ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಪತ್ನಿಯನ್ನು ಹತ್ಯೆಗೈದು ಪತಿ ಆತ್ಮಹತ್ಯೆ

Srinivasa Murthy VN
Updated On : 25 Mar 2013, 12:51 pm

ಕ.ಪ್ರ.ವಾರ್ತೆ ಆನೇಕಲ್ಲು  ಮಾ.24
6 ವರ್ಷ ಸಂಸಾರ ಮಾಡಿದ ಪತ್ನಿಯನ್ನು ಶಂಕಿಸಿದ ಪತಿಯೊಬ್ಬ ಹೆಂಡತಿಯನ್ನು ಹತ್ಯೆಗೈದು ಬಳಿಕ ತಾನೂ ನೇಣು ಹಾಕಿಕೊಂಡ ಸಾವನ್ನಪ್ಪಿದ ಘಟನೆ ಹೆಬ್ಬಗೋಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಪತಿ ಗೌರಿಬಿದನೂರು ವಾಸಿ ನಾಗರಾಜ್ (31). ಹತ್ಯೆಯಾದ ನತದೃಷ್ಟೆ ಶಿಲ್ಪ(30) ದೊಡ್ಡಬಳ್ಳಾಪುರದವರು.
ಎಂಟಿಆರ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ನಾಗರಾಜ್ ಕಳೆದ ಕೆಲ ತಿಂಗಳಿಂದ ಟಿಬಿ ಕಾಯಿಲೆಯಿಂದ ಬಳಲುತ್ತಿದ್ದರು. ಗಾರ್ಮೆಂಟ್ ಕಾರ್ಖಾನೆಗೆ ಹೋಗುತ್ತಿದ್ದ ಶಿಲ್ಪ ತನ್ನ ಮಗುವನ್ನು ತವರಿನಲ್ಲಿ ಬಿಟ್ಟು ಬಂದಿದ್ದರು. ಹಲವಾರು ಸಲ ಹಿರಿಯರು ನ್ಯಾಯ ಪಂಚಾಯ್ತಿ ಮಾಡಿ ದಂಪತಿಗಳು ಒಟ್ಟಿಗೆ ಅನ್ಯೋನ್ಯವಾಗಿ ಬಾಳುವಂತೆ ಸಲಹೆ ನೀಡಿದ್ದರು. ದೊಡ್ಡಬಳ್ಳಾಪುರದಿಂದ ಶನಿವಾರ ವಾಪಸ್ ಬಂದ ದಂಪತಿ  ಮತ್ತೆ ಜಗಳವಾಡಿದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಘಟನೆ ನಡೆದಿದೆ. ನಾಗರಾಜ್ ಅವರ ಸಂಬಂಧಿಗಳು ಬಂದು ಶವವನ್ನು ಗುರುತಿಸಿದ್ದು ನಾಗರಾಜ್ ಸಾಯುವ ಮುನ್ನ ತನ್ನ ತಾಯಿಗೆ ಕರೆ ಮಾಡಿ ಶಿಲ್ಪಳ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ್ದಾಗಿ ತಿಳಿಸಿದರು.
ಹೆಬ್ಬಗೋಡಿ ಪಿಎಸ್ಸೈ ಶಶಿಧರ್ ದೂರು ದಾಖಲಿಸಿಕೊಂಡು ವಾರಸುದಾರರ ವಶಕ್ಕೆ ಶವವನ್ನು ನೀಡಿದ್ದಾಗಿ ತಿಳಿಸಿದರು.

ಡಾ. ಎಂ. ಜಯರಾಮುಗೆ ರಾಷ್ಟ್ರಪ್ರಶಸ್ತಿ ಪ್ರದಾನ
ಕ.ಪ್ರ.ವಾರ್ತೆ ತುಮಕೂರು ಮಾ 24
ತುಮಕೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ವಿಭಾಗಗಳ ನಿರ್ದೇಶಕ ಹಾಗೂ ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪ್ರಾಂಶುಪಾಲ ಡಾ. ಎಂ. ಜಯರಾಮು ಅವರು ದೆಹಲಿಯ ಆಲ್ ಇಂಡಿಯಾ ಅಚೀವರ್ಸ್ ಫೌಂಡೇಶನ್ ನೀಡುವ ಪ್ರತಿಷ್ಠಿತ ಇಂಡಿಯನ್ ಲೀಡರ್ ಶಿಪ್ ಅವಾರ್ಡ್ ಫಾರ್ ಎಜುಕೇಶನಲ್ ಎಕ್ಸಲೆನ್ಸ್ ರಾಷ್ಟ್ರಪ್ರಶಸ್ತಿಯನ್ನು ಇತ್ತೀಚೆಗೆ ಸ್ವೀಕರಿಸಿದರು.
ಶಿಕ್ಷಣ, ಸಂಶೋಧನೆ ಹಾಗೂ ಆಡಳಿತ ಕ್ಷೇತ್ರದಲ್ಲಿ ಡಾ. ಜಯರಾಮು ಅವರು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ನವದೆಹಲಿಯಲ್ಲಿ ಜರುಗಿದ ರಾಷ್ಟ್ರೀಯ ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಜವಾಬ್ದಾರಿಗಳು ಎಂಬ ರಾಷ್ಟ್ರೀಯ ವಿಚಾರ ಸಂಕಿರಣದ ಸಂದರ್ಭದಲ್ಲಿ ಡಾ. ಜಯರಾಮು ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದರು. ಇಂಡಿಯನ್ ಇಕನಾಮಿಕ್ ಡೆವಲಪ್‌ಮೆಂಟ್ ಅಂಡ್ ರಿಸರ್ಚ್ ಅಸೋಸಿಯೇಶನ್ ಹಾಗೂ ಆಲ್ ಇಂಡಿಯಾ ಅಚೀವರ್ಸ್ ಫೌಂಡೇಶನ್ ಜಂಟಿಯಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ನಮೀಬಿಯಾದ ಹೈ ಕಮೀಷನರ್ ಡಾ. ಸ್ಯಾಮುವೆಲ್ ಕೆ. ಎಂಬಾಂಬೊ, ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿಯ ಕಾರ್ಯದರ್ಶಿ ವೇದ್ ಪ್ರಕಾಶ್, ದೆಹಲಿ ಹಾಗೂ ಜಮ್ಮು-ಕಾಶ್ಮೀರದ ನಿವೃತ್ತ ಮುಖ್ಯ ನ್ಯಾಯಾಧೀಶ ನ್ಯಾ. ಬಿ. ಎ. ಖಾನ್, ಮಾಜಿ ರಾಜ್ಯಪಾಲ ಹಾಗೂ ಮಾಜಿ ಕೇಂದ್ರ ಸಚಿವ ಡಾ. ಭೀಷ್ಮ ನಾರಾಯಣ ಸಿಂಗ್, ಮಾಜಿ ರಾಜ್ಯಪಾಲ ಹಾಗೂ ಮಾಜಿ ಮುಖ್ಯ ನ್ಯಾಯಾಧೀಶ ನ್ಯಾಣ ಒ. ಪಿ. ವರ್ಮಾ, ಯುನೆಸ್ಕೋ ಅಂಡ್ ಯುಎನ್ ಸ್ಟಡೀಸ್‌ನ ನಿರ್ದೇಶಕ ಪ್ರೊ. ಎಸ್. ಎಸ್. ಭಾಕ್ರಿ ಹಾಗೂ ಐಇಡಿಆರ್‌ಎನ ಪ್ರಧಾನ ಕಾರ್ಯದರ್ಶಿ ರಂಜನ್ ಒಬೆರಾಯ್ ಅವರಿಂದ ಡಾ. ಜಯರಾಮು ಅವರು ಪ್ರಶಸ್ತಿ ಸ್ವೀಕರಿಸಿದರು. ರಾಷ್ಟ್ರಪ್ರಶಸ್ತಿಯನ್ನು ಸ್ವೀಕರಿಸಿದ  ಡಾ. ಎಂ. ಜಯರಾಮು ಅವರನ್ನು ತುಮಕೂರು  ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಸ್. ಸಿ. ಶರ್ಮಾ ಹಾಗೂ ಕುಲಸಚಿವ ಪ್ರೊ. ಡಿ. ಶಿವಲಿಂಗಯ್ಯ ಅಭಿನಂದಿಸಿದ್ದಾರೆ.

ಕುಣಿಗಲ್‌ನಲ್ಲಿ ಬಿಜೆಪಿ ಗೆಲವು ಖಚಿತ: ಕೃಷ್ಣಕುಮಾರ್
ಕ.ಪ್ರ.ವಾರ್ತೆ ಕುಣಿಗಲ್ ಮಾ 24
ಪುರಸಭೆ ಚುನಾವಣೆಗಳಲ್ಲಿನ ಪರಿಸ್ಥಿತಿಯೇ ಬೇರೆ, ವಿಧಾನಸಭಾ ಚುನಾವಣೆಗಳ ಪರಿಸ್ಥಿತಿಯೆ ಬೇರೆ. ಈ ಬಾರಿಯ ಕುಣಿಗಲ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಲಿದೆ ಎಂದು ಬಿಜೆಪಿ ಅಭ್ಯರ್ಥಿ ಡಿ.ಕೃಷ್ಣಕುಮಾರ್ ತಿಳಿಸಿದರು.
ಭಾನುವಾರ, ತಾಲೂಕಿನ ಆಲಪ್ಪನಗುಡ್ಡೆದರ್ಗಾ, ಯಡೆಯೂರು ಸಿದ್ದಲಿಂಗೇಶ್ವಸ್ವಾಮಿ ದೇವಾಲಯ, ಜಲಧಿಗೆರೆ, ಅಮ್ಮನಹಟ್ಟಿ, ಚಿಕ್ಕಣ್ಣಸ್ವಾಮಿ ಹಟ್ಟಿ, ಗುನ್ನಾಗರೆ ಎಲ್ಲಮ್ಮದೇವಿಯ ದೇವಾಲಯ ಸೇರಿದಂತೆ ವಿವಿಧ ದೇವಾಲಯ, ದರ್ಗಗಳಲ್ಲಿ ಪೂಜೆ ಸಲ್ಲಿಸುವ ಮೂಲಕ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ, ಪಟ್ಟಣದ ತುಡಿಕೆವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ದೇವಾಲಯ ಆವರಣದಲ್ಲಿ, ಸುದ್ದಿಗಾರರೊಂದಿಗೆ ಮಾತನಾಡಿದರು.
ಪುರಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಹಾಗೂ ಬಂಡಾಯ ಜೆಡಿಎಸ್ ಆಂತರಿಕ ಒಪ್ಪಂದ ಮಾಡಿಕೊಂಡ ಕಾರಣ ಬಿಜೆಪಿ ನಿರೀಕ್ಷಿತ ಪ್ರಗತಿ ಸಾಧಿಸಲಾಗಲಿಲ್ಲ. ಆದರೆ, ಪುರಸಭೆ ಚುನಾವಣೆಗಳ ಫಲಿತಾಂಶ ವಿಧಾನಸಭಾ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರದು ಎಂದರು.
ಬಿಜೆಪಿ ಸರ್ಕಾರ ರಾಜ್ಯದಲ್ಲಿ ಹಿಂದಿನ ಯಾವುದೇ ಸರ್ಕಾರ ಮಾಡದಷ್ಟು ಸಾಧನೆ ಮಾಡಿದ್ದು,  ಸರ್ಕಾರದ ಸಾಧನೆ ಮೇಲೆಯೆ ತಾವು ಪ್ರಚಾರ ಆರಂಭಿಸಿರುವುದಾಗಿ ತಿಳಿಸಿದರು. ವೈ.ಕೆ.ರಾಮಯ್ಯನವರ ನಂತರ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದೆ ಕ್ಷೇತ್ರವು ಸಂಪೂರ್ಣ ಹಿಂದುಳಿದಿದೆ. ಹಾಲಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ, ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸದೆ ಕೇವಲ ಅಧಿಕಾರಕ್ಕೆ ಅಂಟಿಕೊಂಡು, ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ ಎಂದರು. ತಾಲೂಕು ಬಿಜೆಪಿಯ ಪದಾಧಿಕಾರಿಗಳು, ಸ್ಥಳೀಯ ಮುಖಂಡರು ಉಪಸ್ಥಿರಿದ್ದರು.

ಪೊಲೀಸರ ಮೇಲೆ ಹಲ್ಲೆ: ಆರೋಪಿಗಳ ದಸ್ತಗಿರಿ
ತಿಪಟೂರು: ತಾಲೂಕಿನ ಕರಡಿ ಬಳಿಯ ಮಲ್ಲೇನಹಳ್ಳಿ ಕಲ್ಲಾಳಮ್ಮನವರ ದೇವಾಲಯದ ಬಳಿ ಭಾನುವಾರ  ಇಸ್ಪೀಟ್ ಆಟದಲ್ಲಿ ತೊಡಗಿದ್ದ ಗುಂಪಿನ ಮೇಲೆ  ದಾಳಿ ನಡೆಸಲು ಹೋದ ಕಿಬ್ಬನಹಳ್ಳಿ ಠಾಣಾ ಪಿಎಸ್‌ಐ ಮತ್ತು ಸಿಬ್ಬಂದಿ ಮೇಲೆಯೇ ಏಕಾಏಕಿ  ಪ್ರತಿ ದಾಳಿ ನಡೆಸಿದ ಸಂದರ್ಭದಲ್ಲಿ ಪಿಎಸೈ ರಾಜುವಿನ ಕಣ್ಣು ಮತ್ತು ಇತರೆ ಭಾಗಗಳಿಗೆ ಪೆಟ್ಟು ಬಿದ್ದಿದೆ.
ಪೇದೆ ಪುಟ್ಟರಾಜುವಿನ ಕೈ ಮುರಿತ, ಪೇದೆಗಳಾದ ಬಸವರಾಜು, ಕೃಷ್ಣಮೂರ್ತಿ, ಶಾಂತಪ್ಪ, ಅರುಣಕುಮಾರ್, ಮಹೇಶ್, ಶ್ರೀರಂಗಯ್ಯ, ಶಂಕರಪ್ಪ, ಕಾಂತರಾಜು ಮತ್ತು ಚೇತನ್‌ಕುಮಾರ್ ಅವರಿಗೆ ಸಣ್ಣ ಪುಟ್ಟ ಪೆಟ್ಟುಗಳು ಬಿದ್ದಿದ್ದು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ  ಪಡೆಯುತ್ತಿದ್ದಾರೆ.
ಘಟನೆ ವಿವರ: ಕಳೆದ ವಾರ ನಡೆದ ನಗರಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದ ನಗರಸಭಾ ಸದಸ್ಯರೊಬ್ಬರು ಶ್ರೀ ಕಲ್ಲಾಳಮ್ಮನವರ ದೇವರಿಗೆ ಪೂಜೆ ಇಟ್ಟುಕೊಂಡಿದ್ದರು. ಚುನಾವಣೆಯಲ್ಲಿ ದುಡಿದಿದ್ದ ಪಕ್ಷದ ಕಾರ್ಯಕರ್ತರು ಮತ್ತು ಸ್ನೇಹಿತರನ್ನು ಆಹ್ವಾನಿಸಿ ಮಾಂಸದೂಟ ಏರ್ಪಡಿಸಿದ್ದು, ಈ ಸಂದರ್ಭದಲ್ಲಿ ಊಟಕ್ಕೆ ಬಂದಿದ್ದವರು ಇಸ್ಪೀಟ್ ಆಟದಲ್ಲಿ ತೊಡಗಿದ್ದರು. ಈ ಮಾಹಿತಿ ಪಡೆದ ಕಿಬ್ಬನಹಳ್ಳಿ ಪೊಲೀಸರು ಇಸ್ಪೀಟ್ ಆಟದಲ್ಲಿ ಮುಳುಗಿದ್ದವರ ಮೇಲೆ ದಾಳಿ ನಡೆಸಿದಾಗ ಏಕಾಏಕಿ  ಪೊಲೀಸರ ಮೇಲೆಯೇ ಪ್ರತಿದಾಳಿ ನಡೆಸಿ ತೀವ್ರ ಹಲ್ಲೆ ನಡೆಸಿದ್ದಾರೆ.
ಆರೋಪಿಗಳ ದಸ್ತಗಿರಿ: ಸದರಿ ಘಟನೆಯಲ್ಲಿ ತೊಡಗಿದ್ದ ಹರೀಶ, ಶ್ರೀನಿವಾಸ ಮತ್ತು ಅಂಜನಪ್ಪನವರನ್ನು ದಸ್ತಗಿರಿ ಮಾಡಿ ಇತರರ ಮೇಲೆ ಪ್ರಕರಣವನ್ನು ಕಿಬ್ಬನಹಳ್ಳಿ ಠಾಣೆಯಲ್ಲಿ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.

ಅಂಗವಿಕಲರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ
ತುಮಕೂರು: ತುಮಕೂರು ನಗರಸಭೆ ಮತ್ತು ವರ್ಷಾ ಫೌಂಡೇಷನ್ ವತಿಯಿಂದ ಅಂಗವಿಕಲರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿಕಲ ಚೇತನರು ವಿಶೇಷ ಚೇತನವುಳ್ಳವರಾಗಿದ್ದು ಅವರನ್ನು ಸಮಾಜ ಕೀಳಾಗಿ ಕಾಣಬಾರದು. ಅಂಗವಿಕಲರು ಸ್ವಾಭಿಮಾನಿಗಳಾಗ ಬದುಕಬೇಕು ಎಂದು ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಅಂಜಿನಪ್ಪ ನುಡಿದರು. ಕಾರ್ಯಕ್ರಮದಸ್ಸಿ ಉಪಸ್ಥಿತರಿದ್ದ ಸಮುದಾಯ ಸಂಘಟನಾಧಿಕಾರಿ ಶಿವಪ್ರಸಾದ್ ಅವರು ನಗರಸಭೆಯಲ್ಲಿ ದೊರೆಯುವ ಸವಲತ್ತುಗಳ ಬಗ್ಗೆ ವಿವರಿಸಿದರು.

27ಕ್ಕೆ ಹೂವಿನ ಕರಗ ಮಹೋತ್ಸವ
ವಿಜಯಪುರ: ಪಟ್ಟಣದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಧರ್ಮರಾಯ ಸ್ವಾಮಿ ದ್ರೌಪತಮ್ಮ ದೇವಾಲಯದಲ್ಲಿ ಶಕ್ತಿ
ಉತ್ಸವವಾಗಿ ಆಚರಣೆಯಲ್ಲಿರುವ ಹೂವಿನ ಕರಗ ಮಹೋತ್ಸವದ ಪ್ರಯುಕ್ತ ಧಾರ್ಮಿಕ ಕಾರ್ಯಗಳು ಪ್ರಾರಂಭವಾಗಿವೆ.
ಈಗಾಗಲೇ 74ನೇ ವರ್ಷದ ಹೂವಿನ ಕರಗ ಮಹೋತ್ಸವದ ಪ್ರಯುಕ್ತ ದೇವಾಲಯದಲ್ಲಿ ಭಕ್ತ ಮಂಡಳಿಯವರಿಂದ ಪುಣ್ಯಾಹ, ಧ್ವಜಾರೋಹಣ, ವಿಶೇಷ ಅಲಂಕಾರ ಪೂಜಾ ಕಾರ್ಯಗಳು ನಡೆದಿವೆ.  25ರಂದು ರಾತ್ರಿ 12 ಘಂಟೆಗೆ ಹಸಿಕರಗ ಮಹೋತ್ಸವ, 26ರಂದು ರಾತ್ರಿ 10ಘಂಟೆಗೆ  ದೀಪಾರತಿ, ಅಗ್ನಿ ಕುಂಡ ಪ್ರವೇಶ, ಕೀಲು ಪ್ರವೇಶ, ಗಾರುಡಿ ಗೊಂಬೆಗಳ ಮೆರವಣಿಗೆ, ಜೋಕರ್ ವೇಷ ದಾರಿಗಳ ಮೆರವಣಿಗೆ ನಡೆಯಲಿದೆ. 27ರಂದು ರಾತ್ರಿ 12 ಗಂಟೆಗೆ ಹೂವಿನ ಕರಗ ಮಹೋತ್ಸವ, 28ರಂದು ಮಧ್ಯಾಹ್ನ ಕುಮಾರ ಮಕ್ಕಳಿಂದ ಒನಕೆ ಹೊರುವುದು, ವಸಂತೋತ್ಸವ, 29 ರಂದು ಮಹಾಭಾರತ ಓದುವುದು, ಗಾವು ಪೂಜೆ ಕಾರ್ಯಕ್ರಮಗಳು ನಡೆಯಲಿವೆ. ಮೊದಲನೆಯ ದಿನದಂದು ಧ್ವಜಾರೋಹಣ ಕಾರ್ಯ ನಡೆಯಲಿದ್ದು, ಹಸಿ ಕರಗದ ಕುಂಟೆಯಿಂದ ಶಕ್ತಿ ದೇವತೆಯನ್ನು ಬರಮಾಡಿಕೊಂಡು ಶಕ್ತಿಪೀಠದಲ್ಲಿ ಪ್ರತಿಷ್ಠಾಪಿಸಿ, ಉರಿಯುವ ಕರ್ಪೂರದ ಮಧ್ಯೆ ಧ್ಯಾನಿಸುತ್ತಾರೆ. ಆ ದಾರಿಯಲ್ಲಿ ವಿಶೇಷವಾಗಿ ಮಲ್ಲಿಗೆ ಹೂವನ್ನು ಚೆಲ್ಲುವ ಪದ್ಧತಿ ವಿಶೇಷವಾಗಿದೆ.

ಶ್ರೀರಾಮುಲು ಬಂಧನಕ್ಕೆ ಖಂಡನೆ
ಆನೇಕಲ್ಲು: ಬಿಎಸ್ ಆರ್ ಕಾಂಗ್ರೆಸ್ ಸಂಸ್ಥಾಪಕ ಅಧ್ಯಕ್ಷ ಶ್ರೀರಾಮುಲು ಅವರ ಬಂಧನವನ್ನು ಖಂಡಿಸಿ ಆನೇಕಲ್ ಭಾಗದ ಕಾರ್ಯಕರ್ತರು ತಾಲೂಕು ಕಚೇರಿ ಮುಂದೆ ಧರಣಿ ನಡೆಸಿದರು. ಬಿಎಸ್‌ಆರ್ ಪಕ್ಷದ ಎಸ್ಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಜಿಗಣಿ ಶಂಕರ್ ಮಾತನಾಡಿ ಬಳ್ಳಾರಿಯ ಹಾದಿ ಬದಿಯಲ್ಲಿ ವ್ಯಾಪಾರ ನಡೆಸುವ ಬಡ ಜನರು ತುತ್ತಿನ ಚೀಲ ತುಂಬಿಸಿಕೊಳ್ಳಲು ದಿನವಿಡೀ ದುಡಿಯುತ್ತಾರೆ. ಜಿಲ್ಲಾಧಿಕಾರಿಗಳು ಒತ್ತಡ ತಂತ್ರಕ್ಕೆ ಮಣಿದು ಬಡ ಜನತೆಯ ಮೇಲೆ ಗದಾ ಪ್ರಹಾರ ಮಾಡುತ್ತಿದ್ದಾರೆ. ನ್ಯಾಯ ಕೇಳಲು ಧರಣಿ ಕುಳಿತ ರಾಜ್ಯಾಧ್ಯಕ್ಷರನ್ನು ಬಂಧಿಸಿ ಸಂವಿಧಾನಾತ್ಮಕ ಅಪಚಾರ ಮಾಡಿದ್ದಾರೆ ಎಂದು ದೂಷಿಸಿದರು.  ಬೆಂಗಳೂರು ದಕ್ಷಿಣ ಪ್ರಮುಖರಾದ ನೊಸೆನೂರು ರವಿಚಂದ್ರ ಮಾತನಾಡಿ ಶ್ರೀರಾಮುಲುರವರು ರಾಜ್ಯಾದ್ಯಂತ ಸಂಚಾರ ಮಾಡಿ ಕೃಷಿಕರು, ಕಾರ್ಮಿಕರು, ಮಹಿಳೆಯರು ಹಾಗೂ ಬಡ ಜನತೆಯ ಕಲ್ಯಾಣಕ್ಕೆ ಹಲವಾರು ಯೋಜನೆಗಳನ್ನು ಘೋಷಿಸಿದ್ದರು. ಅವರ ಬಂಧನದಿಂದ ಇನ್ನೂ ಹೆಚ್ಚು ಒಳ್ಳೆಯದಾಗುತ್ತದೆ. ಜನರ ನಡುವೆ ಇರುವ ನಾಯಕರನ್ನು ಯಾರು ಕಡೆಗಣಿಸಬಾರದು ಎಂದು ಎಚ್ಚರಿಕೆಯನ್ನು ನೀಡಿದರು. ಮುಖಂಡರಾದ ಯಡವನಹಳ್ಳಿ ಮಂಜುನಾಥ್, ನಾರಾಯಣಸ್ವಾಮಿ, ಸಿದ್ಧಾರ್ತ, ವೆಂಕಟೇಶ್, ಪಾಪಣ್ಣ, ಗೋಪಾಲ್, ರಘು, ಸಂಪಂಗಿ ಧರಣಿಯಲ್ಲಿ ಭಾಗವಹಿಸಿದ್ದರು. ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ನೀರು, ಸ್ವಚ್ಛತೆಗೆ ಗಮನ ನೀಡಿ
ಆನೇಕಲ್ಲು: ಪಟ್ಟಣದಲ್ಲಿ ಕಸ ನಿರ್ವಹಣೆ ಹಾಗು ಕುಡಿವ ನೀರಿನ ಸಮರ್ಪಕ ವ್ಯವಸ್ಥೆ ಮಾಡಬೇಕೆಂದು ಜೆಡಿಎಸ್ ಮತ್ತು ಕಾಂಗ್ರೆಸ್ ನೂತನ ಪುರಸಭಾ ಸದಸ್ಯರು ಮುಖ್ಯಾಧಿಕಾರಿ ಸುಮಾ ಅವರನ್ನು ಒತ್ತಾಯಿಸಿದರು. ಕಸ ತೆಗೆಯುವ ಟೆಂಡರ್ ಗುತ್ತಿಗೆ ಅವಧಿ ಮುಗಿಯುವ ಹಂತದಲ್ಲಿದ್ದು ಗುತ್ತಿಗೆದಾರರು ಸರಿಯಾಗಿ ಕಸವನ್ನು ತೆಗೆಯುತ್ತಿಲ್ಲ. ಆನೇಕಲ್ ಪಟ್ಟಣ  ಕಸ ಸಂಗ್ರಹಾಗಾರವಾಗಿದೆ. ಪಟ್ಟಣದ ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡ ಬೇಕಾದ ಪುರಸಭೆ ಸಮಸ್ಯೆಗಳ ಆಗರವಾಗಿದ್ದು ಕೂಡಲೆ ಪರಿಹಾರ ಕಂಡುಕೊಳ್ಳಬೇಕೆಂದು ಆಗ್ರಹಿಸಿದರು.  ಜೆಡಿಎಸ್ ಸದಸ್ಯರಾದ ಎನ್ ಎಸ್. ಪದ್ಮನಾಭ, ಲಕ್ಷ್ಮೀಕಾಂತರಾಜು, ವಿ ಮೋಹನ್, ಕಾಂಗ್ರೆಸ್ ಸದಸ್ಯರಾದ ಭದ್ರಾರೆಡ್ಡಿ, ಮಲ್ಲಿಕಾರ್ಜುನ್, ಸಿ. ಕೆ. ಹೇಮಲತಾ, ಟೌನ್ ಕಾಂಗ್ರೆಸ್ ಅಧ್ಯಕ್ಷ ಜಿ. ಗೋಪಾಲ್, ಜೆಡಿಎಸ್ ಮುಖಂಡ ಮಲ್ಲಿಕಾರ್ಜುನ್, ಪುರಸಭಾ ಮಾಜಿ ಉಪಾಧ್ಯಕ್ಷರಾದ ಸಮಿವುಲ್ಲಾ ಮುಖ್ಯಾಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆಗಳ ಪರಿಹಾರಕ್ಕೆ ಮನವಿ ಮಾಡಿದರು. ಪುರಸಭಾ ಮುಖ್ಯಾಧಿಕಾರಿ ಸುಮಾ ಮಾತನಾಡಿ ಗುತ್ತಿಗೆದಾರರಿಗೆ ನೀಡಿರುವ ಅವಧಿ ಮುಂದಿನ ತಿಂಗಳು ಮುಗಿಯಲಿದೆ. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮತ್ತೆ ಟೆಂಡರ್ ಕರೆದು ಗುತ್ತಿಗೆ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ನೂತನ ಚುನಾಯಿತ ಪ್ರತಿನಿಧಿಗಳು ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement