ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ರಕ್ಷಿಸದಿದ್ದರೆ ಆತ್ಮಹತ್ಯೆ ಬೆದರಿಕೆ ಹಾಕಿದೆವು

Srinivasa Murthy VN
Updated On : 27 Jun 2013, 12:10 pm

- ಸು.ನಾ. ನಂದಕುಮಾರ್
ಕ.ಪ್ರ.ವಾರ್ತೆ ಚನ್ನಪಟ್ಟಣ ಜೂ.26

'ಸಂತ್ರಸ್ತರ ರಕ್ಷಣಾ ಕಾರ್ಯದಲ್ಲೂ ಮದರಾಸಿಗರು ಎಂದು ನಮಗೆ ತಾರತಮ್ಯ ತೋರಿದರು. ನೀವು ರಕ್ಷಣೆ ಮಾಡದಿದ್ದರೆ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಪ್ರತಿಭಟನೆ ನಡೆಸಿದ ಬಳಿಕವೇ ನಮ್ಮ ರಕ್ಷಣಾ ಕಾರ್ಯ ನಡೆಸಿದ್ದು...'
ಇವು ಉತ್ತರಾಖಂಡ್‌ನಲ್ಲಿ ಸಾವಿನ ಮನೆಯ ಕದ ತಟ್ಟಿ ಸುರಕ್ಷಿತವಾಗಿ ಮರಳಿದ ತಾಲೂಕಿನ ಸಮಾಜ ಸೇವಕ ವೆಂಕಟ ಸುಬ್ಬಯ್ಯಚೆಟ್ಟಿ ಅವರ ಅನುಭವದ ನುಡಿಗಳು.
ಕೇದಾರನಾಥ ಪ್ರವಾಸಕ್ಕೆ ತಮ್ಮ ಕುಟುಂಬದವರೊಂದಿಗೆ ತೆರಳಿ ಪ್ರವಾಹ ಪ್ರದೇಶದಿಂದ ಸುರಕ್ಷಿತವಾಗಿ ಮರಳಿರುವ ವೆಂಕಟಸುಬ್ಬಯ್ಯ ಚೆಟ್ಟಿ, ತಮ್ಮ ನಿವಾಸದಲ್ಲಿ 'ಕನ್ನಡಪ್ರಭ'ದೊಂದಿಗೆ ತಮ್ಮ ಪ್ರವಾಸದ ಅನುಭವ ಹಂಚಿಕೊಂಡರು.
ಗೌರಿಕುಂಡ್ ಪ್ರದೇಶದಲ್ಲಿ ನಾವಿದ್ದ ಸ್ಥಳಕ್ಕೆ ಸೇನೆ ಮತ್ತು ಉತ್ತರಾಖಂಡ್‌ನ ಸರ್ಕಾರವನ್ನು ಹೊರತುಪಡಿಸಿ ಬೇರ್ಯಾರೂ ಬಂದಿರಲಿಲ್ಲ. ಉತ್ತರ ಭಾರತದವರು, ಅಲ್ಲಿನ ಸ್ಥಳೀಯ ನಿವಾಸಿಗಳನ್ನು ಮೊದಲು ಪಾರು ಮಾಡಿದ ಸೇನೆ ನಮ್ಮನ್ನು 5 ದಿನದ ಬಳಿಕ ಗುಪ್ತಕಾಶಿಗೆ ಕರೆ ತಂದರು ಎಂದರು.
ಜೂ.15ರಂದು ಉಂಟಾದ ಪ್ರವಾಹದಿಂದಾಗಿ ನಾವೆಲ್ಲ ಅತಂತ್ರರಾದೆವು, ಮೊದಲ ದಿನ ನಮ್ಮನ್ನು ಲೆಕ್ಕ ಹಾಕಲು ಸೇನೆಯ ಒಬ್ಬ ಅಧಿಕಾರಿ ಬಂದಿದ್ದನ್ನು ಹೊರತುಪಡಿಸಿದರೆ ಮತ್ತಿನ್ಯಾವ ಅಧಿಕಾರಿಯೂ ನಮ್ಮತ್ತ ಸುಳಿಯಲಿಲ್ಲ. ಗೌರಿಕುಂಡ್‌ನಲ್ಲಿ 5 ದಿನ ನಾವು ಪ್ರಯಾಸದ ಬದುಕು ನಡೆಸಿದೆವು ಎಂದರು.
ಆತ್ಮಹತ್ಯೆಗೆ ಮುಂದಾಗಿದ್ದೆವು:  ಅಲ್ಲಿ ಉಳಿದುಕೊಂಡ ಪ್ರತಿಕ್ಷಣವೂ ನಮಗೆ ಯಾತನಾಮಯ ಎನಿಸಿತ್ತು. ರಕ್ಷಣೆ ವಿಷಯದಲ್ಲಿ ಸೇನೆ ನಮಗೆ ನಡೆಸುತ್ತಿರುವ ತಾರತಮ್ಯ ನಮ್ಮನ್ನು ಮಾನಸಿಕವಾಗಿ ಮತ್ತಷ್ಟು ಖಿನ್ನವಾಗಿಸಿತು.
ನಮಗಿಂತ ಸುರಕ್ಷಿತಸ್ಥಳದಲ್ಲಿದ್ದ ಸ್ಥಳೀಯ ನಿವಾಸಿಗಳನ್ನು ರಕ್ಷಿಸಿದ ಅಲ್ಲಿನ ರಕ್ಷಣಾ ಕಾರ್ಯಕರ್ತರು ನಾವು ಮದರಾಸಿಗರೆಂದು ನಾಲ್ಕು ದಿನ ಮಲಗಲೂ ಸಾಧ್ಯವಿಲ್ಲದ ಸ್ಥಳದಲ್ಲಿ ಇರಿಸಿ ನಾವಿದ್ದ ಸ್ಥಳಕ್ಕೆ  ಯಾವುದೇ ಸೌಲಭ್ಯ ದೊರಕಿಸದಿದ್ದು ನಿಜಕ್ಕೂ ವಿಷಾದನೀಯ.
ಈ ಬೆಳವಣಿಗೆಯಿಂದ ಕುಪಿತಗೊಂಡ ನಾವು, 'ನೀವು ನಮ್ಮನ್ನು ರಕ್ಷಣೆ ಮಾಡದಿದ್ದಲ್ಲಿ ಆತ್ಮಹತ್ಯೆ ಮಾಡಿ ಕೊಳ್ಳುತ್ತೇವೆ...' ಎಂದು ಎಚ್ಚರಿಸಿದೆವು. ಬಳಿಕ ನಮ್ಮನ್ನು ಗುಪ್ತಕಾಶಿಗೆ ಹೆಲಿಕ್ಯಾಪ್ಟರ್ ಮೂಲಕ ಕರೆ ತಂದರು. ಅಲ್ಲಿಂದ ನಮಗೆ ಉತ್ತಮ ಸೌಕರ್ಯ ದೊರೆಯಿತು ಎಂದರು.
ಅನಾಥರಾದೆವು:  ನಾವೆಂದೂ ಕಾಣದ ಪ್ರವಾಹವದು. ಒಂದೆಡೆ ಗಂಗೆಯ ರುದ್ರ ನರ್ತನಕ್ಕೆ ಗೌರಿಕುಂಡ್‌ನಲ್ಲಿನ ನಿರ್ಮಾಣಗಳು ನೆಲಸಮವಾಗುತ್ತಿದ್ದರೆ, ಮತ್ತೊಂದೆಡೆ ಭಾಷೆ ಗೊತ್ತಿಲ್ಲದ ಅಲ್ಲಿನವರ ಅನಾದರಕ್ಕೆ ತುತ್ತಾಗಿ ಮುಂದೇನು ಎಂಬ ಆತಂಕದ ಪ್ರವಾಹಕ್ಕೆ ಸಿಲುಕಿದ್ದೆವು. ಅಲ್ಲಿನ ನಮ್ಮವರ ಬದುಕು ನಿಜಕ್ಕೂ ಯಾತನಾಮಯ ವೆನಿಸಿತ್ತು.
ನಾನು ಕನ್ನಡಿಗರು ಸೇರಿದಂತೆ ದಕ್ಷಿಣ ಭಾರತೀಯರನ್ನು ವಿವಿಧೆಡೆ ಹುಡುಕಿ ಒಂದೆಡೆಗೆ ಸೇರಿಸಲು ಮುಂದಾದೆ. ಸುಮಾರು 80 ಮಂದಿ ಕನ್ನಡಿಗರು, ತೆಲುಗರು ಸೇರಿದಂತೆ ವಿವಿಧ ದಕ್ಷಿಣ ಭಾರತೀಯರು ನಮ್ಮ ಜತೆ ಸೇರಿದರು ಅವರಿಗೆಲ್ಲ ನಾನು ಸ್ಥಳೀಯವಾಗಿ ಆಹಾರ ಸಿಗುವಂತೆ ನೋಡಿಕೊಂಡೆನು. ಅಲ್ಲದೆ, ಸ್ವತಃ ವೈದ್ಯೆಯಾಗಿದ್ದ ನನ್ನ ಪತ್ನಿ ಮೂಲಕ ಚಿಕಿತ್ಸೆ ಕೊಡಿಸಿದೆ ಎಂದು ವಿವರಿಸಿದರು.
ಕಣ್ಣೆದುರಿಗೇ ಹರಿದು ಬಂತು ಪ್ರವಾಹ:  ಜೂ.14ರಂದು ಕೇದಾರನಾಥಕ್ಕೆ ತೆರಳಲು ಮುಂದಾದೆವಾದರೂ ಮಳೆ ತೀವ್ರ ಗೊಂಡ ಪರಿಣಾಮ ನಾವು ಉಳಿದುಕೊಂಡಿದ್ದೆವು. ಯಾತ್ರಿ ನಿವಾಸದಲ್ಲೇ ತಂಗ ಬೇಕಾಯಿತು. ಅಂದು ಸಂಜೆ ಬಿಸಿನೀರ ಬುಗ್ಗೆಯಲ್ಲಿ ಸ್ನಾನ ಮುಗಿಸಿ ನಮ್ಮ ಕುಟುಂಬದ 22 ಮಂದಿ ಸದಸ್ಯರೂ ಮೇಲೆ ಬಂದು ನಿಂತೆವು. ನಾವು ಮೈ ಒರೆಸಿಕೊಳ್ಳುತ್ತಿದ್ದಂತೆ ಮೇಘಸ್ಫೋಟ ಸಂಭವಿಸೇಬಿಟ್ಟಿತು. ನೋಡ ನೋಡುತ್ತಿದ್ದಂತೆ ಹರಿದು ಬಂದ ಪ್ರವಾಹದಲ್ಲಿ ನೂರಾರು ಹೆಣಗಳು ತೇಲಿಬಂದವು. ನಾವು ತೆರಳಿದ್ದ ನಿರ್ಮಲ್ ಟ್ರಾವೆಲ್ಸ್‌ನ ಗೈಡ್ ನಾರಾಯಣ ಮತ್ತು ನಾನು 15ಕ್ಕೂ ಹೆಚ್ಚು ಮಂದಿಯನ್ನು ಪ್ರವಾಹದಿಂದ ಪಾರು ಮಾಡಿದೆವು. ಆದರೆ, ಪ್ರವಾಹ ತೀವ್ರ ಗೊಂಡ ಪರಿಣಾಮ ನಾವು ಹಿಂದಿರುಗಿದೆವು.
ಮೊದಲ ದಿನ ನನ್ನ ಕಣ್ಣಮುಂದೆ ನೂರಾರು ಹೆಣಗಳು ಪ್ರವಾಹದಲ್ಲಿ ತೇಲಿ ಹೋಯಿತು, ಕಲ್ಲುಗಳು ಬೆಂಡಿನ ರೀತಿಯಲ್ಲಿ ಹೊರಳುತ್ತಿದ್ದವು. ನೂರಾರು ಕಾರು, ಹತ್ತಾರು ಬಸ್ಸುಗಳು ಗಂಗೆಯ ಮಡಿಲಲ್ಲಿ ಕೊಚ್ಚಿಹೋದವು ನಂತರ ನಾನು ಹೆಣದ ರಾಶಿಯನ್ನೇ ನೋಡಿದೆ ಎಂದು ಪ್ರವಾಹದ ಭೀಭತ್ಸವನ್ನು ವಿವರಿಸಿದರು.
ದೋಚಿದವರು ಕೂಲಿಗಳು:  ಪ್ರವಾಹಕ್ಕೆ ಸಿಲುಕಿದ ಯಾತ್ರಾರ್ಥಿಗಳ ಬಗ್ಗೆ ಸ್ಥಳೀಯ ನಿವಾಸಿಗಳು ಸಹಕಾರ ಮನೋಭಾವದಿಂದಲೇ ವರ್ತಿಸಿದರು. ಆದರೆ, ಪ್ರವಾಸಿಗರಿಂದ ಹಣ ದೋಚಿದ್ದು, ಆಹಾರ ಮೊದಲಾದ ವಸ್ತುಗಳು ಸಿಗದಂತೆ ಮಾಡಿದ್ದು ಕೂಲಿ ಕೆಲಸಕ್ಕೆಂದು ಹೊರಗಿನಿಂದ ಬಂದು ಅಲ್ಲಿ ನೆಲೆಸಿರುವವರು. ಸ್ಥಳೀಯರು ನಮಗೆ ಎಲ್ಲಾ ರೀತಿಯಲ್ಲಿ ಸಹಕರಿಸಿದರು ಎಂದು ತಾವು ಕಂಡ ಅಲ್ಲಿನ ಪರಿಸ್ಥಿತಿ, ಅನುಭವ ಹಂಚಿಕೊಂಡರು.
ಮತ್ತೆ ಯಾತ್ರೆ ಮಾಡುತ್ತೇನೆ:  ಉತ್ತರಾಖಂಡ್‌ನ ಜಲಪ್ರಳಯವನ್ನು ನಾನು ಕಾಣುವಂತಾಗಿದ್ದರಿಂದ ನನ್ನಲ್ಲಿ ಇನ್ನಷ್ಟು ಆತ್ಮಸ್ಥೈರ್ಯ ತುಂಬಿದೆ. ಮತ್ತೆ ಕೇದಾರನಾಥ, ಬದರೀನಾಥ, ಯಮುನೋತ್ರಿ ಯಾತ್ರೆ ಮಾಡಬೇಕೆಂಬ ಹೆಬ್ಬಯಕೆ ಇದೆ. ದೇವಾಲಯದ ಬಾಗಿಲು ಎಂದು ತೆರೆಯುತ್ತದೋ, ಅಂದೇ ನಾನು ಅಲ್ಲಿಗೆ ತೆರಳುತ್ತೇನೆ ಎಂದು ತಿಳಿಸಿದರು.
ಎಲ್ಲರೂ ಧೈರ್ಯ ತುಂಬಿದರು: ಬಾರ್ ಕೌನ್ಸಿಲ್ ಮನವಿ ಮೇರೆಗೆ ಹೈಕೋರ್ಟ್ ನ್ಯಾಯಮೂರ್ತಿಗಳು, ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕಾರ್ಯಾಲಯದ ಅಧಿಕಾರಿ, ಕರ್ನಾಟಕದಿಂದ ಪರಿಹಾರ ಕಾರ್ಯನಿರ್ವಹಣೆಗೆ ನಿಯೋಜನೆಗೊಂಡಿದ್ದ ನವೀನ್‌ರಾಜ್ ಸಿಂಗ್, ಇಲ್ಲಿನ ಶಾಸಕ ಸಿ.ಪಿ.ಯೋಗೇಶ್ವರ್ ಸೇರಿದಂತೆ ಎಲ್ಲರೂ ಕರೆ ಮಾಡಿ ನನಗೆ ಧೈರ್ಯ ತುಂಬಿದರು ಎಂದು ಹೇಳಿದರು.

ನಾವೆಂದೂ ಕಾಣದ ಪ್ರವಾಹವದು. ಒಂದೆಡೆ ಗಂಗೆಯ ರುದ್ರ ನರ್ತನಕ್ಕೆ ಗೌರಿಕುಂಡ್‌ನಲ್ಲಿನ ನಿರ್ಮಾಣಗಳು ನೆಲಸಮವಾಗುತ್ತಿದ್ದರೆ, ಮತ್ತೊಂದೆಡೆ ಭಾಷೆ ಗೊತ್ತಿಲ್ಲದ ಅಲ್ಲಿನವರ ಅನಾದರಕ್ಕೆ ತುತ್ತಾಗಿ ಮುಂದೇನು ಎಂಬ ಆತಂಕದ ಪ್ರವಾಹಕ್ಕೆ ಸಿಲುಕಿದ್ದೆವು. ನಾನು ಕನ್ನಡಿಗರು ಸೇರಿದಂತೆ ದಕ್ಷಿಣ ಭಾರತೀಯರನ್ನು ವಿವಿಧೆಡೆ ಹುಡುಕಿ ಒಂದೆಡೆಗೆ ಸೇರಿಸಲು ಮುಂದಾದೆ. ಸುಮಾರು 80 ಮಂದಿ ಕನ್ನಡಿಗರು, ತೆಲುಗರು ಸೇರಿದಂತೆ ವಿವಿಧ ದಕ್ಷಿಣ ಭಾರತೀಯರು ನಮ್ಮ ಜತೆ ಸೇರಿದರು ಅವರಿಗೆಲ್ಲ ನಾನು ಸ್ಥಳೀಯವಾಗಿ ಆಹಾರ ಸಿಗುವಂತೆ ನೋಡಿಕೊಂಡೆನು. ಅಲ್ಲದೆ, ಸ್ವತಃ ವೈದ್ಯೆಯಾಗಿದ್ದ ನನ್ನ ಪತ್ನಿ ಡಾ.ಶೈಲಜಾ ಮೂಲಕ ಚಿಕಿತ್ಸೆ ಕೊಡಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement