ಮರಾಠರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲಿ'
ಕ.ಪ್ರ. ವಾರ್ತೆ, ರಾಮನಗರ, ಮಾ.22
ಕ್ಷತ್ರಿಯ ಮರಾಠರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಮುಂದಾಗಬೇಕು ಎಂದು ಕರ್ನಾಟಕ ಕ್ಷತ್ರಿಯ ಮರಾಠ ಮಹಾ ಒಕ್ಕೂಟದ ಕಾರ್ಯದರ್ಶಿ ಶ್ಯಾಮಸುಂದರ್ ಗಾಯಕ್ವಾಡ್ ಕರೆ ನೀಡಿದರು.
ಜಿಲ್ಲಾಡಳಿತ, ರಾಮನಗರ ಜಿಲ್ಲಾ ಕ್ಷತ್ರಿಯ ಮರಾಠ ಸೇವಾ ಟ್ರಸ್ಟ್ನಿಂದ ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ನಡೆದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 386ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮರಾಠ ಸಮುದಾಯದಲ್ಲಿ 33 ಒಳಪಂಗಡಗಳಿವೆ. ಸುದೀರ್ಘ ಇತಿಹಾಸ ಹೊಂದಿದ ಈ ಸಮುದಾಯ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಿಲ್ಲ. ಸೂಕ್ತ ಸ್ಥಾನಮಾನ ಮತ್ತು ಸೌಲಭ್ಯಗಳಿಗಾಗಿ ಎಲ್ಲ ಒಳ ಪಂಗಡಗಳು ಸಂಘಟಿತವಾಗಬೇಕು ಎಂದು ತಿಳಿಸಿದರು.
ನೆರವಿಗೆ ನಿಲ್ಲಲು ಕರೆ: ಸಮುದಾಯವು ಶೈಕ್ಷಣಿಕ ಪ್ರಗತಿಯಲ್ಲೂ ಗಮನಾರ್ಹ ಬೆಳವಣಿಗೆ ಕಂಡಿಲ್ಲ. ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಅಶಕ್ತರಿಗೆ ಉಳ್ಳವರು ಆರ್ಥಿಕ ಮತ್ತು ಇತರೆ ರೀತಿಯಲ್ಲಿ ನೆರವಾಗುವುದು ಅಗತ್ಯ ಎಂದು ಅವರು ಸಲಹೆ ನೀಡಿದರು.
ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಕರ್ನಾಟಕದಲ್ಲಿ 2012ರಿಂದ ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲಾಗುತ್ತಿದೆ. ಇದಕ್ಕಾಗಿ ತಾವು ರಾಜ್ಯ ಸರ್ಕಾರವನ್ನು ಅಭಿನಂದಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಕಾರ್ಯಕ್ರಮ ರಚನಾತ್ಮಕವಾಗಿರಬೇಕು ಎಂದರು.
ಸಮಾರಂಭ ಉದ್ಘಾಟಿಸಿ ಅಪರ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಮಾತನಾಡಿದರು. ಉಪನ್ಯಾಸಕ ತಿಮ್ಮೇಗೌಡ ಶಿವಾಜಿ ಕುರಿತು ಉಪನ್ಯಾಸ ನೀಡಿದರು. ರಾಮನಗರ ಜಿಲ್ಲಾ ಕ್ಷತ್ರೀಯ ಮರಾಠ ಸೇವಾ ಟ್ರಸ್ಟ್ನ ಪದಾಧಿಕಾರಿಗಳಾದ ನಾರಾಯಣರಾವ್, ಸೋಮಶೇಖರ್ ರಾವ್, ಸಿಂಧುವಾಯ್ಕರ್, ಲೋಕನಾಥ್ ರಾವ್ ಖಂಡೆ, ಷಣ್ಮುಗರಾವ್, ಗೋವಿಂದರಾವ್, ಲಕ್ಷ್ಮಣರಾವ್ ಭಾಗವಹಿಸಿದ್ದರು.
ಭವ್ಯ ಮೆರವಣಿಗೆ: ವಾಟರ್ ಟ್ಯಾಂಕ್ ಸರ್ಕಲ್ ಮುಂಭಾಗದಿಂದ ಡಾ.ಬಿ.ಆರ್. ಅಂಬೇಡ್ಕರ್ ಭವನದವರೆಗೆ ನಡೆದ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರದ ಭವ್ಯ ಮೆರವಣಿಗೆಗೆ ಜಿಲ್ಲಾಧಿಕಾರಿ ವಿ. ಶ್ರೀರಾಮರೆಡ್ಡಿ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ವಿವಿಧ ಜನಪದ ಕಲಾ ತಂಡಗಳು ಭಾಗವಹಿಸಿ ಮೆರಗು ನೀಡಿದವು.