ಪ್ರಜ್ಞಾವಂತರಿಂದ ಮಾತ್ರ ಸಮಸ್ಯೆ ನಿವಾರಣೆ
ಕ.ಪ್ರ.ವಾರ್ತೆ ನೆಲಮಂಗಲ ಜೂ.26
ಶಿಕ್ಷಣ ಕ್ಷೇತ್ರ ಅಭಿವೃದ್ಧಿಯಾದರೆ ವಿದ್ಯಾರ್ಥಿಗಳು ಪ್ರಜ್ಞಾವಂತರಾಗಿತ್ತಾರೆ. ಇದರಿಂದ ದೇಶದ ಸಾಕಷ್ಟು ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ಶಾಸಕ ಡಾ. ಕೆ.ಶ್ರೀನಿವಾಸಮೂರ್ತಿ ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬುಧವಾರ ಆರ್.ಎಂ.ಎಸ್.ಎ ಯೋಜನೆಯಡಿ ಶಾಲೆಯ ನೂತನ ಕಟ್ಟಡಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ತಾಲೂಕಿನ 7 ಸರ್ಕಾರಿ ಪ್ರೌಢಶಾಲೆಗಳಲ್ಲಿ 2.46 ಕೋಟಿ ವೆಚ್ಚದಲ್ಲಿ ಬೈರನಾಯಕನಹಳ್ಳಿ, ಬರದಿ, ದೊಡ್ಡಬೆಲೆ, ದೇವರ ಹೊಸಹಳ್ಳಿ ಮಾರಗೊಂಡನಹಳ್ಳಿ ಮತ್ತು ಸೋಲದೇವನಹಳ್ಳಿಯ ಪ್ರೌಢಶಾಲೆಗಳಲ್ಲಿ ಹೆಚ್ಚುವರಿ ಕಟ್ಟಡಗಳು, ಪ್ರತ್ಯೇಕ ವಿಜ್ಞಾನ ಪ್ರಯೋಗಾಲಯ ಕೊಠಡಿ, ಪ್ರತ್ಯೇಕ ಸಾಂಸ್ಕೃತಿಕ ಕೊಠಡಿ, ಗ್ರಂಥಾಲಯ ಕೊಠಡಿ, ಶೌಚಾಲಯ ಮತ್ತು ಕುಡಿವ ನೀರಿನ ವ್ಯವಸ್ಥೆ ಆರ್.ಎಂ.ಎಸ್.ಎ ಯೋಜನೆಯಡಿ ನೂತನವಾಗಿ ನಿರ್ಮಿಸಿ ಮಕ್ಕಳ ವ್ಯಾಸಂಗಕ್ಕೆ ಹೆಚ್ಚಿನ ಸೌಲಭ್ಯ ಒದಗಿಸಲಾಗುತ್ತಿದೆ. ಶಿಕ್ಷಕರು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ ಮಕ್ಕಳನ್ನು ದೇಶದ ಆಸ್ತಿಯಾಗಿಸಿ ಎಂದು ಶಿಕ್ಷಕರಿಗೆ ತಿಳಿಸಿದರು.
ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ರಾಜ್ಯದ ಶಿಕ್ಷಕರ ಗಮನ ಸೆಳೆದು ಹೆಸರು ಮಾಡಿತ್ತು. ಆದರೆ, ಕಳೆದ ವರ್ಷದಿಂದ ಜಿಲ್ಲೆಯ ಫಲಿತಾಂಶದಲ್ಲಿ ಹಿನ್ನಡೆಯಾಗಿದೆ. ಇದು ಮುಂದುವರಿಯದೆ ಮತ್ತೆ ಪ್ರಥಮ ಸ್ಥಾನದತ್ತ ಬರುವಂತೆ ಶಿಕ್ಷಕರು ಶ್ರಮ ವಹಿಸಿ ಜಿಲ್ಲೆ ಮತ್ತು ತಾಲೂಕಿಗೆ ಕೀರ್ತಿ ತರಬೇಕು ಎಂದರು.
ಅಧಿಕಾರಿಗಳು ಶಿಕ್ಷಕರಿಗೆ ಉತ್ತೇಜನ ನೀಡಿ ಪ್ರೋತ್ಸಾಹಿಸುವ ಕೆಲಸ ಆಗಬೇಕು. ಇದು ಸಹ ಮಕ್ಕಳ ಪರೀಕ್ಷಾ ಫಲಿತಾಂಶದ ಮೇಲೂ ಪ್ರಭಾವ ಬೀರುತ್ತದೆ. ಈ ಹಂತದಲ್ಲಿ ಅಧಿಕಾರಿಗಳ ಪಾತ್ರ ಮಹತ್ವವಾಗುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಾನಾಯಕ್ ಮಾತನಾಡಿ, ತಾಲೂಕಿನಲ್ಲಿ ಉತ್ತಮವಾಗಿ ಸ್ಪಂದಿಸುವ ಶಾಸಕರು ಮತ್ತು ತಾಲೂಕು ಮತ್ತು ಸ್ಥಳೀಯ ಮಟ್ಟದ ನಾಯಕರಿದ್ದಾರೆ ಇವರ ಮತ್ತು ಸಮುದಾಯದ ಸಹಕಾರವನ್ನು ಪಡೆದು ಶಾಲೆಯ ಅಭಿವೃದ್ಧಿ ಮತ್ತು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶಿಕ್ಷಕರು ಮುಂದಾಗಬೇಕು ಎಂದು ತಿಳಿಸಿದರು.
ತಾ.ಪಂ. ಅಧ್ಯಕ್ಷ ಪುಟ್ಟಣ್ಣ, ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ್, ಜಿ.ಪಂ. ಸದಸ್ಯರಾದ ಸುನಂದಾ ಶಿವಕುಮಾರ್, ರಾಮು, ವೇಣುಗೋಪಾಲ್, ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ವೆಂಕಟೇಶಪ್ಪ, ಜನ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.