ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ತೃತೀಯ ರಂಗ ಚಾಲನೆ 120 ಕೋಟಿ ಜನರ ಕೈಲಿದೆ

Srinivasa Murthy VN
Updated On : 29 Jun 2013, 12:36 pm

ಕ.ಪ್ರ. ವಾರ್ತೆ ಮಾಗಡಿ ಜೂ.28
ತೃತೀಯ ರಂಗಕ್ಕೆ ಚಾಲನೆ ನೀಡುವುದು ನನ್ನ ಕೈಯಲಿಲ್ಲ, ದೇಶದ 120 ಕೋಟಿ ಜನತೆಯ ಕೈಯಲ್ಲಿದೆ. ಅವರು ನಿರ್ಧರಿಸುವುದು ಎಂದು ಮಾಜಿ ಪ್ರಧಾನಿ ಹಾಗೂ ಸಂಸದ ಎಚ್.ಡಿ.ದೇವೇಗೌಡ ನುಡಿದರು.
ತಾಲೂಕಿನ ಮಾದಿಗೊಂಡನಹಳ್ಳಿ ಪಂಚಾಯ್ತಿ ವ್ಯಾಪ್ತಿಯಲ್ಲಿನ ಕಳ್ಳಿಪಾಳ್ಯದ ಶ್ರೀಭಕ್ತಮುನೇಶ್ವರಸ್ವಾಮಿ ದೇವಾಲಯದ ದಾಸೋಹ ಮಂಟಪ ಉದ್ಘಾಟಿಸಿ ಮಾತನಾಡಿದ ಅವರು, ನೈಸ್‌ಗಾಗಿ ಸರ್ಕಾರ ಹೆಚ್ಚುವರಿ ಜಮೀನು ನೀಡಿದೆ. ಲೋಕೋಪಯೋಗಿ ಇಲಾಖೆ ಸೇರಿದಂತೆ ಸರ್ಕಾರದಲ್ಲಿ ಸುಮಾರು 30 ಸಾವಿರ ಕೋಟಿ ಹಗರಣ ನಡೆದಿದೆ ಎಂದು ಸರ್ವೋಚ್ಛ ನ್ಯಾಯಾಲಯಕ್ಕೆ ಸರ್ಕಾರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಈ ಸಂಬಂಧ  ನ್ಯಾಯಲಯದ ತೀರ್ಪು ಬರುವವರೆವಿಗೂ ಕಾಯೋಣ ಎಂದರು.
ನಂಬಿಕೆಯೇ ದೇವರು: ನಂಬಿಕೆ ವಿಶ್ವಾಸ ಇದ್ದವರು ದೇವಸ್ಥಾನಗಳಿಗೆ ಹೋಗುತ್ತಾರೆ. ಶ್ರದ್ಧಾ-ಭಕ್ತಿಯಿಂದ ಪೂಜೆ ಸಲ್ಲಿಸುವ ಮೂಲಕ ಭಕ್ತಿ ಸಮರ್ಪಿಸುತ್ತಾರೆ. ನಂಬಿಕೆಯೇ ದೇವರು. ನಾನು ಚಿಕ್ಕವನಾಗಿದ್ದಾಗ ನನ್ನ ಕಿವಿಯಿಂದ ಬಿಳಿ ದ್ರವ ಹೊರಬರುತ್ತಿತ್ತು. ನನ್ನ ತಾಯಿಗೆ ಯಾರೋ ದೇವರ ಭಕ್ತರೊಬ್ಬರು ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿದರೆ ಕಿವಿಯಿಂದ ಹೊರ ಬರುವ ಬಿಳಿ ದ್ರವ ನಿಲ್ಲುತ್ತದೆ ಎಂದು ಹೇಳಿದ್ದರಂತೆ. ಅದರಂತೆ ನನ್ನ ತಾಯಿ ಶ್ರೀಕಂಠೇಶ್ವರನ ಸನ್ನಿಗೆ ಕರೆದೊಯ್ದರು.  ಅಲ್ಲಿನ ಕಪಿಲಾ ನದಿಯಲ್ಲಿ ಸ್ನಾನ ಮಾಡಿಸಿ ದೇವರಿಗೆ ಪೂಜೆ ಸಲ್ಲಿಸಿದರು. ನಂತರ ಅಲ್ಲಿನ ಮಂದ್ರಿಕೆಯನ್ನು ಗಂಧದಂತೆ ತಂದು ತೀಡಿ, ನನ್ನ ಕಿವಿ ಬಿಟ್ಟ ಮೂರೇ ದಿನದಲ್ಲಿ ಕಿವಿಯಿಂದ ಹೊರ ಬರುವ ಬಿಳಿ ಅಂದು ನಿಂತಿತು. ಇಲ್ಲಿಯವರೆವಿಗೂ ಕಾಣಿಸಿಕೊಂಡಿಲ್ಲ ಎಂದು ದೇವರ ನಂಬಿಕೆ ಬಗ್ಗೆ ಉದಾಹರಣೆ ಕೊಟ್ಟು ದೇವರನ್ನು ನಂಬಿ ಕೆಟ್ಟವರಿಲ್ಲ  ಎಂದು ದೇವೇಗೌಡರು ತಿಳಿಸಿದರು.
ಪುಷ್ಕರಣಿ ಉಳಿಸಿ: ಇತ್ತೀಚಿನ ದಿನಗಳಲ್ಲಿ ಪುರಾತನ ದೇವಾಲಯಗಳ ಪವಿತ್ರ ಪುಷ್ಕರಣಿಗಳು ಕಲುಷಿತ ಗೊಳ್ಳುತ್ತಿವೆ. ಪುಷ್ಕರಣಿಗಳನ್ನು ಕಲುಷಿತ ಗೊಳಿಸಿದೆ ಪಾವಿತ್ರತೆಯನ್ನು ಕಾಪಾಡಿಕೊಂಡು ಬರುವಂತೆ ಭಕ್ತರಿಗೆ ಕರೆ ನೀಡಿದರು.
ಪಟ್ಟನಾಯಕನಹಳ್ಳಿ ಕ್ಷೇತ್ರದ ಮಠಾಧೀಶ ನಂಜಾವದೂತ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಮನುಷ್ಯ ಸ್ವಾರ್ಥಕ್ಕಾಗಿ ದೇವಾಲಯಗಳ ನಿರ್ಮಾಣದಲ್ಲಿ ತೊಡಗುತ್ತಾನೆ. ಭಗವಂತನಿಗೆ ನಿಷ್ಕಲ್ಮಶ, ನಿರ್ಮಲ ಮನಸ್ಸಿನ ಹೃದಯ ಮಂದಿರದಲ್ಲಿ ಸ್ಥಾನ ಕೋರುತ್ತಾನೆ. ಮನುಷ್ಯ ಮತ್ತು ಭಗವಂತನ ಅನುಬಂಧವಾಗಬೇಕಾದರೆ ನಿರ್ಮಲವಾದ ಶುದ್ಧ ಮನಸ್ಸಿರಬೇಕುನ ಎಂದರು.
ದೇಶ, ರಾಜ್ಯ, ಜನ ಹಿತಕ್ಕಾಗಿ, ಕಾವೇರಿ ನೀರಿಗಾಗಿ ಕಣ್ಣೀರಿಟ್ಟು ಚಿಂತನೆ ಮಾಡಿದ ಮಾಜಿ ಪ್ರಧಾನ ಎಚ್.ಡಿ ದೇವೇಗೌಡ ಸರ್ವ ಸಂಗ ಪರಿತ್ಯಾಗಿ ಸನ್ಯಾಸಿಗಿಂತ ಒಂದು ಹೆಜ್ಜೆ ಮುಂದೆ  ಹೋಗಿದ್ದಾರೆ ಎಂದರು.
ಶಾಸಕ ಎಚ್.ಸಿ. ಬಾಲಕೃಷ್ಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ನೆಮ್ಮದಿಯ ತಾಣ ದೇವಾಲಯಗಳು, ಮನುಷ್ಯನಿಗೆ ಐಶ್ವರ್ಯಕ್ಕಿಂತ ಈಗ ನೆಮ್ಮದಿ ಬಹಳ ಮುಖ್ಯ, ದೇವಾಲಯದಲ್ಲಿನ ಅಗೋಚರ ಶಕ್ತಿಗಳು ದುಷ್ಟಶಕ್ತಿಯ ದಮನ ಮಾಡುತ್ತವೆ. ನಂಬಿ ದೇವರಿಗೆ ಶ್ರದ್ಧಾ-ಭಕ್ತಿಯಿಂದ ಪೂಜೆ ಸಲ್ಲಿಸಿದೆ ಒಳ್ಳೆಯದಾಗುತ್ತದೆ. ಉಚಿತ ಕಾರ್ಯಕ್ರಮಗಳಿಂದ ಸಮಾಜ ಉದ್ಧಾರವಾಗದು, ಬಡವರ ಏಳಿಗಾಗಿ ಅನುಕೂಲಕರ ಸೇವಾ ಭಾವನೆಯಿರಬೇಕು. ದಾಸೋಹ ಮಂಟಪಕ್ಕೆ ಈಗಾಗಲೇ ಒಂದು ಕೊಠಡಿ ನಿರ್ಮಿಸಿಕೊಟ್ಟಿದ್ದೇನೆ. ಇನ್ನೊಂದು ಕೊಠಡಿ ಕಟ್ಟಿಸಿಕೊಡುವುದಾಗಿ ತಿಳಿಸಿದರು.
ಮುನೇಶ್ವರ ದೇವಾಲಯಕ್ಕೆ ಮತ್ತು ಉತ್ತರ ಖಂಡ ಪ್ರದೇಶದ ಸಂತ್ರಸ್ತರಿಗೆ ತಲಾ 1 ಲಕ್ಷ ದೇಣಿಗೆ ನೀಡುವುದಾಗಿ  ಜಿ.ಪಂ. ಮಾಜಿ ಸದಸ್ಯ ವೀರಪ್ಪ ಪ್ರಕಟಿಸಿದರು.
ಇದೇ ಸಂದರ್ಭದಲ್ಲಿ 7 ಜೋಡಿಗಳ ಸರಳ ಸಾಮೂಹಿಕ ವಿವಾಹ ನೆರವೇರಿತು. ನೂತನ ನವ ವಧು- ವರರಿಗೆ ಸಿದ್ದಗಂಗಾ ಮಠಾಧೀಶ ಶತಾಯಿಸಿ ಕರ್ನಾಟಕ ರತ್ನ ಡಾ.ಶಿವಕುಮಾರ ಸ್ವಾಮೀಜಿ ಆಶೀರ್ವದಿಸಿದರು. ಸಪ್ತಗಿರಿ ಸಮೂಹ ಸಂಸ್ಥೆಯ ವ್ಯವಸ್ಥಾಪಕ ದಯಾನಂದ್ ಅವರಿಂದ ಮುನೇಶ್ವರ ಸ್ವಾಮಿ ಆರಾಧಕ ರಂಗಸ್ವಾಮಿ ಅವರಿಗೆ ಬೆಳ್ಳಿ ಕಿರೀಟಧಾರಣೆ ಮಾಡಿದರು.
ಸಂಗೀತ ವಿದ್ವಾನ್ ಪುತ್ತೂರು ನರಸಿಂಹನಾಯಕ್ ಅವರಿಂದ ಸಂಗೀತ ಕಚೇರಿ ನಡೆಯಿತು. ಜಿ.ಪಂ. ಸದಸ್ಯ ಹಂಸಕುಮಾರಿ, ತಹಸೀಲ್ದಾರ್ ಗಂಗಾಧರ್, ನಿವೃತ್ತಿ ಜಂಟಿ ಆಯುಕ್ತ ನಾಗರಾಜು, ಮಂಜುನಾಥ್, ಚಿತ್ರನಟ ದೇವರಾಜು, ಕೃಷ್ಣ, ತಾ.ಪಂ. ಸದಸ್ಯೆ ಅನಸೂಯ ಕಾಂತರಾಜು, ಎಂ.ಆರ್. ರಾಮಸ್ವಾಮಿ, ಚಿಕ್ಕವೀರಯ್ಯ, ಶ್ರೀನಿವಾಸ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement