ಶಿಥಿಲ ಕಟ್ಟಡ ನೆಲಸಮ ಕಾಮಗಾರಿಗೆ ಚಾಲನೆ
ರಾಮನಗರ: ಜಿಲ್ಲಾ ಕೇಂದ್ರಕ್ಕೆ ಸುಸಜ್ಜಿತ ಬಸ್ ನಿಲ್ದಾಣದ ಕನಸು ನನಸಾಗುವ ಕಾಲ ಸಮೀಪಿಸುತ್ತಿದೆ. ಇದಕ್ಕೆ ಪೂರಕವಾಗಿ ನೂತನ ಕಟ್ಟಡದ ಎದುರು ದೃಷ್ಟಿ ಬೊಟ್ಟಿನಂತಿದ್ದ ಹಳೆಯ ಶಿಥಿಲ ಕಟ್ಟಡ ಕೆಡವುವ ಕಾಮಗಾರಿಗೆ ಶುಕ್ರವಾರ ಸಂಜೆಯಷ್ಟೇ ಚಾಲನೆ ನೀಡಲಾಗಿದೆ.
ನೂತನ ಕಟ್ಟಡದ ಕಾಮಗಾರಿ ಇನ್ನೇನು ಅಂತಿಮ ಹಂತಕ್ಕೆ ತಲುಪುತ್ತಿದೆ. ಅದರೊಟ್ಟಿಗೆ ನಿಲ್ದಾಣ ಆವರಣದ ಡಾಂಬರೀಕರಣ ಸಹಿತ ಇತರೆ ಕಾಮಗಾರಿ ಅನುಷ್ಠಾನಕ್ಕಾಗಿ ಸುಮಾರು 60 ವರ್ಷ ಹಳೆಯದಾದ ಕಟ್ಟಡವನ್ನು ಜೆಸಿಬಿ ಯಂತ್ರದಿಂದ ಕೆಡವಲು ಪ್ರಾರಂಭಿಸಲಾಗಿದೆ.
ಸದ್ಯಕ್ಕೆ ಒಂದು ಜೆಸಿಬಿ ಯಂತ್ರವು ಶಿಥಿಲ ಕಟ್ಟಡವನ್ನು ಕೆಡವುವ ಕೆಲಸದಲ್ಲಿ ನಿರತವಾಗಿದ್ದು, ಎರಡು ದಿನದೊಳಗೆ ಸದರಿ ಕಟ್ಟಡದ ತೆರವು ಕಾರ್ಯಾಚರಣೆ ಮುಗಿಯಲಿದೆ ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.
3.25 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಬಸಸ್ನಿಲ್ದಾಣ ಸ್ಥಾಪನೆಗೆ ಸಮ್ಮಿಶ್ರ ಸರ್ಕಾರವಿದ್ದಾಗಲೇ ಮಂಜೂರಾತಿ ದೊರೆತಿತ್ತು. ಜಾಗದ ವ್ಯಾಜ್ಯ ಹಿನ್ನೆಲೆಯಲ್ಲಿ ನೆನಗುದಿಗೆ ಬಿದ್ದಿತ್ತು. ಈಗ ಮಾಗಡಿ ರಸ್ತೆ ಕಡೆಯ ಸ್ವಲ್ಪ ಪ್ರದೇಶವನ್ನು ಹೊರತುಪಡಿಸಿ ಉಳಿದ ಜಾಗದಲ್ಲಿ ನಿಲ್ದಾಣ ಕಾಮಗಾರಿ ಪ್ರಗತಿಯಲ್ಲಿದೆ. ಪ್ರಸ್ತುತ ಕೈಗೆತ್ತಿಕೊಂಡಿರುವ ಕಾಮಗಾರಿಗೆ 2 ಕೋಟಿಯ ಟೆಂಡರ್ ನಡೆದಿದೆ. ನಂ.1ರಂದು ಕಾಮಗಾರಿಗೆ ಚಾಲನೆ ಸಿಕ್ಕಿತ್ತು. ಪ್ರಾರಂಭದಲ್ಲಿ ತೀವ್ರಗತಿಯಲ್ಲೇ ಸಾಗಿದ್ದ ಕಾಮಗಾರಿಯು ಕಳೆದೆರಡು ತಿಂಗಳಿಂದ ಆಮೆವೇಗದಲ್ಲಿ ಸಾಗಿತ್ತು.
ಬಸ್ ನಿಲ್ದಾಣ ಕಾಮಗಾರಿ ಅಪೂರ್ಣವಾಗಿರುವ ಹಿನ್ನೆಲೆಯಲ್ಲಿ ರಾಮನಗರದ ಐಜೂರು ವೃತ್ತದಲ್ಲಿ ಸಂಚಾರಿ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿತ್ತು. ತ್ವರಿತವಾಗಿ ಕಾಮಗಾರಿ ಅನುಷ್ಠಾನಗೊಳಿಸಿದರೆ ಗರಿಷ್ಠ ಇನ್ನು ಒಂದು ಅಥವಾ ಒಂದೂವರೆ ತಿಂಗಳಲ್ಲಿ ನೂತನ ಬಸ್ ನಿಲ್ದಾಣ ಉದ್ಘಾಟನೆಗೊಳ್ಳಬಹುದು.
ಹಳೆಯ ಬಸ್ ನಿಲ್ದಾಣಕ್ಕೆ ಶಂಕುಸ್ಥಾಪನೆಯನ್ನು ರಾಮನಗರ ಕ್ಷೇತ್ರ ಪ್ರತಿನಿಧಿಸಿದ್ದ ಕೆಂಗಲ್ ಹನುಮಂತಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ನೆರವೇರಿಸಿದ್ದರು. ರಾಮನಗರವನ್ನು ಜಿಲ್ಲೆಯನ್ನಾಗಿ ಘೋಷಿಸಿದ ಎಚ್.ಡಿ.ಕುಮಾರಸ್ವಾಮಿ ಅವರು ನೂತನ ನಿಲ್ದಾಣಕ್ಕೆ ಮಂಜೂರಾತಿ ನೀಡಿದ್ದರು.
ರೈತ ಸಂಘದ ಪದಾಧಿಕಾರಿಗಳ ಆಯ್ಕೆ
ಕನಕಪುರ: ತಾಲೂಕು ಪ್ರಾಂತ್ಯ ರೈತ ಸಂಘದ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಜಿಲ್ಲಾಧ್ಯಕ್ಷ ಕೆ.ಎಸ್. ಲಕ್ಷ್ಮಣಸ್ವಾಮಿ ಬಿಡುಗಡೆ ಮಾಡಿದ್ದಾರೆ. ರೈತಸ ಂಘದ ನೂತನ ಗೌರವಾಧ್ಯಕ್ಷರಾಗಿ ಜಿ.ವಿ. ಪುರದಯ್ಯ, ಕಾರ್ಯಾಧ್ಯಕ್ಷರಾಗಿ ಬಿ.ಸಿ. ನಾರಾಯಣಸ್ವಾಮಿ, ಅಧ್ಯಕ್ಷರಾಗಿ ಅನಂತರಾವ್ಪ್ರಸಾದ್, ಉಪಾಧ್ಯಕ್ಷರಾಗಿ ಗಜೇಂದ್ರಸಿಂಗ್, ಬಿ.ಎಚ್. ಸುರೇಶ್, ಸಂಘಟನಾ ಕಾರ್ಯದರ್ಶಿಯಾಗಿ ಶ್ರೀನಿವಾಸ್, ಸಂಚಾಲಕರಾಗಿ ನಾಗಮಾದಯ್ಯ, ಕೃಷ್ಣಪ್ಪ, ಜಯಣ್ಣ, ಶಿವಣ್ಣ, ಶಿವಲಿಂಗಯ್ಯ, ಶಿವಮಾದೇಗೌಡ, ಉಸ್ತುವಾರಿ ಸಮಿತಿ ಸದಸ್ಯರಾಗಿ ದುಂಡಪ್ಪ, ಉಜ್ಜಯ್ಯ, ಮರಿಗೌಡ ನೇಮಕಗೊಂಡಿದ್ದಾರೆ.