ಮದ್ಯಪಾನ ಮಾರಾಟಕ್ಕೆ ಕಡಿವಾಣ ಇರಲಿ
ಆನೇಕಲ್: ಶಾಲಾ ಕಾಲೇಜುಗಳ ಬಳಿ ಇರುವ ವೈನ್ ಸ್ಟೋರ್ ಹಾಗೂ ಬಾರ್ಗಳಿಗೆ ತಡೆಗೋಡೆ ನಿರ್ಮಿಸಬೇಕು ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಜೆ. ನಾರಾಯಣಪ್ಪ ಸಲಹೆ ನೀಡಿದ್ದಾರೆ.
ಅವರು ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ವಿವಿದ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ ಅಬಕಾರಿ ಕಾಯಿದೆಯಂತೆ ಅಂಗಡಿಗಳಲ್ಲಿ ಕುಡಿಯುವಂತಿಲ್ಲ. ಕುಡಿದ ಅಮಲಿನಲ್ಲಿ ಬೀದಿಯಲ್ಲಿ ನಿಂತರೆ ಶಾಲಾ ಮಕ್ಕಳಿಗೆ ಯಾವ ಸಂದೇಶ ರವಾನಿಸಿದಂತಾಗುತ್ತದೆ ಎಂದು ಸಭೆಯಲ್ಲಿ ಪ್ರಶ್ನಿಸಿದರು.
ಮದ್ಯಪಾನದ ಹಾವಳಿ ಪ್ರತಿ ಹಳ್ಳಿಗಳಲ್ಲೂ ತಾಂಡವವಾಡುತ್ತಿದ್ದು ಚಿಲ್ಲರೆ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ.
ಅಬಕಾರಿ ಇಲಾಖೆಯವರು ಎಲ್ಲವನ್ನೂ ತಿಳಿದೂ ಜಾಣ ಕುರುಡು ಮೆರೆಯುತ್ತಿದ್ದಾರೆ. ಈ ಕೂಡಲೇ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಅಂತೆಯೇ ಆನೇಕಲ್ ಯೋಜನಾ ಪ್ರಾಧಿಕಾರದಲ್ಲಿ ಅಪಾರ ಹಣ ಸಂಗ್ರಹವಾಗಿದ್ದು ತಾಲೂಕು ಪಂಚಾಯ್ತಿಗೆ ಅನುದಾನ ಬಿಡುಗಡೆ ಮಾಡಿದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅವಕಾಶವಾಗತ್ತದೆ. ಚುನಾಯಿತ ಪ್ರತಿನಿಧಿಗಳಿಗೆ ಜನಸೇವೆಗೆ ಅನುವು ಮಾಡಿಕೊಡಬೇಕೆಂದರು.
ತಾಲೂಕು ಪಂಚಾಯ್ತಿ ಸದಸ್ಯ ಮುರಳಿಕೃಷ್ಣ ಮಾತನಾಡಿ, ಜಾನುವಾರುಗಳಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಹಳ್ಳಿಗಳಲ್ಲಿ ನೀರಿನ ತೊಟ್ಟಿ ನಿರ್ಮಿಸುವ ಮೂಲಕ ಗೋಕಟ್ಟೆ ಯೋಜನೆಗೆ ಚಾಲನೆ ನೀಡಬೇಕೆಂದು ಮನವಿ ಮಾಡಿದರು.
ಹುದ್ದೆ ಭರ್ತಿಯಾಗಲಿ: ತಾಪಂ ಮಾಜಿ ಅಧ್ಯಕ್ಷೆ ತೇಜಸ್ವಿ ನಟರಾಜ್ ಮಾತನಾಡಿ ಸರ್ಕಾರಿ ಶಾಲೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆ ಭರ್ತಿಯಾಗಬೇಕು. ಕೈಗಾರಿಕಾ ಪ್ರದೇಶಗಳಿಂದ ತ್ಯಾಜ್ಯ ನಿರ್ವಹಣೆ ಸಮರ್ಪಕ ಇಲ್ಲದೇ ಅಂತರ್ಜಲ ಕಲುಷಿತವಾಗಿದೆ ಎಂದರು.
ಕಾಂಗ್ರೆಸ್ನಿಂದ ಸಚಿವನಾಗಿ ನಿಮ್ಮ ಮುಂದೆ ನಿಲ್ಲುತ್ತೇನೆ
ಚನ್ನಪಟ್ಟಣ: ಕಾಂಗ್ರೆಸ್ ಕಟ್ಟಿದವರು ನಾವು, ಕಾಂಗ್ರೆಸ್ನಲ್ಲಿರುವ ನಾಯಕರನ್ನು ಬೆಳೆಸಿದವರು ನಾವು. ಇದೀಗ ಆ ಪಕ್ಷಕ್ಕೆ ಹೋಗಲು ನಾವೇಕೆ ಹೆದರಬೇಕು, ಮುಂದೆ ಕಾಂಗ್ರೆಸ್ನಿಂದ ಸಚಿವನಾಗಿ ನಿಮ್ಮ ಮುಂದೆ ನಿಲ್ಲುತ್ತೇನೆ. ಇದು ಯೋಗೇಶ್ವರ್ ತಮ್ಮ ಬೆಂಬಲಿಗರಿಗೆ ನೀಡಿದ ಭರವಸೆ.
ತಾಲೂಕಿನ ಕೋಡಂಬಹಳ್ಳಿ ಗ್ರಾಮದಲ್ಲಿ ನಡೆದ ಕೆರೆ ಪೂಜೆ ಮತ್ತು ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿ, ತಾಲೂಕಿನ ಎಲ್ಲಾಕೆರೆಗಳನ್ನು ತುಂಬಿಸುವವವರೆಗೆ ನನ್ನ ರಾಜಕೀಯ ಹೋರಾಟ ಮುಗಿಯುವುದಿಲ್ಲ ಎಂದರು.
ನಾನು ಕಾಂಗ್ರೆಸ್ ಪಕ್ಷಕ್ಕೆ ಬಂದಿರುವುದನ್ನು ನನ್ನ ಬೆಂಬಲಿಗರು ಸ್ವಾಗತಿಸಿದ್ದು, ಇನ್ನು ಮೂರು ತಿಂಗಳು ಕಾಯಿರಿ ಬಾಕಿ ಉಳಿದಿರುವ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸುವೆ. ಆಯುಧ ಪೂಜೆ ವೇಳೆಗೆ ಎಲ್ಲಾ ಕೆರೆಗಳಿಗೂ ನೀರು ತುಂಬಿಸೇ ತೀರುವೆ ಎಂದರು.
ಚನ್ನಪಟ್ಟಣದ ಜನತೆಗೆ ಏನು ಬೇಕೆಂದು ನನಗೆ ಗೊತ್ತಿದೆ, ನಾನು ಅವರಿವರನ್ನು ಟೀಕಿಸುತ್ತಾ ವೃತಾ ಸಮಯ ಹಾಳು ಮಾಡಿಕೊಳ್ಳುವುದಿಲ್ಲ, ನನಗೆ ಅಳುಕಿಲ್ಲ. ಜನತೆ ಮುಂದಿನ ಚುನಾವಣೆಯಲ್ಲಿ ನನ್ನ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಬೆಂಬಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿಂಗರಾಜಿಪುರವೇ ಕೊನೆ: ತಾಲೂಕಿನ ಸಿಂಗರಾಜಪುರ ಗ್ರಾಮದ ಕೆರೆ ಪೂಜೆಯೇ ಅಂತಿಮವಾಗಿದ್ದು ನಂತರ ಯಾವುದೇ ಕಾರ್ಯಕ್ರಮ ಮಾಡುವುದಿಲ್ಲ, ನಾನು ಸರಿಯಾದ ಸಮಯದಲ್ಲಿ ಕಾಂಗ್ರೆಸ್ಗೆ ಪಾದಾರ್ಪಣೆ ಮಾಡಿದ್ದು, ಈ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಯನ್ನು ಪೂರ್ಣಗೊಳಿಸಿ ತಾಲೂಕನ್ನು ಮಾದರಿ ಮಾಡುವೆ ಎಂದರು.
ಭಿನ್ನಾಭಿಪ್ರಾಯ ಇಲ್ಲ: ತಾಲೂಕು ಕಾಂಗ್ರೆಸ್ ಮುಖಂಡರೊಂದಿಗೆ ನನಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾವೆಲ್ಲ ಒಗ್ಗೂಡಿ ನಗರಸಭಾ ಚುನಾವಣೆಯನ್ನು ಎದುರಿಸುತ್ತೇವೆ ಎಂದ ಯೋಗೇಶ್ವರ್ ಕೆಲ ವಾರ್ಡ್ಗಳಲ್ಲಿ ನಾನು ಸಹ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯ ಕೈಗೊಂಡಿದ್ದು ನಗರಸಭೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಶ್ರಮಿಸುವುದಾಗಿ ತಿಳಿಸಿದರು.