ಭ್ರಷ್ಟಾಚಾರ ಆರೋಪ ಸಾಬೀತು ಪಡಿಸಿದರೆ ರಾಜಕೀಯದಿಂದ ನಿವೃತ್ತಿ: ಶಾಸಕ ನಾಗರಾಜು
ಕ.ಪ್ರ. ವಾರ್ತೆ ನೆಲಮಂಗಲ ಮಾ.24
ಶಾಸಕನಾಗಿ ಅಧಿಕಾರ ದುರುಪಯೋಗ ಪಡಿಸಿಕೊಂಡು ನಾನು ಭ್ರಷ್ಟಾಚಾರ ಮಾಡಿರುವುದಾಗಿ ಯಾರೊಬ್ಬರು ಸಾಬೀತು ಪಡಿಸಿದರೆ ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದು ಶಾಸಕ ಎಂ.ವಿ.ನಾಗರಾಜು ಹೇಳಿದರು.
ಅವರು ಭಾನುವಾರ ಪಟ್ಟಣದ ಗೃಹ ಕಚೇರಿಯಲ್ಲಿ ಸುದ್ದಿ ಗೋಷ್ಠಿ ಉದ್ದೇಶಿಸಿ ಮಾತನಾಡಿ, ಈ ಬಾರಿ ವಿಧಾನ ಸಭೆ ಚುನಾ ವಣೆಯಲ್ಲಿ ಎರಡನೇ ಅವಧಿಗೆ ಬಿಜೆಪಿ ಪಕ್ಷದಿಂದ ಸ್ಪರ್ಧಿ ಸುತ್ತಿದ್ದೇನೆ.
ಕ್ಷೇತ್ರದ ಜನತೆಗೆ ಕಳೆದ 5 ವರ್ಷಗಳಲ್ಲಿ ನೂರಾರು ಕೋಟಿ ರೂಗಳ ಅಭಿವೃದ್ಧಿ ಕಾರ್ಯ ನಿರ್ವಹಿಸಿ, ಸುಮಾರು 6 ಸಾವಿರ ಮನೆಗಳನ್ನು ಆಶ್ರಯ, ಇಂದಿರಾ, ಅಂಬೇಡ್ಕರ್ ಯೋಜನೆಯಡಿ ನಿರ್ಮಿಸಿದ್ದೇವೆ ಎಂದರು.
ಭಾರತೀಯ ಜನತಾ ಪಕ್ಷವು ಕೈಗೊಂಡಿರುವ ವಿಜಯ ಸಂಕಲ್ಪ ಯಾತ್ರೆ ಮಾ. 27ರ ಬುಧವಾರ ಸಂಜೆ 3-00 ಘಂಟೆಗೆ ಪಟ್ಟಣದ ಆದಿಚುಂಚನಗಿರಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಚುನಾವಣಾ ಪ್ರಚಾರದಲ್ಲಿ ಮುಖ್ಯಮಂತ್ರಿ ಜಗದೀಶ್ಶೆಟ್ಟರ್, ಮಾಜಿ ಮುಖ್ಯಮಂತ್ರಿ ಸದಾನಂದಗೌಡ, ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಜಿಲ್ಲಾ ಸಚಿವ ಬಚ್ಚೇಗೌಡ ಸೇರಿದಂತೆ ಹಲವಾರು ಸಚಿವರು ಶಾಸಕರು ಭಾಗವಹಿಸಲಿದ್ದಾರೆ. ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಪಕ್ಷದ ಉಪಾಧ್ಯಕ್ಷ ಹನುಮಂತು, ಕಾರ್ಯದರ್ಶಿ ಬಾಳೇಕಾಯಿ ನಾಗರಾಜು, ಮಹದೇವ್, ಗುಬ್ಬಣ್ಣಸ್ವಾಮಿ ಉಪಸ್ಥಿತರಿದ್ದರು.
ಕಾಲ ಮೀರುವುದೇ ಸೃಜನಶೀಲತೆ: ಬರಗೂರು ರಾಮಚಂದ್ರಪ್ಪ
ಕ.ಪ್ರ. ವಾರ್ತೆ ಬೆಂಗಳೂರು ಮಾ.24
ಕಾಲದ ಒಳಗೆ ನಿಂತು ಕಾಲವನ್ನು ಮೀರುವುದೇ ನಿಜವಾದ ಸೃಜನಶೀಲತೆ ಎಂದು ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಪ್ರಸಾರಭಾರತಿ ನಗರದಲ್ಲಿ ಹಮ್ಮಿಕೊಂಡಿದ್ದ 3 ದಿನಗಳ ಕನ್ನಡ ಸಾಹಿತ್ಯೋತ್ಸವ 'ನವ ನವೋದಯ' ಕಾರ್ಯಕ್ರಮದ ಸಮಾರೋಪ ಸಮಾ ರಂಭದಲ್ಲಿ ಅವರು ಮಾತನಾಡಿದರು.
ಇಂದು ಎಲ್ಲರೂ ಅಪನಂಬಿಕೆ ಹಾಗೂ ಅಪವ್ಯಾಖ್ಯಾನದ ಕಾಲದಲ್ಲಿದ್ದೇವೆ. ಧರ್ಮ- ಸಂಸ್ಕೃತಿ, ಪೂಜೆ- ಭಕ್ತಿ, ಚುನಾವಣೆ- ಪ್ರಜಾಪ್ರಭುತ್ವ ಮುಂತಾದವು ಒಂದಕ್ಕೊಂದು ವಿಭಿನ್ನ. ಧರ್ಮ, ಪೂಜೆ, ಚುನಾವಣೆ ಕ್ರಮವಾಗಿ ಸಂಸ್ಕೃತಿ, ಭಕ್ತಿ ಹಾಗೂ ಪ್ರಜಾಪ್ರಭುತ್ವದ ಭಾಗವೇ ಹೊರತು ಅವು ಪರಸ್ಪರ ಒಂದೇ ಅಲ್ಲ. ಹಾಗಿದ್ದರೂ ಅವೆರಡೂ ಒಂದೇ ಎಂಬ ರೀತಿಯಲ್ಲಿ ವ್ಯಾಖ್ಯಾನಿಸಿ ನಂಬಿಸಲಾಗುತ್ತಿದೆ. ಇದರಿಂದ ಉಂಟಾಗುತ್ತಿರುವ ಮಿಲಿಟರಿ ಮನೋಧರ್ಮ ಅಸಹನೆ ಹಾಗೂ ಆಕ್ರಮಣಶೀಲತೆಗೆ ಕಾರಣವಾಗಿ ಸೃಜನಶೀಲತೆ ಕ್ಷೀಣಿಸುತ್ತಿವೆ.
ಮತ್ತೊಂದೆಡೆ ಮಾರುಕಟ್ಟೆ ಮನೋಧರ್ಮ ಮಾಧ್ಯಮದ ಸೂಕ್ಷ್ಮತೆ ಮಾಯವಾಗಿಸಿ ಸಾಂಸ್ಕೃತಿಕ ಕ್ಷೇತ್ರದ ಪ್ರಾಮಾಣಿಕತೆಯನ್ನು ಕ್ಷೀಣಿಸುತ್ತಿದೆ. ಇಂತಹವುಗಳ ವಿರುದ್ಧ ಸೃಜನಶೀಲತೆ ಉಳಿಸಿಕೊಳ್ಳಬೇಕಿದ್ದರೆ ಯಾವುದೇ ಕಲಾವಿದ ಅಥವಾ ಸಾಹಿತಿ ಆ ಕಾಲದ ದನಿಯಾಗಬೇಕು. ಕಾಲದ ಜತೆಗೆ ಕಾಳಗ ಹಾಗೂ ಕಾಳಜಿಯನ್ನು ಏಕಕಾಲದಲ್ಲಿ ವ್ಯಕ್ತಪಡಿಸಿದಾಗ ಮಾತ್ರ ಅಂತಹ ಒಂದು ಸೃಜನಶೀಲತೆ ಸೃಷ್ಟಿಯಾಗಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ಅದಕ್ಕೂ ಮುನ್ನ ನಡೆದ ಗೋಷ್ಠಿಗಳಲ್ಲಿ ಸಾಹಿತಿಗಳಾದ ಎಸ್.ಎಸ್. ಹಿರೇಮಠ್, ಕೆ. ಸತ್ಯನಾರಾಯಣ, ಡಾ.ಕೆ.ವೈ. ನಾರಾಯಣಸ್ವಾಮಿ, ಡಾ. ಅರವಿಂದ ಮಾಲಗತ್ತಿ, ಡಾ. ವೆಂಕಟೇಶಮೂರ್ತಿ, ಡಾ.ಎಚ್.ನಾಗವೇಣಿ ಅವರು ತಮ್ಮ ಅಭಿಪ್ರಾಯ ಮಂಡಿಸಿದರು.
ವಿಮರ್ಶಕ ಎಚ್.ಎಸ್. ರಾಘವೇಂದ್ರ, ಆಕಾಶವಾಣಿ ಹೆಚ್ಚುವರಿ ಮಹಾನಿರ್ದೇಶಕ ಜಿ. ಜಯಲಾಲ್, ದೂರದರ್ಶನ ತಾಂತ್ರಿಕ ವಿಭಾಗದ ಉಪಮಹಾನಿರ್ದೇಶಕರಾದ ಗೀತಾರಾಣಿ, ಮಿಲನ್ಸರ್ ಉಪಸ್ಥಿತರಿದ್ದರು.
ಖಾಸಗಿಗೊಳ್ಳುತ್ತಿರುವ ಉನ್ನತ ಶಿಕ್ಷಣ: ಪ್ರೊ. ವೇದಪ್ರಕಾಶ್
ಕ.ಪ್ರ. ವಾರ್ತೆ ಬೆಂಗಳೂರು ಮಾ.24
ನಮ್ಮ ದೇಶದ ಉನ್ನತ ಶಿಕ್ಷಣ ಇತ್ತೀಚಿನ ದಿನಗಳಲ್ಲಿ ಹೆಚ್ಚು ಖಾಸಗೀಕರಣಗೊಳ್ಳುತ್ತಿದ್ದು, ಅಲ್ಪ ಸಂಖ್ಯಾತರರು ಹಿಂದುಳಿದ ವರ್ಗಗಳು ಮತ್ತು ಗ್ರಾಮೀಣ ಪ್ರದೇಶದವರು ಅದರಿಂದ ದೂರ ಉಳಿಯುತ್ತಿದ್ದಾರೆ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗದ(ಯುಜಿಸಿ) ಅಧ್ಯಕ್ಷ ಪ್ರೊ. ವೇದಪ್ರಕಾಶ್ ತಿಳಿಸಿದರು.
ನಗರದ ಸೆಂಟ್ರಲ್ ಕಾಲೇಜು ಆವರಣದಲ್ಲಿರುವ, ಜ್ಞಾನಜ್ಯೋತಿ ಸಭಾಂಗಣದಲ್ಲಿ ನ್ಯಾಕ್ ಸಂಸ್ಥೆಯು ಭಾನುವಾರ ಆಯೋಜಿಸಿದ್ದ, ಆರನೇ ವರ್ಷದ ಮೌಲ್ಯಾಂಕನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿಶ್ವವಿದ್ಯಾಲಯಗಳು, ಶಿಕ್ಷಣ ಸಂಸ್ಥೆಗಳು ನೀಡುತ್ತಿರುವ ಶಿಕ್ಷಣದಲ್ಲಿ ಸಮತೋಲನ ಇಲ್ಲ. ಇಲ್ಲಿ ಒಂದೊಂದು ವಿಷಯಕ್ಕೂ ಬೇರೆ ಬೇರೆ ವಿವಿಗಳಿವೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಉನ್ನತ ಶಿಕ್ಷಣ ತಂತ್ರಜ್ಞಾನ, ಆನ್ಲೈನ್ ಮೂಲಕ ಸಿಗುತ್ತಿದೆ. ಆದರೆ ನಮ್ಮ ದೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವ ರೀತಿಯ ಶಿಕ್ಷಣ ಬೇಕೆಂದು ಯೋಚಿಸಿಯೇ ಇಲ್ಲ. ಉನ್ನತ ಶಿಕ್ಷಣದಲ್ಲಿ ಖಾಸಗಿ ಸಂಸ್ಥೆಗಳ ಕೊಡುಗೆ ಹೆಚ್ಚಿದ್ದು, 145 ಖಾಸಗಿ ಹಾಗು 130 ಡೀಮ್ಡ್ ವಿವಿಗಳಿವೆ. ಇದರಲ್ಲಿ ಶೇ.40ರಷ್ಟು ಪಾಲು ಖಾಸಗಿಯವರಿಗೆ ಸಲ್ಲುತ್ತದೆ. ಆದರೆ ಅಲ್ಪಸಖ್ಯಾತರು, ಪರಿಶಿಷ್ಟ ಪಂಗಡದವರು ಹಾಗೂ ಗ್ರಾಮೀಣ ಪ್ರದೇಶದವರು ಶಿಕ್ಷಣದಿಂದ ದೂರ ಉಳಿಯುತ್ತಿದ್ದಾರೆ ಎಂದರು.
ವಿವಿ ಮತ್ತು ಶಿಕ್ಷಣ ಸಂಸ್ಥೆಗಳಿಂದ, ವಿದ್ಯಾರ್ಥಿಗಳ ಸಾಮಾನ್ಯ ಬೆಳವಣಿಗೆ, ಹಿಂದುಳಿದ ವಿದ್ಯಾರ್ಥಿಗಳಿಗೆ ಅನುಕೂಲ, ಓದಿನ ನಂತರ ಅವರ ಜೀವನ ಕಂಡುಕೊಳ್ಳುವಂತಹ ಮೂರು ಅಂಶಗಳನ್ನು ಪಡೆಯಲು ಇಚ್ಚಿಸುತ್ತೇವೆ. ಆದರೆ ಇವುಗಳಲ್ಲಿ ಸಂಪನ್ಮೂಲ, ಆಡಳಿತ, ಮತ್ತು ಸಮಾನತೆ ಎಂಬ ಮೂರು ಕೊರತೆಗಳಿವೆ. ಪ್ರಸ್ತುತ, ಭಾರತದಲ್ಲಿ 682ವಿವಿ ಹಾಗು 37ಸಾವಿರ ಕಾಲೇಜುಗಳಿವೆ.
ಇದರಲ್ಲಿ ಉನ್ನತ ಶಿಕ್ಷಣ ಪಡೆಯುವ ಪ್ರಮಾಣ ಶೇ.10.65ರಷ್ಟು ಬೆಳೆಯುತ್ತಿದ್ದು, ಶೇ.6.82ರಷ್ಟು ಶಿಕ್ಷಣ ಪಡೆಯಲು ದಾಖಲಾಗುವವರ ಪ್ರಮಾಣ ಹೆಚ್ಚುತ್ತಿದೆ. ಇದು ಹೀಗೇ ಮುಂದುವರಿದರೆ 2017ರಲ್ಲಿ 900ವಿವಿ ಹಾಗು 31ಮಿಲಿಯನ್ ಕಾಲೇಜುಗಳು ದಾಖಲಾಗಬಹುದು ಎಂದು ವಿವರಿಸಿದರು.