ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಜೆಡಿಎಸ್ ಪ್ರಚಾರ ಕಾರ್ಯಕ್ಕೆ ಅನಿತಾ ಚಾಲನೆ

Srinivasa Murthy VN
Updated On : 22 Mar 2013, 11:55 am

ಪಕ್ಷದ ಪ್ರಮುಖರು, ಕಾರ್ಯಕರ್ತರ ಜತೆ ಚರ್ಚೆ, ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ- ಮನವಿ
ಚನ್ನಪಟ್ಟಣ: ವಿಧಾನ ಸಭಾ ಚುನಾವಣೆ ನಿಗದಿಯಾದ ಬೆನ್ನಲ್ಲೇ ಜೆಡಿಎಸ್ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ್ದು ಪಕ್ಷದ ಸಂಭವನೀಯ ಅಭ್ಯರ್ಥಿ ಅನಿತಾಕುಮಾರಸ್ವಾಮಿ ಶುಕ್ರವಾರ  ಪ್ರಚಾರ  ನಡೆಸಿದರು.
ತಾಲೂಕಿನ ವಂದಾರಗುಪ್ಪೆ, ರಾಂಪುರ, ಮಾಕಳಿ, ದಶವಾರ, ನಾಗವಾರ ಗ್ರಾಮಪಂಚಾಯ್ತಿ ಕೇಂದ್ರಗಳಿಗೆ ಭೇಟಿ ನೀಡಿ ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರ ಜತೆ ಚರ್ಚಿಸಿದರಲ್ಲದೆ, ಕಾಲ ಮತದಾರರನ್ನು ಭೇಟಿಮಾಡಿ ಈ ಬಾರಿಯ ಚುನಾವಣೆಯಲ್ಲಿ ನನ್ನನನ್ನು ಗೆಲ್ಲಿಸಿ ಕೊಡಿ ಎಂದು ಮನವಿ ಮಾಡಿದರು.
ಸಿಪಿವೈ ವಿರುದ್ಧ ವಾಗ್ದಾಳಿ: ಕಳೆದ 12 ವರ್ಷಗಳಿಂದ ಕ್ಷೇತ್ರದ ಶಾಸಕರಾಗಿದ್ದವರು ಕ್ಷೇತ್ರದ ಅಭಿವೃದ್ಧಿಯನ್ನೇ ಮರೆತಿದ್ದಾರೆ. ಆದ್ದರಿಂದ ಕ್ಷೇತ್ರದಲ್ಲಿ ಮೂಲಭೂತಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದ್ದು, ಜನತೆ ಸಮಸ್ಯೆಯಲ್ಲಿ ಸಿಲುಕಿದ್ದಾರೆ ಎಂದು ಮಾಜಿ ಸಚಿವ ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು.
ಶಾಶ್ವತ ನೀರಾವರಿಗಾಗಿ ಸಂಕಲ್ಪ: ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ತುಮಕೂರು ಸೇರಿದಂತೆ ಬಯಲು ಸೀಮೆ ಪ್ರದೇಶಕ್ಕೆ ಶಾಶ್ವತ ನೀರಾವರಿ ಪ್ರದೇಶವನ್ನಾಗಿಸುವುದಾಗಿ ಎಚ್.ಡಿ. ಕುಮಾರಸ್ವಾಮಿಯವರು ಸಂಕಲ್ಪ ಮಾಡಿದ್ದಾರೆ ಜನತೆಯ ಬವಣೆಗೆ ಪರಿಹಾರ ಕಲ್ಪಿಸಲು ಜೆಡಿಎಸ್ ಬೆಂಬಲಿಸಿ ಎಂದವರು ಮನವಿ ಮಾಡಿದರು.
ನಾನು ಈ ನೆಲದ ಮಗಳು: ನಾನು ನನ್ನ ಬಾಲ್ಯದ ದಿನಗಳನ್ನ ಇಲ್ಲೇ ಕಳೆದು ಚನ್ನಪಟ್ಟಣದ ಮನೆ ಮಗಳಾಗಿದ್ದೇನೆ. ನಮ್ಮ ಕುಟುಂಬ ಕೂಡ ಕ್ಷೇತ್ರದ ಜನತೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಕ್ಷೇತ್ರದ ಜನತೆ ನನ್ನನ್ನ ಮನೆಮಗಳಂತೆ ಭಾವಿಸಿದ್ದಾರೆ ಎಂದು ತಿಳಿಸಿದರು.
ಇತ್ತೀಚಿಗೆ ಬಿಜೆಪಿ ತೊರೆದು ಜೆಡಿಎಸ್‌ಗೆ ಸೇರ್ಪಡೆಗೊಂಡ ರಾಂಪುರ ರಾಜಣ್ಣರ ನೇತೃತ್ವದಲ್ಲಿ ಹಲವಾರು ಕಾರ್ಯಕರ್ತರು ಜೆಡಿಎಸ್‌ಗೆ ಅಧಿಕೃತ ಸೇರ್ಪಡೆಗೊಂಡರು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚೆಚ್ಚು ಮಂದಿ ಜೆಡಿಎಸ್‌ಗೆ ಸೇರ್ಪಡೆಗೊಳ್ಳಲಿದ್ದಾರೆಂದು ರಾಂಪುರ ರಾಜಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನಪರಿಷತ್ ಸದಸ್ಯ ಪುಟ್ಟಣ್ಣ, ಜಿ.ಪಂ.ಸದಸ್ಯ ಹೊಂಗನೂರು ರಮೇಶ್, ತಾ.ಜೆಡಿಎಸ್ ಅಧ್ಯಕ್ಷ ವಡ್ಡರಳ್ಳಿ ರಾಜಣ್ಣ, ಎಂ.ಜಿ.ಕೆ ಪ್ರಕಾಶ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ಆಶಿಷ್, ಧರಣೀಶ್, ಅಭಿ, ಹರ್ಷ, ಕೆಂಚೇಗೌಡ, ವಿಬಿ ಚಂದ್ರು, ರೇಖಾ ಉಮಾಶಂಕರ್, ಡಿ.ಕೆ.ಕಾಂತರಾಜ್, ಹಾಪ್‌ಕಾಮ್ಸ್ ದೇವರಾಜ್, ಫರೀದ್ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

ಮಾಗಡಿ, ಚನ್ನಪಟ್ಟಣ ಕಾಮಗಾರಿ ಅವ್ಯವಹಾರ; ದೂರು ದಾಖಲು
ಬೆಂಗಳೂರು
: ಮಾಗಡಿ ಮತ್ತು ಚನ್ನಪಟ್ಟಣ ವ್ಯಾಪ್ತಿಯಲ್ಲಿ 2009 ರಿಂದ 2012ರವರೆಗೆ ಲೋಕೋಪಯೋಗಿ ಇಲಾಖೆಯ ವಿವಿಧ ಮೂಲಸೌಕರ್ಯ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ ಎಂದು ರಾಜ್ಯ ರೈತ ಸಂಘದ ಸದಸ್ಯ ಸಿ.ಪುಟ್ಟಸ್ವಾಮಿ ಅವರು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ.
ಮಾಹಿತಿ ಹಕ್ಕು ಕಾಯಿದೆ ಅನ್ವಯ ಪಡೆದ ದಾಖಲೆಗಳನ್ನು ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಒಂದೇ ಸ್ಥಳದ ಕಾಮಗಾರಿಗಳನ್ನು ಕೆಲ ತಿಂಗಳುಗಳ ಅಂತರದಲ್ಲಿ ಎರಡು ಬಾರಿ ನಡೆಸಲಾಗಿದೆ. ಆದರೆ ಕೆಲಸ ಮಾತ್ರ ನಡೆದಿಲ್ಲ ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ದೂರಿನಲ್ಲಿ ಸಿ.ಪುಟ್ಟಸ್ವಾಮಿ ಆರೋಪಿಸಿದ್ದಾರೆ. ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ 280 ಕೋಟಿ ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
2011- 12ನೇ ಸಾಲಿನಲ್ಲಿ ಮಾಗಡಿ ಹಾಗೂ ಚನ್ನಪಟ್ಟಣ ನಡುವೆ 1248 ರಸ್ತೆ ಕಾಮಗಾರಿಗಳನ್ನು 228 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಆದರೆ ಆ ಎಲ್ಲಾ ಕಾಮಗಾರಿಗಳ ಪೈಕಿ ಕೆಲ ಕಾಮಗಾರಿಗಳು ನಡೆದೇ ಇಲ್ಲ. ಮತ್ತೆ ಕೆಲವು ಕಳಪೆ ಗುಣಮಟ್ಟದ್ದಾಗಿವೆ ಎಂದು ಆರೋಪಿಸಲಾಗಿದೆ.
ನಿಯಮ ಪ್ರಕಾರ ಲೋಕೋಪಯೊಗಿ ಇಲಾಖೆ 20 ಲಕ್ಷ ಮೆಲ್ಪಟ್ಟ ಕಾಮಗಾರಿಗೆ ಇ -ಟೆಂಡರ್ ಕರೆಯಬೇಕು. ಆದರೆ ಅಧಿಕಾರಿಗಳು ಉದ್ದೇಶಪೂರ್ವಕವಾಗಿ 20 ಲಕ್ಷಕ್ಕಿಂತ ಕಡಿಮೆ ಮಾಡಿ ಯೋಜನೆಯನ್ನು ತುಂಡು ಗುತ್ತಿಗೆಗೆ ಪರಿವರ್ತಿಸಿ ಅಕ್ರಮ ಎಸಗಿದ್ದಾರೆ ಎಂದು ಸಿ.ಪುಟ್ಟಸ್ವಾಮಿ ದೂರಿನಲ್ಲಿ ಆರೋಪಿಸಿದ್ದಾರೆ.
ಸಿ.ಪುಟ್ಟಸ್ವಾಮಿ ಪರ ವಕೀಲ ಬಿ.ಎನ್.ಜಗದೀಶ್ ಅವರು ನ್ಯಾಯಾಲಯಕ್ಕೆ ದಾಖಲೆಗಳನ್ನು ಹಾಜರುಪಡಿಸಿದರು.  
ಲೋಕೋಪಯೋಗಿ ಇಲಾಖೆಯಲ್ಲದೆ ನಬಾರ್ಡ್, ಕರ್ನಾಟಕ ರಾಜ್ಯ ಹೆದ್ದಾರಿ ಮೂಲಸೌಕರ್ಯ ಯೋಜನೆ, ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆ ಹಾಗೂ ಕೇಂದ್ರ ಸರ್ಕಾರದ ಇತರ ಯೋಜನೆಗಳ ಸಂಬಂಧ ಅವ್ಯವಹಾರ ನಡೆದಿರುವ ಸಂಬಂಧ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ವಿಚಾರಣೆಯನ್ನು ನ್ಯಾಯಾಲಯ ಮಾರ್ಚ್ 28ಕ್ಕೆ ಮುಂದೂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement