ಆಸ್ಪತ್ರೆಗಳಲ್ಲಿ ಸೌಲಭ್ಯ ಹೆಚ್ಚಳಕ್ಕೆ ಕ್ರಮ
ಹೊಸಕೋಟೆ: ತಾಲೂಕಿನ ಸರಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎನ್.ನಾಗರಾಜ್ ಹೇಳಿದರು.
ಇಲ್ಲಿಗೆ ಸಮೀಪದ ಎಂವಿಜೆ ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಏರ್ಪಡಿಸಿದ್ದ ಮಲೇರಿಯಾ ನಿವಾರಣೆ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮಿಣ ಪ್ರದೇಶದಲ್ಲಿನ ಬಹಳಷ್ಟು ಬಡಜನರು ಸರಕಾರಿ ಆಸ್ಪತ್ರೆಗಳನ್ನೆ ಅವಲಂಬಿಸಿದ್ದು, ಸಿಬ್ಬಂದಿ ಸೇವಾ ಮನೋಭಾವ ಬೆಳೆಸಿಕೊಳಬೇಕು. ಸ್ವಚ್ಛತೆಯ ಕೊರತೆಯಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗುತ್ತಿದ್ದು, ಜನರು ಸಾಂಕ್ರಾಮಿಕ ರೋಗಗಳಿಗೆ ಒಳಗಾಗುತ್ತಿದ್ದಾರೆ. ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ನೈರ್ಮಲ್ಯ ಕಾಪಾಡಲು ಅದ್ಯತೆ ನೀಡಲು ಸೂಚಿಸಿದ್ದು ಸಾರ್ವಜನಿಕರು ಸಹಕರಿಸಬೇಕು ಎಂದರು.
ಜನರು ದೇಹದಲ್ಲಿ ಯಾವುದೇ ನ್ಯೂನತೆ, ರೋಗ ಕಂಡುಬಂದಲ್ಲಿ ನಿರ್ಲಕ್ಷ್ಯ ವಹಿಸದೆ ವೈದ್ಯರಲ್ಲಿ ತಪಾಸಣೆ ಮಾಡಿಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ತಾಲೂಕಿನ ಎಲ್ಲಾ ಸರಕಾರಿ ಆಸ್ಪತ್ರೆಗಳಿಗೂ ಭೇಟಿ ನೀಡಿ ಲಭ್ಯವಿರುವ ಸೌಲಭ್ಯಗಳ ಬಳಕೆಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಸ್ವಚ್ಛತೆ ಕಾಪಾಡಲು ಗಮನಹರಿಸಬೇಕು.
ಕರ್ತವ್ಯಲೋಪ ಎಸಗುವ ಸಿಬ್ಬಂದಿ ವಿರುದ್ಧ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು. ರೋಗಿಗಳ ವೃಥಾ ಅಲೆದಾಟ ತಪ್ಪಿಸಲು ತಾಲೂಕು ಮಟ್ಟದ ಅಸ್ಪತ್ರೆಯಲ್ಲಿ ಆಧುನಿಕ ತಂತ್ರಜ್ಞಾನ ಒಳಗೊಂಡ ಚಿಕಿತ್ಸಾ ಪದ್ಧತಿಗೆ ಹಣ ಮಂಜೂರು ಮಾಡಲು, ಅಗತ್ಯ ತಜ್ಞ ವೈದ್ಯರನ್ನು ನೇಮಿಸಲು ಈಗಾಗಲೇ ಆರೋಗ್ಯ ಸಚಿವರಿಗೆ ಮನವಿ ಮಾಡಲಾಗಿದೆ. ಗ್ರಾಮಸ್ಥರಲ್ಲಿ ಸಾಮಾನ್ಯವಾಗಿ ಕಂಡುಬರುವ ರೋಗಗಳಿಂದ ಮುಕ್ತರಾಗಲು ಜಾಗೃತಿ ಮೂಡಿಸುವಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಪ್ರಮುಖ ಪಾತ್ರ ವಹಿಸಬೇಕು ಎಂದರು.
ಪ್ರತಿ ಮನೆಗೂ ಭೇಟಿ ನೀಡಿ: ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಶೋಕ್ ಮಾತನಾಡಿ, ಜಿಲ್ಲೆಯಾದ್ಯಮತ ಸರಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಯಿಸುತ್ತಿರುವ ಆರೋಗ್ಯ ಕಾರ್ಯಕರ್ತರು ಗ್ರಾಮಗಳಲ್ಲಿನ ಪ್ರತಿ ಮನೆಗೂ ಭೇಟಿ ನೀಡಿ, ಸರಕಾರದ ಸೌಲಭ್ಯಗಳ ಬಗ್ಗೆಯೂ ಮನವರಿಕೆ ಮಾಡಿಕೊಡಬೇಕು. ಈ ದಿಸೆಯಲ್ಲಿ ಸರಕಾರೇತರ ಸಂಸ್ಥೆಗಳ ಸಹಭಾಗಿತ್ವ ಅಗತ್ಯವಾಗಿದೆ ಎಂದರು.
ರೋಗಿಗಳ ರಕ್ತ ತಪಾಸಣೆ ಮಾಡಲು ಎಲ್ಲಾ ಆಸ್ಪತ್ರೆಗಳಲ್ಲೂ ಸಲಕರಣೆಗಳನ್ನು ಒದಗಿಸಲಾಗಿದೆ. ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಸಾಮಾನ್ಯ ಜ್ವರಕ್ಕೆ ಚಿಕಿತ್ಸೆ ನೀಡುವ ಬದಲಿಗೆ ರೋಗಿಗಳಲ್ಲಿ ಅನಾವಶ್ಯಕವಾಗಿ ಆತಂಕ ಮೂಡಿಸಿ ಹೆಚ್ಚು ಶುಲ್ಕ ವಿಧಿಸುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಈ ಕುರಿತು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ರಕ್ತ ಪರೀಕ್ಷೆ ಮಾಡಿಸಿ: ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಖಲೀದ್ ಅಹಮದ್ ಮಾತನಾಡಿ, ಜ್ವರ ಕಂಡುಬಂದ ತಕ್ಷಣ ರಕ್ತಪರೀಕ್ಷೆ ಮಾಡಿಸಿಕೊಳ್ಳಬೇಕು. ಪರೀಕ್ಷೆಯ ಫಲಿತಂಶವನ್ನು ಆಧರಿಸಿ ಚಿಕಿತ್ಸಾ ಕ್ರಮವನ್ನು ಪ್ರಾರಂಭಿಸಲಾಗುವುದು. ಮಲೇರಿಯಾದಂತಹ ಬಹಳಷ್ಟು ಸಾಂಕ್ರಾಮಿಕ ರೋಗಗಳು ಹರಡಲು ಕಲುಷಿತ ಪರಿಸರವೇ ಕಾರಣವಾಗಿದ್ದು, ವಾಸದ ಮನೆಗಳ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟು ಕೊಳ್ಳಬೇಕು ಎಂದು ತಿಳಿಸಿದರು.
ಎಂವಿಜೆ ಆಸ್ಪತ್ರೆಯ ಡಾ.ಆರ್.ಜೆ.ವಿವಾಯ್, ಜಿಲ್ಲಾ ಕೀಟ ತಜ್ಞೆ ಲತಾ ಸಹ ಮಾತನಾಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ಶಕೀಲ, ಎಂವಿಜೆ ಅಸ್ಪತ್ರೆಯ ಆಡಳಿತಾಧಿಕಾರಿ ಧರಣಿ ಉಪಸ್ಥಿತರಿದ್ದರು.