ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಐಟಿಐಆರ್‌ನಿಂದ ತಪ್ಪಲ್ಲ ಕಂಟಕ

Srinivasa Murthy VN
Updated On : 28 Jun 2013, 12:21 pm

-ಕೆರೆ ಮಂಜುನಾಥ್
ಕ.ಪ್ರ.ವಾರ್ತೆ ಬೆಂಗಳೂರು ಜೂ.27
ಅಭಿವೃದ್ಧಿ ಎಂದರೆ ರೈತರು, ಅರಣ್ಯ, ಕೃಷಿ, ಜಲಮೂಲಗಳ ಬಲಿಯೇ?
ಸರ್ಕಾರದ ಇತ್ತೀಚಿನ ಯೋಜನೆಗಳು ಇದಕ್ಕೇ ಹೌದೌದು ಎನ್ನುತ್ತಿವೆ. ಅದಕ್ಕೇ ಮಾಹಿತಿ ತಂತ್ರಜ್ಞಾನದ ಅಭಿವೃದ್ಧಿಗಾಗಿ 29 ಗ್ರಾಮಗಳು, ಅರ್ಕಾವತಿ ನದಿ ಮೂಲವನ್ನೇ ಸಮಾಧಿ ಮಾಡಲು ಸರ್ಕಾರ ಸಜ್ಜಾಗುತ್ತಿದೆ. ಅಲ್ಲದೆ, ವಿಶ್ವವಿಖ್ಯಾತ ನಂದಿಬೆಟ್ಟಕ್ಕೂ ಇದರಿಂದ ಕಂಟಕ ತಪ್ಪೊದಿಲ್ಲ.
ಕೇಂದ್ರ ಸರ್ಕಾರದಿಂದಲೂ ಸಮ್ಮತಿ ಪಡೆದು ಬಂದಿರುವ ಐಟಿಐಆರ್ ಇದೀಗ ಬೆಂಗಳೂರು ಗ್ರಾಮಾಂತರ ಎರಡು ತಾಲೂಕುಗಳನ್ನು ಬಹುತೇಕ ಆಪೋಶನ ತೆಗೆದುಕೊಳ್ಳಲಿದೆ. ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ 29 ಗ್ರಾಮಗಳು ಐಟಿಐಆರ್‌ಗಾಗಿ ಬಲಿಯಾಗಬೇಕಿದೆ. ಏಕೆಂದರೆ ಈ ಯೋಜನೆಗಾಗಿ 12 ಸಾವಿರ ಎಕರೆ ಭೂಮಿ ಸ್ವಾಧೀನವಾಗಲಿದೆ. ಸುಮಾರು 40 ಚದರ ಕಿಲೋಮೀಟರ್.
ರೈತರ ವಿರೋಧದ ನಡುವೆ ಐಟಿಐಆರ್‌ಗೆ ಚಾಲನೆ ನೀಡುವ ಪ್ರಕ್ರಿಯೆ ಆರಂಭವಾಗಿದೆ. ರೈತರ ಒಂದಿಂಚು ಭೂಮಿಯನ್ನೂ ಬಿಡಲೊಲ್ಲೆವು. ರೈತರಿಗಾಗುವ ಅನ್ಯಾಯ ಸಹಿಸುವುದಿಲ್ಲ ಎಂದು ಪ್ರತಿಪಕ್ಷದಲ್ಲಿದ್ದಾಗ ಕೂಗಾಡುತ್ತಿದ್ದ ಕಾಂಗ್ರೆಸ್, ಇದೀಗ ಅಧಿಕಾರಕ್ಕೆ ಬಂದ ಮೇಲೆ ರೈತ ಬಗೆಗಿನ ಹಿತಾಸಕ್ತಿಗೆ ಎಳ್ಳುನೀರು ಬಿಟ್ಟಂತಾಗಿದೆ. ಅದಕ್ಕೇ ಒಂದು ಲಕ್ಷ ಕೋಟಿ ಬಂಡವಾಳ ಹರಿದುಬರುತ್ತದೆ ಎಂದು 29 ಗ್ರಾಮಗಳನ್ನು ಸಮತಟ್ಟಾಗಿಸಲು ಹೊರಟಿದೆ.
ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಐಟಿಐಆರ್ ಯೋಜನೆ ರೂಪುಗೊಂಡಿತ್ತು. ಇದಕ್ಕೆ ಸ್ಥಳೀಯವಾಗಿ ರೈತರಿಂದ ಸಾಕಷ್ಟು ಪ್ರತಿರೋಧ ವ್ಯಕ್ತವಾಗಿತ್ತು. ಆದರೆ, ಈ ಯೋಜನೆಗೆ ಕೇಂದ್ರ ಸರ್ಕಾರ ಸಮ್ಮತಿಸಬೇಕಲ್ಲಾ ಎಂದು ಸಮಾಧಾನಪಡಿಸಲಾಗಿತ್ತು. ಈಗ ಅದೂ ಲಭ್ಯವಾಗಿದೆ. ಗ್ರಾಮೀಣ ಸೊಗಡಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 12 ಸಾವಿರ ಎಕರೆ ಹೈಟೆಕ್ ಪ್ರದೇಶವಾಗಲಿದೆ.
ಇಂತಹ ಹೈಟೆಕ್ ಪ್ರದೇಶಕ್ಕಾಗಿಯೇ ಗ್ರಾಮಗಳು ನೆಲಸಮಗೊಳ್ಳುವ ಜತೆಗೆ ಅರ್ಕಾವತಿ ನದಿಯೂ ತನ್ನ ಮೂಲ ಕಳೆದುಕೊಳ್ಳಲಿದೆ. ಅರ್ಕಾವತಿಯ ಜೀವವಾಗಿರುವ ಕೆರೆಗಳ ಸರಣಿಯೇ ಐಟಿಐಆರ್‌ನಲ್ಲಿ ಜೀವ ಕಳೆದುಕೊಳ್ಳಲಿವೆ. ಅರ್ಕಾವತಿ ನದಿಯನ್ನು ಥೇಮ್ಸ್ ನದಿಯನ್ನಾಗಿ ಮಾಡುತ್ತೇವೆ ಎಂದು ಸಿಕ್ಕಕಡೆಯಲ್ಲೆಲ್ಲಾ ಹೇಳುತ್ತಿರುವವರಿಗೆ ಅರಿವೇ ಇಲ್ಲ. ನದಿಯ ಮೂಲಕ್ಕೇ ಧಕ್ಕೆಯಾದರೆ ಇನ್ನು ನದಿ ಉಳಿಯುವುದಾದರು ಹೇಗೆ? ಪುನಶ್ಚೇತನದ ಮಾತೆಲ್ಲಿಂದ ಬಂತು?
ನಂದಿಬೆಟ್ಟಕ್ಕೂ ಆತಂಕ: ಐಟಿಐಆರ್ ಯೋಜನೆ ನಂದಿಬೆಟ್ಟದ ತಪ್ಪಲನ್ನೂ ಆವರಿಸಿಕೊಳ್ಳಲಿದೆ. ಹೀಗಾಗಿ, ವಿಶ್ವವಿಖ್ಯಾತ ನಂದಿಬೆಟ್ಟವೂ ತನ್ನ ಕಳೆ ಕಳೆದುಕೊಳ್ಳಲಿದೆ. ಈ ಮೂಲಕ ನಂದಿಯಲ್ಲಿರುವ ಅರ್ಕಾವತಿ ನದಿಮೂಲವೂ ಮುಂದಿನ ಹಾದಿಯಿಲ್ಲದೆ ಐಟಿಐಆರ್‌ನಲ್ಲಿ ಕಲ್ಯಾಣಿಯಾಗಷ್ಟೇ ಉಳಿಯುವ ಆತಂಕವಿದೆ.
ನಂದಿಬೆಟ್ಟದ ತಪ್ಪಲಿನಲ್ಲಿ ಅಭಿವೃದ್ಧಿಯ ಆರ್ಭಟ ಹೆಚ್ಚಾದರೆ, ಆ ಬೆಟ್ಟದ ಅಸ್ತಿತ್ವಕ್ಕೇ ಧಕ್ಕೆ ಬಂದಂತಾಗುತ್ತದೆ. ಅಲ್ಲಿ ಅಳಿದುಳಿದಿರುವ ಪ್ರಾಣಿ- ಪಕ್ಷಿ ಅಲ್ಲಿಂದ ಕಾಲ್ಕೀಳಬೇಕಾಗಿದೆ. ನಿಸರ್ಗಕ್ಕೆ ಕೊಳ್ಳಿ ಇಟ್ಟು, ಪ್ರಕೃತಿದತ್ತ ಸಂಪನ್ಮೂಲಕ್ಕೆ ಗೋಡೆಕಟ್ಟಿ, ಅಭಿವೃದ್ಧಿಯ ಮೇಲುಶಿಖರ ಏರುವ ಶೋಕಿ ಬೇಕೇ?

ಐಟಿಐಆರ್ ಅಂದರೇನು?
ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಂಪನಿಗಳಿಗೆ ಒಂದೇ ಪ್ರದೇಶದಲ್ಲಿ ಸಕಲ ಸೌಲಭ್ಯ ಕಲ್ಪಿಸುವ ಯೋಜನೆಗೆ ಮಾಹಿತಿ ತಂತ್ರಜ್ಞಾನ ಹೂಡಿಕೆ ವಲಯ (ಐಟಿಐಆರ್) ಎಂದು ಹೆಸರಿಸಲಾಗಿದೆ. ಸಕಲ ಸೌಲಭ್ಯ ಎಂದರೆ ಮೂಲಸೌಕರ್ಯದಿಂದ ಹಿಡಿದು, ವಸತಿ ಪ್ರದೇಶ, ಸಾಗಣೆ ವ್ಯವಸ್ಥೆ, ಸಾರ್ವಜನಿಕರ ಲಭ್ಯತೆ, ಉತ್ಪಾದನೆ ಘಟಕ ಸೇರಿದಂತೆ ಆಡಳಿತ ಸೇವೆಗಳೂ ಇಲ್ಲಿರಬೇಕು. ಇದಕ್ಕಾಗಿ ಒಂದು ಸಮಗ್ರ ಟೌನ್‌ಶಿಪ್ ಕೂಡ ನಿರ್ಮಾಣವಾಗಬಹುದು.
ಈ ಯೋಜನೆಗಾಗಿ ಕನಿಷ್ಠ 40 ಚದರ ಕಿಮೀ ಭೂಮಿ ಅಗತ್ಯ. ಪ್ರಾಥಮಿಕ ಅಧಿಸೂಚನೆಯೂ ಆಗಿದೆ. ಇದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಮಾಹಿತಿ ಇಲಾಖೆಯ ಹಿರಿಯ ಅಧಿಕಾರಿಗಳು ಸೂಚಿಸಿರುವುದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉತ್ತರ ಭಾಗಕ್ಕೆ ಬರುವ ದೊಡ್ಡಬಳ್ಳಾಪುರ, ದೇವನಹಳ್ಳಿಯಿಂದ ದಾಬಸ್‌ಪೇಟೆವರೆಗಿನ 12 ಸಾವಿರ ಎಕರೆ ಭೂಮಿ.
2012- 2020 ಮತ್ತು 2020- 2032ರವರೆಗೆ ಎರಡು ಹಂತಗಳಲ್ಲಿ ಐಟಿಐಆರ್ ಯೋಜನೆ ಜಾರಿಯಾಗಲಿದೆ. ಎರಡು ಹಂತಗಳಿಂದ 2 ಲಕ್ಷ ಕೋಟಿ ವಹಿವಾಟು, 1.06 ಲಕ್ಷ ಕೋಟಿ ಬಂಡವಾಳ ಆಕರ್ಷಿಸಲಿದೆ. 12 ಲಕ್ಷ ಉದ್ಯೋಗಾವಕಾಶ, 28 ಲಕ್ಷ ಪರೋಕ್ಷ ಉದ್ಯೋಗಾವಕಾಶ ನಿರೀಕ್ಷಿಸಲಾಗಿದೆ.

ಯಾವ ಗ್ರಾಮಗಳಿಗೆ ಪೆಟ್ಟು?
ಐಟಿಐಆರ್‌ನಿಂದ ದೊಡ್ಡಬಳ್ಳಾಪುರ ಹಾಗೂ ದೇವಹಳ್ಳಿ ತಾಲೂಕಿಗೇ ಅತಿ ಹೆಚ್ಚು ಒಡೆತ. ಅಂದರೆ ಈ ಭಾಗದ ಹಳ್ಳಿಗಳೇ ಹೆಚ್ಚು ನೆಲಸಮವಾಗುವುದು. ಸ್ವಾಧೀನವಾಗುವ ಗ್ರಾಮಗಳ ಮಾಹಿತಿ ಹೀಗಿದೆ-
ದೊಡ್ಡಬಳ್ಳಾಪುರ- ಕೋನಘಟ್ಟ, ನಾಗದೇವನಹಳ್ಳಿ, ಗೋವಿಂದಪುರ, ಸೊಣ್ಣಪ್ಪನಹಳ್ಳಿ, ಶಿವಪುರ ಅಮಾನಿಕೆರೆ, ಶಿವಪುರ, ರಾಜಘಟ್ಟ, ರಾಜಘಟ್ಟ ಅಮಾನಿಕೆರೆ, ದಾಸಗೊಂಡನಹಳ್ಳಿ, ಲಿಂಗನಹಳ್ಳಿ.
ದೇವನಹಳ್ಳಿ- ವಿಶ್ವನಾಥಪುರ, ಕೊಯಿರಾ, ಮನಗೊಂಡನಹಳ್ಳಿ, ಚಿಕ್ಕಓಬನಹಳ್ಳಿ, ಮಾಯಸಂದ್ರ, ರಾಮನಾಥಪುರ, ಅರುವನಹಳ್ಳಿ, ವಾಜರಹಳ್ಳಿ, ಬೈರದೇನಳ್ಳಿ, ಗೂಡ್ಲಳ್ಳಿ, ಚಿಕ್ಕಗೊಲ್ಲಹಳ್ಳಿ, ಬೀರಸಂದ್ರ, ರಬ್ಬನಹಳ್ಳಿ, ಮೀಸಗಾನಹಳ್ಳಿ, ತೈಲಗೆರೆ, ಮನಗೊಂಡನಹಳ್ಳಿ, ಸೊಣ್ಣೇನಹಳ್ಳಿ.

 ಅರ್ಕಾವತಿ ನದಿ ಪುನಶ್ಚೇತನದ ಮಾತಾಗುತ್ತಿದೆಯೇ ವಿನಹ ಅದರ ಮೂಲವನ್ನು ರಕ್ಷಿಸಿಕೊಳ್ಳುವ ಕಾರ್ಯಮೂಲಮಟ್ಟದಲ್ಲಿ ಆಗುತ್ತಲೇ ಇಲ್ಲ. ಐಟಿಐಆರ್ ಯೋಜನೆ ಅರ್ಕಾವತಿ ನದಿಯ ಕೊಳ್ಳಕ್ಕೇ ಕೊಳ್ಳಿ ಇಡಲಿದೆ. ನದಿಯ ಸರಣಿ ಕೆರೆಗಳು ಇದರಿಂದ ಮುಚ್ಚಿಹೋಗಲಿವೆ. ನಾವು ಅಭಿವೃದ್ಧಿ ವಿರೋಧಿಗಳಲ್ಲ. ಆದರೆ, ಪ್ರಕೃತಿಯನ್ನು ಉಳಿಸಿಕೊಳ್ಳಬೇಕು, ಅರ್ಕಾವತಿ ನದಿ ಪುನಶ್ಚೇತನಗೊಳಿಸಬೇಕು, ರೈತರಿಗೆ ತೊಂದರೆ ಆಗಬಾರದು ಅಷ್ಟೇ. ಸರ್ಕಾರ ನೇರವಾಗಿ ರೈತರೊಂದಿಗೆ ಮಾತನಾಡಬೇಕಾದ ಅಗತ್ಯವಿದೆ.
ಟಿ ಶಿವರಾಂ, ಅರ್ಕಾವತಿ ನದಿ ಪುನಶ್ಚೇತನ ಹೋರಾಟ ಸಮಿತಿ ಸದಸ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement