ನಿಂತಿದ್ದ ಟ್ರ್ಯಾಕ್ಟರಿಗೆ ಸ್ಕೂಟರ್ ಡಿಕ್ಕಿ: ಸ್ಥಳದಲ್ಲೇ ಇಬ್ಬರು ಸಾವು
ಸೂಲಿಬೆಲೆ: ಡಿಸೇಲ್ ಖಾಲಿಯಾಗಿ ರಸ್ತೆ ಬದಿ ನಿಂತಿದ್ದ ಟ್ರ್ಯಾಕ್ಟರಿಗೆ ಸ್ಕೂಟರ್ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಶನಿವಾರ ರಾತ್ರಿ ಸೂಲಿಬೆಲೆ ಬಳಿ ನಡೆದಿದೆ. ಡಿಕ್ಕಿಯ ರಭಸಕ್ಕೆ ಸ್ಥಳದಲ್ಲಿಯೇ ಸಾವನ್ನಪ್ಪಿರುವ ವ್ಯಕ್ತಿಗಳನ್ನು ಸೂಲಿಬೆಲೆಯ ನವಾಜ್ (23), ನಸೀಮ್ ತಾಜ್ (57) ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಬೆಂಗಳೂರಿನ ನಿವಾಸಿ ನಸೀಮ್(24) ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ವಿಷಯ ತಿಳಿದ ಹತ್ತಿರದಲ್ಲಿ ಕಾರ್ಯಕ್ರಮಮೊಂದರಲ್ಲಿ ಪಾಲ್ಗೊಂಡಿದ್ದ ಪಿಎಸ್ಐ ರಾಜಣ್ಣ ಸ್ಥಳಕ್ಕೆ ಧಾವಿಸಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ.
ಮದುವೆ ಮನೆಯಲ್ಲಿ ದುಃಖ: ಮೃತ ನಸೀಮ್ ತಾಜ್ ಅವರ ತಂಗಿಯ ಮಗಳ ಮದುವೆ ಸೋಮವಾರ ತಮ್ಮರಸನಹಳ್ಳಿಯಲ್ಲಿ ನಡೆಯಲಿತ್ತು.ಈ ಮದುವೆ ಕಾರ್ಯದ ಅಂಗವಾಗಿ ನಡೆಯುತ್ತಿದ್ದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲೆಂದು ಸಂಬಂಧಿಕರ ಜೊತೆಯಲ್ಲಿ ಸ್ಕೂಟರಿನಲ್ಲಿ ಹೋಗಿ ಸ್ವಗ್ರಾಮ ಸೂಲಿಬೆಲೆಗೆ ವಾಪಸು ಬರುವಾಗ ಈ ರ್ದುಘಟನೆ ನಡೆದಿದೆ.ವಿಷಯ ತಿಳಿದ ಮದುವೆ ಮನೆಯಲ್ಲಿ ದುಃಖದ ವಾತಾವಣರ ನಿರ್ಮಾಣವಾಗಿದೆ.
ಪೇದೆ ಮಾರಪ್ಪಗೆ ಜಾಮೀನು ನಿರಾಕರಣೆ
ರಾಮನಗರ: ಲಾರಿ ಮಾಲೀಕನಿಂದ ರು.2 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ ನಗರದ ಸಂಚಾರಿ ಠಾಣೆ ಪೊಲೀಸ್ ಪೇದೆ ಮಾರಪ್ಪಗೆ ನ್ಯಾಯಾಲಯ ಜಾಮೀನು ನಿರಾಕರಿಸಿದ್ದು, ಆತನನ್ನು ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಲಾಗಿದೆ. ಅಪಘಾತಕ್ಕೆ ಒಳಗಾಗಿದ್ದ ಲಾರಿ ಬಿಡುಗಡೆಗೆ ಮಾಲೀಕ ಗಿಲ್ಕಾ ನಾಯ್ಕ ಅವರಿಂದ ರು.5 ಸಾವಿರ ಲಂಚಕ್ಕೆ ಸಂಚಾರಿ ಠಾಣೆ ಸಬ್ ಇನ್ಸ್ಪೆಕ್ಟರ್ ಮಂಜುನಾಥ್, ಎಎಸ್ಐ ವೆಂಕಟಸ್ವಾಮಿ ಪೀಡಿಸಿದ್ದರು. ಈ ಕುರಿತು ಗಿಲ್ಕಾ ನಾಯ್ಕ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಲೋಕಾಯುಕ್ತ ಅಧಿಕಾರಿಗಳ ನಿರ್ದೇಶನದಂತೆ ಗಿಲ್ಕಾ ನಾಯ್ಕ ರು.2 ಸಾವಿರ ಲಂಚ ನೀಡಲು ಮುಂದಾದಾಗ ಸದರಿ ಮೊತ್ತವನ್ನು ಪೇದೆ ಮಾರಪ್ಪಗೆ ನೀಡುವಂತೆ ಎಸ್ಐ ಹಾಗೂ ಎಎಸ್ಐ ಸೂಚಿಸಿದ್ದರು. ಕಲ್ಯಾಣ ಮಂಪಟದ ಎದುರು ಹಣ ಸ್ವೀಕರಿಸುತ್ತಿದ್ದ ಮಾರಪ್ಪ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ. ಮಂಜುನಾಥ್ ಹಾಗೂ ವೆಂಕಟಸ್ವಾಮಿ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ಅವರಿಬ್ಬರು ತಲೆಮರೆಸಿಕೊಂಡಿದ್ದಾರೆ ಎಂದು ರಾಮನಗರ ವಿಭಾಗದ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಪಿ.ಕೆ. ಶಿವಶಂಕರ್ ತಿಳಿಸಿದ್ದಾರೆ.
ಖಾಲಿ ಇರುವ ಹುದ್ದೆಗೆ ಅರ್ಜಿ
ರಾಮನಗರ: ಜಿಲ್ಲಾ ನ್ಯಾಯಾಲಯದ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ಶೀಘ್ರ ಲಿಪಿಗಾರರು-10, ಬೆರಳಚ್ಚುಗಾರರು-13, ಬೆರಳಚ್ಚು ನಕಲುಗಾರರು-6 ಪ್ರೊಸೆಸ್ ಜಾರಿಕಾರರು-24 ಹಾಗೂ ಜವಾನರು-12 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ನಿಗದಿತ ಅರ್ಜಿ ನಮೂನೆಯಲ್ಲಿ ಸ್ವಂತ ಕೈಬರಹದಿಂದ ಭರ್ತಿ ಮಾಡಿದ ಅರ್ಜಿಯನ್ನು ಏ.1ರ ಸಂಜೆ 4ರೊಳಗೆ ಸಲ್ಲಿಸಬೇಕು. ಎಲ್ಲ ಹುದ್ದೆಗಳಿಗೂ ರು.10 ಭಾರತೀಯ ಪೋಸ್ಟಲ್ ಆರ್ಡರ್ ಅಥವಾ ಡಿ.ಡಿ.ಯನ್ನು ಜಿಲ್ಲಾ ನ್ಯಾಯಾಧೀಶರು ರಾಮನಗರ ಇವರ ಹೆಸರಿಗೆ ಪಡೆದು ಲಗತ್ತಿಸುವುದು. ಅರ್ಜಿಗಳನ್ನು ಜಿಲ್ಲಾ ನ್ಯಾಯಾಲಯದ ಕಚೇರಿಯಲ್ಲಿ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ನ್ಯಾಯಾಲಯದ ಕಾರ್ಯಾಲಯ ಸಂಪರ್ಕಿಸಬಹುದು.
ಸ್ಪರ್ಧಿಗಳು ವೆಚ್ಚದ ವಿವರ ನೀಡಲಿ
ರಾಮನಗರ: ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆಗೆ ರಾಮನಗರ ನಗರಸಭೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ವೆಚ್ಚದ ವಿವರವನ್ನು ನಿಗದಿತ ನಮೂನೆಯಲ್ಲಿ ಅಗತ್ಯ ದಾಖಲೆಗಳೊಂದಿಗೆ ಪ್ರತಿ ದಿನ ಅಧಿಕಾರಿಗಳಿಗೆ ಸಲ್ಲಿಸಬೇಕು. ತಪ್ಪಿದಲ್ಲಿ ಮುಂದಿನ ಕ್ರಮಕ್ಕೆ ಜಿಲ್ಲಾಧಿಕಾರಿ, ರಾಜ್ಯ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಲಾಗುವುದು ಎಂದು ತಹಸೀಲ್ದಾರ್ ತಿಳಿಸಿದ್ದಾರೆ.
ಮಾಗಡಿ ಮತ್ತಷ್ಟು ಅಭಿವೃದ್ಧಿಗಾಗಿ ಜೆಡಿಎಸ್ ಅಭ್ಯರ್ಥಿ ಗೆಲ್ಲಿಸಿ
ಮಾಗಡಿ: ಪಟ್ಟಣದ ಮತ್ತಷ್ಟು ಅಭಿವೃದ್ಧಿಗಾಗಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಶಾಸಕ ಎಚ್.ಸಿ. ಬಾಲಕೃಷ್ಣ ಮತದಾರರಲ್ಲಿ ಕೇಳಿಕೊಂಡರು.
ಅವರು ಮಾಗಡಿ ಪಟ್ಟಣದ ವಿವಿಧ ವಾರ್ಡ್ಗಳ ಪಾದಯಾತ್ರೆ ಮತ್ತು ಮತದಾರರ ಮನೆಗಳಿಗೆ ತೆರಳಿ ಜೆಡಿಎಸ್ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಮನವಿ ಮಾಡುತ್ತಾ ಮತಯಾಚಿಸಿದರು. ಈಗಾಗಲೇ ಕಳೆದ 5 ವರ್ಷಗಳಲ್ಲಿ ಶಕ್ತಿ ಮೀರಿ ಪ್ರಾಮಾಣಿಕವಾಗಿ ಸಮಗ್ರ ಅಭಿವೃದ್ಧಿಯನ್ನು ಸಾಧಿಸಿದ ತೃಪ್ತಿ ನನಗಿದೆ. ಮತ್ತಷ್ಟು ಸಮಗ್ರ ಅಭಿವೃದ್ಧಿಗೆ ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದರು. ಪಟ್ಟಣದಲ್ಲಿ ಕುಡಿಯುವ ನೀರಿಗೆ ಹೆಚ್ಚಿನದಾಗಿ ಆದ್ಯತೆ ನೀಡಿದ್ದೇನೆ.
ರಸ್ತೆಗಳ ಅಭಿವೃದ್ಧಿ ಕೈಗೊಂಡಿದ್ದೇನೆ. ಕೊಳಗೇರಿ ನಿವಾಸಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುವುದು. ರಾಜಕೀಯ ಇಚ್ಛಾಶಕ್ತಿಯಿಂದ ವಿರೋಧ ಪಕ್ಷಗಳು ಮಾತಿಗೆ ಕಿವಿಗೊಡಬೇಡಿ, ಟೀಕೆ ಟಿಪ್ಪಣಿಗಳಿಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ. ಸದಾ ಅಭಿವೃದ್ಧಿಯ ದೃಷ್ಟಿಕೋನ ಇಟ್ಟುಕೊಂಡಿರುವ ಜೆಡಿಎಸ್ ಅನ್ನು ಅಧಿಕಾರಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮತದಾರರು ಮಾಡಬೇಕಿದೆ. ಪುರಸಭೆಯ ಒಟ್ಟು 23 ವಾರ್ಡ್ಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ನನ್ನ ಕೈಬಲಪಡಿಸಬೇಕು. ಈ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಹೊಸ ಶಕೆ ಆರಂಭಗೊಳ್ಳಲಿ ಎಂದು ಅವರು ತಿಳಿಸಿದರು.
ಲಲಿತ ಸಹಸ್ರ ನಾಮ ಸಮಾರಂಭಕ್ಕೆ ತೆರೆ
ದೇವನಹಳ್ಳಿ: ಇಲ್ಲಿನ ಶ್ರೀ ಕಾಳಿಕಾಂಬ ಕಮ್ಮಟೇಶ್ವರ ದೇವಾಲಯದಲ್ಲಿ ಲಲಿತ ಸಹಸ್ರನಾಮ ಸಮಾರೋಪ ಅಂಗವಾಗಿ ವಿಶೇಷ ಪೂಜಾಕಾರ್ಯಗಳು ಹಾಗೂ ಮಹಾ ಸುದರ್ಶನ ಹೋಮ ಧಾರ್ಮಿಕ ಸಮಾರಂಭವನ್ನು ದೇವನಹಳ್ಳಿ ತಾಲೂಕು ವಿಶ್ವ ಹಿಂದೂ ಪರಿಷತ್ ಸಂಘಟಕರು ಆಯೋಜಿಸಿದ್ದರು. ಈ ಸಂಧರ್ಭದಲ್ಲಿ ಕಳೆದ ಒಂದು ವರ್ಷದಿಂದ ಪ್ರತಿ ವಾರದಲ್ಲಿ ಎರಡು ದಿನ 108 ಮನೆಗಳಲ್ಲಿ ಸಂಜೆ ಲಲಿತ ಸಹಸ್ರನಾಮ ಪಠಣ ಹಾಗೂ ಪೂಜೆಗಳು ನಡೆಯುತ್ತಿದ್ದು ಅಂತಿಮವಾಗಿ ಸಮಾರೋಪ ಅಂಗವಾಗಿ ಗಣಪತಿ ಹೋಮ, ನವಗ್ರಹ ಹೋಮ, ಸುಬ್ರಹ್ಮಣ್ಯ ಹೋಮ, ಲಲಿತ ಹೋಮ ಹಾಗೂ ಮಹಾ ಸುದರ್ಶನ ಹೋಮ ಆಯೋಜಿಸಲಾಗಿತ್ತು ಎಂದು ಸಂಚಾಲಕರಾದ ಸನಾತನ ಮೂರ್ತಿ ಅವರು ತಿಳಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲೂ ಲಲಿತ ಸಹಸ್ರನಾಮ ಪೂಜಾಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ ಎಂದರು. ಸಮಾರಂಭದಲ್ಲಿ ದೊಡ್ಡಬಳ್ಳಾಪುರ ಸಪಸೀಹಳ್ಳಿ ಮಠದ ಶ್ರೀ ದಿವ್ಯಜ್ಞಾನಾನಂದ ಗಿರಿ ಸ್ವಾಮೀಜಿಗಳು ಆಶೀರ್ವಚನ ನೀಡಿ ವಿಶ್ವ ಶಾಂತಿಗಾಗಿ ಅಲ್ಲದೆ ಹಿಂದೂ ದರ್ಮ ಅಳಿಯದಿರಲು ಹೋಮ ಹವನಗಳು ನಡೆಯಬೇಕು. ಮಾನವರಿಗೆ ನೆಮ್ಮದಿಯ ಬದುಕು ಬೇಕಾಗಿದೆ. ಆದ್ದರಿಂದ ದೇವರ ಧ್ಯಾನ ಮುಖ್ಯವಾಗಿರುತ್ತದೆ ಎಂದರು. ಇದೇ ಸಂಧರ್ಭದಲ್ಲಿ ಪ್ರಾಂತ ಸೇವಾ ಪ್ರಮುಖರಾದ ತುಮಕೂರಿನ ವಿಜಯಕ್ಕ ಅವರು ಮಾತನಾಡಿ ಪ್ರತಿ ಮನೆಯಲ್ಲಿ ಲಲಿತ ಸಹಸ್ರನಾಮ ಪೂಜಾಕಾರ್ಯ ಮಾಡುವುದರಿಂದ ಅವರ ಮನೆಗಳಲ್ಲಿ ಶಾಂತಿ ನೆಮ್ಮದಿ ದೊರೆಯುತ್ತದೆ. ಅಲ್ಲದೆ ಹಿಂದೂ ಧರ್ಮಕ್ಕೆ ಎಲ್ಲಿಯೇ ಆಗಲಿ ಚ್ಯುತಿಬಂದಾಗ ಅಂತಹ ಶಕ್ತಿಗಳ ವಿರುದ್ಧ ಹೊರಾಡುವ ಮನಸು ಬೇಕಾಗಿದೆ ಮತ್ತು ಸಮಾಜದಲ್ಲಿ ನಡೆಯುವ ತಪ್ಪಗಳನ್ನು ನೋಡಿ ಸುಮ್ಮನಿರಬಾರದು ಅದನ್ನು ಎದುರಿಸುವ ಶಕ್ತಿ ಕೂಡ ಬರಬೇಕು ಎಂದರು.
ಯಕ್ಷಗಾನ ಗ್ರಾಮೀಣ ಭಾಗದ ಆಸ್ತಿ
ಮಾಗಡಿ: ಯಕ್ಷಗಾನ, ಜನಪದ ಕಲಾವಿದರು ಗ್ರಾಮೀಣ ಭಾಗದ ಆಸ್ತಿಯಿದ್ದಂತೆ ಎಂದು ತಹಸೀಲ್ದಾರ್ ಡಾ.ಬಿ.ಆರ್. ಹರೀಶ್ ನಾಯಕ್ ತಿಳಿಸಿದರು. ಅವರು ಲಕ್ಷ್ಮೀ ರಂಗನಾಥ ಯಕ್ಷಗಾನ ಕಲಾವಿದರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡುತ್ತಾ ಕಲಾವಿದರನ್ನು ಸರ್ಕಾರ ಪ್ರೋತ್ಸಾಹಿಸುತ್ತಿದೆ. ವಯೋವೃದ್ಧ ಕಲಾವಿದರಿಗೆ ಮಾಸಿಕ ಪಿಂಚಣಿ ನೀಡುತ್ತಿದ್ದೇವೆ. ಕೇವಲ ಸರ್ಕಾರ ಪ್ರೋತ್ಸಾಹ ನೀಡಿದರೆ ಸಾಲದು, ವಿವಿಧ ಸಂಘ, ಸಂಸ್ಥೆಗಳು ಗ್ರಾಮೀಣ ಕಲಾವಿದರನ್ನು ಪ್ರೋತ್ಸಾಹಿಸಬೇಕು. ಕಲಾವಿದರ ಸಂಘಕ್ಕೆ ಸರ್ಕಾರದ ವತಿಯಿಂದ ನಿವೇಶನ ನೀಡಲು ಅಗತ್ಯ ಕ್ರಮ ವಹಿಸುತ್ತೇನೆ ಎಂದರು. ಸಂಘದ ಅಧ್ಯಕ್ಷ ಕಲಾವಿದರ ಸಂಘಕ್ಕೆ ನಿವೇಶನ ಮಂಜೂರಾತಿ ನೀಡುವಂತೆ ಮನವಿ ಮಾಡಿಕೊಂಡರು. ಅಧ್ಯಕ್ಷ ಎ.ಎಂ.ನಾಗರಾಜು, ಕಾರ್ಯದರ್ಶಿ ನಾಗರಾಜು, ಖಜಾಂಚಿ ಮಂಜುನಾಥ್, ಗೌರವಾಧ್ಯಕ್ಷ ರವಿಕುಮಾರ್, ನಿರ್ದೇಶಕರಾದ ಶಂಕರ್, ಗಂಗಣ್ಣ, ಗೋವಿಂದಪ್ಪ, ಪಾಂಡುರಂಗಯ್ಯ, ರಂಗಪ್ಪ, ಗಂಗಾಧರ್, ಹನುಮಂತರಾಯಪ್ಪ, ಭೈಲಪ್ಪ, ನಾಗರಾಜು, ಅಶ್ವತ್ಥಾಚಾರ್, ಮುನಿರಾಜು ಇತರರು ಇದ್ದರು.
ಮಹಿಳೆಯರಿಗೆ ಕಾನೂನು ಅರಿವು
ರಾಮನಗರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ವಾರ್ತಾ ಇಲಾಖೆಯಿಂದ ಮಾ.5ರ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸಭಾಂಗಣದಲ್ಲಿ ಮಹಿಳೆಯರಿಗಾಗಿ ಒಂದು ದಿನದ ಕಾನೂನು ಅರಿವು ಕಾರ್ಯಾಗಾರ ನಡೆಯಲಿದೆ.
ಕಾರ್ಯಾಗಾರವನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಕೆ.ಪ್ರಹ್ಲಾದ್ ಉದ್ಘಾಟಿಸುವರು. ವಕೀಲರ ಸಂಘದ ಅಧ್ಯಕ್ಷ ಟಿ.ಕೆ.ಶಾಂತಪ್ಪ ಅಧ್ಯಕ್ಷತೆ ವಹಿಸುವರು.
ನ್ಯಾಯಾಧೀಶರಾದ ಕೆ.ಸುರೇಶ್, ಕೆ.ನಾರಾಯಣ ಪ್ರಸಾದ್, ಬಿ.ಕೆ.ಕೋಮಲ, ಕೆ.ಎನ್.ರೂಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಘುನಾಥ್, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರಾಜು, ಸರ್ಕಾರಿ ಕಾನೂನು ಕಾಲೇಜು ಪ್ರಾಂಶುಪಾಲ ಗೋಪಾಲ ಭಾಗವಹಿಸುವರು.
ಸಂಘರ್ಷ ಸಂದೇಶ ಜಾಥಾ
ದೊಡ್ಡಬಳ್ಳಾಪುರ: ಯುಪಿಎ ಸರ್ಕಾರದ ಚಿಲ್ಲರೆ ರಾಜಕಾರಣ ಖಂಡನೀಯ. ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಮುಂದಾಗುವ ಮೂಲಕ ವಾಲ್ಮಾರ್ಟ್ಗೆ ದೇಶದ ಬಹುಸಂಖ್ಯಾತ ಸ್ವಾಯತ್ತ ಚಿಲ್ಲರೆ ವ್ಯಾಪಾರಿಗಳ ಬದುಕನ್ನು ಮಾರಾಟ ಮಾಡಲಾಗಿದೆ ಎಂದು ಸಿಪಿಐ(ಎಂ) ಪಾಲಿಟ್ಬ್ಯೂರೋ ಸದಸ್ಯ ಎಸ್.ರಾಮಚಂದ್ರನ್ ಪಿಳ್ಳೈ ಅವರು ಆರೋಪಿಸಿದರು.
ವಿವಿಧ ಹಕ್ಕುಗಳಿಗಾಗಿ ಒತ್ತಾಯಿಸಿ ಭಾರತದಾದ್ಯಂತ ನಡೆಯುತ್ತಿರುವ ನವಭಾರತ ನಿರ್ಮಾಣಕ್ಕಾಗಿ ಸಂಘರ್ಷ-ಸಂದೇಶ ಜಾಥಾ ಕಾರ್ಯಕ್ರಮದ ಅಂಗವಾಗಿ ದಕ್ಷಿಣ ಭಾರತದಲ್ಲಿ ಸಂಚರಿಸುತ್ತಿರುವ ಜಾಥಾಕ್ಕೆ ಶನಿವಾರ ದೊಡ್ಡಬಳ್ಳಾಪುರ ನಗರದಲ್ಲಿ ಅರ್ಥಪೂರ್ಣ ಸ್ವಾಗತ ನೀಡಲಾಯಿತು.
ಈ ಸಂದರ್ಭದಲ್ಲಿ ಕೊಂಗಾಡಿಯಪ್ಪ ಕಾಲೇಜು ಸಮೀಪ ನಡೆದ ಬಹಿರಂಗ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖಂಡರು, ಶಿಕ್ಷಣ ಮತ್ತು ಉದ್ಯೋಗದ ಹಕ್ಕು, ಮನೆ ನಿರ್ಮಾಣ ಮತ್ತು ನಿವೇಶನದ ಹಕ್ಕುಗಳು, ಭೂಸುಧಾರಣೆ ಹಕ್ಕುಗಳಿಗಾಗಿ ದೇಶದ ಜನ ಒತ್ತಾಯಿಸುತ್ತಿದ್ದಾರೆ.
ಆದರೆ ನಮ್ಮನ್ನಾಳುವ ಸರ್ಕಾರಗಳಿಗೆ ಬಡ ಮತ್ತು ಮಧ್ಯಮ ವರ್ಗದ ಬದುಕು ಮತ್ತು ಇಷ್ಟ-ಕಷ್ಟಗಳು ಬೇಡವಾಗಿರುವುದು ಮಾತ್ರ ದುರಂತ ಎಂದರು.
ಆರೋಗ್ಯದ ಹಕ್ಕಿಗಾಗಿ ನಮ್ಮ ಹೋರಾಟ ನಿರಂತರ ಮುಂದುವರೆದಿದೆ. ಜಾತ್ಯತೀತ ರಾಷ್ಟ್ರದಲ್ಲಿ ಜಾತೀಯ ಮತ್ತು ಮತೀಯ ಇಚ್ಛಾಶಕ್ತಿಗಳ ರೌದ್ರನರ್ತನ ಖಂಡನಾರ್ಹ. ಇಂದು ಓಟ್ ಬ್ಯಾಂಕ್ಗಾಗಿ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಸಮಾಜವನ್ನು ನಿರಂತರವಾಗಿ ಒಡೆದು ಆಳುವ ನೀತಿಯನ್ನು ಕಾಣುತ್ತಿದ್ದೇವೆ.
ಆರ್ಥಿಕ ಮತ್ತು ಶೈಕ್ಷಣಿಕ ವಲಯದ ಖಾಸಗೀಕರಣ ಈ ದೇಶದ ಭವಿಷ್ಯದ ಮೇಲೆ ಕರಾಳ ಪರಿಣಾಮ ಬೀರಲಿದೆ. ಖಾಸಗಿ ವಿದೇಶಿ ನೇರ ಬಂಡವಾಳವನ್ನು ಎಗ್ಗಿಲ್ಲದೆ ತರುತ್ತಿರುವ ಸರ್ಕಾರ ದೇಶವನ್ನು ಆರ್ಥಿಕ ಗುಲಾಮಗಿರಿಗೆ ತಳ್ಳುತ್ತಿದೆ. ಈ ಬಗ್ಗೆ ಸಮಸ್ತರೂ ಎಚ್ಚರಿಕೆ ವಹಿಸಬೇಕಿದೆ ಎಂದರು.
ಜಾಥಾದಲ್ಲಿ ಸಿಪಿಐ(ಎಂ) ಕೇಂದ್ರ ಪಾಲಿಟ್ ಬ್ಯೂರೋ ಸದಸ್ಯರಾದ ಕೆ.ವರದರಾಜನ್, ಎಂ.ಎ.ಬೇಬಿ, ಕೇಂದ್ರ ಕಾರ್ಯದರ್ಶಿ ಮಂಡಲಿ ಸದಸ್ಯ ಶ್ರೀನಿವಾಸರಾವ್, ಅಖಿಲ ಭಾರತ ಮಹಿಳಾ ಸಭಾದ ಮುಖಂಡರಾದ ಸುಧಾ ಸುಂದರರಾಜನ್, ಅಖಿಲ ಭಾರತ ಕಿಸಾನ್ ಸಭಾದ ಮುಖಂಡ ಬಿಜು ಕೃಷ್ಣನ್, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಲಿಯ ಆರ್. ಚಂದ್ರತೇಜಸ್ವಿ ಸೇರಿದಂತೆ ಅನೇಕ ಮುಖಂಡರು, ಸ್ಥಳೀಯ ಪದಾಧಿಕಾರಿಗಳು ಹಾಜರಿದ್ದರು.