ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಪಠ್ಯಕ್ರಮ ಗೊಂದಲ ನಿವಾರಣೆಗೆ ಆಗ್ರಹ

Srinivasa Murthy VN
Updated On : 27 Jun 2013, 12:15 pm

ರಾಮನಗರ:  ಪದವಿ ಪೂರ್ವ ಶಿಕ್ಷಣದಲ್ಲಿ ಸಿಬಿಎಸ್‌ಸಿ ಪಠ್ಯಕ್ರಮ ಅಳವಡಿಕೆ ಸ್ವಾಗತಾರ್ಹ. ಆದರೆ, ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳು ಲಭ್ಯವಿಲ್ಲದೆ ಉಂಟಾಗಿರುವ ಗೊಂದಲ ನಿವಾರಣೆಗೆ ಸರ್ಕಾರ ಮುಂದಾಗಬೇಕು ಎಂದು ಎಬಿವಿಪಿ ಒತ್ತಾಯಿಸಿದೆ. ಪಠ್ಯ ಪುಸ್ತಕಗಳು ಲಭ್ಯವಿಲ್ಲದ ಕಾರಣ ಯಾವ ಮಾದರಿ ಪಠ್ಯ ಕ್ರಮ ಕಲಿಸಬೇಕೆನ್ನುವ ಗೊಂದಲ ಉಪನ್ಯಾಸಕರಲ್ಲಿ ಮನೆ ಮಾಡಿದೆ. ಈ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಸುನಿಲ್‌ಕುಮಾರ್ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ನೇಮಕಕ್ಕೆ ಒತ್ತಾಯ:  ಸರ್ಕಾರಿ ಕಾಲೇಜುಗಳಲ್ಲಿ ಎದುರಾಗಿರುವ ಉಪನ್ಯಾಸಕರ ಕೊರತೆ ನೀಗಿಸುವ ನಿಟ್ಟಿನಲ್ಲಿ ಉಪನ್ಯಾಸಕರ ನೇಮಕಕ್ಕೆ ಸರ್ಕಾರ ಜರೂರಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿರುವ ಅವರು,  ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯತ್ವ ರದ್ದತಿ ಕ್ರಮ ಖಂಡಿಸಿದ್ದಾರೆ.

ಪುನರ್ ಬೋಧನಾ ತರಗತಿ: ಸೂಚನೆ
ಬೆಂಗಳೂರು:
ಸೇವಾ ಭಾರತಿ ತನ್ನ 28ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ 9, 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ಮತ್ತು ಬಿ.ಕಾಂ ವಿದ್ಯಾರ್ಥಿಗಳಿಗೆ ಪುನರ್ ಬೋಧನಾ ತರಗತಿಗಳನ್ನು ಜುಲೈ 2ನೇ ವಾರದಲ್ಲಿ ಪ್ರಾರಂಭಿಸಲಿದೆ. ನಗರದ ಪ್ರಸಿದ್ಧ ಕಾಲೇಜುಗಳ ಅನುಭವಿ, ಹೆಸರಾಂತ ಅಧ್ಯಾಪಕರು ತರಗತಿ ತೆಗೆದುಕೊಳ್ಳುವವರಿದ್ದು ಆಸಕ್ತರು ಹೆಚ್ಚಿನ ಮಾಹಿತಿಗೆ 23424684 ನ್ನು ಸಂಪರ್ಕಿಸಿ.

ರಂಗಭೂಮಿ ಡಿಪ್ಲೊಮಾಗೆ ಅರ್ಜಿ ಆಹ್ವಾನ
ವಿಜಯರಂಗ ಬಿಂಬವು 2013-14ನೇ ಸಾಲಿನ ಒಂದು ವರ್ಷದ ರಂಗಭೂಮಿ ಡಿಪ್ಲೊಮಾಗೆ ಅರ್ಜಿ ಆಹ್ವಾನಿಸಿದೆ. 10ನೇ ತರಗತಿ ತೇರ್ಗಡೆಯಾಗಿರುವ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದಾಗಿದ್ದು, ಆರು ವಾರಾಂತ್ಯಗಳಲ್ಲಿ ರಂಗಭೂಮಿಗೆ ಸಂಬಂಧಪಟ್ಟ ಪ್ರಸಾದನ, ಬೆಳಕು, ರಂಗಸಜ್ಜಿಕೆ, ನಟನೆ, ನಿರ್ದೇಶನ ಮುಂತಾದ ಎಲ್ಲ ವಿಭಾಗಗಳ ಬಗ್ಗೆ ನುರಿತ ರಂಗತಜ್ಞರು ತಿಳಿಸಲಿದ್ದಾರೆ. ಅರ್ಜಿಗಳಿಗೆ ಮತ್ತು ಮಾಹಿತಿಗೆ 23300967, 9844152967. WWW.vijayanagrabimba.com

ಪ್ರತಿಭೋತ್ಸವ
ಶ್ರೀಸತ್ಯಸಾಯಿ ಸಾಂಸ್ಕೃತಿಕ ಮತ್ತು ಸಾಮಾಜಿಕ ಕೇಂದ್ರವು ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಮತ್ತು ಪ್ರತಿಭೋತ್ಸವವನ್ನು ಜು.7ರಂದು ಹಮ್ಮಿಕೊಂಡಿದೆ. ಸ್ಪರ್ಧೆಗಳು ಸಬ್ ಜೂನಿಯರ್, ಜೂನಿಯರ್, ಮತ್ತು ಸೀನಿಯರ್ ವಿಭಾಗಗಳಲ್ಲಿದ್ದು ಆಸಕ್ತ ಅರ್ಹರು ಪಾಲ್ಗೊಳ್ಳಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಎಚ್.ಎಂ.ಸತ್ಯ- 8892219366, ಟಿ.ಎ.ನೀಲಕಂಠ ಅಡಿಗ 9341235504.

ಬಾಲ್ಯವಿವಾಹ: ಸೂಕ್ತ ಕ್ರಮಕ್ಕೆ ಶಿಫಾರ್ಸು
ರಾಮನಗರ: 
ತಾಲೂಕಿನ ರಾಂಪುರದ ಇರುಳಿಗರ ಹಾಡಿಯಲ್ಲಿ ನಡೆದ ಬಾಲ್ಯ ವಿವಾಹ ಸಂಬಂಧ ಪ್ರಕರಣ ದಾಖಲಿಸಿಕೊಂಡು, ಸೂಕ್ತ ಕ್ರಮ ಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಕ್ಕಳ ರಕ್ಷಣಾ ಸಮಿತಿ ಶಿಫಾರ್ಸು ಮಾಡಿದೆ. ಗ್ರಾಮದ 17 ವರ್ಷದ ಬಾಲಕ ಮತ್ತು 11ರ ಬಾಲಕಿ ವಿವಾಹ ಬೆಳಕಿಗೆ ಬಂದ ಬಳಿಕ ಮಕ್ಕಳ ರಕ್ಷಣಾ ಸಮಿತಿ ಅಧಿಕಾರಿ ಕೆ.ರಾಧಾ ವಿಚಾರಣೆ ನಡೆಸಿದ್ದರು. ಬಾಲಕಿಯನ್ನು ಮುಂದಿನ ವ್ಯಾಸಂಗಕ್ಕಾಗಿ ಮಂಡ್ಯದ ಬಾಲ ಮಂದಿರಕ್ಕೆ ಕಳುಹಿಸಿದ್ದರು. ವಿವಾಹವಾಗಿರುವ ಬಾಲಕ ಕೂಡ ಅಪ್ರಾಪ್ತ. ಆತನನ್ನು ವಶಕ್ಕೆ ತೆಗೆದುಕೊಳ್ಳಬೇಕು. ವಿವಾಹ ನೆರವೇರಿಸಿರುವವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಶಿಫಾರ್ಸಿನಲ್ಲಿ ತಿಳಿಸಿರುವ ಬಗ್ಗೆ ಮೂಲಗಳು ದೃಢಪಡಿಸಿವೆ.

ತರಬೇತಿ ಪ್ರಯೋಜನ ಪಡೆಯಿರಿ: ಬಿ.ಪಿ. ಕಿಣಿ
ರಾಮನಗರ:
ಕೌಶಲ್ಯ ಆಧಾರಿತ ತರಬೇತಿಯಲ್ಲಿ ಕಲಿತದ್ದನ್ನು ಸದುಪಯೋಗಪಡಿಸಿಕೊಂಡು ಯಶಸ್ವಿ ಉದ್ದಿಮೆದಾರರಾಗುವಂತೆ ಕೆನರಾ ಬ್ಯಾಂಕ್ ಪ್ರಾಯೋಜಿತ ಎಂಡಿಪೈ ಗ್ರಾಮೀಣಾಭಿವೃದ್ಧಿ ತರಬೇತಿ ಸಂಸ್ಥೆ ನಿರ್ದೇಶಕ ಬಿ.ಪಿ.ಕಿಣಿ ಕರೆ ನೀಡಿದರು. ಕೆನರಾ ಬ್ಯಾಂಕ್ ಪ್ರಾಯೋಜಿತ ಎಂಡಿಪೈ ಗ್ರಾಮೀಣಾಭಿವೃದ್ಧಿ ತರಬೇತಿ ಸಂಸ್ಥೆಯಿಂದ ತಾಲೂಕಿನ  ವಾಜರಹಳ್ಳಿಯಲ್ಲಿ ಮಹಿಳೆಯರಿಗಾಗಿ ನಡೆಸಲಾದ 21 ದಿನಗಳ ವಸ್ತ್ರವಿನ್ಯಾಸ ತರಬೇತಿ ಸಮಾರಂಭದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಅವಲಂಬನೆ ನಿಟ್ಟಿನಲ್ಲಿ ಸಂಸ್ಥೆಯು ಹತ್ತು ಹಲವು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಶಿಬಿರಾರ್ಥಿಗಳು ಇದನ್ನು ಸದ್ಬಳಕೆ ಮಾಡಿಕೊಂಡು, ಸ್ವಾವಲಂಬಿಗಳಾಗಬೇಕು ಎಂದು ತಿಳಿಸಿದರು. ಕೆನರಾ ಬ್ಯಾಂಕ್ ಬಿಡದಿ ಶಾಖೆ ವ್ಯವಸ್ಥಾಪಕಿ ಯಶೋದಾ ನಾಗರಾಜ್ ಮಾತನಾಡಿ, ಈ ವಸ್ತ್ರ ವಿನ್ಯಾಸ ತರಬೇತಿ ಶಿಬಿರದಲ್ಲಿ ತರಬೇತಿ ಪಡೆದ ಮಹಿಳೆಯರಿಗೆ ಬ್ಯಾಂಕ್ ವತಿಯಿಂದ ಸಾಲ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದರು. ಬೆಂಗಳೂರಿನ ಕೆನರಾ ಬ್ಯಾಂಕ್ ನಿರೀಕ್ಷಕ ಅಶೋಕ್ ರೆಡ್ಡಿ, ಕೆಪಿಜೆ ಪ್ರಭು ಕರಕುಶಲ ತರಬೇತಿ ಸಂಸ್ಥೆ ನಿರ್ದೇಶಕ ಶೇಷಾದ್ರಿ, ಸಂಪನ್ಮೂಲ ವ್ಯಕ್ತಿಗಳಾದ ಪುಷ್ಪಾವತಿ, ಮಂಜುನಾಥ್, ಸಂದೀಪ್, ಮುನಿರಾಜು ಭಾಗವಹಿಸಿದ್ದರು.

ಸರ್ವೇಯರ್ ಮೇಲೆ ಹಲ್ಲೆ
ನೆಲಮಂಗಲ:
  ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದ್ದ ಜಮೀನನ್ನು ಅಳತೆ ಮಾಡಲು ಹೋಗಿದ್ದ ತಾಲೂಕು ಸರ್ವೆಯರ್ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿರುವ ಘಟನೆ ಪಟ್ಟಣದ ಸೊಂಡೆಕೊಪ್ಪ ರಸ್ತೆಯಲ್ಲಿ ಬುಧವಾರ ನಡೆದಿದೆ. ಹಲ್ಲೆಗೀಡಾದ ವ್ಯಕ್ತಿಯನ್ನು ತಾಲೂಕು ಸರ್ವೆಯರ್ ರಾಮಚಂದ್ರಪ್ಪ ಎಂದು ಗುರುತಿಸಲಾಗಿದೆ. ಈತನ ಮೇಲೆ ಮೋಹನ್ ಎಂಬಾತ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಈ ಬಗ್ಗೆ ಪೊಲೀಸರು ದೂರು ದಾಖಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement