'ಒತ್ತುವರಿ ಭೂಮಿ ತೆರವುಗೊಳಿಸಿ, ಬೇಲಿ ಹಾಕಿ'
ಮಾಗಡಿ: ಸರ್ಕಾರಿ ಒತ್ತುವರಿ ಭೂಮಿಯನ್ನು ಕೂಡಲೆ ತೆರವುಗೊಳಿಸಿ, ತಂತಿ ಬೇಲಿ ಹಾಕಿಸುವಂತೆ ಜಿಲ್ಲಾಧಿಕಾರಿ ಶ್ರೀರಾಮರೆಡ್ಡಿ ತಾಲೂಕು ತಹಶೀಲ್ದಾರ್‌ಗಳಿಗೆ ಆದೇಶಿಸಿದರು.
ಅವರು ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಸಾವನದುರ್ಗದ ನಾಡಪ್ರಭು ಕೆಂಪೇಗೌಡ ವನಧಾಮದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಕಂದಾಯಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಭೂದಾಹಿಗಳು ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಭೂಮಿ, ಕೆರೆಕಟ್ಟೆಗಳು ಗುಡಿ, ಗೋಪುರಗಳು, ಕೋಟೆ ಕೊತ್ತಲುಗಳು, ಗುಂಡು ತೋಪುಗಳುಗಳನ್ನು ನಿರ್ಧಾಕ್ಷಿಣ್ಯವಾಗಿ ತೆರವುಗೊಳಿಸುವ ಸರ್ವೇ ಕಾರ್ಯಾಚಾರಣೆ ಚುರುಕುಗೊಳಿಸಬೇಕು. ಒತ್ತುವರಿ ಭೂಮಿಗಳನ್ನು ಸರ್ಕಾರದ ವಶಕ್ಕೆ ಪಡೆದು ಕಾನೂನು ಬದ್ಧವಾಗಿ ತಂತಿ ಬೇಲಿ ಹಾಕಿಸಬೇಕು.ಹಾಗೊಂದು ವೇಳೆ ಮತ್ತೆ ಒತ್ತುವರಿಯಾದರೆ ತಹಶೀಲ್ದಾರ್‌ಗಳನ್ನು ನೇರವಾಗಿ ಹೊಣೆಗಾರಿಕೆ ಮಾಡಲಾಗುವುದು. ತಾಲೂಕಿನಲ್ಲಿ ಇರುವ ಪುರಾತನ ಪ್ರಸಿದ್ಧ ದೇವಾಲಯಗಳ ಪುಷ್ಕರಣಿಗಳನ್ನು ತಾಲೂಕುವಾರು ಗುರುತಿಸಿ ಪಟ್ಟಿ ತಯಾರಿಸಿ, ಆದಷ್ಟು ಬೇಗ ಜಿಲ್ಲಾಡಳಿತಕ್ಕೆ ಒಪ್ಪಿಸಬೇಕು. ಮುಜರಾಯಿ ದೇವಾಲಯದಲ್ಲಿ ಭಕ್ತರು ಸಲ್ಲಿಸುವ ಹುಂಡಿ ಹಣವನ್ನು ದೇವಾಲಯದ ಜೀರ್ಣೋದ್ಧಾರಕ್ಕೆ ಬಳಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್‌ಗಳಿಗೆ ಸೂಚಿಸಿದರು.
ಸಕ್ರಮಕ್ಕೆ ಕ್ರಮ... ಇರುಳಿಗ ಮತ್ತು ಬುಡಕಟ್ಟು ಜನಾಂಗಗಳು ಅರಣ್ಯ ಹಂಚಿನಲ್ಲಿ ಬಗರ್ ಹಕಂ ಸಾಗುವಳಿ ಮಾಡಿಕೊಂಡು ಜೀವಿಸುತ್ತಿರುವ ಬಡ ಕುಟುಂಬಗಳಿಗೆ ಜಮೀನನ್ನು ಖಾತೆ ಮಾಡಿಕೊಡುವ ಮೂಲಕ ಸಕ್ರಮಗೊಳಿಸಲು ಅಗತ್ಯ ಕ್ರಮ ವಹಿಸಬೇಕು. ಭೂ ಸ್ವಾಧೀನ ಪ್ರಕರಣಗಳನ್ನು ಆದಷ್ಟು ಬೇಗ ಇತ್ಯಾರ್ಥಗೊಳಿಸಲು ಸೂಚಿಸಲಾಗಿದೆ.ಎಲ್ಲೆಡೆ ಮಹಾಮಾರಿ ಡೆಂಘಿ ಜ್ವರ ಕಾಣಿಸಿಕೊಂಡಿದ್ದು, ಗ್ರಾಮ ನೈರ್ಮಲ್ಯ ಕಾಪಾಡಲು ಒತ್ತು ನೀಡುವಂತೆ ಸೂಚಿಸಲಾಗಿದೆ ಎಂದರಲ್ಲದೆ ಪ್ರಕೃತಿ ವಿಕೋಪಕ್ಕೆ ತುತ್ತಾದ ಕುಟುಂಬಗಳಿಗೆ ಶೀಘ್ರ ಪರಿಹಾರಕ್ಕೆ ಕ್ರಮ ವಹಿಸಬೇಕು ಎಂದು ಆದೇಶಿಸಿರುವುದಾಗಿ ತಿಳಿಸಿದರು.
ಜಿಲ್ಲಾದ್ಯಂತ ನಡೆಯುತ್ತಿದ್ದ ಅಕ್ರಮ ಮರಳು ಸಾಗಾಣಿಕೆ ದಂಧೆಗೆ ಶೇ.80 ಕಡಿವಾಣ ಹಾಕಲಾಗಿದೆ. ಅಕ್ರಮ ಮರಳು ಸಾಗಣಿಕೆ ತಡೆಗೆ ಮತ್ತೊಷ್ಟು ಕ್ರಮ ಕೈಗೊಳ್ಳಾಗುವುದು ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.
ಹಿಂದೆ ರಾಮನಗರ ಜಿಲ್ಲೆ 24ನೇ ಸ್ಥಾನದಲ್ಲಿತ್ತು. ಈಗ 14ನೇ ಸ್ಥಾನಕ್ಕೆ ತರಲಾಗಿದೆ. 1ನೇ ಸ್ಥಾನಕ್ಕೆ ತರಲು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಲು ಯತ್ನಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಶ್ರೀರಾಮರೆಡ್ಡಿ ತಿಳಿಸಿದರು. ಸ್ಥಾನಿಕ ಜಿಲ್ಲಾಧಿಕಾರಿ ಅರ್ಚನಾ, ಎಸಿ ಡಾ. ರಾಜೇಂದ್ರ ಪ್ರಸಾದ್, ಜಿಲ್ಲಾ ಯೋಜನಾ ನಿರ್ದೇಶಕಿ ಎಂ.ವಿ. ವೈಶಾಲಿ, ಧಾರ್ಮಿಕ ದತ್ತಿ ಆಯುಕ್ತ ನಂದಕುಮಾರ್, ಭೂಸ್ವಾಧೀನ ಅಧಿಕಾರಿ ಜಯಮಾಧವ್, ಮಾಗಡಿ ತಹಶೀಲ್ದಾರ್ ಡಾ. ಬಿ.ಆರ್. ಹರೀಶ್ ನಾಯಕ್, ಚನ್ನಪಟ್ಟಣ ತಹಶೀಲ್ದಾರ್ ಡಾ. ದಯಾನಂದ್, ಕನಕಪುರ ತಹಶೀಲ್ದಾರ್ ದಾಕ್ಷಾಯಿಣಿ, ರಾಮನಗರ ತಹಶೀಲ್ದಾರ್ ಹನುಮಂತರಾಯಪ್ಪ, ಮಾಗಡಿ ತಾ.ಪಂ.ಇಓ ಕೆ.ಬಿ. ಅಕ್ಕೋಜಿ, ಡಿಡಿಎಲ್‌ಆರ್ ಮರಿಸ್ವಾಮಿಗೌಡ, ಮಾಗಡಿ ಪುರಸಭೆ ಮುಖ್ಯಾಧಿಕಾರಿ ಆರ್. ಮಂಜುನಾಥ್, ಜಿಲ್ಲಾ ಸಿಎಂಸಿ ಶಣ್ಮುಗಪ್ಪ, ನಾಲ್ಕೂ ತಾಲೂಕಿನ ರೆವಿನ್ಯೂ ಅಧಿಕಾರಿಗಳುಇದ್ದ್ದರು.