ಜೆಡಿಎಸ್ ಚುನಾವಣಾ ಪ್ರಚಾರಕ್ಕೆ ಚಾಲನೆ
ಕನಕಪುರ: ಕನಕಪುರ ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾದಳ ಅಭ್ಯರ್ಥಿ ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಅವರು ತಮ್ಮ ಬೆಂಬಲಿಗರೊಂದಿಗೆ ತಾಲೂಕಿನ ಹಲವಾರು ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು.
ಮುಖಂಡರುಗಳಾದ ಡಿ.ಎಂ.ವಿಶ್ವನಾಥ್, ಬಿ.ಎಸ್.ಗೌಡ, ಸಿದ್ಧಮರಿಗೌಡ, ಪುಟ್ಟರಾಜು, ಚಂದ್ರು ಪಾಲ್ಗೊಂಡಿದ್ದರು. ಸಿಂಧ್ಯಾರವರು ತಾಲೂಕಿನ ಆಡನಕುಪ್ಪೆ ಶ್ರೀ ವೀರಭದ್ರಸ್ವಾಮಿ, ಕಲ್ಲಹಳ್ಳಿ ಶ್ರೀನಿವಾಸ,ಮಳಗಾಳು ಈಶ್ವರ, ಕೆಂಕೇರಮ್ಮ, ಕಬ್ಬಾಳಮ್ಮ, ಏಳಗಳ್ಳಿ ತಾಯಿಮುದ್ದಮ್ಮ, ಎಲವನಾಥ ಬಂಡೆ ಮುತ್ತುರಾಯಸ್ವಾಮಿ, ಹಾರೋಬೆಲೆ ಚರ್ಚ್ ಹಾಗೂ ಕನಕಪುರದ ಮಸೀದಿಗಳಲ್ಲಿ ಪೂಜೆ, ಪ್ರಾರ್ಥನೆಗಳನ್ನು ಸಲ್ಲಿಸಿದರು.
ಸಿಂಧ್ಯಾ ಮಾತನಾಡುತ್ತಾ, ಶಾಸಕ ಡಿ.ಕೆ.ಶಿವಕುಮಾರ್ ಟೀಕೆಗಳಿಗೆ ಹೆದರಿ ಪಲಾಯನ ಮಾಡುವ ಪ್ರವೃತ್ತಿ ತಮ್ಮಲ್ಲಿಲ್ಲ, ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಚುನಾವಣೆ ಎದುರಿಸುವುದು ಖಂಡಿತಾ ಎಂದು ಹೇಳಿದರು. ರಾಜ್ಯದಲ್ಲಿ ಕುಮಾರಸ್ವಾಮಿಯವರ ಆಡಳಿತ ಮತ್ತೆ ಬರಬೇಕಾಗಿದೆ, ಅವರು ಹಾಕಿಕೊಟ್ಟ ಅಭಿವೃದ್ಧಿ ಕಾರ್ಯಗಳು ಇಂದಿಗೂ ಹಸಿರಾಗಿವೆ, ದೇವೇಗೌಡರ ರೈತಪರ ಹೋರಾಟ, ಜೆಡಿಎಸ್ನ ಜನಪರ ಕಳಜಿಗಳನ್ನು ಅರಿತಿರುವ ಜನರು ತಮ್ಮ ಪಕ್ಷವನ್ನು ನಿಶ್ಚಯವಾಗಿ ಬೆಂಬಲಿಸುತ್ತಾರೆ ಎಂದು ಸಿಂಧ್ಯಾ ಆಶಾಭಾವನೆ ವ್ಯಕ್ತಪಡಿಸಿದರು. ಮುಖಂಡರುಗಳಾದ ಕೆ.ಎಂ.ಮಾರೇ ಗೌಡ, ಸಿದ್ಧಪ್ಪಾಜಿ, ತುಂಗಣಿ ಪುಟ್ಟಸ್ವಾಮಿ, ಲೋಕೇಶ್ ಮತ್ತಿತರರು ಪಾಲ್ಗೊಂಡಿದ್ದರು.
ತಾಪಂ ನೀಡಿದ್ದ ಆದೇಶ ಜಿಪಂನಿಂದ ರದ್ದು
ದೇವನಹಳ್ಳಿ: ತಾಲೂಕು ಯಲಿಯೂರು ಗ್ರಾಮ ಪಂಚಾಯಿತಿಯವರು ಕಾಂಪೌಂಡ್ ನಿರ್ಮಿಸಲು ಕೈಗೊಂಡಿರುವ ಕಾಮಗಾರಿ ವಿರುದ್ಧ ತಾಲೂಕು ಪಂಚಾಯಿತಿ ಅಧ್ಯಕ್ಷರು ಮಾ.19 ರಂದು ತಡೆಯಾಜ್ಞೆ ನೀಡಿದ್ದು ಪಂಚಾಯಿತಿ ಅಧ್ಯಕ್ಷರು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಲ್ಲಿ ಈ ಕುರಿತು ಮಾ.21 ರಂದು ಮೇಲ್ಮನವಿ ಸಲ್ಲಿಸಿದಾಗ ತಾಪಂ ಅಧ್ಯಕ್ಷರು ನೀಡಿದ್ದ ತಡೆಯಾಜ್ಞೆ ಆದೇಶವನ್ನು ರದ್ದುಪಡಿಸಿದ್ದಾರೆ.
ಯಲಿಯೂರು ಗ್ರಾಮ ಪಂಚಾಯಿತಿ ಹಿಂಬಾಗದಲ್ಲಿ ಇದ್ದ ಕುಂಟೆ ಜಾಗದಲ್ಲಿ ಗ್ರಾಮದ ಜನರು ತಿಪ್ಪೆಗುಂಡಿಗಳನ್ನು ಮಾಡಿಕೊಂಡಿದ್ದರು. ನೈರ್ಮಲ್ಯ ಹದಗೆಟ್ಟ ಕಾರಣದಿಂದಾಗಿ ಪಂಚಾಯಿತಿಯವರು ನೆರೆಗ ಯೋಜನೆಯಲ್ಲಿ ಸುಮಾರು 3 ಲಕ್ಷ ರು. ವೆಚ್ಚದಲ್ಲಿ ಈ ಜಾಗವನ್ನು ಸಮತಟ್ಟು ಮಾಡಿಸಿ ಗ್ರಾಮದ ಅಭಿವೃದ್ಧಿ ಕಾರ್ಯಗಳಿಗಾಗಿ ಜಾಗವನ್ನು ಮೀಸಲಿಟ್ಟಿದ್ದರು. ಪಂಚಾಯಿತಿ ಜಾಗದ ಭದ್ರತೆಗಾಗಿ ಕಾಂಪೌಂಡ್ ನಿರ್ಮಿಸಬೇಕೆಂದು ಪಂಚಾಯಿತಿ ಸಭೆಯಲ್ಲಿ ನಿರ್ಣಯ ಕೈಗೊಂಡು ತಾಲೂಕು ಪಂಚಾಯಿತಿ ಇಒ ಅವರು ಕಾಂಪೌಂಡ್ ನಿರ್ಮಿಸಲು ಫೆ.1 ರಂದು ಒಪ್ಪಿಗೆ ಪಡೆದು ಕಾಮಗಾರಿ ಆರಂಭಿಸಿದ್ದರು.
ಕಾಂಪೌಂಡ್ ಕಾಮಗಾರಿಯನ್ನು ಪಂಚಾಯಿತಿಯವರು ಆರಂಭಿಸುವ ಸಂದರ್ಭದಲ್ಲಿ ಪಂಚಾಯಿತಿ ಸಮೀಪವೇ ಇರುವ ಕೆ.ನಾರಾಯಣಪ್ಪ ಎಂಬುವವರು ಪಂಚಾಯಿತಿಯವರು ಕಾಂಪೌಂಡ್ ನಿರ್ಮಿಸದಂತೆ ತಾಲೂಕು ಪಂಚಾಯಿತಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.
ಖಾಸಗಿ ವ್ಯಕ್ತಿಯೊಬ್ಬರ ಮನವಿಯನ್ನು ತಾಲೂಕು ಪಂಚಾಯಿತಿ ಅಧ್ಯಕ್ಷರು ಪುರಸ್ಕರಿಸಿ ಕಾಂಪೌಂಡ್ ನಿರ್ಮಿಸದಂತೆ ತಡೆಯಾಜ್ಞೆ ನೀಡಿದ್ದಲ್ಲದೆ ಕಾಂಪೌಂಡ್ ನಿರ್ಮಿಸಲು ರಕ್ಷಣೆ ಕೊಡುವುದು ಕಾನೂನು ಬಾಹಿರ, ಚನ್ನರಾಯಪಟ್ಟಣ ಪೊಲೀಸರಿಗೂ ಇದೇ ಆದೇಶ ನೀಡಿದ್ದಾರೆ.
ಯಾವುದೇ ಗ್ರಾಮ ಪಂಚಾಯಿತಿಗೆ ಸೇರಿದ ಆಸ್ತಿಯನ್ನು ರಕ್ಷಣೆ ಮಾಡುವುದು ತಾಲೂಕು ಮತ್ತು ಗ್ರಾಮ ಪಂಚಾಯಿತಿಗಳ ಕರ್ತವ್ಯವಾಗಿದೆ.
ಇಲ್ಲಿನ ತಾಲೂಕು ಪಂಚಾಯಿತಿ ಅಧ್ಯಕ್ಷರು ಖಾಸಗಿ ವ್ಯಕ್ತಿಗಳ ಪರವಾಗಿ ಆದೇಶ ನೀಡುವುದು ಪಂಚಾಯಿತಿ ಅಧ್ಯಕ್ಷರ ಸ್ಥಾನಕ್ಕೆ ತರವಲ್ಲವಾಗಿದೆ ಎಂದು ಯಲಿಯೂರು ಗ್ರಾಮ ಪಂಚಾಯಿತಿ ಸದಸ್ಯರಾದ ಆನಂದಗೌಡ ತಿಳಿಸಿ ಇವರ ಆದೇಶವನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ರದ್ದುಗೊಳಿಸಿ ಕಾಂಪೌಂಡ್ ಕಾಮಗಾರಿ ಮುಂದುವರೆಸಬೇಕೆಂದು ಆದೇಶ ನೀಡಿದ್ದಾರೆ ಎಂದರು.