ಪತ್ನಿಯ ಕತ್ತು ಕೊಯ್ದು ಕೊಲೆ ಮಾಡಲು ಯತ್ನಿಸಿದ ಪತಿ
ಕ.ಪ್ರ.ವಾರ್ತೆ ರಾಮನಗರ ಜೂ.30
ಪತಿಯೇ ತನ್ನ ಪತ್ನಿಯನ್ನು ಕತ್ತು ಕೊಯ್ದು ಕೊಲೆ ಮಾಡಲು ಯತ್ನಿಸಿರುವ ಘಟನೆ ರಾಮನಗರದ ಹೊರ ವಲಯದ ಕನಕಪುರ ವೃತ್ತದ ಬಳಿ ನಡೆದಿದೆ.
ಮೂಲತಃ ಕನಕಪುರದ ಕೆರೆಮೇಗಳದೊಡ್ಡಿಯ ರಾಮದಾಸಯ್ಯ ಅವರ ಪುತ್ರಿ ಮಂಗಳಾ (19) ಪತಿಯಿಂದಲೇ ಮಾರಣಾಂತಿಕ ಹಲ್ಲೆಗೊಳಗಾದವರು. ಈಕೆಯನ್ನು 2 ವರ್ಷದ ಹಿಂದಷ್ಟೇ ರಾಮನಗರ ತಾಲೂಕಿನ ಕೆ.ಜಿ.ಹೊಸಳ್ಳಿ ಗ್ರಾಮದ ಮಧು ಎಂಬಾತನಿಗೆ ಕೊಟ್ಟು ಮದುವೆ ಮಾಡಲಾಗಿತ್ತು.
ಪತಿಯ ಕಿರುಕುಳ ತಾಳಲಾರದೆ ಕಳೆದ 6 ತಿಂಗಳಿನಿಂದ ಮಂಗಳಾ ಅವರು ತನ್ನ ತವರು ಮನೆ ಸೇರಿದ್ದರು. ಇತ್ತೀಚೆಗೆ ನಾಮಧಾರಿ ಸೀಡ್ಸ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರು. ಭಾನುವಾರ ವೈಯಕ್ತಿಕ ಕೆಲಸದ ನಿಮಿತ್ತ ರಾಮನಗರಕ್ಕೆ ಆಗಮಿಸಿದ್ದರು.
ಈ ವಿಷಯ ಪತಿ ಮಧುವಿಗೆ ತಿಳಿದು ರಾಮನಗರಕ್ಕೆ ಆಗಮಿಸಿ, ಮಂಗಳಾ ಅವರನ್ನು ತನ್ನೊಂದಿಗೆ ಬರುವಂತೆ ಒತ್ತಾಯಿಸಿದ್ದಾನೆ. ನಂತರ ಆಟೋ ಒಂದರಲ್ಲಿ ಕನಕಪುರ ವೃತ್ತದ ಬಳಿಯ ರೇಲ್ವೆ ಮೇಲ್ಸೇತುವೆ ಬಳಿ ಇಳಿಸಿಕೊಂಡಿದ್ದಾನೆ. ಈ ವೇಳೆ ಪರಸ್ಪರ ಮಾತಿನ ಚಕಮಕಿ ನಡೆದು ಮಧು ಚಾಕುವಿನಿಂದ ಮಂಗಳಾ ಕತ್ತು ಸೇರಿದಂತೆ 7 ಕಡೆ ಕೊಯ್ದಿದ್ದಾನೆ.
ಚೀರಾಟ ಕೇಳಿದ ಅಕ್ಕ ಪಕ್ಕದವರು ಸ್ಥಳಕ್ಕಾಮಿಸಿದಾಗ ಮಧು ಪರಾರಿಯಾಗಿದ್ದಾನೆ. ಮಂಗಳಾ ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹಿಳೆ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ: ಆರೋಪ, ಪ್ರತಿಭಟನೆ
ಕ.ಪ್ರ.ವಾರ್ತೆ ರಾಮನಗರ ಜೂ.30
ಮಹಿಳೆ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಮೃತರ ಸಂಬಂಧಿಕರು ಆಸ್ಪತ್ರೆ ಎದುರು ಶವ ಇಟ್ಟು ಪ್ರತಿಭಟನೆ ನಡೆಸಿದ ಘಟನೆ ಚನ್ನಪಟ್ಟಣದಲ್ಲಿ ನಡೆದಿದೆ.
ಮಂಡ್ಯದ ಬಿ.ಗೌಡಗೆರೆ ಗ್ರಾಮದ ಮಂಗಳಗೌರಿ (65) ಮೃತಪಟ್ಟ ಮಹಿಳೆ. ಈಕೆಯನ್ನು ಮೂರು ದಿನದ ಹಿಂದೆ ಹರ್ನಿಯಾ ಚಿಕಿತ್ಸೆಗಾಗಿ ಪೂಜಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ತಡರಾತ್ರಿ ಮೃತಪಟ್ಟಿದ್ದರು.
ಆದರೆ ಆಸ್ಪತ್ರೆ ವೈದ್ಯರು ಹೆಚ್ಚಿನ ಚಿಕಿತ್ಸೆಗೆಂದು ಮಂಡ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸುವಂತೆ ಸಾಗಹಾಕಿದ್ದಾರೆ. ಮಂಡ್ಯದ ಖಾಸಗಿ ಆಸ್ಪತ್ರೆಯ ವೈದ್ಯರು ಈಕೆ ಸಾವನ್ನಪ್ಪಿ 2 ಗಂಟೆಯಾಗಿದೆ ಎಂದು ತಿಳಿಸಿ ವಾಪಸ್ ಕಳುಹಿಸಿದ್ದಾರೆ.
ಇದರಿಂದ ರೊಚ್ಚಿಗೆದ್ದ ಮೃತ ಮಹಿಳೆಯ ಸಂಬಂಧಿಕರು ಶವವನ್ನು ಆಸ್ಪತ್ರೆಯ ಮುಂದಿಟ್ಟು ಪ್ರತಿಭಟನೆ ನಡೆಸಿದ್ದಲ್ಲದೆ ಆಸ್ಪತ್ರೆಯ ಕಿಟಕಿ ಗಾಜುಗಳನ್ನು, ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ. ಆಸ್ಪತ್ರೆಯ ಮುಂಭಾಗ ಹಾಕಲಾಗಿದ್ದ ನಾಮಫಲಕವನ್ನು ಕಿತ್ತುಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಆಸ್ಪತ್ರೆ ಸಿಬ್ಬಂದಿ ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ನಂತರ ರಾಜೀ ಸಂಧಾನ ನಡೆದು ಪ್ರತಿಭಟನೆ ಕೈಬಿಡಲಾಯಿತು.
ಹಫ್ತ ನೀಡುವಂತೆ ಕಿರುಕುಳ: ಠಾಣೆಯಲ್ಲಿ ದೂರು
ಕ.ಪ್ರ.ವಾರ್ತೆ ರಾಮನಗರ ಜೂ.30
ಹಫ್ತ ನೀಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಕನಕಪುರ ತಾಲೂಕು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ತ್ರೀರೋಗ ತಜ್ಞೆ ಡಾ.ಪದ್ಮ ಅವರು ಕನಕಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ರಾಂಪುರ ನಿವಾಸಿ ಪಿ.ನಾಗೇಶ ಅವರು ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿ, ಪ್ರತಿ ತಿಂಗಳೂ ನನಗೆ ಹಫ್ತ ನೀಡಬೇಕು. ಇಲ್ಲದಿದ್ದರೆ ಬೇರೆ ಕಡೆ ವರ್ಗಾವಣೆ ಮಾಡಿಸುತ್ತೇನೆ ಎಂದು ನನ್ನ ಕೊಠಡಿಯ ಬಾಗಿಲಿಗೆ ಅಡ್ಡವಾಗಿ ಕುಳಿತು ಅಕ್ರಮ ಬಂಧನದಲ್ಲಿರಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಸಾರ್ವಜನಿಕರೆದುರೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ನಾಗೇಶನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಡಾ.ಪದ್ಮ ಅವರು ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.
ನಿವೃತ್ತ ಪೊಲೀಸ್ ಅಧಿಕಾರಿ ತೋಟದಲ್ಲಿ ಶ್ರೀಗಂಧದ ಮರ ಕಳವು
ಕ.ಪ್ರ.ವಾರ್ತೆ ರಾಮನಗರ ಜೂ.30
ಬಿಡದಿ ಹೋಬಳಿ ಕರಿಯಪ್ಪನದೊಡ್ಡಿ ಗ್ರಾಮದ ನಿವೃತ್ತ ಪೊಲೀಸ್ ಅಧಿಕಾರಿ ಕೆ.ವಿ.ಠಾಗೂರ್ ಅವರ ತೋಟದಲ್ಲಿ ಬೆಳೆದಿದ್ದ 6 ಶ್ರೀಗಂಧದ ಮರಗಳನ್ನು ಕಳವು ಮಾಡಲಾಗಿದೆ. ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
60 ಗ್ರಾಂ ಮಾಂಗಲ್ಯ ಕಿತ್ತು ಪರಾರಿ
ರಾಮನಗರ: ನಡೆದು ಹೋಗುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ ರು.1ಲಕ್ಷ ಬೆಲೆ ಬಾಳುವ 60 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಸಿದು ಪರಾರಿಯಾಗಿರುವ ಘಟನೆ ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೆಂಗೇರಿ ಹೋಬಳಿ ಸೊಣ್ಣೇನಹಳ್ಳಿ ವಾಸಿ ತಾರಾದೇವಿ ಸರ ಕಳೆದುಕೊಂಡವರು. ಶನಿವಾರದಂದು ಈಕೆ ಸ್ವಗ್ರಾಮಕ್ಕೆ ತೆರಳಲು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ. ಈ ಸಂಬಂಧ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.