ಪ.ಜಾತಿ, ಪ. ಪಂಗಡ ಸಮಾನತೆಸಾಧಿಸಲಿ: ರಂಗೇಗೌಡ ಆಶಯ
ಕ.ಪ್ರ.ವಾರ್ತೆ, ಮಾಗಡಿ ಮಾ.22
ಕಾಡಂಚಿನಲ್ಲಿ ವಾಸಿಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ಎಲ್ಲರಂತೆ ಸಮಾಜದಲ್ಲಿ ಸಮಾನತೆಯಿಂದ ಜೀವಿಸಬೇಕು ಎಂಬುದೇ ಸರ್ಕಾರದ ಧ್ಯೇಯವಾಗಿದೆ ಎಂದು ಬೆಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಂಗೇಗೌಡ ನುಡಿದರು.
ಅವರು ಮಾಗಡಿ ತಾಲೂಕಿನ ಅಜ್ಜನಹಳ್ಳಿ ಗ್ರಾಮದ ಕಾಡಂಚಿನಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪಲಾನುಭವಿಗಳಿಗೆ ಬುಧವಾರ ಸೋಲಾರ್ ಲ್ಯಾಂಪ್ ಮತ್ತು ಗ್ಯಾಸ್ ಒಲೆ, ಸಿಲೆಂಡರ್ ಗಳನ್ನು ವಿತರಿಸಿ ಮಾತನಾಡಿದರು.
ಕಾಡಂಚಿನ ಜನತೆಗೆ ಒತ್ತಡ ಕಡಿಮೆ ಮಾಡಬೇಕು. ಪ್ರತಿ ಕುಟುಂಬಕ್ಕೂ ಸೋಲಾರ್ ಲ್ಯಾಂಪ್ ಮತ್ತು ಗ್ಯಾಸ್ ಒಲೆ ಹಾಗೂ ಸಿಲೆಂಡರ್ಗಳನ್ನು ಸಹಾಯಧನದಲ್ಲಿ ವಿತರಣೆ ಮಾಡಬೇಕು ಎಂಬ ಮಹತ್ವಕಾಂಕ್ಷೆಯಿಂದ ಸರ್ಕಾರದ ಸೌಲತ್ತುಗಳನ್ನು ಸಹಾಯಧನದಲ್ಲಿ ವಿತರಿಸಲಾಗಿದೆ ಎಂದರು.
ಅಜ್ಜನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲೋಕೇಶ್ವರಿ ರಂಗೇಗೌಡ ಅಧ್ಯಕ್ಷತೆ ವಹಿಸಿ ಯೋಜನೆಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳುವಂತೆ ಪಲಾನುಭವಿಗಳಿಗೆ ಮನವಿ ಮಾಡಿದರು.
ವಲಯ ಅರಣ್ಯಾಧಿಕಾರಿ ಕೆ.ಎನ್. ಕೆಂಪರಾಜು ಮಾತನಾಡಿ ತಾಲೂಕಿನ 223 ಎಸ್ಸಿ, 50 ಎಸ್ಟಿ ಒಟ್ಟು 283 ಫಲಾನುಭವಿಗಳಿಗೆ ಸೌಲತ್ತು ಮಂಜೂರಾಗಿದೆ. ಅಜ್ಜನಹಳ್ಳಿಯ 11 ಫಲಾನುಭಗಳಿಗೆ ಗ್ಯಾಸ್ ಒಲೆ ಮತ್ತು ಸಿಲೆಂಡರ್ಗಳು ಮತ್ತು 13 ಎಸ್ಸಿ ಮತ್ತು 4 ಎಸ್ಟಿ ಫಲಾನುಭವಿಗಳಿಗೆ ಸೋಲಾರ್ ದೀಪ ವಿತರಣೆ ಮಾಡಲಾಗಿದೆ ಎಂದು ವಿವರಿಸಿದರು.
ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಕುಮಾರ್, ಅಜ್ಜನಗಳ್ಳಿ ಪಂಚಾಯ್ತಿ ಪಿಡಿಓ ವೇಣುಗೋಪಾಲ್, ಚಂದ್ರಪ್ಪ, ಶ್ರೀನಿವಾಸ್, ಶಿವಣ್ಣ ಇತರರು ಹಾಜರಿದ್ದರು.
ಫಿಲ್ಟರ್ ಮರಳು ಸಾಗಣೆ: ಪೊಲೀಸರಿಂದ 4 ಲಾರಿ ಜಪ್ತಿ
ನಂದಗುಡಿ ವ್ಯಾಪ್ತಿಯಲ್ಲಿ ಮತ್ತೆ ಮರಳು ಮಾಫಿಯಾ
ಕ.ಪ್ರ.ವಾರ್ತೆ, ಸೂಲಿಬೆಲೆ, ಮಾ.22
ಅಕ್ರಮವಾಗಿ ಫಿಲ್ಟರ್ ಮರಳು ಸಾಗಟ ಮಾಡುತ್ತಿದ್ದ ನಾಲ್ಕು ಮರಳು ಲಾರಿಗಳನ್ನು ನಂದಗುಡಿ ಪೊಲೀಸರು ಜಪ್ತಿ ಮಾಡಿ ತಹಸೀಲ್ದಾರ್ ವಶಕ್ಕೆ ಒಪ್ಪಿಸಿದ್ದಾರೆ.
ಕಳೆದ ಕೆಲ ತಿಂಗಳಿಂದ ಜಿಲ್ಲಾಡಳಿತದ ಕ್ರಮದಿಂದ ಮಕಾಡೆ ಮಲಗಿದ್ದ ಮರಳು ಮಾಫಿಯಾದವರು ಚುನಾವಣೆ ಘೋಷಣೆಯಾದ ಎರಡೇ ದಿನದಲ್ಲಿ ಮತ್ತೇ ದಂದೆ ಶುರು ಮಾಡಿ ಪ್ರಕೃತಿಯ ಒಡಲಿಗೆ ಕನ್ನ ಹಾಕುತ್ತಿದ್ದಾರೆ.
ಬೈಲುನರಸಾಪುರ ಕೆರೆ ಸೇರಿದಂತೆ ನಂದಗುಡಿ ಸುತ್ತಲಿನ ಹತ್ತಾರು ಹಳ್ಳಿಯ ಕೆರೆಗಳು ಹಾಗೂ ಖರಾಬಿ ಜಮೀನಿನಲ್ಲಿ ಅಕ್ರಮವಾಗಿ ಮರಳು ಫಿಲ್ಟರ್ ತಯಾರಿಕೆ ಮಾಡುತ್ತಿದ್ದರು. ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಹಾಗೂ ನಂದಗುಡಿ ಪೊಲೀಸರ ಸತತ ದಾಳಿಯಿಂದ ನಡುಗಿ ಹೋಗಿದ್ದ ಮರಳು ಫಿಲ್ಟರ್ ತಯಾರಿಕೆ ದಂದೆಕೋರರು ತಮ್ಮೆಲ್ಲ ಕಸಬುಗಳನ್ನು ಬಿಟ್ಟು ಮಕಾಡೆ ಮಲಗಿದ್ದರು. ಚುನಾವಣಿಯ ಘೋಷಣೆಯಾದ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳ ವರ್ಗಾವಣೆಯಾಗುತ್ತದೆ. ನಮ್ಮ ತಂಟೆಗೆ ಯಾರು ಬರುವುದಿಲ್ಲ. ಬರುವ ಹೊಸ ಪೊಲೀಸರು ದಂದೆಯ ಆಳ, ಅರಿವು ತಿಳಿದುಕೊಳ್ಳುಲು ಹಿಡಿವ ಸಮಯದೊಳಗೆ ಸಾಕಷ್ಟು ಹಣ ಮಾಡಿಕೊಳ್ಳಬಹುದು ಎಂದರಿತ ಮರಳು ದಂದೆಕೋರರು ಕಳೆದೆರಡು ದಿನಗಳಿಂದ ಸದ್ದಿಲ್ಲದೆ ಮರಳು ಫಿಲ್ಟರ್ ತಯಾರಿಕೆಯಲ್ಲಿ ತೊಡಗಿ ಪೊಲೀಸರಿಗೆ ಸಿಕ್ಕಿ ಬಿದಿದ್ದಾರೆ.
ಪಿಎಸ್ಐ ಪ್ರಕಾಶ, ಸಿಪಿಐ ವಸಂತ್ ತಂಡ ಮರಳು ದಂದೆ ನಿಯಂತ್ರಣ ಮಾಡಲು ಪ್ರಯತ್ನ ಮಾಡುತ್ತಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಮರಳು ಲಾರಿ ವಶಪಡಿಸಿಕೊಂಡು ಲಕ್ಷಾಂತರ ಹಣ ದಂಡ ಕಟ್ಟಿಸಿದ್ದಾರೆ. ಮತ್ತೆ ಶುರುವಾದ ದಂಧೆಯಿಂದ ಪೊಲೀಸರು ಎಚ್ಚೆತ್ತು ಗಸ್ತು ಹೆಚ್ಚಿಸಿದ್ದಾರೆ.