ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮಾಹಿತಿ ಹಕ್ಕು ಅರ್ಜಿ ನೋಡಲ್ಲ ವಿವಿ ಅಧಿಕಾರಿ

Srinivasa Murthy VN
Updated On : 25 Mar 2013, 12:51 pm

-ದೇವರಾಜ್ ಎಲ್.
ಕ.ಪ್ರ. ವಾರ್ತೆ ಬೆಂಗಳೂರು ಮಾ.24
ಯಾವುದಾದರೂ ವಿಚಾರದ ಬಗ್ಗೆ ಮಾಹಿತಿ ಕೋರಿ ಬೆಂಗಳೂರು ವಿಶ್ವವಿದ್ಯಾಲಯದ ಮಾಹಿತಿ ಹಕ್ಕು ಕಾಯ್ದೆ ವಿಭಾಗಕ್ಕೆ ಅರ್ಜಿ ಸಲ್ಲಿಸಿದರೆ ಆ ಅರ್ಜಿ ಅಲ್ಲೇ ಉಳಿದುಕೊಳ್ಳುತ್ತದೆಯೇ ಹೊರತು ಸಂಬಂಧ ಪಟ್ಟ ವಿಭಾಗಕ್ಕೆ  ಹೋಗುವುದೇ ಇಲ್ಲ. ಹೋದರೂ ಯಾವಾಗಲೋ ಏನೋ?
ಕಾರಣ ಏನು ಗೊತ್ತೆ? ಸಾರ್ವಜನಿಕರು ಸಲ್ಲಿಸಿದ ಅರ್ಜಿಗಳು ಸಂಬಂಧ ಪಟ್ಟ ವಿಭಾಗಕ್ಕೆ ಹೋಗಲು ಆರ್‌ಟಿಐ ವಿಭಾಗದ ನೋಡಲ್ ಅಧಿಕಾರಿ ಹಾಗೂ ಸಹಾಯಕ ಕುಲಸಚಿವರಾದ ಬಿ.ವಿ. ಗಣೇಶ್ ಅವರಿಂದ ನಿಗದಿತ ಸಮಯಕ್ಕೆ ಅಂಕಿತ ಬೀಳುತ್ತಿಲ್ಲ. ಹೀಗಾಗಿಯೇ ಸಾರ್ವಜನಿಕರು ಸಲ್ಲಿಸಿದ ಅನೇಕ ಆರ್ಜಿಗಳು ವಿವಿ ಮಾಹಿತಿ ವಿಭಾಗದಲ್ಲೇ ಧೂಳು ಹಿಡಿಯುತ್ತಿವೆ.
ಸಾರ್ವಜನಿಕರು ಸಲ್ಲಿಸಿದ ಅರ್ಜಿಗಳಿಗೆ 30 ದಿನಗಳೊಳಗೆ ಮಾಹಿತಿ ನೀಡಬೇಕು ಎಂದು ಮಾಹಿತಿ ಹಕ್ಕು ಕಾಯ್ದೆಯ ನಿಯಮಾವಳಿಯಲ್ಲಿದೆ. ಆದರೆ, ಮಾಹಿತಿ ಹಕ್ಕು ವಿಭಾಗದ ಅಧಿಕಾರಿಗಳು ಇದನ್ನೇ ನೆಪವಾಗಿ ಇಟ್ಟುಕೊಂಡು ಕೊನೆ ಕ್ಷಣದಲ್ಲಿ ಸಹಿ ಮಾಡಲು ಮುಂದಾಗುತ್ತಾರೆ.
ಮಾಹಿತಿ ವಿಭಾಗದ ನೋಡಲ್ ಅಧಿಕಾರಿ ಬಿ.ವಿ. ಗಣೇಶ್ ಅವರು ಕಡತಗಳಿಗೆ ಮತ್ತು ವೇತನ ಹಾಜರಾತಿ ಪ್ರಮಾಣ ಪತ್ರಕ್ಕೆ ಸಹಿ ಮಾಡುವಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮಾಹಿತಿ ವಿಭಾಗದ ನೌಕರರೇ ಕುಲಸಚಿವರಿಗೆ 2013ರ ಜನವರಿ 17ರಂದು ಕುಲಸಚಿವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿರುವ ಪ್ರತಿ ಸಹ ಕನ್ನಡಪ್ರಭಕ್ಕೆ ಲಭ್ಯವಾಗಿದೆ.
ಪತ್ರದಲ್ಲಿ ಏನಿದೆ: ಮಾಹಿತಿ ಹಕ್ಕು ವಿಭಾಗದ ನೌಕರರೇ ಎರಡು ಬಾರಿ ಕುಲಸಚಿವರಿಗೆ ಪತ್ರ ಬರೆದಿದ್ದಾರೆ. ಆದರೆ, ಇದುವರೆಗೂ ಕುಲಸಚಿವರು ಯಾವುದೇ ಕ್ರಮ ಜರುಗಿಸಿಲ್ಲ. ಗಣೇಶ್ ಅವರು ಕಚೇರಿಗೆ ಹಾಜರಾದ ದಿನಾಂಕಗಳಿಂದ ಇದುವರೆಗೂ ಕಡತಗಳ ಸಹಿ ಮಾಡುವುದಕ್ಕೆ ವಿಳಂಬ ಮಾಡುತ್ತಾರೆ. ಮತ್ತು ಇವರು ತಮ್ಮ ಕಚೇರಿಗೆ ಕಡತಗಳನ್ನು ಮತ್ತು ಹಾಜರಾತಿಯನ್ನು ತೆಗೆದುಕೊಂಡು ಬನ್ನಿ ಎಂದು ದೂರವಾಣಿಯ ಮುಖಾಂತರ ತಿಳಿಸುತ್ತಾರೆ. ನಂತರ ಕಚೇರಿಗೆ ಕಡತ ಮತ್ತು ಹಾಜರಾತಿ ಕಳುಹಿಸಿದರೆಸಮನ್ಸ್ ಮತ್ತು ಪತ್ರಗಳು ತಮ್ಮ ಹೆಸರಿನಲ್ಲಿ ಬರುವುದಿಲ್ಲವೆಂದು ಹಿಂದಿರುಗಿಸುತ್ತಾರೆ.
ನೇರಹೊಣೆ: ನಿಗದಿತ ಸಮಯಕ್ಕೆ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಮಾಹಿತಿ ಹಕ್ಕು ಆಯೋಗವೇನಾದರೂ ದಂಡ  ಸಲ್ಲಿಸುವ ಬಗ್ಗೆ ಕ್ರಮ ಜರುಗಿಸಿದಲ್ಲಿ ಅದಕ್ಕೆ ನೇರವಾಗಿ ಗಣೇಶ್ ಅವರೇ ಹೊಣೆಗಾರರಾಗುತ್ತಾರೆ ಎನ್ನುತ್ತಾರೆ ಸಿಬ್ಬಂದಿ. ಇದಲ್ಲದೆ, ಅರ್ಜಿ ಸಲ್ಲಿಸಿದ ಬಳಿಕ ಸಾರ್ವಜನಿಕರುತಮ್ಮ ಅರ್ಜಿಯ ವಿಷಯಕ್ಕೆ ಸಂಬಂಧಿಸಿದಂತೆ ದೂರವಾಣಿ ಮೂಲಕ ಸಂಪರ್ಕಿಸಿದಾಗ ಉತ್ತರಿಸಲು ನನಗೆ ಯಾವುದೇ ರೀತಿಯ ಚಾರ್ಜ್ ಕೊಟ್ಟಿಲ್ಲ ಎಂದು ಗಣೇಶ್ ತಪ್ಪು ಮಾಹಿತಿ ನೀಡುತ್ತಾರೆ ಎಂಬ ಆರೋಪವೂ ಇದೆ.
ಕಿರಿಕ್ ಕೆಲಸ: ಕಚೇರಿಯ ಕಡತಗಳಿಗೆ ಸಹಿ ಮಾಡಲು ಅವರ ಕೊಠಡಿಗೆ ನಾಲ್ಕನೇ ದರ್ಜೆ ನೌಕರರಾದ ಕಮಲಮ್ಮ ಎಂಬುವರನ್ನು 07.02.2013ರಂದು ಕಳುಹಿಸಲಾಗಿತ್ತು. ಆದರೆ ಈ ಅಧಿಕಾರಿ ಕಮಲಮ್ಮ ಅವರನ್ನು ಅವ್ಯಾಚ ಮತ್ತು ಆಶ್ಲೀಲ ಪದಗಳಿಂದ ನಿಂದಿಸಿದ್ದಾರೆ. ಮಾಹಿತಿ ಹಕ್ಕು ವಿಭಾಗಕ್ಕೆ ಇವರು ಬಂದಾಗಿನಿಂದಲೂ ಒಂದಲ್ಲ ಒಂದು ರೀತಿಯ ತೊಂದರೆ ಕೊಡುತ್ತಾರೆ ಮತ್ತು ಕಚೇರಿಯಲ್ಲಿ ಕೆಲಸ ಮಾಡುವುದು ದುಸ್ತರವಾಗಿದೆ. ಹೀಗಾಗಿ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಹಿತಿ ವಿಭಾಗದ ನೌಕರರು ಕುಲಸಚಿವರಿಗೆ ಪತ್ರ ಬರೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement