ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮಾಗಡಿ ಕ್ಷೇತ್ರ ಚುನಾವಣೆ ಪ್ರಕ್ರಿಯೆ ಪ್ರಾರಂಭ

Srinivasa Murthy VN
Updated On : 22 Mar 2013, 11:55 am

ಕ.ಪ್ರ.ವಾರ್ತೆ,ಮಾಗಡಿ.ಮಾ.22
ಮಾಗಡಿ ವಿಧಾನ ಸಭಾ ಕ್ಷೇತ್ರ ಚುನಾವಣೆ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಜಿಲ್ಲಾಧಿಕಾರಿ ಮತ್ತು ಚುನಾವಣಾ ಆಯೋಗದ ನಿರ್ದೇಶನದಂತೆ ಈಗಾಗಲೇ ಮತದಾರರ ಪಟ್ಟಿ ಪರಿಸ್ಕರಣೆ ಕಾರ್ಯವು ತಾಲೂಕಿನಾದ್ಯಂತ ಭರದಿಂದ ನಡೆದಿದೆ.
ಮಾಗಡಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಾದ ಕುದೂರು, ತಿಪ್ಪಸಂದ್ರ, ಮಾಡಬಾಳ್, ಕಸಬಾ,ಬಿಡದಿ, ಕೂಟಗಲ್ ಹೋಬಳಿಗಳಲ್ಲಿನ  ಮತದಾರರ  ನೋಂದಣಿ ಅಧಿಕಾರಿಗಳು ಆಯಾ ಸ್ಥಾನದಲ್ಲಿದ್ದು, ಸಾರ್ವಜನಿಕರು ಕೂಡಲೆ ತಮ್ಮ  ಹೆಸರನ್ನು ಮತದಾರ ಪಟ್ಟಿಗೆ ಸೇರ್ಪಡೆ ಮಾಡುವುದು, ತೆಗೆದುಹಾಕುವುದು, ಸ್ಥಳಾಂತರಗೊಳಿಸುವುದು ಮುಂತಾದ ತಿದ್ದುಪಡಿ ಕೆಲಸವನ್ನು ಮಾಡುತ್ತಿರುವುದರಿಂದ ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳುವಂತೆ ತಹಸೀಲ್ದಾರ್  ಡಾ. ಬಿ.ಆರ್. ಹರೀಶ್ ನಾಯಕ್ ತಿಳಿಸಿದ್ದಾರೆ.
ಮಾಗಡಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಿದ್ದು, ಯಾವುದೇ ಹೊಸ ಕಾಮಗಾರಿಗಳನ್ನು ಕೈಗೊಳ್ಳುವಂತಿಲ್ಲ, ಸರ್ಕಾರಿ ನೌಕರರು ಸಹ ರಜೆ ಕೋರುವಂತಿಲ್ಲ, ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನವನ್ನು ಬಿಡುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ಸುತ್ತೋಲೆ ಹೊರಡಿಸಿರುವುದರಿಂದ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದಾಗಿ ತಹಸೀಲ್ದಾರ್ ವಿವರಿಸಿದರು.
ಯಾವುದೇ ರಾಜಕೀಯ ಪಕ್ಷಗಳು ಸಭೆ, ಸಮಾರಂಭ, ಜಾಥಾ, ಮೆರವಣಿಗೆ   ಮುಂತಾದ ಚುನಾವಣಾ ಕಾರ್ಯಕ್ರಮಗಳನ್ನು ನಡೆಸಬೇಕಾದರೆ ಕಾರ್ಯಕ್ರಮಗಳ ಮುನ್ನಾ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆಯಬೇಕಿರುತ್ತದೆ. ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿ ಭಿತ್ತಿ ಪತ್ರ, ಬ್ಯಾನರ್, ಗೋಡೆ ಬರಹ ಯಾವುದನ್ನು ಅಂಟಿಸಬಾರದು ಮತ್ತು ಆಸ್ತಿಪಾಸ್ತಿಗಳನ್ನು ವಿರೂಪಗೊಳಿಸುವಂತಿಲ್ಲ ಎಂದು ತಹಸೀಲ್ದಾರ್ ಎಚ್ಚರಿಕೆ ನೀಡಿದ್ದಾರೆ.
ಒಟ್ಟು ಮತಗಟ್ಟೆಗಳು: ಮಾಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು 288 ಮತಗಟ್ಟೆಗಳಿದ್ದು,  ಒಟ್ಟು 1,96,332 ಮತದಾರರ ಪೈಕಿ  ಪುರುಷರು -1,00509, ಮಹಿಳೆಯರು-95,813 ಮತದಾರರಿದ್ದಾರೆ.  ಚುನಾವಣೆ ನಡೆಯುವ ಮತಕೇಂದ್ರಗಳಲ್ಲಿ  ಪರಿಶೀಲನೆ ನಡೆಸಲಾಗಿದ್ದು, ಎಲ್ಲವನ್ನು ಸುಸ್ಥಿತಿಯಲ್ಲಿಡುವಂತೆ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಲಾಗಿದೆ. ಹೋಬಳಿವಾರು ನೀತಿ ಸಂಹಿತೆ ಜಾರಿ ತಂಡಗಳನ್ನು ರಚಿಸಲಾಗಿದೆ.
ಹೋಬಳಿವಾರು ವಿವರ: ಕುದೂರು ಹೋಬಳಿ- ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿ. ರಾಜಶೇಖರ್. ಮಾಡಬಾಳ್ ಹೋಬಳಿ- ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಸಿ. ಕೃಷ್ಣಪ್ಪ. ತಿಪ್ಪಸಂದ್ರ ಹೋಬಳಿ- ಜಿಲ್ಲಾ ಪಂಚಾಯ್ತಿ ಸಹಾಯಕ  ಕಾರ್ಯಪಾಲಕ ಅಭಿಯಂತರ  ರವಿ.ಎಸ್.ಸೂರನ್. ಕಸಬಾ ಹೋಬಳಿ- ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಕೆ.ಬಿ. ಅಕ್ಕೋಜಿ. ಬಿಡದಿ ಹೋಬಳಿ- ರಾಮನಗರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮುನಿಕೆಂಪೇಗೌಡ. ಕೂಟಗಲ್ ಹೋಬಳಿ-ರಾಮನಗರ ತಾಲೂಕು ಸಿಡಿಪಿಓ ಇಲಾಖೆಯ ಪುಟ್ಟಲಿಂಗೇಗೌಡ.
ದಿನದ 24 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸಲು ಸೂಚಿಸಲಾಗಿದೆ. ಮಾಗಡಿ  ತಾಲೂಕು ಕಚೇರಿ ಕಂಟ್ರೋಲ್ ರೂಂ ಸ್ಥಾಪಿಸಿದ್ದು, ದೂರವಾಣಿ ಸಂಖ್ಯೆ 27745233, 27745651 ಗೆ ಸಾರ್ವಜನಿಕರು  ಕರೆ ಮಾಡಿ ಚುನಾವಣೆಗೆ ಸಂಬಂಧಿಸಿದಂತೆ   ದೂರು ದಾಖಲಿಸಲಿದ್ದಾರೆ ಎಂದು  ತಹಸೀಲ್ದಾರ್ ಹೇಳಿಕೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement