ಗ್ರಂಥಾಲಯ ಕಟ್ಟಡ ಉದ್ಘಾಟನೆ
ಕ.ಪ್ರ. ವಾರ್ತೆ ಸೂಲಿಬೆಲೆ ಮಾ.23
ಇಲ್ಲಿಗೆ ಸಮೀಪದ ನಂದಗುಡಿ ಹೋಬಳಿಯ ತಾವೆರೆಕೆರೆ ಗ್ರಾಮದಲ್ಲಿ ಸುಮಾರು ರು.7 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಗ್ರಂಥಾಲಯ ಕಟ್ಟಡವನ್ನು ವೊಲ್ವೊ ಕಂಪನಿಯ ವ್ಯವಸ್ಥಾಪಕ ಪಿಲ್ಡ್ ಡಿವಿರಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ತಾವೆರೆಕೆರೆ ಗ್ರಾಮದಲ್ಲಿ ಇದ್ದ ಗ್ರಂಥಾಲಯ ಶಾಲೆಯ ಆವರಣದ ಹೊರಗಡೆಯಿದ್ದ ಕಾರಣ ಮಕ್ಕಳಿಗೆ ಇದರ ಉಪಯೋಗ ಸಿಗುತ್ತಿರಲಿಲ್ಲ. ಗ್ರಂಥಾಲಯ ವಿದ್ಯಾರ್ಜನೆಗೆ ಪೂರಕ ಮಾಹಿತಿಯನ್ನು ಒದಗಿಸುವ ಭಂಡಾರವಾಗಿದೆ. ಜ್ಞಾನವನ್ನು ಹೆಚ್ಚಿಸುವ ಕಾರ್ಯಕ್ಕೆ ವೊಲ್ವೊ ಕಂಪನಿ ಕೈ ಜೋಡಿಸಿ ಉತ್ತಮವಾದ ಗ್ರಂಥಾಲಯವನ್ನು ಸುಮಾರು 7 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಬೇಕಾದ ಅಗತ್ಯ ಪೀಠೋಪಕರಣಗಳು, ಕ್ರೀಡಾ ಸಾಮಗ್ರಿಗಳು ಸೇರಿದಂತೆ ಅಗತ್ಯ ಪರಿಕರಕಗಳನ್ನು ಒದಗಿಸಲಾಗುವುದು. ಸಾರ್ವಜನಿಕರು ಇದರ ಉಪಯೋಗವನ್ನು ಪಡೆಯಬೇಕು ಎಂದು ತಿಳಿಸಿದರು. ತಾಪಂ ಮಾಜಿ ಅಧ್ಯಕ್ಷ ಟಿ.ಎಸ್. ರಾಜಶೇಖರ್, ಗ್ರಾಪಂ ಅಧ್ಯಕ್ಷ ದಯನಂದಬಾಬು, ಸರ್ಕಾರಿ ಶಾಲೆ ಮುಖ್ಯ ಶಿಕ್ಷಕಿ ರಾಧಾನಾಯಕ್, ಮುಖಂಡ ಗುರುಬಸಪ್ಪ, ಗ್ರಂಥಾಲಯದ ಮೇಲ್ವಚಾರಕ ಪ್ರಭಾಕರ್, ಮುಖಂಡ ಮುರಳಿಧರ, ಪ್ರಕಾಶ್ ಸೇರಿದಂತೆ ವೊಲ್ವೋ ಕಂಪನಿಯ ಅಧಿಕಾರಿ ವರ್ಗದವರು ಹಾಜರಿದ್ದರು.
ವೀರ ಸನ್ಯಾಸಿ ಲೋಕಾರ್ಪಣೆಗೆ ಕ್ಷಣಗಣನೆ...
ಕ.ಪ್ರ. ವಾರ್ತೆ ಸೂಲಿಬೆಲೆ ಮಾ.23
ಇಲ್ಲಿನ ಪರಮಹಂಸ ಆವರಣದಲ್ಲಿ ನಡೆಯಲಿರುವ ವಿವೇಕ ಉತ್ಸವದಲ್ಲಿ ವೀರ ಸನ್ಯಾಸಿಯ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ.
ಶನಿವಾರ ವಿಗ್ರಹ ಪ್ರತಿಷ್ಠಾಪನೆ ವೇದಿಕೆ ಸಿದ್ಧಗೊಂಡಿದ್ದು, ವಿಗ್ರಹವನ್ನು ನಿಲ್ಲಿಸಿ ಹೋಮ ಹಾಗೂ ಅಭಿಷೇಕ ಕಾರ್ಯವನ್ನು ನಡೆಸಲಾಯಿತು.
ಶುಕ್ರವಾರ ರಾತ್ರಿ ಸುಮಾರು 9 ಅಡಿಯ ಸ್ವಾಮಿ ವಿವೇಕಾನಂದರ ವಿಗ್ರಹವನ್ನು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಪರಮಹಂಸ ಆವರಣಕ್ಕೆ ತರಲಾಯಿತು. ಈ ವೇಳೆ ಗ್ರಾಮದ ಯುವಕರು ಬೈಕ್ ರ್ಯಾಲಿ ನಡೆಸಿದರು.ಭಾನುವಾರ ನಡೆಯಲಿರುವ ಸಾಧು, ಸಂತರ ಸಮಾಗಮದಲ್ಲಿ ಸುಮಾರ 25 ಸಾಧುಗಳು ಭಾಗವಹಿಸಲಿದ್ದಾರೆ. ವಿಗ್ರಹ ವೀಕ್ಷಣೆಗೆ ಜನಸ್ತೋಮ ಬರುತ್ತಿದ್ದು, ಎಲ್ಲರ ಗಮನಸೆಳೆಯಿತು. ಚಕ್ರವರ್ತಿ ಸೂಲಿಬೆಲೆ ಕಾರ್ಯಕ್ರಮದ ರೂವಾರಿಯಾಗಿದ್ದು, ಸೂಲಿಬೆಲೆ ಯುವಕರು ಕಾರ್ಯಕ್ರಮದ ಕೇಂದ್ರ ಬಿಂದುಗಳಾಗಿದ್ದಾರೆ.