ರೆಸಾರ್ಟ್ಗಳು ನಿರ್ಮಾಣವಾಗಿವೆ. 43 ಕ್ರಷರ್ಗಳು ಸದಾ ಸದ್ದು ಮಾಡುತ್ತಿವೆ. ಜಾನುವಾರು ಮೇವಿಗಾಗಿ ಕಾಯ್ದಿರಿಸಿದ್ದ 17,235 ಎಕರೆ ಗೋಮಾಳದಲ್ಲಿ 14,180 ಎಕರೆ ಈಗ ಭೂ ಭಕ್ಷಕರ ಪಾಲಾಗಿದೆ. ಸರ್ಕಾರದ ಆಶ್ರಯ, ಆರಾಧನಾ, ಯೋಜನೆಗಳಿಗೆ ಈ ಗೋಮಾಳ ಬಳಕೆಯಾಗಿದೆ.
ನಿವೇಶನಗಳಾದ ಗೋಮಾಳ: ಹೆಸರಘಟ್ಟ ಹೋಬಳಿಯ ರಾಜಾನುಕುಂಟೆ, ತರಬನಹಳ್ಳಿ, ಹೆಸರಘಟ್ಟ, ಅರಕೆರೆ, ಸೊನ್ನೇನಹಳ್ಳಿ ಜಾಲಾ ಹೋಬಳಿಯ ಬಾಗಲೂರು, ಬೆಟ್ಟಹಲಸೂರು, ವ್ಯಾಪ್ತಿಯಲ್ಲಿದ್ದ ಗೋಮಾಳದ ಭೂಮಿಯನ್ನು ನಿವೇಶನಗಳನ್ನಾಗಿ ಪರಿವರ್ತಿಸಲಾಗಿದೆ.
ಹಸಿರು ವಲಯದಲ್ಲಿ ಕಸ ವಿಲೇವಾರಿ: ಬೆಂಗಳೂರಿನಲ್ಲಿ ನಿತ್ಯ ಸಂಗ್ರಹವಾಗುವ ಲಕ್ಷಾಂತರ ಮೆಟ್ರಿಕ್ ಟನ್ ಕಸವನ್ನು ಯಲಹಂಕ ಬಳಿಯ ಬೆಟ್ಟಹಳ್ಳಿ ವ್ಯಾಪ್ತಿಯ ಹಸಿರು ವಲಯದಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಅಷ್ಟೆ ಅಲ್ಲದೆ. ಬಿಡಿಎ ಸಹ ಸ್ಥಳಿಯ ಸಂಸ್ಥೆಗಳ ಕಸ ಕಡ್ಡಿ ಸಂಗ್ರಹಿಸಲು ವೀರಸಾಗರದ ಬಳಿ 170 ಎಕರೆ ಪ್ರದೇಶ ಗುರ್ತಿಸಿದೆ. ಬಿಬಿಎಂಪಿ ವ್ಯಾಪ್ತಿಯ ಯಲಹಂಕ ಕೋಗಿಲು ಗ್ರಾಮದ ಗೋಮಾಳ ಜಾಗವೂ ರಾಜಕಾರಣಿಗಳ ವಶವಾಗಿದ್ದರೆ, ಚೊಕ್ಕನಹಳ್ಳಿಯಿಂದ ನಾಗವಾರ, ಟ್ಯಾನರಿ ರಸ್ತೆಯವರೆಗೆ ಪ್ರತಿಷ್ಠಿತರ ಫಾರಂ-ಹೌಸ್, ಕಾಲೇಜು, ಕಲ್ಲು ಕ್ರಷರ್ ಸದ್ದು ಕೇಳಿಬರುತ್ತಿದೆ. ಬೆಂಗಳೂರು ನಗರ ಗ್ರಾಮಾಂತರ ನಾಲ್ಕು ಹೋಬಳಿಗಳಲ್ಲಿ ಹೀಗೆ ಹಸಿರು ವಲಯದಲ್ಲಿ ಕಾಂಕ್ರೀಟ್ ಕಾಡು ನಿರ್ಮಾಣವಾಗಿದೆ. ರೈತರು ಹಣದಾಸೆಗೆ ಕೃಷಿ ಭೂಮಿ ಮಾರಾಟ ಮಾಡುತ್ತಿದ್ದಾರೆ. ಆದರೆ, ಸರ್ಕಾರದ ಹಸಿರು ವಲಯ ಸೃಷ್ಟಿ ಹೇಳಿಕೆಗಳು ಕಡತದಲ್ಲಿಯೇ ಭದ್ರವಾಗಿವೆ. ಬಂಡವಾಳ ಶಾಹಿಗಳಿಂದ ರೈತರ ಕೃಷಿ ಭೂಮಿ ಕೈತಪ್ಪುವುದನ್ನು ತಪ್ಪಿಸಲು ಸರ್ಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳುವ ಅನಿವಾರ್ಯತೆ ಇದೆ.
ಯಲಹಂಕ ಸುತ್ತಮುತ್ತ ನೂರಾರು ಎಕರೆ ಪ್ರದೇಶ ಲೇಔಟ್ ರೆಸಾರ್ಟ್ ಆಗಿ ಪರಿವರ್ತನೆಯಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಇತ್ತೀಚಿನ ದಿನಗಳಲ್ಲಿ ದಿಟ್ಟ ಕ್ರಮ ತೆಗೆದುಕೊಂಡಿದೆ. ಈಗಾಗಲೇ ಹಸಿರು ವಲಯದಲ್ಲಿ ನಿರ್ಮಾಣ ಮಾಡಿರುವ ಲೇಔಟ್, ರೆಸಾರ್ಟ್ಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ ಅಲ್ಲಲ್ಲಿ ತೆರವು ಕಾರ್ಯ ನಡೆಸಲಾಗುತ್ತದೆ.
-ಪ್ರಿಯದರ್ಶಿನಿ, ತಹಸೀಲ್ದಾರ್, ಬೆಂಗಳೂರು ಉತ್ತರ ತಾಲೂಕು