ಸಿದ್ದರಾಮಯ್ಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಬಾಲಕೃಷ್ಣ
ಮಾಗಡಿ: ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಶಾಸಕ ಎಚ್.ಸಿ. ಬಾಲಕೃಷ್ಣ ತಿಳಿಸಿದ್ದಾರೆ.
ಅವರು ತಾಲೂಕಿನ ಹೊಸಪಾಳ್ಯದಲ್ಲಿ ಏರ್ಪಡಿಸಿದ್ದ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಕ್ಷೇತ್ರದಲ್ಲಿ 600 ಕೋಟಿ ರು. ಹಗರಣ ನಡೆದಿದೆ. ಇದರಲ್ಲಿ ಶಾಸಕ ಎಚ್.ಸಿ. ಬಾಲಕೃಷ್ಣ ಶಾಮೀಲಾಗಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಈ ಸಂಬಂಧ ಸಿದ್ದಾರಾಮಯ್ಯ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡುತ್ತಿದ್ದೇನೆ. ನಾನು ಕ್ಷೇತ್ರದಲ್ಲಿ ಯಾವುದೇ ಹಗರಣದಲ್ಲಿ ಭಾಗಿಯಾಗಿಲ್ಲ, ನಾನೇದಾರು ಹಗರಣದಲ್ಲಿ ಭಾಗಿಯಾಗಿದ್ದೇನೆ ಎಂದು ಸಾಬೀತು ಪಡಿಸಿದರೆ ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ ಎಂದು ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದರು.
ಕೆಂಪೇಗೌಡ ಹೆಸರಿನಲ್ಲಿ ರಾಜಕೀಯ ಮಾಡಿ ಮಂತ್ರಿಯಾಗಿದ್ದ ಎಚ್.ಎಂ.ರೇವಣ್ಣ ಹೇಮಾವತಿ ನೀರಾವರಿ ಯೋಜನೆ ವಿಚಾರವಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸಲಿಲ್ಲ. ಹೇಮಾವತಿ ನೀರಾವರಿ ವಿಚಾರವಾಗಿ ನನ್ನನ್ನು 5 ವರ್ಷಗಳ ಕಾಲ ಕತ್ತಲಲ್ಲಿಟ್ಟರು. ಸಿದ್ದಗಂಗಾ ಶ್ರೀಗಳು ಹೇಮಾವತಿ ನೀರಾವರಿ ಯೋಜನೆ ಅನುಷ್ಠಾನಕ್ಕೆ ಬಿಜೆಪಿ ಸರ್ಕಾರಕ್ಕೆ ಪತ್ರ ಬರೆದು ಮನವಿ ಸಲ್ಲಿಸಿದ್ದರೂ, ಶ್ರೀಗಳ ಪತ್ರಕ್ಕೂ ಕಿಮ್ಮತ್ತಿಲ್ಲ. ಈಗ ಇಬ್ಬರು ಹೇಮಾವತಿ ಹರಿಸುತ್ತೇವೆ. ಕೆಂಪೇಗೌಡರ ನಾಡನ್ನು ಕಟ್ಟುತ್ತೇವೆ ಎಂದು ಕಾಂಗ್ರೆಸ್‌ನಿಂದ ಟಿಕೆಟ್ ತರುವುದಾಗಿ ದೆಹಲಿಯಲ್ಲಿ ಬಿಡಾರ ಹೂಡಿದ್ದಾರೆ ಎಂದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಪೊಲೀಸ್ ರಾಮಣ್ಣ, ಬಮೂಲ್ ನಿರ್ದೇಶಕ ನರಸಿಂಹಮೂರ್ತಿ, ಜಿ.ಪಂ. ಸದಸ್ಯ ಧನಂಜಯ, ಜಿಯವಿ. ರಾಮಣ್ಣ, ತಾ.ಪಂ ಅಧ್ಯಕ್ಷ ವೆಂಕಟೇಶ್, ಸದಸ್ಯ ಅರುಂದತಿ ಚಿಕ್ಕಣ್ಣ, ಚಂದ್ರಮ್ಮ ಕೆಂಪೇಗೌಡ,ಎಂ.ರೇವಣ್ಣ ಇತರರು ಮಾತನಾಡಿದರು. ಬಿ.ಟಿ. ವೆಂಕಟೇಶ್, ಯುಸಫ್, ರೂಪೇಶ್, ನಾಗರಾಜು, ನರಸಿಂಹಮೂರ್ತಿ, ಎಂ.ಆರ್.ಮಂಜುನಾಥ್ ತೇಜಸ್ ಇತರರು ಇದ್ದರು.