ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬತ್ತಿದ ಕಾವೇರಿ: ಬೆಂಗಳೂರಿಗೆ ನೀರಡಿಕೆ...

Srinivasa Murthy VN
Updated On : 28 Mar 2013, 12:35 pm

ಮಿತಿ ಮೀರಿದ ಪಾಚಿ ಟಿ ಮೈಸೂರು ಸೇರಿ 28ಕ್ಕೂ ಹೆಚ್ಚು ತಾಲೂಕು  ಟಿ  500ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಜಲಕ್ಷಾಮ ಭೀತಿ
- ಎಂ.ಡಿ. ಉಮೇಶ್ ಮಳವಳ್ಳಿ.
ಕನ್ನಡಪ್ರಭ ವಾರ್ತೆ  ಮಳವಳ್ಳಿ  ಮಾ,26
.
ಮಂಡ್ಯ ಜಿಲ್ಲೆಯ ಜೀವನಾಡಿ ಕಾವೇರಿ ಬತ್ತಿದ್ದು, ರಾಜ್ಯದ ರಾಜಧಾನಿ ಬೆಂಗಳೂರಿಗೆ ಇನ್ನೊಂದು ವಾರದಲ್ಲಿ ನೀರಿನ ಹಾಹಾಕಾರ ತೀವ್ರವಾಗಲಿದೆ.
ಜೀವನದಿ ಕಾವೇರಿ ಎಂದಿಗೂ ಬತ್ತಿದ ಪುರಾವೆಗಳಿಲ್ಲ. ಬೇಸಿಗೆಯಲ್ಲೂ ಕನಿಷ್ಠ 10ರಿಂದ 15 ಅಡಿ ಹರಿಯುತ್ತಿತ್ತು. ಒಂದೆಡೆ ಭೀಕರ ಬರಗಾಲ ಮತ್ತೊಂದೆಡೆ ಸಕಾಲದಲ್ಲಿ ಮಳೆಯಾಗದೆ, ಸಂಗ್ರಹವಾದ ನೀರನ್ನು ಸಹ ಯೋಗ್ಯ ಪ್ರಮಾಣದಲ್ಲಿ ಬಳಸಿಕೊಳ್ಳುವಲ್ಲಿ ರಾಜ್ಯದ ರೈತರು ವಿಫಲರಾಗಿದ್ದಾರೆ. ನದಿಯ ಉದ್ದಗಲಕ್ಕೂ ಒಂದು ಅಡಿಗೂ ಕಡಿಮೆ ನೀರು ಹರಿಯುತ್ತಿರುವುದರಿಂದ ಕಸ ಕಟ್ಟಿ ಪಾಚಿಯೇ ನೀರಲ್ಲಿ ಹೇರಳವಾಗಿ ಕಾಣುತ್ತಿದೆ.
ಪ್ರಸ್ತುತ ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಲಭ್ಯತೆಯಿಲ್ಲದೆ ಜಲಜರಗಳಿಗೆ ಉಳಿದಿರುವ ನೀರನ್ನು ಪಂಪ್ ಮಾಡಿ ಕುಡಿಯುವ ನೀರಿಗೆ ಬಳಸಿಕೊಳ್ಳುವ ಅನಿವಾರ್ಯತೆ ಮೈಸೂರು ನಗರಿಗರಿಗೆ ಬಂದೊದಗಿದೆ. ಕೆಆರ್ ಎಸ್‌ನಲ್ಲಿ ಕೇವಲ ಮೂರುವರೆ ಟಿಎಂಸಿ ನೀರಷ್ಟೇ ಉಳಿದಿದೆ. ಮಂಡ್ಯ, ಮೈಸೂರು, ಶ್ರೀರಂಗಪಟ್ಟಣ ಸೇರಿದಂತೆ ಗಡಿಭಾಗದ ಚಾಮರಾಜನಗರ ಜಿಲ್ಲೆ, ಕೊಳ್ಳೇಗಾಲ, ಮಹದೇಶ್ವರ ಬೆಟ್ಟ, ಯಳಂದೂರುಗಳಲ್ಲಿಯು ಸಹ ನೀರಿನ ಹಾಹಾಕಾರ ಮುಗಿಲು ಮುಟ್ಟಿದ್ದು, ದಿನಬಿಟ್ಟು ದಿನ ನೀರು ಕೊಡಲಾಗುತ್ತಿದೆ.
ಮಳವಳ್ಳಿ ತಾಲೂಕಿನ ಮಲ್ಲಿಖ್ಯಾತನಹಳ್ಳಿ-ಬ್ಲಪ್ ಬಳಿ ನಿರ್ಮಿಸಿದ್ದ ಉರುಳು ಅಣೆಕಟ್ಟೆ ಎಸ್ಬಿಆರ್ ರಿಸರ್ವೆರ್‌ನಲ್ಲಿ ಸಂಗ್ರಹವಾದ ನೀರನ್ನ ಲಭ್ಯತೆಗನುಗುಣವಾಗಿ ವಿದ್ಯುತ್ ಉತ್ಪಾದನೆ ಹಾಗೂ ಬೆಂಗಳೂರಿಗೆ ನೀರೊದಗಿಸಲು ನೆಟ್ಕಲ್ ರಿಸರ್ವೇರ್‌ನಲ್ಲಿ ಸಂಗ್ರಹಿಸಿ ತೊರೆಕಾಡನಹಳ್ಳಿ ಬಳಿ ಶುದ್ದೀಕರಣಗೊಳಿಸಿ ಬೆಂಗಳೂರು ನಗರ ಸೇರಿದಂತೆ ರಾಮನಗರ ಜಿಲ್ಲೆಯ ಚನ್ನಪಟ್ಟಣ, ಕನಕಪುರ, ಹಾರೊಹಳ್ಳಿಗೆ ಒದಗಿಸಲಾಗುತ್ತಿತ್ತು.
ಕೆಆರ್‌ಎಸ್‌ನಲ್ಲಿ ನೀರಿನ ಪ್ರಮಾಣ ತಳಕಚ್ಚಿದ್ದು 73 ಅಡಿ ನೀರಿನಲ್ಲಿ ಬಹುತೇಕ ಬದಿ ಹಾಗೂ ಕೊಳೆತ ವಸ್ತುಗಳೇ ಶೇಖರಣೆಯಾಗಿದೆ ಎಂದು ಆ ಭಾಗದ ಹಿರಿಯರಲ್ಲಿ ಹಾಗೂ ಜಲಾಶಯದಲ್ಲಿ ಕೆಲಸ ಮಾಡುವವರಲ್ಲಿ  ವ್ಯಕ್ತವಾಗಿದೆ. ಕೆಲ ತಿಂಗಳ ಹಿಂದೆ ಸಂಗ್ರಹಿಸಿದ್ದ ನೀರನ್ನ ನ್ಯಾಯಾಲಯದ ಆದೇಶದ ಮೇರೆಗೆ ತಮಿಳು ನಾಡಿಗೆ  ನೀಡಿದ್ದರ ಪರಿಣಾಮ ಇಂದು ಕಾವೇರಿ ಕಣಿವೆಯ ಹೇಮಾವತಿ, ಕಬಿನಿಯಲ್ಲೂ ನೀರಿಲ್ಲದೆ ರಾಜ್ಯದ  ಮಡಿಕೇರಿ, ಹಾಸನ, ಮಂಡ್ಯ, ಚಾಮರಾಜನಗರ, ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳ 28 ಕ್ಕೂ ಹೆಚ್ಚು ತಾಲೂಕುಗಳು 500ಕ್ಕೂ ಹೆಚ್ಚು ಹಳ್ಳಿಗಳು ನೀರಿನ ಹಾಹಾಕಾರದಿಂದ ಜಲಕ್ಷಾಮ ಎದುರಿಸುವ ಪರಿಸ್ಥಿತಿ ನಿರ್ಮಾಢಿಣವಾಗಿದೆ.
ಜಲಪಾತಗಳಾದ ಗಗನಚುಕ್ಕಿ, ಭರಚುಕ್ಕಿಯಲ್ಲಿ ನೀರಿಲ್ಲದೆ ಒಣಗಿದ್ದು ದೇಶದುದ್ದಗಲಕ್ಕೂ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ಸ್ಥಳಗಳು ಕಲ್ಲುಬಂಡೆಗಳಿಂದ ನಿರ್ಲಿಪ್ತವಾಗಿ ಕಾಣುತ್ತಿವೆ. ಜಲಚರಗಳು ವನ್ಯ ಪ್ರಾಣಿಗಳಿಗೂ ನೀರಿನ ಹಾಹಾಕಾರದಿಂದಾಗಿ ಈ ಭಾಗದಲ್ಲಿ ಅಲ್ಲಲ್ಲಿ ಕಾಣಿಸಿಕೊಂಡು ಹಲವು ದುರ್ಘಟನೆಗಳಿಗೂ ಸಹ ಕಾರಣವಾಗುತ್ತಿವೆ.
ಇದೇ ರೀತಿ ಮುಂದುವರಿದು ತಳ ಕಚ್ಚಿರುವ ನೀರನ್ನ ಬಳಸಿಕೊಂಡರೆ ವಿವಿಧ ಜಲಚರಗಳು ಹಾಗೂ ಹಲವಾರು ಜಲಪ್ರಭೇದಗಳನ್ನ ಕಳೆದುಕೊಂಡು ಜೈವಿಕ ಅಸಮತೋಲನದಿಂದ ಮಾನವನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.

ಮಿತ ಪ್ರಮಾಣದಲ್ಲಿ ನೀರನ್ನು ಬಳಸಿ ಮಳೆನೀರನ್ನ ಕೆರೆಕಟ್ಟೆಗಳಲ್ಲಿ ಸಂಗ್ರಹಿಸಿ ಪುನರ್‌ಬಳಕೆ ಮಾಡಿಕೊಂಡಾಗ ಮಾತ್ರ ಜಲಕ್ಷಾಮವಾಗದ ಹಾಗೆ ಕ್ರಮ ಕೈಗೊಳ್ಳಲು ಸಾಧ್ಯ. ಅಲ್ಲಲ್ಲಿ ಚೆಕ್ ಡ್ಯಾಮ್‌ಗಳು, ನೀರು ಇಂಗು ಕೊಳಗಳನ್ನ ನಿರ್ಮಿಸಬೇಕು. ಪ್ರತಿ ಎರಡು ಎಕರೆಗೊಂದು ಇಂಗು ಬಾವಿಗಳನ್ನ ನಿರ್ಮಿಸಬೇಕು.
- ನಾಗರಾಜ್, ಪರಿಸರ ಪ್ರೇಮಿ

ಮಾನವನ ದುರಾಸೆಗೆ ಪ್ರಕೃತಿ ಸಂಪನ್ಮೂಲಗಳು ಹಾಳಾಗುತ್ತಿದ್ದು ಎಲ್ಲೆಂದರಲ್ಲಿ ಕೊಳವೆ ಬಾವಿಗಳನ್ನ  ಇತಿಮಿತಿಯಿಲ್ಲದೆ ತೆಗೆಯುತ್ತಿರುವುದರಿಂದ ಅಂತರ್ಜಲ ಸಂಪೂರ್ಣವಾಗಿ ಕುಸಿದಿದೆ. ಕುಡಿಯುವ ನೀರಿನ ಸಮಸ್ಯೆ ಮುಂದಿನ ದಿನಗಳಲ್ಲಿ ಹೆಚ್ಚಾಗಲಿದೆ.
- ವೀರೇಂದ್ರ ಕುಮಾರ್, ಮಳವಳ್ಳಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement