ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಹಾಲು ರಸ್ತೆಗೆ ಚೆಲ್ಲಿ ಖಾಸಗಿ ಡೇರಿಗಳ ವಿರುದ್ಧ ಪ್ರತಿಭಟನೆ

Srinivasa Murthy VN
Updated On : 28 Jun 2013, 12:21 pm

ಕ.ಪ್ರ.ವಾರ್ತೆ ಚನ್ನಪಟ್ಟಣ ಜೂ.27
ಹಾಲು ಮಹಾಮಂಡಲದ ಉತ್ಪಾದಕರಿಗೆ ಸರ್ಕಾರ ಸಹಾಯಧನ ನೀಡುತ್ತಿರುವಂತೆ ಖಾಸಗಿ ಡೇರಿಗಳಿಗೆ ಹಾಲು ಹಾಕುತ್ತಿರುವ ಉತ್ಪಾದಕರಿಗೂ ಸಹಾಯಧನ ನೀಡಬೇಕೆಂದು ಆಗ್ರಹಿಸಿ ಹಟ್ಸನ್ ಡೇರಿಗಳಿಗೆ ಹಾಲು ಹಾಕುವ ಹಾಲು ಉತ್ಪಾದಕರು ಪಟ್ಟಣದಲ್ಲಿ ಹಾಲು ಬೀದಿಗೆ ಚೆಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಗಾಂಧಿ ಸ್ಮಾರಕ ಭವನದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಹಾಲು ಉತ್ಪಾದಕರು, ಸರ್ಕಾರ ಹಾಲು ಉತ್ಪಾದಕರಲ್ಲಿ ಇಬ್ಬಗೆ ನೀತಿ ತೋರುತ್ತಿದೆ. ಇದರಿಂದಾಗಿ ನಾವೆಲ್ಲ ಆತಂಕದ ಸ್ಥಿತಿಯಲ್ಲಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾಲು ಮಹಾಮಂಡಲಕ್ಕೆ ನೀಡುತ್ತಿರುವಂತೆ ನಮಗೂ ಪ್ರತಿ ಲೀಟರ್‌ಗೆ 4 ಸಹಾಯಧನ ನೀಡಬೇಕು. ಮಹಾಮಂಡಲ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಲಿನ ಡೇರಿಗಳಿಗೆ ಸಮಾನವಾದ ಬೆಲೆ ನಮ್ಮ ಡೇರಿಗಳು ನೀಡಲಾಗದ ಕಾರಣ  ಹಟ್ಸನ್ ಕಂಪನಿಯವರು ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಆರಂಭಿಸಿದ್ದ 5 ಶಿಥಿಲೀಕರಣ ಕೇಂದ್ರಗಳನ್ನು ಮುಚ್ಚುತ್ತಿದ್ದಾರೆ. ಇದರಿಂದಾಗಿ ಹಾಲು ಉತ್ಪಾದಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮುಖಂಡ ಸಿಂ.ಲಿಂ. ನಾಗರಾಜು ತಾಲೂಕಿನ ಸಾಕಷ್ಟು ಮಂದಿ ರೈತರು ಖಾಸಗಿ ಹಾಲಿನ ಡೇರಿಗಳಿಗೂ ಹಾಲು ಪೂರೈಕೆ ಮಾಡುತ್ತಿದ್ದಾರೆ. ಸರ್ಕಾರ ಎಲ್ಲಾ ರೈತರ ಬಗ್ಗೆಯೂ ಒಂದೇ ಧೋರಣೆ ಅನುಸರಿಸಬೇಕಾಗುತ್ತದೆ. ಸರ್ಕಾರ ಈ ಕೂಡಲೆ ರಾಜ್ಯದ ಎಲ್ಲಾ ಹಾಲು ಉತ್ಪಾದಕರಿಗೂ ಸಮಾನವಾಗಿ ಸಹಾಯಧನ ವಿತರಣೆ ಮಾಡಬೇಕೆಂದು ಆಗ್ರಹಿಸಿದರು.
ಡೇರಿ ಉದ್ಯಮಕ್ಕೆ ಖಾಸಗಿಯವರು ಸಾಕಷ್ಟು ಬಂಡವಾಳ ಹೂಡಿದ್ದಾರೆ. ಅವರು ಸರ್ಕಾರ ನೀಡುವಷ್ಟು ಸಹಾಯಧನ ಭರಿಸಲಾಗದೆ ಡೇರಿಗಳನ್ನು ಮುಚ್ಚುವ ಸ್ಥಿತಿಗೆ ತಲುಪಿದ್ದಾರೆ. ಇದರಿಂದಾಗಿ ನೂರಾರು ಕಾರ್ಮಿಕರು ಸಾಕಷ್ಟು ಸಾವಿರಾರು ರೈತರು ಬೀದಿಪಾಲಾಗಲಿದ್ದು, ಈ ಸಂಗತಿ ಸರ್ಕಾರ ಗಂಭೀರವಾಗಿ ಪರಿಗಣಿಸ ಬೇಕೆಂದು ಒತ್ತಾಯಿಸಿದರು.
ಇದುವರೆಗೆ ಅನುಸರಿಸುತ್ತಿರುವ ತಾರತಮ್ಯ ಸರಿಪಡಿಸಿ ಕೂಡಲೇ ಎಲ್ಲರಿಗೂ ಸಮಾನವಾಗಿ ಪ್ರೋತ್ಸಾಹಧನ ಹಂಚಿಕೆ ಮಾಡದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದರು.
ಜು.1 ರಿಂದ ಖಾಸಗಿ ಡೇರಿ ಬಂದ್:  ಮುಂದಿನ ತಿಂಗಳ 1 ರಿಂದ ಎಲ್ಲಾ ಹಾಲು ಶಿಥಿಲೀಕರಣ ಕೇಂದ್ರವನ್ನು ಮುಚ್ಚುವ ಜತೆಗೆ ಹಾಲು ಸಂಗ್ರಹಣೆ ಸ್ಥಗಿತಗೊಳಿಸುವುದಾಗಿ ಹಟ್ಸನ್ ಕಂಪನಿ ತಿಳಿಸಿದೆ. ಇದರಿಂದಾಗಿ ಹಾಲು ಉತ್ಪಾದಕರು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ.  ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಲಾಗಿದೆ. ಆದರೆ, ವ್ಯವಸ್ಥಾಪಕ ನಿರ್ದೇಶಕರು ವಿದೇಶದಲ್ಲಿದ್ದಾರೆ. ಅವರು ಮರಳಿದ ಬಳಿಕ ಎಲ್ಲರ ಜತೆ ಚರ್ಚಿಸಿ ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ ಡೇರಿ ಅಧಿಕಾರಿಗಳು ಇದೀಗ ಇದ್ದಕ್ಕಿದ್ದಂತೆ ಬಂದ್ ಮಾಡಿದ್ದಾರೆ. ಸರ್ಕಾರ ಈ ಕೂಡಲೇ ಮಧ್ಯ ಪ್ರವೇಶಿಸಿ ಪರಿಹಾರ ಕಲ್ಪಿಸಬೇಕೆಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಹಾರೊಕೊಪ್ಪ ಮಹೇಂದ್ರಕುಮಾರ್, ಸರಗೂರು ಪುಟ್ಟರಾಮು, ಗರಕಹಳ್ಳಿ ಸಿದ್ದಪ್ಪ, ಮಳೂರು ಪಟ್ಟಣ ಜಯಲಿಂಗು, ನಾಗೇಂದ್ರ ಸೇರಿದಂತೆ ಹಲವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement