ನಗರಸಭೆಯಲ್ಲಿ ಜೆಡಿಎಸ್ಗೆ ಸ್ಪಷ್ಟ ಬಹುಮತ: ರಾಜಣ್ಣ
ಕ.ಪ್ರ.ವಾರ್ತೆ ಚನ್ನಪಟ್ಟಣ ಜೂ.26
ನಗರಸಭೆಯಲ್ಲಿ ನಮ್ಮ ಪಕ್ಷಕ್ಕೆ ಸ್ಪಷ್ಟ ಬಹುಮತವಿದೆ. ನಮ್ಮ ಪಕ್ಷ ಅಧಿಕಾರ ಹಿಡಿಯಲಿದ್ದು, ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ವಡ್ಡರಹಳ್ಳಿ ರಾಜಣ್ಣ ತಿಳಿಸಿದರು.
ತಾಲೂಕಿನ ಕಣ್ವ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದ 16 ಮಂದಿ ಸದಸ್ಯರು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು ಪಕ್ಷೇತರ ಸದಸ್ಯ ನಂದೀಶ್ ನಮ್ಮೊಂದಿಗೆ ಕೈ ಜೋಡಿಸಿದ್ದಾರೆ ಜೆಡಿಎಸ್ಗೆ ಯಾವುದೇ ಭಯವಿಲ್ಲ ಎಂದು ತಿಳಿಸಿದರು.
ವಿಪಕ್ಷದ ನಗರಸಭಾ ಸದಸ್ಯರು ಸಾಕಷ್ಟು ಸಂಖ್ಯಾಬಲವಿಲ್ಲದಿದ್ದರೂ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಹಗಲುಗನಸು ಕಾಣುತ್ತಿದ್ದಾರೆ. ಸುಮ್ಮನೆ ಪತ್ರಿಕಾ ಹೇಳಿಕೆ ನೀಡಿ ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ವಿಧಾನಸಭೆಯಲ್ಲಿ ಸೋತ ಮಾತ್ರಕ್ಕೆ ನಾವು ಅಂಜಿಲ್ಲ. ಪಕ್ಷದ ವರಿಷ್ಠರಾದ ಎಚ್.ಡಿ.ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ನಮಗೆ ಸೂಚನೆ ನೀಡಿದ್ದು, ಅದರಂತೆ ನಾವು ನಗರಸಭೆಯಲ್ಲಿ ಯಾವುದೇ ಮೀಸಲಾತಿ ಹೊರ ಬಿದ್ದರು ಪಕ್ಷದ ಅಭ್ಯರ್ಥಿಯನ್ನು ಒಮ್ಮತದ ಮೇರೆಗೆ ಆಯ್ಕೆ ಮಾಡಿ ಕೊಳ್ಳುತ್ತೇವೆ ಎಂದು ತಿಳಿಸಿದರು.
ನಗರಸಭಾ ಸದಸ್ಯ ಜಬಿವುಲ್ಲಾ ಖಾನ್ ಮಾತನಾಡಿ, ಒಂದೊಂದು ಚುನಾವಣೆಯಲ್ಲಿ ಒಂದೊಂದು ಪಕ್ಷದೊಂದಿಗೆ ಗುರುತಿಸಿಕೊಳ್ಳುತ್ತಿರುವ ಕಾಂಗ್ರೆಸ್ ಸದಸ್ಯರು ಮೊದಲು ತಾವು ಯಾವ ಪಕ್ಷದಿಂದ ಗೆದ್ದಿದ್ದೇವೆ, ಯಾವ ಪಕ್ಷದಲ್ಲಿ ಉಳಿದು ಕೊಳ್ಳುತ್ತೇವೆ ಎಂಬುದನ್ನು ಸ್ಪಷ್ಟಪಡಿಸಿ ನಂತರ ನಗರಸಭೆ ಅಧ್ಯಕ್ಷ ಸ್ಥಾನದ ಬಗ್ಗೆ ಮಾತನಾಡಲಿ ಎಂದರು.
ನಮ್ಮ ಪಕ್ಷದ ಸದಸ್ಯರೆಲ್ಲರು ಒಗ್ಗಟ್ಟಿನಿಂದ ಇದ್ದು ಯಾವುದೇ ಮೀಸಲಾತಿ ನಿಗದಿಯಾದರೂ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಪಕ್ಷದ ಅಭ್ಯರ್ಥಿಯನ್ನು ಅಧ್ಯಕ್ಷ ಸ್ಥಾನಕ್ಕೆ ಕುಳ್ಳಿರಿಸುವುದು ಶತಸಿದ್ಧ ಎಂದರು.
ನಗರಸಭಾ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿಸಿರುವ ಪಟ್ಟಣದ ಮತದಾರರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ ಅವರು, ಜನತೆ ನಂಬಿಕೆ ಹುಸಿಗೊಳಿಸದೆ ಪಟ್ಟಣದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಜೆಡಿಎಸ್ ಬೆಂಬಲಿಸುತ್ತೇನೆ: ನಗರಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾನು ಗೆಲುವು ಸಾಧಿಸಿದ್ದೆನಾದರೂ ನಮ್ಮ ನಾಯಕರಾದ ಎಸ್.ಲಿಂಗೇಶ್ಕುಮಾರ್ ನಿರ್ದೇಶನದಂತೆ ನಗರಸಭೆ ಅಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿಸುವುದಾಗಿ ಪಕ್ಷೇತರ ಸದಸ್ಯ ನಂದೀಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರ ಜೆಡಿಎಸ್ ಅಧ್ಯಕ್ಷ ಸತ್ಯನಾರಾಯಣ, ಸದಸ್ಯರಾದ ಉಮಾಶಂಕರ್, ರಮೇಶ್ ಬಾಬು, ಮಧು, ಜೆಸಿಬಿ ಲೋಕೇಶ್, ಪರೀದ್ ಖಾನ್ ಘೋರಿ ಸೇರಿದಂತೆ 16 ಮಂದಿ ಸದಸ್ಯರು ಉಪಸ್ಥಿತರಿದ್ದರು.