ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕನಕಪುರ ಕಾರ್ಯಕ್ರಮದಲ್ಲಿ ಸಿಎಂಗೆ ಅವಮಾನ: ಆರೋಪ

Srinivasa Murthy VN
Updated On : 28 Jun 2013, 12:20 pm

ಕ.ಪ್ರ.ವಾರ್ತೆ ರಾಮನಗರ ಜೂ.27
ಜೂ.24ರಂದು ಕನಕಪುರದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಅವರ ಭಾವಚಿತ್ರವನ್ನು ಹಾಕದೇ ಅವಮಾನಿಸಲಾಗಿದೆ ಎಂದು ಅಹಿಂದ ಹೋರಾಟ ಸಮಿತಿ ಹಾಗೂ ಕುರುಬ ಸೇನೆ ಕಾರ್ಯಕರ್ತರು ಆರೋಪಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಹಿಂದ ಹೋರಾಟ ಸಮಿತಿಯ ರಾಜಗೋಪಾಲ್ ಮಾತನಾಡಿ, ವಸತಿ ಇಲಾಖೆ ಮತ್ತು ಜಿಲ್ಲಾಡಳಿತದ ಸಂಯುಕ್ತಾಶ್ರಯದಲ್ಲಿ ನಡೆದ ಬಸವ ವಸತಿ ಯೋಜನೆಯ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣಾ ಸಮಾರಂಭದಲ್ಲಿ ಹಾಕಿಸಿದ್ದ ಭಿತ್ತ ಪತ್ರ ಹಾಗೂ ಸಮಾರಂಭದ ವೇದಿಕೆ ಹಿಂಭಾಗದ ಬೃಹತ್ ಬ್ಯಾನರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರವನ್ನು ಹಾಕದೆ ಅವರನ್ನು ಅವಮಾನಿಸಲಾಗಿದೆ ಎಂದರು.
ಹಿಂದುಳಿದ ವರ್ಗದ ಪ್ರಮುಖ ನಾಯಕರಾಗಿರುವ ಸಿದ್ದರಾಮಯ್ಯ ಅವರು ಸಮಾಜವಾದಿ ಹಿನ್ನೆಲೆಯಿಂದ ಬಂದವರಾಗಿದ್ದು, ಹಿಂದುಳಿದ ವರ್ಗದವರ ಧನಿಯಾಗಿದ್ದಾರೆ. ಅಹಿಂದವನ್ನು ಕಟ್ಟಿ ಬೆಳೆಸಿದ ಮಹಾನ್ ನಾಯಕರು. ಹೋರಾಟಗಳನ್ನು ಮಾಡುತ್ತಲೇ ಮುಖ್ಯಮಂತ್ರಿ ಹುದ್ದೆಗೇರಿರುವ ಸಿದ್ದರಾಮಯ್ಯ ಅವರ ಭಾವಚಿತ್ರ ಹಾಕದೆ ಅವಮಾನಿಸಿರುವುದು ಇಡೀ ಅಹಿಂದ ಸಮಾಜವನ್ನು ಅವಮಾನಿಸಿದಂತಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರವನ್ನು ಉದ್ದೇಶಪೂರ್ವಕವಾಗಿಯೇ ಕೈಬಿಡಲಾಗಿದೆ. ಈ ಸಮಾರಂಭದಲ್ಲಿ ವಸತಿ ಸಚಿವ ಅಂಬರೀಶ್ ಅವರೇ ಉದ್ಘಾಟನೆ ನಡೆಸಿದ್ದರೂ ಇದರ ಬಗ್ಗೆ ಚಕಾರ ಎತ್ತಲಿಲ್ಲ. ಸಚಿವರಾಗಿದ್ದುಕೊಂಡು ಮುಖ್ಯಮಂತ್ರಿ ವಿರೋಧೀ ಭಾವನೆ ತಳೆದಿರುವ ವಸತಿ ಸಚಿವರನ್ನು ಕೂಡಲೇ ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ರಾಜಗೋಪಾಲ್ ಆಗ್ರಹಿಸಿದರು.
ಗೋಷ್ಠಿಯಲ್ಲಿ ಕುರುಬ ಸೇನೆಯ ಜಿಲ್ಲಾಧ್ಯಕ್ಷ ಸುಂದರೇಶ್, ಜಗದೀಶ್ವರರಾವ್, ಅನಂತ ರಾಮ್‌ಪ್ರಸಾದ್, ಸರದಾರ್ ಮತ್ತಿತರರು ಹಾಜರಿದ್ದರು.

ಇಂದು ಜನಸಂಪರ್ಕ ಸಭೆ
ದೇವನಹಳ್ಳಿ:  ಬೆಂಗಳೂರು ಗ್ರಾಮಾಂತರ ಜಿಲ್ಲೆ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಡಾ.ಎಂ.ಅಶ್ವಿನಿ  ಅಧ್ಯಕ್ಷತೆಯಲ್ಲಿ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಪರಿವೀಕ್ಷಣಾ ಮಂದಿರದಲ್ಲಿ ಜನ ಸಂಪರ್ಕ ಸಭೆ ಆಯೋಜಿಸಲಾಗಿದೆ.ಸಾರ್ವಜನಿಕರು ತಮ್ಮ ಕುಂದುಕೊರತೆಗಳ ಮನವಿ ಸಲ್ಲಿಸಬಹುದು ಎಂದು ತಹಸೀಲ್ದಾರ್ ತಿಳಿಸಿದ್ದಾರೆ.

ಬೈಯಂಡಹಳ್ಳಿ ಬಳಿ ವ್ಯಕ್ತಿ ಕೊಲೆ
ನೆಲಮಂಗಲ: ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬೈಯಂಡಹಳ್ಳಿಯಲ್ಲಿ ಬಡಾವಣೆಯೊಂದರಲ್ಲಿ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳು ಕೊಲೆಗೈದು ಸುಟ್ಟು ಹಾಕಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ. ಕೊಲೆಗೀಡಾದ ವ್ಯಕ್ತ ಅಪರಿಚಿತ ವ್ಯಕ್ತಿಯಾಗಿದ್ದು, ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement