ಸಂಭ್ರಮದ ಚನ್ನಕೇಶವ ಸ್ವಾಮಿ ಕಲ್ಲುಗಾಲಿ ಬ್ರಹ್ಮರಥೋತ್ಸವ
ವಿಜಯಪುರ: ಇಲ್ಲಿನ ಕೋಟೆಬೀದಿಯಲ್ಲಿರುವ ಅರ್ಜುನ ಪ್ರತಿಷ್ಠಾಪಿಸಿದ್ದೆನ್ನಲಾದ ಶ್ರೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಜಾತ್ರೆ ಮಹೋತ್ಸವದ ಪ್ರಯುಕ್ತ ಪೂಜಾ ಕಾರ್ಯಕ್ರಮಗಳು ಅದ್ಧೂರಿಯಾಗಿ ನೆರವೇರಿದವು.ಸಾವಿರಾರು ಭಕ್ತರ ಜಯಘೋಷದ ಮಧ್ಯೆ ಗಾಂಧಿ ಚೌಕದಿಂದ ಹೊರಟಬ್ರಹ್ಮ ರಥವು ಶ್ರೀ ನಗರೇಶ್ವರ ಸ್ವಾಮಿ ದೇವಾಲಯದ ಮುಂಭಾಗದಿಂದ ಹಾದು ಗಂಗಾ ತಾಯಿ ದೇವಾಲಯ ವೃತ್ತವನ್ನು ಸೇರಿತು. ಹೋಳಿ ದಿನದಂದು ರಥೋತ್ಸವ ನಡೆಯುವುದು ವಿಶೇಷವಾಗಿದ್ದು ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ಸುಪ್ರಭಾತ ಸೇವೆ, ಅಭಿಷೇಕ, ಮಂಗಳಾರತಿ, ಸಹಸ್ರ ಋಷಿಗೋತ್ರ ಅಯೋಧ್ಯ ನಗರ ಶಿವಾಚಾರ ವೈಶ್ಯ ನಗರ್ತ ಮಂಡಳಿಯವರಿಂದ ಬ್ರಹ್ಮರಥೋತ್ಸವ, ಬ್ರಾಹ್ಮಣ ಸೇವಾ ಮಂಡಳಿಯವರಿಂದ ಯಾತ್ರ ದಾನೋತ್ಸವ, ದೇವಾಲಯದಲ್ಲಿ ವಿಶೇಷ ಅಲಂಕಾರ ಪಾನಕ ಸೇವೆ ನೆರವೇರಿದವು. ರಥೋತ್ಸವದ ಅಂಗವಾಗಿ ದೇವಾಲಯ, ಮಹಂತಿಮಠ, ಲಕ್ಷ್ಸಿ ವೆಂಕಟರಮಣ ಸ್ವಾಮಿ ದೇವಾಲಯ ಬೀದಿ ಸೇರಿದಂತೆ ಅನೇಕ ಕಡೆಗಳಲ್ಲಿ ಪಾನಕ,ಪಣಿಯಾರ, ಕೋಸಂಬರಿ, ವಿತರಣೆ ಮಂಟಪ ಪಡಿಸೇವೆ ಜರುಗಿದವು. ಸಂಜೆಯವರೆವಿಗೆ ಗಂಗಾತಾಯಿ ಸರ್ಕಲ್ನಲ್ಲಿ ಭಕ್ತರು ನೆರೆದು ಪೂಜೆ ಸಲ್ಲಿಸಿದ ನಂತರ ಬಜಾರ್ ರಸ್ತೆ ಮೂಲಕ ಶ್ರೀ ರುದ್ರದೇವರ ದೇವಾಲಯದ ಮುಂಭಾಗದಿಂದ ರಥವನ್ನು ಎಳೆದು ಧೂಳೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.
ದೇವನಹಳ್ಳಿಯಲ್ಲಿ ಶರಣ ಸಂಸ್ಕೃತಿ ಮೆರವಣಿಗೆ
ದೇವನಹಳ್ಳಿ: ದೊಡ್ಡಬಳ್ಳಾಪುರದಿಂದ ಆಗಮಿಸಿದ ಶರಣ ಸಂಸ್ಕೃತಿ ಯಾತ್ರೆ ಬುಧವಾರ ಇಲ್ಲಿನ ಹಳೇ ಬಸ್ ನಿಲ್ದಾಣದಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜಾನಪದ ಕಲಾ ತಂಡಗಳೊಂದಿಗೆ ಮೆರವಣಿಗೆಯನ್ನು ದೇವನಹಳ್ಳಿ ತಾಲೂಕು ವೀರಶೈವ ಸಮಾಜ ಸಂಘದವರು ಆಯೋಜಿಸಿದ್ದರು.
ಬಸವಣ್ಣನವರಕ ಪ್ರತಿಮೆ ಇದ್ದ ರಥಕ್ಕೆ ಬಯಪ ಅಧ್ಯಕ್ಷ ಷಣ್ಮುಗಪ್ಪ, ಪುರಸಭಾ ಸದಸ್ಯರಾದ ವೈ.ಸಿ. ಸತೀಶ್ಕುಮಾರ್, ವೀರಶೈವ ಸಮಾಜ ಅಧ್ಯಕ್ಷ ರಮೇಶ್ ಅವರು ಸ್ವಾಗತಿಸಿ ಶರಣ ಸಂಸ್ಕೃತಿ ರಥಕ್ಕೆ ಪೂಜೆ ಸಲ್ಲಿಸಿದರು. ಮಹಿಳೆಯರು ಕಳಸ ಮತ್ತು ಪೂರ್ಣಕುಂಭಗಳೊಂದಿಗೆಮೆರವಣಿಗೆಯಲ್ಲಿ ಸಾಗಿದರು.
ಬಸವ ಜಯಂತಿ ಶತಮಾನೋತ್ಸವ ವರ್ಷಾಚರಣೆಯ ಸಂದರ್ಭಕ್ಕೆ ಅನುಗುಣವಾಗಿ ಕೇಂದ್ರ ಬಸವ ಬಳಗದವರು ವಿಶ್ವ ಶರಣ ಸಂಕುಲ ಎಂಬ ಅಭಿಯಾನದಲ್ಲಿ ಕೈಗೊಂಡ ನಿರ್ಣಯದಂತೆ ಮಾರ್ಚ್ 13 ರಂದು ಬಸವನ ಬಾಗೇವಾಡಿಯಿಂದ ಶರಣ ಸಂಸ್ಕೃತಿ ಯಾತ್ರೆ ಆರಂಭಗೊಂಡಿದ್ದು ಏಪ್ರಿಲ್ 14 ರಂದು ಕೂಡಲ ಸಂಗಮದಲ್ಲಿ ಸಮಾರೋಪಗೊಳ್ಳುವಂತೆ (33 ದಿನಗಳು) ಯಾತ್ರೆ ಆಯೋಜಿಸಲಾಗಿದೆ ಎಂದು ಕೇಂದ್ರ ಬಸವ ಸಮಿತಿ ಗೌರವಾಧ್ಯಕ್ಷರಾದ ಅರವಿಂದ ಜತ್ತಿರ ತಿಳಿಸಿದರು.
ಸಂಪೂರ್ಣ ಯಾತ್ರೆಯ ಜವಾಬ್ದಾರಿ ಹೊತ್ತಿರುವ ಬಸವ ಸಮಿತಿ ಗೌರವಾಧ್ಯಕ್ಷರಿಗೆ ದೇವನಹಳ್ಳಿ ತಾಲೂಕು ವೀರಶೈವ ಸಮಾಜದವರು ಅಭಿನಂದಿಸಿ ವಿಜಯಪುರಕ್ಕೆ ಬೀಳ್ಕೊಟ್ಟರು. ಮೆರವಣಿಗೆಯಲ್ಲಿ ಮುಖಂಡರಾದ ತಿಂಡ್ಲು ಬಸವರಾಜು, ಹೊಸಪೇಟೆ ನಾಗೇಶ್, ಎ.ಸಿ.ಗುರುಸ್ವಾಮಿ, ಇ.ಸಿ.ಚನ್ನಬಸವರಾಜು, ಡಿ.ಆರ್.ನಾರಾಯಣಸ್ವಾಮಿ, ಎಸ್.ರಮೇಶ್, ದೇ.ಸೂ.ನಾಗರಾಜ್, ಉಷಾ ಪೂರ್ಣ ಚಂದ್ರ, ನಗರ್ತ ಮಹಿಳಾ ಸಂಘದ ಅಧ್ಯಕ್ಷೆ ಶಾಂತ ನಾಗರಾಜ್, ಬಿದಲೂರು ನಾಗರಾಜ್ ಸೇರಿದಂತೆ ಮತ್ತತರರು ಭಾಗವಹಿಸಿದ್ದರು.