ಹಿಂದುಳಿದ ವರ್ಗದ ಜನ ವಾಸಿಸುವ ಗ್ರಾಮಗಳಲ್ಲಿ ಸ್ಮಶಾನಕ್ಕೆ ಸ್ಥಳ ಒದಗಿಸಿ
ಕ.ಪ್ರ.ವಾರ್ತೆ ರಾಮನಗರ ಜೂ.25
ಸರ್ಕಾರಿ ಜಮೀನು ಲಭ್ಯವಿಲ್ಲದಿದ್ದಲ್ಲಿ 1 ರಿಂದ 10 ಎಕರೆವರೆವಿಗೂ ಜಮೀನು ಖರೀದಿಸುವ ಮೂಲಕ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ವರ್ಗದ ಜನ ವಾಸಿಸುವ ಗ್ರಾಮಗಳಿಗೆ ಸ್ಮಶಾನಕ್ಕೆ ಸ್ಥಳ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ತಿಳಿಸಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಸ್ಮಶಾನಗಳು ಇಲ್ಲ ಎಂಬುದಾಗಿ ಹಲವಾರು ದೂರುಗಳು ಬಂದಿವೆ. ಸರ್ಕಾರಿ ಜಮೀನು ಲಭ್ಯವಿಲ್ಲದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಖಾಸಗಿ ಜಮೀನು ಖರೀದಿಸಿ ಸಮಸ್ಯೆ ಬಗೆಹರಿಸಬೇಕು. ಈ ಸಂಬಂಧ ತಾಲೂಕು ತಹಸೀಲ್ದಾರ್ಗಳು 60 ದಿನಗಳಲ್ಲಿ ವರದಿ ಸಲ್ಲಿಸಬೇಕು ಎಂದರು.
ಜಿಲ್ಲೆಯಲ್ಲಿ ಈವರೆಗೆ ದಾಖಲಾದ ದೌರ್ಜನ್ಯ ಪ್ರಕರಣ ಮತ್ತು ಅವುಗಳಲ್ಲಿ ನೊಂದವರಿಗೆ ಪರಿಹಾರ ನೀಡಿದ ವಿವರ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಯಿತು. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನರು ಅರಣ್ಯ ಭೂಮಿಯಲ್ಲಿ ತಲೆತಲಾಂತರಗಳಿಂದ ವ್ಯವಸಾಯ ಮಾಡುತ್ತಿದ್ದರೆ ಅಂತಹವರನ್ನು ವಕ್ಕಲೆಬ್ಬಿಸಬಾರದು. ಈ ವಿಚಾರದಲ್ಲಿ ಅರಣ್ಯ ಇಲಾಖೆ ಸಮ್ಮತಿ ಸೂಚಿಸಿದ್ದು ಸಂಬಂಧಿಸಿದ ಅಧಿಕಾರಿಗಳು ಸರ್ವೆ ಮಾಡಿ ಒಂದು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಶ್ರೀರಾಮರೆಡ್ಡಿ ತಿಳಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮವು ಗಂಗಾಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗಳನ್ನು ಕೊರೆಸುತ್ತಿಲ್ಲ ಎಂದು ಸಮಿತಿ ಸದಸ್ಯ ಶಿವಕುಮಾರಸ್ವಾಮಿ ಆರೋಪಿಸಿದರು. ಈ ಬಗ್ಗೆ ಪ್ರತಿ ತಾಲೂಕಿಗೆ ಒಬ್ಬರಂತೆ ಕ್ಷೇತ್ರಾಧಿಕಾರಿಗಳನ್ನು ನೇಮಿಸಿ ಜು.15ರೊಳಗೆ ವರದಿ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದರು.
ಡಾ.ಅಂಬೇಡ್ಕರ್ಭ್ವನದಲ್ಲಿ ನಿರ್ಮಿಸಿರುವ 6 ಮಳಿಗೆಗಳನ್ನು ಬಾಡಿಗೆ ಅವಧಿ ಮುಗಿದ ಬಳಿಕವೂ ಮುಂದುವರಿಸಲಾಗಿದೆ. ಕೆಲ ಬಾಡಿಗೆದಾರರು ಮತ್ತೊಬ್ಬರಿಗೆ ಬಾಡಿಗೆಗೆ ಕೊಟ್ಟಿರುವುದು ಕಂಡು ಬಂದಿದೆ ಹಾಗೂ ಟೌನ್ ಪೊಲೀಸ್ ಠಾಣೆ ಬಳಿ ಇರುವ ಮಳಿಗೆಯಲ್ಲಿ ಶೇಕಡಾ 22.75ರ ಮಳಿಗೆಗಳನ್ನು ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರಿಗೆ ನೀಡಿಲ್ಲ ಎಂದು ಸಮಿತಿ ಸದಸ್ಯರು ಆರೋಪಿಸಿದರು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್, ಸಮಿತಿ ಸದಸ್ಯರಾದ ಚನ್ನಕೇಶವ, ಸಿ.ಎ.ಜಾರ್ಜ್, ರಾ.ಶಿ.ದೇವರಾಜು, ರಾಜಣ್ಣ, ನರಸಿಂಹಯ್ಯ, ಜಿಲ್ಲಾ ಗ್ರಂಥಾಲಯಾಧಿಕಾರಿ ಕೃಷ್ಣಮೂರ್ತಿ, ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ರಾಥೋಡ್, ಸಮಾಜ ಕಲ್ಯಾಣ ಅಧಿಕಾರಿ ತಿಮ್ಮಪ್ಪ, ನಾಲ್ಕೂ ತಾಲೂಕುಗಳ ತಹಸೀಲ್ದಾರ್, ತಾ.ಪಂ. ಕಾಯ ರ್ ನಿರ್ವಹಣಾಧಿಕಾರಿಗಳು, ಪುರಸಭಾ ಮುಖ್ಯಸ್ಥರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.