ಬಿಜೆಪಿ ಬೆಂಬಲಿಸಿದರೆ ಮಾದರಿ ರಾಜ್ಯ: ಸಿಎಂ
ಕ.ಪ್ರ. ವಾರ್ತೆ ನೆಲಮಂಗಲ ಮಾ.27
ರೈತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಶ್ರಮಿಸಿದ ಬಿಜೆಪಿ ಸರ್ಕಾರಕ್ಕೆ ಈ ಬಾರಿ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ನೀಡಿ. ಉತ್ತಮ ಪಾರದರ್ಶಕ ಪ್ರಾಮಾಣಿಕ ಆಡಳಿತ ನೀಡುತ್ತೇವೆ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಭರವಸೆ ನೀಡಿದರು.
ಬುಧವಾರ ಪಟ್ಟಣದ ಐ.ಟಿ.ಐ ಕಾಲೇಜು ಆವರಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಯಾತ್ರೆಯ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ 55 ವರ್ಷಗಳಲ್ಲಿ ಕಾಂಗ್ರೆಸ್ ಹಾಗೂ ಜನತಾದಳ ರಾಜ್ಯವನ್ನಾಳಿದ್ದರೂ, ಬಜೆಟ್ನಲ್ಲಿ ದೊಡ್ಡ ಪ್ರಮಾಣದ ಅನುದಾನ ಬಿಡುಗಡೆಗೊಳಿಸಿರಲಿಲ್ಲ. ಈ ಬಾರಿ 1.17 ಲಕ್ಷ ಕೋಟಿ ಬಜೆಟ್ ನೀಡಿದ್ದೇವೆ. ಎತ್ತಿನ ಹೊಳೆ ಯೋಜನೆಗೆ ಹಣ ಬಿಡುಗಡೆಗೊಳಿಸಿದ್ದೇವೆ. ಫ್ಲೋರೈಡ್ ಮುಕ್ತವಾದ ಶಾಶ್ವತ ಕುಡಿಯುವ ನೀರು ಒದಗಿಸುತ್ತೇವೆ. ಬಿಜೆಪಿಯಲ್ಲಿ ಗೊಂದಲ ಸೃಷ್ಟಿ ಮಾಡುವಂತವರು ಹೊರ ಹೋಗಿದ್ದಾರೆ. ಉತ್ತಮ ರೀತಿ ಬಿಜೆಪಿ ಜನತೆ ಬೆಂಬಲಿಸಿದರೆ ಮಾದರಿ ರಾಜ್ಯ ಮಾಡುವ ಕೆಲಸ ವಿಜಯ ಸಂಕಲ್ಪ ಯಾತ್ರೆಯದ್ದಾಗಿದೆ ಎಂದರು.
ಕೇಂದ್ರದಲ್ಲಿರುವ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಹೀನಾಯ ಸ್ಥಿತಿಯಲ್ಲಿ ನೋಡುತ್ತಿದೆ. ಭೀಕರ ಬರಗಾಲವಿದ್ದರೂ ಕಲ್ಲಿದ್ದಲು, ವಿದ್ಯುತ್ ನೀಡದೆ ಅನ್ಯಾಯವೆಸಗುತ್ತಿದೆ. ಕೇಂದ್ರ ಸರ್ಕಾರ ಬ್ರಹ್ಮಾಂಡ ಹಗರಣಗಳ ಸುರಿಮಳೆಯಲ್ಲಿ ಸಾವಿರಾರು ಕೋಟಿಗಳನ್ನು ನುಂಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಆರೋಪಿಸಿದರು. ರಾಜ್ಯದಲ್ಲಿರುವ ಬಿಜೆಪಿ ಸರ್ಕಾರವನ್ನು ತರುವುದಕ್ಕಾಗಿ ಪಂಚಪಾಂಡವರ ನೇತೃತ್ವದಲ್ಲಿರುವ ಬಿಜೆಪಿ ರಥವನ್ನು ಮತದಾರರು ಮುಂದೆ ಸಾಗಿಸಬೇಕು ಎಂದರು.
ಅಭಿವೃದ್ಧಿಗೆ ಬಿಜೆಪಿ ಧ್ವನಿ: ಬಡವರಿಗೆ, ದೀನದಲಿತರಿಗೆ, ತಾರತಮ್ಯವಿಲ್ಲದೆ ಕಳೆದ 50 ವರ್ಷದಿಂದ ಕಾಣದಂತಹ ಉತ್ತಮ ಅಭಿವೃದ್ಧಿ ಮಾಡುತ್ತಿರುವ ಜನರ ಧ್ವನಿಯಾಗಿರುವ ಬಿಜೆಪಿ ಸರ್ಕಾರವನ್ನು ಬೆಂಬಲಿಸುವಂತೆ ರಾಷ್ಟ್ರೀಯ ಕಾರ್ಯದರ್ಶಿ ಅನಂತ್ಕುಮಾರ್ ಕೋರಿದರು. ಅಭಿವೃದ್ಧಿಯ ಮಂತ್ರ, ಶಿಸ್ತಿನ ಪಕ್ಷವನ್ನು ಜನತೆ ಅರ್ಥ ಮಾಡಿಕೊಂಡು ರೈತಪರ ಕೆಲಸ ನಿರ್ವಹಿಸಿದಾಗ ರಾಜ್ಯ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಉಪ ಮುಖ್ಯಮಂತ್ರಿ ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಹಾಲಿಗೆ ಬೆಂಬಲ ಬೆಲೆ, ಸೂರಿಲ್ಲದವರಿಗೆ ಸೂರು, ಭಾಗ್ಯಲಕ್ಷ್ಮಿ ಬಾಂಡ್, ಉಚಿತ ಆರೋಗ್ಯ ಸೇವೆ ನೀಡಿ ಜನತೆಗೆ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿರುವ ಬಿಜೆಪಿಯು ರಾಜ್ಯ, ಜನರ ಅಭಿವೃದ್ಧಿಗೆ ಕಂಕಣಬದ್ಧವಾಗಿರುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಚ್ಚೇಗೌಡ ಹೇಳಿದರು.
ಕ್ಷೇತ್ರದಲ್ಲಿ 750 ಕೋಟಿ ಅಭಿವೃದ್ಧಿ ಕಾರ್ಯವನ್ನು 3 ಪದವಿ ಕಾಲೇಜು 4 ಸಾರ್ವಜನಿಕ ಆಸ್ಪತ್ರೆ, ಬೋವಿ ಭವನ, ಸ್ತ್ರೀಶಕ್ತಿ ಭವನ, ಕ್ಷೇತ್ರದ ಎಲ್ಲಾ ರಸ್ತೆಗಳಿಗೆ ಡಾಂಬರೀಕರಣ ಹಾಗೂ ಪಟ್ಟಣದಲ್ಲಿ ಜೋಡಿ ರಸ್ತೆ ನಿರ್ಮಾಣ ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿ ನಿರ್ವಹಿಸಿರುವ ಬಿಜೆಪಿಗೆ ಜನರು ಒಲವು ತೋರಬೇಕೆಂದು ಶಾಸಕ ಎಂ.ವಿ.ನಾಗರಾಜು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗೃಹ ಸಚಿವ ಆರ್.ಅಶೋಕ, ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಎಂ.ನಾರಾಯಣಸ್ವಾಮಿ, ಕರ್ನಾಟಕ ರಾಜ್ಯ ಕೊಳೆಗೇರಿ ಮಂಡಳಿ ಅಧ್ಯಕ್ಷ ಜೆ.ನರಸಿಂಹಸ್ವಾಮಿ, ಮುಖಂಡ ಡಿ.ಪಿ.ಸುಬ್ಬರಾಮಯ್ಯ, ಪ್ರಧಾನ ಕಾರ್ಯದರ್ಶಿಗಳಾದ ಮಹದೇವಯ್ಯ, ಗುಬ್ಬಣ್ಣಸ್ವಾಮಿ, ನೆ.ಯೋ.ಪ್ರಾ ಅಧ್ಯಕ್ಷ ಎಸ್.ಮಲ್ಲಯ್ಯ, ಮಾಜಿ ಅಧ್ಯಕ್ಷ ಕೆ.ಪಿ.ಆನಂದ್ ಇದ್ದರು.