ಸಮಾಜ ಸೇವೆಯಿಂದ ಆತ್ಮಸಂತೋಷ ಹೊಂದಲು ಸಾಧ್ಯ: ಪ್ರಕಾಶ್ ಅಭಿಮತ
ಕ.ಪ್ರ.ವಾರ್ತೆ, ನೆಲಮಂಗಲ, ಜೂ.26
ಆತ್ಮ ಸಂತೋಷ ಮತ್ತು ಧನ್ಯತೆಯ ಭಾವನೆಯನ್ನು ಹೆಚ್ಚಾಗಿ ಸಮಾಜ ಸೇವೆ ಮಾಡುವುದರಿಂದ ಹೊಂದಲು ಸಾಧ್ಯ ಎಂದು ಅಗಳಕುಪ್ಪೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಎಲ್.ಎಸ್.ಪ್ರಕಾಶ್ ತಿಳಿಸಿದರು.
ತಾಲೂಕಿನ ಕಲ್ಲನಾಯ್ಕನಹಳ್ಳಿ ಗ್ರಾಮದಲ್ಲಿ ಬುಧವಾರ ನೂತನವಾಗಿ ನಿರ್ಮಿಸಿದ್ದ ಗ್ರಾಮ ದೇವತೆ ಮಾರಮ್ಮ ದೇಗುಲ ಉದ್ಘಾಟಿಸಿ ಮಾತನಾಡಿದ ಅವರು, ದೇವಾಲಯ ನಿರ್ಮಾಣ ಮಾಡಬೇಕೆಂಬ ಹಂಬಲ ಎಲ್ಲರಲ್ಲಿಯೂ ಬರುವುದಿಲ್ಲ. ದೇವಾಲಯ ನಿರ್ಮಾಣ ಮಾಡುವುದರಿಂದ ಸಿಗುವಷ್ಟು ಪುಣ್ಯ ಬೇರೆ ಯಾವುದೇ ಸಮಾಜ ಸೇವೆಯಲ್ಲೂ ಸಿಗುವುದಿಲ್ಲ. ಈ ಕಾರ್ಯಕ್ರಮದಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿ ದೇವಾಲಯ ನಿರ್ಮಾಣ ಮಾಡಿರುವ ಗೋವಿಂದರಾಜು ಕುಟುಂಬದವರ ಸೇವೆ ಅಮೂಲ್ಯವಾದದ್ದು ಎಂದರು.
ಶಾಲೆ, ದೇವಸ್ಥಾನ, ಆಸ್ಪತ್ರೆ, ಗ್ರಂಥಾಲಯ ಸೇರಿದಂತೆ ಎಲ್ಲವನ್ನು ರಕ್ಷಿಸಿಕೊಳ್ಳುವ ಜವಾಬ್ದಾರಿ ಗ್ರಾಮಸ್ಥರ ಮೇಲಿರುತ್ತದೆ ಎಂದರು.
ದೇವಾಲಯ ನಿರ್ಮಾಣಕ್ಕೆ ಕಾರಣರಾದ ಗೋವಿಂದರಾಜು ಮಾತನಾಡಿ, ಬಡವರ ಬಗ್ಗೆ ಕಾಳಜಿ ಹೊಂದಿದ್ದ ನಮ್ಮ ತಂದೆ ದಿವಗಂತ ಕೆಂಚಪ್ಪ ಅವರ ಆದರ್ಶದಂತೆ ನಾನು ಸಹ ಸಮಾಜ ಸೇವೆ ಮಾಡಬೇಕೆಂಬ ಹಂಬಲದಿಂದ ದೇವಾಲಯ ನಿರ್ಮಿಸಲು ಪ್ರೇರಣೆಯಾಯಿತು ಎಂದರು.
ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷೆ ಜಯಮ್ಮ, ಗ್ರಾ.ಪಂ. ಮಾಜಿ ಅಧ್ಯಕ್ಷ ಕಸಬಾ ನಿಜಗಲ್ ಸಿದ್ದರಾಜು, ಲಕ್ಕೂರು ತೋಟದ ಕೃಷ್ಣಪ್ಪ, ಶಿಕ್ಷಕರಾದ ಬಿ.ರವಿಕುಮಾರ್, ವಿರೂಪಾಕ್ಷ, ಮುಖಂಡರಾದ ಗೋಪಾಲಯ್ಯ, ಕಿಟ್ಟಿ, ನಾಗೇಶ್, ನಾಗರಾಜು ಇದ್ದರು.